“ವಚನಕಾರರು ಹಿಂದೂಗಳಲ್ಲ. ವಚನಕಾರರು ರೂಪಿಸಿದ ಚಳವಳಿ ಬ್ರಾಹ್ಮಣರ ಪಾರಮ್ಯದ ವೈದಿಕಧರ್ಮ ಅಥವಾ ವರ್ಣ ವ್ಯವಸ್ಥೆಯ ವಿರುದ್ಧದ ಬಹುದೊಡ್ಡ ಕ್ರಾಂತಿ. ಆದರೆ ವಚನಗಳನ್ನು ಮತ್ತು ವಚನಕಾರರನ್ನು ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಾ ಲಿಂಗಾಯತರನ್ನು ಭಾವನಾತ್ಮಕವಾಗಿ ಪ್ರಚೋದಿಸುವ ಪ್ರಯತ್ನಗಳು ನಡೆಯುತ್ತಿವೆ. “ವಚನ ದರ್ಶನ” ಕೃತಿಯ ಪ್ರಕಟಣೆ ಇಂತಹ ಕೃತ್ರಿಮ ಪ್ರಯತ್ನಗಳಲ್ಲೊಂದು. ಇದು ಅತ್ಯಂತ ಖಂಡನೀಯವಾದ ಬೆಳವಣಿಗೆ. ಇದು ಬಸವಣ್ಣನವರ ಅನುಯಾಯಿಗಳಲ್ಲಿ ಈಗಲೂ ಜೀವಂತವಾಗಿರುವ ವಚನ ಚಳವಳಿ ಹಾಗೂ ಕಲ್ಯಾಣ ಕ್ರಾಂತಿಯ ನೆನಪುಗಳನ್ನು ಅಳಿಸಿಹಾಕುವ ಪ್ರಯತ್ನ ಕೂಡ. ಇಂತಹ ಪ್ರಯತ್ನಗಳನ್ನು ನಾವು ನಿಗ್ರಹಿಸಬೇಕು. ವಿವಾದಿತ “ವಚನ ದರ್ಶನ” ಎಂಬ ಪುಸ್ತಕದ ಹೆಸರಿನಲ್ಲಿ ನಡೆಯುತ್ತಿರುವ ಶರಣವಿರೋಧಿ ಚಟುವಟಿಕೆಗಳನ್ನು ನಾವು ಸಹಿಸಬಾರದು”. ಹೀಗೆ ನಿರ್ಭೀತವಾಗಿ ಮಾತಾಡುತ್ತಿದ್ದಾರೆ ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ, ನಿವೃತ್ತ ಐಎಎಸ್ ಅಧಿಕಾರಿ ಡಾ.ಎಸ್. ಎಂ.ಜಾಮದಾರ್.
ಸ್ವತಂತ್ರ ಲಿಂಗಾಯತ ಧರ್ಮದ ಗುರುತಿಗಾಗಿ ಹೋರಾಟದ ಮುಂಚೂಣಿಯಲ್ಲಿರುವ ಡಾ.ಎಸ್.ಎಂ.ಜಾಮದಾರ್ ಅವರನ್ನು ನಾನು ಮತ್ತು ನನ್ನ ಗೆಳೆಯ ಸಾಸಲು ಸುಧಾಕರ್ ನಿನ್ನೆ ದಿನ ಅವರ ಮನೆಯಲ್ಲಿ ಭೇಟಿಯಾಗಿ ಸುದೀರ್ಘವಾಗಿ ಮೂರು ಗಂಟೆಗಳ ಕಾಲ ಮಾತಾಡಿದೆವು. ಜಾಮದಾರ್ ಅವರು ಕನ್ನಡ, ಇಂಗ್ಲಿಷ್, ಹಿಂದಿ, ಸಂಸ್ಕೃತ, ಫ್ರೆಂಚ್ ಮತ್ತು ಜರ್ಮನ್ ಭಾಷೆಗಳನ್ನು ಬಲ್ಲವರು. ಅವರು ನಿವೃತ್ತಿಯ ನಂತರದಲ್ಲಿ ಸಾಮಾಜಿಕ ಚಳವಳಿಗೆ ಪ್ರವೇಶಿಸುವುದರೊಂದಿಗೆ ಜಾಗತಿಕ ಲಿಂಗಾಯತ ಮಹಾಸಭಾದ ಮೂಲಕ ಲಿಂಗಾಯತ ಸ್ವತಂತ್ರ ಧರ್ಮದ ಗುರುತಿಗಾಗಿ ಆಗ್ರಹಿಸಿ “ಮತ್ತೆ ಕಲ್ಯಾಣ” ಚಳವಳಿಗೆ ಶಕ್ತಿ ತುಂಬಿದವರು.
ಡಾ.ಎಸ್.ಎಂ.ಜಾಮದಾರ್ ಅವರು, ”ಲಿಂಗಾಯತ ಎಂಬುದು ನಮ್ಮ ಕರ್ನಾಟಕದಲ್ಲಿ ಕನ್ನಡಿಗರೇ ಆದ ಬಸವಾದಿ ಪ್ರಮಥ ಶರಣರು ರೂಪಿಸಿರುವ ಸ್ವತಂತ್ರ ಧರ್ಮ. ನಮ್ಮದೇ ಕನ್ನಡ ನೆಲದ ಧರ್ಮ ಇದು. ಲಿಂಗಾಯತರು ಹಿಂದೆಯೂ ಈಗಲೂ ಹಿಂದೂಗಳಲ್ಲ” ಎಂದು ದೃಢವಾಗಿ ಪ್ರತಿಪಾದಿಸುತ್ತಿದ್ದಾರೆ. ಇದಕ್ಕೆ ಪೂರಕವಾದ ಅಧಿಕೃತ ಸಾಕ್ಷ್ಯಾಧಾರಗಳನ್ನು ಜಾಮದಾರ್ ಅವರು ತಮ್ಮ ಅನೇಕ ಕೃತಿಗಳ ಮೂಲಕ ನಮಗೆ ಒದಗಿಸಿದ್ದಾರೆ. ಕಂದಾಯ ಇಲಾಖೆಯಲ್ಲಿ ಸರ್ಕಾರದ ಉನ್ನತ ಹಂತದ ಕಾರ್ಯದರ್ಶಿಯಾಗಿ ನಿವೃತ್ತಿಯಾಗಿರುವ ಡಾ.ಜಾಮದಾರ್ ತಮ್ಮ ವೃತ್ತಿಯ ಅಧಿಕಾರ ಕೇಂದ್ರದಾಚೆಗೂ ಸಾಹಿತ್ಯ ರಚನೆ, ಸಂಶೋಧನೆ ಮತ್ತು ಸಾಮಾಜಿಕ ಚಳವಳಿಗಳಿಗೆ ತಮ್ಮನ್ನು ವಿಸ್ತರಿಸಿಕೊಂಡವರು.
ಅವರೊಬ್ಬ ಬಹುಮಖ ಪ್ರತಿಭೆಯ ಸಂಗಮ. ಐಎಎಸ್ ಅಧಿಕಾರಿಯಾಗುವುದಕ್ಕೂ ಮೊದಲಿಗೆ ಅಮೇರಿಕಾ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿದ್ದರು. ಆಗಿನಿಂದಲೂ ನಿರಂತರವಾಗಿ ಅಧ್ಯಯನ ಮತ್ತು ಅಧ್ಯಾಪನದಲ್ಲಿ ನುರಿತಿರುವ ವಿದ್ವಾಂಸರಾದ ಜಾಮದಾರ್ ತಮ್ಮ ಅಕ್ಯಾಡೆಮಿಕ್ ಸಂಬಂಧಗಳನ್ನು ನಿವೃತ್ತಿಯ ನಂತರದಲ್ಲಿಯೂ ಬಿಟ್ಟುಕೊಟ್ಟಿಲ್ಲ. ಈಗಲೂ ಅಪರಾಧ ಶಾಸ್ತ್ರ (criminology) ವಿಷಯವನ್ನು ಬೋಧಿಸಲು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ ಇನ್ನೂ ಮುಂತಾದ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಪರಾಧಶಾಸ್ತ್ರ ಮತ್ತು ಮನಃಶಾಸ್ತ್ರ ಅವರು ವಿಶ್ವವಿದ್ಯಾಲಯದಲ್ಲಿ ಕಲಿತ ನೆಚ್ಚಿನ ವಿಷಯಗಳು. ಸಂಶೋಧನೆ ಅವರ ಆಸಕ್ತಿಯ ಕ್ಷೇತ್ರ. ಸಾಹಿತ್ಯ ರಚನೆ ಅವರ ಸೃಜನಶೀಲ ಪ್ರತಿಭೆಯ ಅಭಿವ್ಯಕ್ತಿ. ಇಂಗ್ಲಿಷ್ ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಅನೇಕ ಕಥೆಗಳನ್ನು ಬರೆದಿದ್ದಾರೆ.
ನನಗೆ ಡಾ.ಎಸ್.ಎಂ.ಜಾಮದಾರ್ ಎಂದ ಕೂಡಲೇ ‘ಅವರೊಬ್ಬ ಕಂದಾಯ ಇಲಾಖೆಯ ವಿವಿಧ ಶ್ರೇಣಿಯ ಹುದ್ದೆಗಳಲ್ಲಿ ದುಡಿದ ದಕ್ಷ ಪ್ರಾಮಾಣಿಕ, ಖಡಕ್ ಅಧಿಕಾರಿಯಾಗಿ ಕೂಡಲ ಸಂಗಮ, ಬಸವ ಕಲ್ಯಾಣ, ಕಾಗಿನೆಲೆ ಬಾಡ ಹಾಗೂ ಬಸವನ ಬಾಗೇವಾಡಿಯಂತಹ ಐತಿಹಾಸಿಕ ಮತ್ತು ಧಾರ್ಮಿಕ ಕೇಂದ್ರಗಳನ್ನು ಅಭಿವೃದ್ಧಿಪಡಿಸಿದ ಕಾಯಕಯೋಗಿಯಾಗಿ ನೆನಪಿಗೆ ಬರುತ್ತಿದ್ದರು. ನಾನು ಮತ್ತು ಜಾಮದಾರ್ ಕೆಲವು ಆನ್ಲೈನ್ ವೆಬಿನಾರುಗಳಲ್ಲಿ ಜೊತೆಯಲ್ಲಿ ಉಪನ್ಯಾಸ ನೀಡಿದ್ದೆವು. ಬಸವಾನುಯಾಯಿಯಾದ ನನ್ನ ಆತ್ಮೀಯ ಗೆಳೆಯ ಪ್ರಕಾಶ್ ಉಳ್ಳಾಗಡ್ಡಿ ಮತ್ತು ನಾನು ರೂಪಿಸಿದ್ದ “ವಚನ ಮಂಟಪ ವೇದಿಕೆ” ಆಯೋಜಿಸಿದ್ದ ವೆಬಿನಾರ್ ಉಪನ್ಯಾಸ ಮಾಲಿಕೆಯಲ್ಲಿ ಜಾಮದಾರ್ ಅವರು “ಬಸವ ತತ್ವ ಸಾಗಿಬಂದ ಸ್ಥಿತ್ಯಂತರಗಳು” ಎಂಬ ವಿಷಯದ ಮೇಲೆ ಪಾಂಡಿತ್ಯಪೂರ್ಣ ಉಪನ್ಯಾಸ ನೀಡಿದ್ದರು.
ಡಾ.ಜಾಮದಾರ್ ಒಬ್ಬ ಕಲಾಪ್ರೇಮಿ. ಮನೆಯ ತುಂಬೆಲ್ಲಾ ದೇಶ ವಿದೇಶಗಳ ಕಲಾವಿದರು ಬರೆದಿರುವ ಕಲಾಕೃತಿಗಳು, ಲೋಹದ ಕಲಾ ಪ್ರತಿಮೆಗಳು ಅವರ ಮನೆಯ ಸೌಂದರ್ಯವನ್ನು ಹೆಚ್ಚುಗೊಳಿಸಿವೆ. ಪ್ರಪಂಚದ ಎಲ್ಲಾ ಪ್ರಮುಖ ಧರ್ಮಗಳ ಧರ್ಮಗ್ರಂಥಗಳು ಹಾಗೂ ವಿಶ್ವಮಟ್ಟದ ರಾಜಕೀಯ ಚಿಂತಕರ ಅಮೂಲ್ಯವಾದ ಕೃತಿಗಳು ಅವರ ಖಾಸಗಿ ಗ್ರಂಥಾಲಯದಲ್ಲಿವೆ. ತಮ್ಮ ಮನೆಯ ಪ್ರತಿಯೊಂದು ಕೋಣೆಗೂ ನಮ್ಮನ್ನು ಜೊತೆಯಲ್ಲಿ ಕರೆದೊಯ್ದು ಸುತ್ತಾಡಿಸಿದರು. ಅವರ ಖಾಸಗಿ ಮತ್ತು ಸಾರ್ವಜನಿಕ ಬದುಕಿನ ಅನೇಕ ವಿವರಗಳನ್ನು ನಮ್ಮೊಂದಿಗೆ ಉಭಯ ಭೇದಗಳಿರದೆ ಹಂಚಿಕೊಂಡರು. ಜಾಮದಾರ್ ಅವರ ಬಗ್ಗೆ ನನ್ನಲ್ಲಿದ್ದ ವಿಚಿತ್ರ ಬಗೆಯ ಕಲ್ಪನೆಗಳು ದೂರವಾಗಿ ಅವರೊಬ್ಬ ಅತ್ಯಂತ ಸರಳ, ಸಜ್ಜನ ಬಸವಾನುಯಾಯಿಯಾಗಿ, ಅಪ್ಪಟ ಮನುಷ್ಯನಾಗಿ ಕಂಡುಬಂದರು. ಮನೆಯಿಂದ ಹೊರಡುವಾಗ ಅವರೇ ಬರೆದಿರುವ ಪುಸ್ತಕಗಳನ್ನು ಕೊಡುಗೆ ನೀಡಿ ನಮ್ಮನ್ನು ನಗುತ್ತಾ ಬೀಳ್ಕೊಟ್ಟರು.
ಡಾ॥ ಶಿವಾನಂದ ಜಾಮದಾರ ಸರ್ ಒಬ್ಬ ಮಹಾನ್ ಪ್ರತಿಭೆ
ಇವರ ಸಂಪಕ೯ ಸಿಕ್ಕಿರುವುದು ನಮ್ಮ ಭಾಗ್ಯ.