ನಿರ್ಭಯದಿಂದ ಸಮಾಧಿಗಳಿಗೆ ದೀಪ ಹಚ್ಚಿದ ಮಕ್ಕಳು ಇಷ್ಟಲಿಂಗ ಅಧ್ಯಯನ
ಹೊಸಪೇಟೆ:
ಇಷ್ಟಲಿಂಗ ಅಧ್ಯಯನ ಕೇಂದ್ರ ಮತ್ತು ಜಾಗತಿಕ ಲಿಂಗಾಯತ ಮಹಾಸಭಾ ವಿಜಯನಗರ ಜಿಲ್ಲಾ ಘಟಕದ ಸಹಯೋಗದಲ್ಲಿ ಇಲ್ಲಿನ ಲಿಂಗಾಯತ ರುದ್ರಭೂಮಿಯಲ್ಲಿ ವೈಶಿಷ್ಟಪೂರ್ಣವಾಗಿ ಶಿವರಾತ್ರಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಇಷ್ಟಲಿಂಗ ಅಧ್ಯಯನ ಕೇಂದ್ರದ ಅಧ್ಯಕ್ಷ ಮತ್ತು ಖ್ಯಾತ ಮನೋವೈದ್ಯರಾದ ಡಾ. ಅಜಯಕುಮಾರ ತಾಂಡೂರ ಮಾತನಾಡಿ ಕಳೆದ ಏಳು ವರ್ಷಗಳಿಂದ ಇಷ್ಟಲಿಂಗ ಅಧ್ಯಯನ ಕೇಂದ್ರ ರುದ್ರಭೂಮಿಯಲ್ಲಿ ಶಿವರಾತ್ರಿಯನ್ನು ಆಚರಿಸಿಕೊಂಡು ಬಂದಿದೆ ಎಂದರು.

ರುದ್ರಭೂಮಿಯಲ್ಲಿ ಶಿವನಿದ್ದಾನೆ ಎನ್ನುವುದನ್ನು ನಂಬುವ ಜನ ಅದೇ ರುದ್ರಭೂಮಿಗೆ ಹೋಗುವುದಕ್ಕೆ ನೂರೆಂಟು ಕಟ್ಟುಪಾಡು ಹಾಕಿಕೊಂಡಿರುತ್ತಾರೆ.
ರುದ್ರಭೂಮಿಯ ಬಗ್ಗೆ ಒಂದು ಅವ್ಯಕ್ತ ಭಯದ ನಂಬಿಕೆಯೂ ಇದೆ. ಆದರೆ ರುದ್ರಭೂಮಿ ನಮ್ಮೆಲ್ಲರ ಬದುಕಿನ ಆತ್ಯಂತಿಕ ಸತ್ಯ. ಎಂದಾದರೂ ಒಂದಿನ ನಾವೆಲ್ಲರೂ ಅಲ್ಲಿಗೆ ಹೋಗಲೇಬೇಕು. ಸತ್ಯದ ಆ ತಿಳವಳಿಕೆಯನ್ನು ನೀಡುವುದು ಕೂಡ ಶರಣಧರ್ಮದ ಜವಾಬ್ದಾರಿ.
ಶರಣ ನಿದ್ದೆಗೈದಡೆ ಜಪ ಕಾಣಿರೋ, ಶರಣನೆದ್ದು ಕುಳಿತರೆ ಶಿವರಾತ್ರಿ ಕಾಣಿರೋ. ಶರಣನೆದ್ದು ಕುಳಿತರೆ ಅಂದರೆ, ಶರಣರಾದಂತವರು ಶರಣಧರ್ಮವನ್ನು ಪರಿಪಾಲನೆ ಮಾಡುತ್ತಿರುವವರು ತಾವು ಸಂಪಾದಿಸಿಕೊಂಡ ಜ್ಞಾನದ ಮೂಲಕ ಸಮಾಜದಲ್ಲಿ ಇರುವ ಅಪನಂಬಿಕೆಗಳನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ಪಸರಿಸುವಂತೆ ಮಾಡುವುದೇ ಆಗಿದೆ.

ಶರಣರ ಕಾಯವೇ ಕೈಲಾಸ ಎನ್ನುವ ಬಸವಣ್ಣನವರ ವಚನ ವಾಣಿಯಂತೆ ನಾವೆಲ್ಲರೂ ನಮ್ಮ ಕಾಯವನ್ನ ಅಂದರೆ ದೇಹವನ್ನ ಕೈಲಾಸ ಯೋಗ್ಯವನ್ನಾಗಿ ಮಾಡಿಕೊಳ್ಳಬೇಕು. ಹಾಗಾದರೆ ಮಾತ್ರ ನಮಗೆ ಸ್ವರ್ಗ ಪ್ರಾಪ್ತಿ ಸಾಧ್ಯ. ಆ ಮೂಲಕ ನಾವು ದೇವಭೂಮಿಯನ್ನು ತಲುಪಬಹುದು ಎನ್ನುವ ಪರಿಕಲ್ಪನೆಯನ್ನು ಜನಮಾನಸಕ್ಕೆ ತಲುಪಿಸುವ ಕಾರಣಕ್ಕೆ ಪ್ರತಿ ವರ್ಷ ರುದ್ರಭೂಮಿಯಲ್ಲಿ ಶಿವರಾತ್ರಿಯನ್ನು ಆಚರಿಸಲಾಗುತ್ತಿದೆ ಎಂದರು.
ಪ್ರಾಧ್ಯಾಪಕ ಡಾ. ಬಸವರಾಜ ಟಿ. ಹೆಚ್.ಮಾತನಾಡಿ, ನಾವು ದೇಹವನ್ನು ದೇಗುಲವನ್ನಾಗಿಸಿಕೊಳ್ಳುವ ಏಕೈಕ ಮಾರ್ಗ ಇಷ್ಟಲಿಂಗ. ದೇಹವನ್ನು ದೇವಾಲಯವಾಗಿಸಿಕೊಂಡಾಗ ಶರಣರ ನುಡಿಯಂತೆ ನಮ್ಮ ಕಾಯ ಕೈಲಾಸ ಯೋಗ್ಯವಾಗುತ್ತದೆ ಮತ್ತು ಸ್ವರ್ಗ ಪ್ರಾಪ್ತಿಯಾಗುತ್ತದೆ.
ಈ ಎಚ್ಚರಿಕೆಯನ್ನು ಹೊತ್ತು ಬದುಕುವ ಎಲ್ಲಾ ಶರಣ ಧರ್ಮದ ಪ್ರತಿಪಾದಕರಿಗೆ ನಿತ್ಯವೂ ಶಿವರಾತ್ರಿ. ಯಾಕೆಂದರೆ ‘ಶರಣನೆದ್ದು ಕುಳಿತರೆ ಶಿವರಾತ್ರಿ’ ಎಂದು ಬಸವಣ್ಣನವರೇ ಪ್ರತಿಪಾದಿಸಿದ್ದಾರೆ. ಅದರಂತೆ ನಾವು ನಮ್ಮ ಧರ್ಮಗುರು ಬಸವಣ್ಣನವರ ಮಾತಿನಂತೆ ಸದಾ ಎಚ್ಚರವಾಗಿ, ಅರಿವಿಗೆ ಅಂದರೆ ಇಷ್ಟಲಿಂಗಕ್ಕೆ ಆಯತವಾಗಿ ಬದುಕನ್ನು ಕಟ್ಟಿಕೊಂಡರೆ ನಿತ್ಯವೂ ಶಿವರಾತ್ರಿ, ನಿತ್ಯವೂ ಶರಣರಿಗೆ ಸ್ವರ್ಗದ ಬಾಗಿಲು ತೆರೆದೇ ಇರುತ್ತದೆ ಎಂದರು.


ಕಾರ್ಯಕ್ರಮದ ಮೊದಲಿಗೆ ಕರ್ನಾಟಕದ ಸಾಂಸ್ಕೃತಿಕ ನಾಯಕ, ಲಿಂಗಾಯತ ಧರ್ಮ ಸಂಸ್ಥಾಪಕ ವಿಶ್ವಗುರು ಬಸವಣ್ಣನವರಿಗೆ ಗೌರವ ಸಮರ್ಪಿಸಿ, ರುದ್ರಭೂಮಿಯಲ್ಲಿನ ಎಲ್ಲಾ ಸಮಾಧಿಗಳಿಗೆ, ಲಿಂಗೈಕ್ಯ ಚೇತನಗಳ ವಿಶ್ರಾಂತ ಸ್ಥಳಗಳಿಗೆ ದೀಪ ಬೆಳಗಿಸಿ ಗೌರವ ಸಲ್ಲಿಸಲಾಯಿತು.
ಇಷ್ಟಲಿಂಗ ಅಧ್ಯಯನ ಕೇಂದ್ರದ ಮಕ್ಕಳು ಈ ಕಾರ್ಯಕ್ರಮದಲ್ಲಿ ಅತೀ ಉತ್ಸಾಹದಿಂದ ಪಾಲ್ಗೊಂಡು ರಾತ್ರಿಯ ವೇಳೆಯಲ್ಲೂ ನಿರ್ಭಯದಿಂದ ಸಮಾಧಿಗಳಿಗೆ ದೀಪ ಹಚ್ಚಿಟ್ಟಿದ್ದು ಗಮನ ಸೆಳೆಯಿತು. ಒಂದು ತಾಸು ಇಷ್ಟಲಿಂಗ ಪೂಜಾ ಪ್ರಾತ್ಯಕ್ಷಿಕೆ ಮತ್ತು ಶಿವಯೋಗದಲ್ಲಿ ಎಲ್ಲರೂ ಶ್ರದ್ದಾ ಭಕ್ತಿಯಿಂದ ಪಾಲ್ಗೊಂಡರು.
ರುದ್ರಭೂಮಿಯಲ್ಲಿ ಶಿವರಾತ್ರಿ ಆಚರಣೆ ಅಂಗವಾಗಿ ಇಷ್ಟಲಿಂಗ ಪೂಜೆ- ಧ್ಯಾನ -ಪ್ರಸಾದ ಕಾರ್ಯಕ್ರಮದಲ್ಲಿ ಇಷ್ಟಲಿಂಗ ಪೂಜೆ ಪ್ರಾತ್ಯಕ್ಷಿಕೆಯನ್ನು ಡಾ. ತಾಂಡೂರ ನೆರವೇರಿಸಿಕೊಟ್ಟರು.

ಜಾಗತಿಕ ಲಿಂಗಾಯತ ಮಹಾಸಭಾ ವಿಜಯನಗರ ಜಿಲ್ಲಾ ಘಟಕದ ಅಧ್ಯಕ್ಷರಾದ ಬಸವರಾಜ ಮಾವಿನಹಳ್ಳಿ ಪ್ರತಿವರ್ಷದಂತೆ ಕಾರ್ಯಕ್ರಮದ ಆಯೋಜನೆಗೆ ಅಗತ್ಯವಿರುವ ಎಲ್ಲಾ ಏರ್ಪಾಟುಗಳನ್ನು ಮಾಡಿದ್ದರು. ಕಾರ್ಯಕ್ರಮಕ್ಕೆ ಬಂದವರೆಲ್ಲಾ ಅಲ್ಲಿಯೇ ಸಂಭ್ರಮದಿಂದ ಪ್ರಸಾದ ಸ್ವೀಕಾರ ಮಾಡಿದರು.

ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲರಾದ ಶಶಿಧರ, ಓಂಪ್ರಕಾಶ ಗೌಡ ,ಕೊಟ್ರೇಶ ಹಡಪದ, ರೈತ ಸಂಘದ ಮುಖಂಡ ಜಂಬಾನಳ್ಳಿ ವಿರುಪಾಕ್ಷ ಸೇರಿದಂತೆ ಮೂವತ್ತು ಜನ ಪಾಲ್ಗೊಂಡು ಸಂತಸಪಟ್ಟರು. ವಚನ ಮಂಗಲದ ನಂತರ ಎಲ್ಲರೂ ಅಲ್ಲಿಂದ ನಿರ್ಗಮಿಸಿದರು.

Let the same awareness be brought to schools and colleges students . Education in society about wrong notions and practices.