ಸಾಣೇಹಳ್ಳಿ ಸ್ವಾಮೀಜಿಗೆ ಭಾರತ ರಂಗಮಹೋತ್ಸವ ಗೌರವ

ಸಾಣೇಹಳ್ಳಿ:

ಬೆಂಗಳೂರಿನ ಕಲಾಗ್ರಾಮದಲ್ಲಿ ಸಂಸ್ಕೃತಿ ಸಚಿವಾಲಯ, ಕನ್ನಡ ಮತ್ತು  ಸಂಸ್ಕೃತ ಇಲಾಖೆ ರಾಷ್ಟ್ರೀಯ ನಾಟಕ ಶಾಲೆ ಹಾಗೂ ಕರ್ನಾಟಕ ನಾಟಕ ಅಕಾಡೆಮಿಯ ಸಂಯುಕ್ತಾಶ್ರಯದಲ್ಲಿ ನಡೆದ ಭಾರತ ರಂಗಮಹೋತ್ಸವ ಹಾಗೂ ರಂಗ ಪರಿಷೆ ಕಾರ್ಯಕ್ರಮದಲ್ಲಿ ಉತ್ಸವ ಗೌರವವನ್ನು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ, ನಮ್ಮನ್ನು ಇಲ್ಲಿ ಗೌರವಿಸಿದರು ಈ ಗೌರವ ನಮಗೆ ಸಲ್ಲುವಂಥದ್ದಲ್ಲ ರಂಗ ಕಲಾವಿದರಿಗೆ ಸಲ್ಲುವಂಥದ್ದು. ರಂಗಕಲಾವಿದರನ್ನು ಗೌರವಿಸಿದರೆ ಆ ಗೌರವ ನಮಗೂ ಸಲ್ಲುತ್ತೆ.

ಕರ್ನಾಟಕದಲ್ಲಿ ರಂಗಭೂಮಿ ತುಂಬ ಬಲಿಷ್ಠವಾಗಿ ಬೆಳೆಯುತ್ತದೆ. ಸಾಕಷ್ಟು ರಂಗಾಯಣಗಳು ಆಗಿವೆ. ಸರಕಾರದಿಂದ ಆರ್ಥಿಕ ನೆರವು ಕಡಿಮೆ ಬಂದರೂ ಅದರ ಮೂಲಕ ಅನೇಕ ರಂಗಾಯಣಗಳಲ್ಲಿ ನಿರಂತರ ಚಟುವಟಿಕೆಗಳು ನಡೆಯುತ್ತಿರುವುದು ತುಂಬಾ ಸಂತೋಷ.

ರಂಗಾಯಣದ ನಿರ್ದೇಶಕ ನಾಗರಾಜಮೂರ್ತಿಯವರು ಸರಕಾರದೊಂದಿಗೆ ಮಾತನಾಡಿ ಹೆಚ್ಚೆಚ್ಚು ಹಣ ರಂಗಭೂಮಿಗೆ ಕೊಡುವಂತೆ ಮಾಡಿದರೆ ಇಡೀ ನಾಡಿನಲ್ಲಿ ರಂಗಸಂಸ್ಕೃತಿಯನ್ನು ಬೆಳೆಯಲಿಕ್ಕೆ ಸಾಧ್ಯ. ಇದರ ಜೊತೆಗೆ ಇದುವರೆಗೂ ಸರಕಾರದಿಂದ ರಂಗಶಿಕ್ಷಕರ ನೇಮಕಾತಿ ಆಗಿಲ್ಲ. ರಂಗಶಿಕ್ಷಕರ ನೇಮಕಾತಿ ಮಾಡಿದರೆ ಆ ಮೂಲಕ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಹೊಂದಲು ಸಾಧ್ಯ. ಇದನ್ನು ಸರಕಾರ ಗಂಭೀರವಾಗಿ ಆಲೋಚನೆ ಮಾಡಬೇಕಾಗಿದೆ.

ನಮಗೆ ಗುರಿ ಮತ್ತು ಗುರು ಬೇರೆ ಯಾರೂ ಅಲ್ಲ ನಾವೇ. ನಮಗೆ ಭಗವಂತ ಬುದ್ಧಿ ಕೊಟ್ಟಿದ್ದಾನೆ. ಬುದ್ಧಿಯ ಸದ್ಭಳಕೆಯಿಂದ ನಮ್ಮ ಬದುಕನ್ನು ನಾವೇ ಕಟ್ಟಿಕೊಳ್ಳಬೇಕು. ರಂಗಭೂಮಿಯ ಕಲಾವಿದರಿಗೆ ಕಾಲೇಕಂಬ ದೇಹವೇ ದೇಗುಲ, ಶಿರವೇ ಹೊನ್ನ ಕಳಸವಾಗಬೇಕು. ಅದರ ಮೂಲಕ ಸಮಾಜಕ್ಕೆ ಕಲಾವಿದರು ಒಳ್ಳೆಯದನ್ನು ಕೊಡಲು ಸಾಧ್ಯ.

ರಂಗಭೂಮಿಗೂ ಧರ್ಮಕ್ಕೂ ಅವಿನಾಭಾವ ಸಂಬಂಧ ಇದೆ. ಒಬ್ಬ ಕಲಾವಿದ ನಿಜವಾದ ದಾರ್ಶನಿಕ. ಅವನು ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವಂತಾಗಬೇಕು. ರಂಗಭೂಮಿಯ ಮೂಲಕ ಸಮಾಜ ಪರಿವರ್ತನೆ ಮಾಡೋದಕ್ಕೆ ಸಾಧ್ಯ ಇದೆ.

ಮನುಷ್ಯ ಸಮಾಜದಲ್ಲಿ ಕೆಟ್ಟ ಆಲೋಚನೆಗಳನ್ನು ಮಾಡುತ್ತಾ ಕ್ಷುಲ್ಲಕ ಜಗಳಗಳಿಗೆ ಕಾರಣನಾಗುವನು. ಆದರೆ ರಂಗಭೂಮಿ ರಕ್ತಕಲೆಗಳನ್ನು ಅಳಿಸಿ ಸಂಘಟನೆ ಮೂಲಕ ನವ ಸಮಾಜ ನಿರ್ಮಾಣ ಮಾಡುವ ಶಕ್ತಿ ರಂಗಭೂಮಿಗೆ ಇದೆ. ಈ ನೆಲೆಯಲ್ಲಿ ಸರಕಾರ ರಂಗಭೂಮಿಯಲ್ಲಿ ಕೆಲಸ ಮಾಡುವ ಕ್ಷೇತ್ರಗಳಿಗೆ ಹೆಚ್ಚು ಅನುದಾನ ನೀಡುವ ಅಗತ್ಯ ಇದೆ ಎಂದರು.

ಸಿಜಿಕೆ ಸಾಣೇಹಳ್ಳಿಗೆ ಬರದೇ ಇದ್ದರೆ ನಾವು ರಂಗಭೂಮಿಯಲ್ಲಿ ಇಷ್ಟೊಂದು ಕೆಲಸ ಮಾಡೋದಕ್ಕೆ ಸಾಧ್ಯ ಆಗುತ್ತಿರಲಿಲ್ಲ. ದೈಹಿಕವಾಗಿ ವಿಶೇಷ ಚೇತನರಾಗಿದ್ದರು, ಮನಸ್ಸಿನಲ್ಲಿ ಸದಾ ಒಳ್ಳೆಯ ಆಲೋಚನೆ ಮಾಡಿ ಸಮಾಜಕ್ಕೆ ಏನು ಬೇಕೆಂದು ಸದಾ ಆಲೋಚಿಸುತ್ತಿದ್ದರು.

ರಂಗಭೂಮಿ ಯಜಮಾನಿಕೆಯನ್ನು ತೋರಿಸದೇ ಭೃತ್ಯಾಚಾರದ ಭಾವನೆ ಬೆಳೆಸುತ್ತದೆ. ಭೃತ್ಯಾಚಾರದ ಭಾವನೆ ಹೊಂದಿದವರು ಸಿಜಿಕೆ ಎಂದರು.

ವೇದಿಕೆಯ ಮೇಲೆ ನಾಟಕ ಅಕಾಡೆಮಿಯ ಸದಸ್ಯ ಕೆ. ಎ. ಬನಹಟ್ಟಿ, ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ. ಆರ್. ಪಾಟೀಲ, ಶಾಸಕ ಆರ್. ಮುನಿರತ್ನ,  ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ,  ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಶ್ರೀನಿವಾಸ ಕಪ್ಪಣ್ಣ, ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ, ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಅಧ್ಯಕ್ಷ ಕಾ. ಚಿಕ್ಕಣ್ಣ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್. ಎನ್. ಮುಕುಂದರಾಜ, ಉತ್ಸವ ನಿರ್ದೇಶಕ, ಬಿ. ಸುರೇಶ, ಗೊಲ್ಲಳ್ಳಿ ಶಿವಪ್ರಸಾದ, ಕೆ. ರಾಮಕೃಷ್ಣಯ್ಯ, ಸಂಚಾಲಕ ಜಗದೀಶ ಜಾಲ ಇತರಿದ್ದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *