ಬೆಂಗಳೂರು
ಬೆಂಗಳೂರು ಪ್ರೆಸ್ ಕ್ಲಬ್ ವತಿಯಿಂದ ನೀಡಲಾಗುವ 2024ನೇ ಸಾಲಿನ ವರ್ಷದ ವ್ಯಕ್ತಿ, ವಿಶೇಷ ಪ್ರಶಸ್ತಿ, ಸುವರ್ಣ ಮಹೋತ್ಸವ ಪ್ರಶಸ್ತಿ ಹಾಗೂ ವಾರ್ಷಿಕ ಪ್ರಶಸ್ತಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ರವಿವಾರ ಪ್ರದಾನ ಮಾಡಿದರು.
ನಗರದ ಪ್ರೆಸ್ ಕ್ಲಬ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ವರ್ಷದ ವ್ಯಕ್ತಿ’ ಪ್ರಶಸ್ತಿಯನ್ನು ಬೃಹತ್ ಕೈಗಾರಿಕಾ ಸಚಿವರಾದ ಎಂ.ಪಿ.ಪಾಟೀಲ ಅವರಿಗೆ ನೀಡಲಾಯಿತು. ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ಕೆ.ಜೆ.ಜಾರ್ಜ್, ಕೆ.ಎಚ್.ಮುನಿಯಪ್ಪ ಅವರಿಗೆ ಪ್ರೆಸ್ ಕ್ಲಬ್ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡುತ್ತ, “ಇತ್ತೀಚೆಗೆ ಊಹಾ ಪತ್ರಿಕೋದ್ಯಮ ಹೆಚ್ಚಾಗಿರುವುದು ಅಪಾಯಕಾರಿ ಬೆಳವಣಿಗೆ, ಸುದ್ದಿಗಾರರು ವಸ್ತುನಿಷ್ಠರಾಗಿರಬೇಕು. ಸತ್ಯವನ್ನು ತಿಳಿಸಬೇಕು,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

“ಈ ಪ್ರಶಸ್ತಿಯು ನನ್ನ ಜವಾಬ್ದಾರಿಯನ್ನು ಇನ್ನೂ ಹೆಚ್ಚಿಸಿದೆ. ನಾಡಿನ ಹಾಗೂ ಜನರ ಸೇವೆಗಾಗಿ ನನ್ನ ಶಕ್ತಿ ಮೀರಿದ ನಿರಂತರ ಪ್ರಯತ್ನ ಮಾಡುತ್ತೇನೆ. ಸಾರ್ವಜನಿಕ ಜೀವನದಲ್ಲಿ ನಾನು ಕೈಗೊಂಡಿರುವ ಕಾರ್ಯಗಳಿಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬೆಂಬಲಿಸಿರುವ ಎಲ್ಲರಿಗೂ ನಾನು ಆಭಾರಿ,” ಎಂದು ಪಾಟೀಲ್ ಹೇಳಿದರು.
ಕಳೆದ ವಾರ ಪ್ರೆಸ್ ಕ್ಲಬ್ ನ ಪ್ರಕಟಣೆಯೊಂದು “ರಾಜ್ಯ ಕೈಗಾರಿಕಾ ವಲಯಕ್ಕೆ ನೀಡುತ್ತಿರುವ ಉತ್ತೇಜನ ಪರಿಗಣಿಸಿ ಈ ಸಾಲಿನ ‘ವರ್ಷದ ವ್ಯಕ್ತಿ’ ಪ್ರಶಸ್ತಿಗೆ ಬೃಹತ್ ಕೈಗಾರಿಕಾ ಸಚಿವ ಎಂ. ಬಿ ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿದ ಪ್ರಯುಕ್ತ ‘ವಿಶೇಷ ಪ್ರಶಸ್ತಿ’ಗೆ ಇಂಧನ ಸಚಿವ ಕೆ. ಜೆ ಜಾರ್ಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ವರ್ ಹಾಗೂ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ಕೆ. ಹೆಚ್ ಮುನಿಯಪ್ಪ ಅವರನ್ನು ಆಯ್ಕೆ ಮಾಡಲಾಗಿದೆ,” ಎಂದು ತಿಳಿಸಿತ್ತು.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹಮದ್, ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾ ಖಾನುಂ, ಪ್ರೆಸ್ ಕ್ಲಬ್ ಅಧ್ಯಕ್ಷ ಆರ್. ಶ್ರೀಧರ ಉಪಸ್ಥಿತರಿದ್ದರು.