ಸಾಮೂಹಿಕ ವಿವಾಹಗಳಿಗೆ ನಾಂದಿ ಹಾಡಿದ ಮಹಾಶರಣೆ ದಾನಮ್ಮದೇವಿ

ಸಂಗಮೇಶ ಜವಾದಿ
ಸಂಗಮೇಶ ಜವಾದಿ

ದಾನಮ್ಮ ಉತ್ಸವ ಸಮಾರೋಪ

ಬಸವಕಲ್ಯಾಣ:

ಲಿಂಗಪೂಜೆ, ದಾಸೋಹ, ಸಾಮಾಜಿಕ ಸೇವೆಯಿಂದಲೇ ಲಿಂಗಮ್ಮ ದಾನಮ್ಮನಾದಳು. 12ನೇ ಶತಮಾನದ ಕಾಲಘಟ್ಟದಲ್ಲಿಯೇ ಸಾಮೂಹಿಕ ವಿವಾಹಗಳಿಗೆ ನಾಂದಿ ಹಾಡಿದ ಮಹಾಶರಣೆ ದಾನಮ್ಮದೇವಿ ಅವರು ಪ್ರಾತ ಸ್ಮರಣೀಯರು ಎಂದು ಪೂಜ್ಯ ಬಸವಪ್ರಭು ಸ್ವಾಮಿಜಿ ಹೇಳಿದರು.

ನಗರದ ಗುಣತೀರ್ಥವಾಡಿ ಮಹಾಮನೆಯಲ್ಲಿ ಶಿವಶರಣೆ ದಾನಮ್ಮದೇವಿ ಉತ್ಸವದ 15ನೇ ಜ್ಯೋತಿ ಯಾತ್ರೆ ಸಮಾರೋಪ ಸಮಾರಂಭ ಮತ್ತು ಗುರುವಂದನಾ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.

12ನೇ ಶತಮಾನದ ಕಾಲಘಟ್ಟದಲ್ಲಿಯೇ ಸಾಮೂಹಿಕ ವಿವಾಹಗಳಿಗೆ ನಾಂದಿ ಹಾಡಿದ ಮಹಾಶರಣೆ, ಕಲ್ಯಾಣದ ಶರಣರು ಸ್ತ್ರೀ ಸಮಾನತೆಯ ಹರಿಕಾರರು. ಈ ಸಮಾನತೆಯ ಕಾರಣದಿಂದಾಗಿಯೇ ಅನೇಕ ಶರಣೆಯರು ಅನುಭವ ಮಂಟಪದಲ್ಲಿ ಸೇರುವಂತಾಯಿತು. ನಿತ್ಯ ಲಿಂಗಾರ್ಚನೆ, ಶಿವಯೋಗ ಸಾಧನೆ ಮಾಡುವುದರಿಂದ ಅಪಮೃತ್ಯುಗಳು ತಪ್ಪುವುದಾಗಿ ಶರಣರು ಹೇಳಿದರು. ನಡೆ ನುಡಿ ಒಂದಾದ ಸಾರ್ಥಕ ಜೀವನ ನಡೆಸಿದರು.

ನಮ್ಮ ದೇಶವು ಸರ್ವಜನಾಂಗದ ಶಾಂತಿಯ ತೋಟವಾಗಿದ್ದು, ಜಗತ್ತಿನ ಪ್ರಥಮ ಪಾರ್ಲಿಮೆಂಟ್ ಅನುಭವ ಮಂಟಪವಾಗಿದೆ. 770 ಅಮರಗಣಂಗಳು ನೀಡಿದ ವಚನ ಸಾಹಿತ್ಯ ಅತ್ಯಂತ ಶ್ರೇಷ್ಠ ಮತ್ತು ಸರ್ವ ಕಾಲಕ್ಕೂ ಸಲ್ಲುವ ವಿಶಿಷ್ಠ ಸಾಹಿತ್ಯವಾಗಿದೆ. ಅದನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳುವುದು ಇಂದಿನ ದಿನಗಳಲ್ಲಿ ಹೆಚ್ಚು ಅವಶ್ಯಕತೆಯಾಗಿದೆ ಎಂದರು.

ಸಮ್ಮುಖ ವಹಿಸಿದ್ದ ಅನುಭವ ಮಂಟಪ ಸಂಚಾಲಕರಾದ ಪೂಜ್ಯ ಶಿವಾನಂದ ಸ್ವಾಮಿಗಳು ಮಾತನಾಡಿ, ಬಸವಣ್ಣನವರು ಸಾಮಾಜಿಕ ಧ್ವನಿಯಾಗಿ ಶರಣ ಸಂಕುಲದಲ್ಲಿ ಯಾರೂ ಆರ್ಥಿಕ ಸಮಸ್ಯೆಯಿಂದ ಬಳಲಬಾರದು ಎಂಬ ಉದ್ದೇಶದಿಂದ ಕಾಯಕತತ್ವಕ್ಕೆ ಪ್ರಾಮುಖ್ಯತೆ ನೀಡಿದ್ದರು. ದಾನಮ್ಮನವರ ಸೇವೆ ಮತ್ತು ಅವರ ಸಾಮಾಜಿಕ ಮತ್ತು ಧಾರ್ಮಿಕ ಸಾಧನೆಗಳು ಇಂದಿನ ಪೀಳಿಗೆಗೆ ಮಾದರಿಯಾಗಿವೆ ಎಂದರು.

ಪೂಜ್ಯ ಸದ್ಗುರು ಸತ್ಯಾದೇವಿ ಮಾತಾಜಿ, ಪೂಜ್ಯ ಪ್ರಭು ಶ್ರೀ ಮಾತೆ, ಬಸವರಾಜ ವೆಂಕಟಾಪೂರು ಶರಣರು, ಬಸವರಾಜ ಧನ್ನೂರು ಮಾತನಾಡಿ, ಪೂಜ್ಯ ಬಸವಪ್ರಭು ಸ್ವಾಮಿಜಿಗಳ ನಿಸ್ವಾರ್ಥ ಸೇವೆ ನಾಡಿಗೆ ಮಾದರಿ ಮತ್ತು ನಮಗೆಲ್ಲರಿಗೂ ಪ್ರೇರಣದಾಯಕವಾಗಿದೆ.

ಗುಣತೀರ್ಥವಾಡಿ ಕ್ಷೇತ್ರ ನಾಡಿನ ತುಂಬೆಲ್ಲ ಬೆಳಗಲಿ, ಇದರ ಬಗ್ಗೆ ಹೆಚ್ಚಿನ ಹೆಚ್ಚಿನ ರೀತಿಯಲ್ಲಿ ಸಂಶೋಧನೆ ಆಗಲಿ ಜೊತೆಗೆ ಸರ್ಕಾರ ಅನುದಾನ ನೀಡುವ ಮುಖಾಂತರ ಪ್ರವಾಸೋದ್ಯಮ ತಾಣವಾಗಲಿ ಎಂದು ಹೇಳಿದರು.

ಕಲ್ಯಾಣ ಮಹಾಮನೆ ಕಾರ್ಯಾಧ್ಯಕ್ಷರಾದ ದಿಲೀಪ ಶಿಂದೆ ಮಾತನಾಡಿ, ಆದರ್ಶ ಕೇವಲ ಮಾತಿನಲ್ಲಿ ಇರಬಾರದು ಆಚರಣೆಯಲ್ಲಿ ಇರಬೇಕು. ಸಮಸಮಾಜದ ನಿರ್ಮಾಣ ಮತ್ತು ಸ್ತ್ರೀ ಸಮಾನತೆಯ ಕಾರಣದಿಂದಲೇ 12ನೇ ಶತಮಾನದ ಕ್ರಾಂತಿಯಾಗಿದ್ದು ಇತಿಹಾಸ. ದಾನಮ್ಮ ಶರಣೆ ಸೇವೆ ಮತ್ತು ದಾಸೋಹದ ಪ್ರತೀಕವಾಗಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ರೈತ ಧರ್ಮರತ್ನ ಪ್ರಶಸ್ತಿಯನ್ನು ವೀಲಾಸರಾವ್, ಪ್ರಗತಿಪರ ರೈತರಿಗೆ ಪ್ರಧಾನ ಮಾಡಲಾಯಿತು. ಗಿರಿಜಾ ಸಿದ್ದಣ್ಣ ಹಂಗರಗಿ, ಸಂಗಮೇಶ ತೊಗರೆಖೇಡೆ, ಶಿವಬಸಯ್ಯ ಸ್ವಾಮಿ ಕೊಪ್ಪಳ ಅವರಿಗೆ ಗೃಹಸ್ಥ ಜಂಗಮ ಪ್ರಶಸ್ತಿ ಹಾಗೂ ಲಿಂಗಾನುಭಾವಿ ರತ್ನ ಪ್ರಶಸ್ತಿಯನ್ನು ಜಯಪ್ರಕಾಶ ಸದಾನಂದೆ ಅವರಿಗೆ ಪ್ರದಾನ ಮಾಡಲಾಯಿತು.

ಲಕ್ಷ್ಮಿ ಹಾಗೂ ಸೂರ್ಯಕಾಂತ ಬಿರಾದಾರ ಸಂಗಡಿಗರಿಂದ ವಚನ ಸಂಗೀತ ನೇರವೇರಿತು. ಗುಣತೀರ್ಥವಾಡಿ ಸರ್ಕಾರಿ ಶಾಲಾ ಮಕ್ಕಳಿಂದ ವಚನ ನೃತ್ಯ ಪ್ರದರ್ಶನಗೊಂಡಿತು.

ಈ ಸಂದರ್ಭದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿ ಸಂಗಮೇಶ ಎನ್. ಜವಾದಿ, ಉದ್ದಿಮೆದಾರರಾದ ಸೋಮನಾಥ ಅಷ್ಟೋರೆ, ಸವಿತಾ , ಮಲ್ಲಿಕಾರ್ಜುನ ಟಂಕಶಾಲೆ, ಪ್ರದೀಪ ಬಿರಾದಾರ, ಲಕ್ಷ್ಮಣರಾವ ಹಂದಿಕೇರಿ, ನಾಗಶೆಟ್ಟಿ ಪಾಟೀಲ, ಸಂಗಮೇಶ ತೊಗರಿಖೇಡಾ, ಮನೋಹರರಾವ ಮೇಧಾ, ಶೌರ್ಯ ಜವಾದಿ, ನಾಗೇಶ, ಬಸವಜ್ಯೋತಿ, ಸುಮಿತ್ರಾದೇವಿ, ಪ್ರಗತಿಪರ ಚಿಂತಕರು,  ಬಸವಾಭಿಮಾನಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *