(ವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣೆ ಪ್ರೊ. ಶಾರದಮ್ಮ ಪಾಟೀಲ -ಬದಾಮಿ ಅವರ ಶ್ರಾವಣ ಮಾಸದ ವಿಶೇಷ ದತ್ತಿ ಉಪನ್ಯಾಸದ 10 ನೆಯ ದಿವಸದ ಕಾರ್ಯಕ್ರಮ. ಆಗಸ್ಟ್ 13)
ಕಾಯಕ ಮತ್ತು ದಾಸೋಹವನ್ನೇ ತಮ್ಮ ಜೀವನ ಶೈಲಿಯನ್ನಾಗಿ ಮಾಡಿಕೊಂಡು ವಚನಗಳನ್ನು ರಚಿಸಿದ 12ನೆಯ ಶತಮಾನದ ಶರಣರನ್ನು ನೆನೆಯುತ್ತಾ, ಬಸವಪೂರ್ವದಲ್ಲಿಯೂ ದಾರ್ಶನಿಕರಿದ್ದರು, ಈಗಲೂ ಇದ್ದಾರೆ, ಹಾಗೆಯೇ 20 ನೆಯ ಶತಮಾನದಲ್ಲಿ ನಲವತ್ತವಾಡ ವೀರೇಶ್ವರ ಶರಣರು ಹೇಗೆ ಬಾಳಿ ಬದುಕಿದರು ಎಂದು ಶರಣೆ ಅಕ್ಕಮಹಾದೇವಿ ಬುರ್ಲಿ ಅವರು ಬಸವಣ್ಣನವರ ವಚನದೊಂದಿಗೆ ತಮ್ಮ ಉಪನ್ಯಾಸವನ್ನು ಪ್ರಾರಂಭ ಮಾಡಿದರು.
ಕಂಠಿ ಮಠದ ದೊಡ್ಡಾರ್ಯ ಹಾಗೂ ರುದ್ರಾಂಬೆ ತಾಯಿಯವರ ಉದರದಲ್ಲಿ 1948ರಲ್ಲಿ ಮುದ್ದೇಬಿಹಾಳ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ವೀರೇಶ್ವರರು ಜನಿಸಿದರು. ಪಟ್ಟಣದ ಹಿರೇಮಠದ ರಾಮಗಿರಿನಾಥರನ್ನು ಗುರುವಾಗಿ ಸ್ವೀಕರಿಸಿ, ಸಣ್ಣವರಿದ್ದಾಗಿನಿಂದಲೇ ಮನೆಯಲ್ಲಿನ ಸಂಸ್ಕಾರದಂತೆ ಗುರುಸೇವೆ, ಲಿಂಗಪೂಜೆ, ಜಂಗಮಪೂಜೆಯೊಂದಿಗೆ ಅಂದಿನ ಮುಲ್ಕಿ ಪರೀಕ್ಷೆ ಪಾಸಾದರು.ನಂತರ ಅಲ್ಲಿಯೇ ಹತ್ತಿರದಲ್ಲಿರುವ ಸಿದ್ಧಾಪುರ ಗ್ರಾಮದ ಗಾoವಟಿ ಶಾಲೆಯಲ್ಲಿ ಕೆಲಸ ಮಾಡುತ್ತ, ಬಿದರ ಕುಂದಿಯ ಗುರುದೇವಿಯವರನ್ನು ಮದುವೆಯಾದರು.
ನಂತರ ವೃತ್ತಿಬಿಟ್ಟ ಶರಣರು, ಭಿಕ್ಷಾಟನೆ ಮೂಲಕ ಐದು ಮನೆಗಳಿಗೆ ಹೋಗಿ ಭಿಕ್ಷೆ ಮಾಡುವ ಕಾಯಕ ಶುರು ಮಾಡಿ ಬೇಕು ಬೇಡ ಎಂಬಂತೆ ಜಂಗಮ ರೀತಿಯಲ್ಲಿ ಬದುಕು ನಡೆಸಿದರು. ಬದುಕಿನಲ್ಲಿ ಹೆಚ್ಚಿದ ಸಂಕಷ್ಟಗಳಿಗೆ ನೊಂದ ಶರಣರು ಸಂಸಾರದ ಸುಗಮಕ್ಕೆ ನೇಗಿಲು ಹಿಡಿದರು. ಸಂಸಾರ ನಡೆಸುತ್ತಲೇ ಪ್ಲೇಗ ರೋಗ ಹರಡಿದ ವೇಳೆಯಲ್ಲಿ ಅದರ ನಿವಾರಣೆಗೆ ಗ್ರಾಮಸ್ಥರು ಗ್ರಾಮ ದೇವತೆಗೆ ಕೋಣ ಬಲಿಗೆ ಮುಂದಾಗಿದ್ದರು ಕೋಣ ಬಲಿ ತಡೆಗೆ ಯತ್ನಿಸಿದರು, ಆದರೆ ಅದು ಫಲ ನೀಡದ ಕಾರಣ ಮನನೊಂದು ಸಂಸಾರ ಸಮೇತ ಸೊಲ್ಲಾಪುರಕ್ಕೆ ಬಂದರು.
ಅಲ್ಲಿಯೂ ಜನರಿಂದ ಅನೇಕ ಬಾರಿ ಹೊಡೆತಗಳಿಂದ ಸಂಕಷ್ಟಕ್ಕೀಡಾಗಿ ಅಪಮಾನ ನಿಂದನೆಗೆ ಒಳಗಾದರು. ನಂತರ ಕೊಡೆಕಲ್ ಗ್ರಾಮದ ಶಿವಯೋಗಿಗಳ ಅಪ್ಪಣೆಯಂತೆ ಪತ್ನಿ ಲಿಂಗೈಕ್ಯರಾದ ಬಳಿಕ ಪಾರಮಾರ್ಥ ಜೀವನ ಪ್ರಾರಂಭಿಸಿದರು. ಇಡೀ ಜೀವನವನ್ನೇ ಸಮಾಜದ ತಿದ್ದುಪಡಿಗಾಗಿ ಮೂಢನಂಬಿಕೆ ತಡೆಯುವಲ್ಲಿ ನಿರತರಾದ ಶರಣರು 1920 ರಲ್ಲಿ ದೇಹ ತೊರೆಯುವ ಮುನ್ನ ಹಾನಗಲ್ ಕುಮಾರ ಸ್ವಾಮಿಗಳ ದರ್ಶನಕ್ಕೆ ಆಸೆ ಹೊಂದಿದರು,ವಿಷಯ ತಿಳಿದ ಹಾನಗಲ್ ಶ್ರೀಗಳು ಎಂದೂ ವಾಹನಗಳಲ್ಲಿ ಪ್ರಯಾಣ ಮಾಡದವರು ವೀರೇಶ್ವರರನ್ನು ಕಾಣಲು ರೈಲ್ವೆ ಮೂಲಕ ಬಂದು ವೀರೇಶ್ವರರನ್ನು ಕಂಡರು.
72 ವರ್ಷಗಳ ಸಾರ್ಥಕ ಬದುಕನ್ನು ಮುಗಿಸಿದ ವೀರೇಶ್ವರ ಶರಣರನ್ನು ಎಲ್ಲ ಕಡೆಗೆ ಹೊರ ರಾಜ್ಯ ಮಹಾರಾಷ್ಟ್ರದಲ್ಲೂ ಸಹ ಅಲ್ಲಿನ ಜನರು ಇವರನ್ನು ಆರಾಧಿಸುತ್ತಿದ್ದಾರೆ. ಎಂದು ಹೇಳುತ್ತಾ ಮಧ್ಯ ಮಧ್ಯ ಜನಪದ ಹಾಡುಗಳು, ಸರ್ವಜ್ಞನ ತ್ರಿಪದಿಗಳು, ಶರಣರ ವಚನಗಳು, ತತ್ವಪದಗಳನ್ನು ಉದಾಹರಣೆ ಮೂಲಕ ಹೇಳುತ್ತಾ, ಯಾಗ -ಯಜ್ಞ ಮಾಡಬೇಡಿ, ಮೂಢನಂಬಿಕೆ ತೊರೆಯಿರಿ, ದೀನ-ದಲಿತರ ಸೇವೆ ಮಾಡಿ ಎನ್ನುವ ವೀರೇಶ್ವರ ಶರಣರ ತತ್ವವನ್ನು
ಸ್ಮರಿಸಿದರು.
ಶರಣ ಅರ್. ವಿ. ಪಾಟೀಲ ಅವರು ತಮ್ಮ ಮಾರ್ಗದರ್ಶನದ ನುಡಿಗಳಲ್ಲಿ ವೀರೇಶ್ವರ ಶರಣರು ನಲವತ್ತು ವಿಧದ ಪರಿವರ್ತನೆ, ಸಾಮಾಜಿಕ ಕ್ರಾಂತಿ, ಬದಲಾವಣೆ ಮಾಡಿದ್ದಕ್ಕೆ ಆ ಊರಿನ ಹೆಸರು ನಲವತ್ತವಾಡ ಅಂತ ಬಂದಿರಬಹುದು ಎನ್ನುವ ಮಾತನ್ನು ಸ್ಪಷ್ಟೀಕರಿಸಿದರು. ಬಸವಣ್ಣನವರ ಭಕ್ತಿ, ಅಲ್ಲಮಪ್ರಭು ದೇವರ ವೈರಾಗ್ಯ ಮತ್ತು ಚೆನ್ನಬಸವಣ್ಣನವರ ಜ್ಞಾನವನ್ನು ಅಳವಡಿಸಿಕೊಂಡುವೀರೇಶ್ವರ ಶರಣರು ಅದನ್ನು ಲೋಕಕ್ಕೆ ಧಾರೆ ಎರೆದರು ಎಂದು ತಿಳಿಸಿದರು. ಪ್ರಾಣಿ -ಪಕ್ಷಿಗಳಿಗೆ ನೀರುಣಿಸುವುದು, ಗಿಡ-ಮರಗಳ ಆರೈಕೆ, ಚಿಕ್ಕ ಮಕ್ಕಳಿಗೆ ಸಿಹಿ ಹಂಚುವುದು ಹೀಗೆ ಹತ್ತು ಹಲವಾರು ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಗೊಡ್ಡು ಸಂಪ್ರದಾಯ, ವೈದಿಕ ಪರಂಪರೆಯ ನಿರ್ಮೂಲನೆಗೆ ಜೀವನವನ್ನೇ ಪಣಕ್ಕಿಟ್ಟರು ಎನ್ನುವ ಮಾತನ್ನು ಅತ್ಯಂತ ಭಕ್ತಿ -ಭಾವದಿಂದ ನೆನಪಿಸಿದರು.
ಡಾ. ಶಶಿಕಾಂತ ಪಟ್ಟಣ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಎಲ್ಲರಿಗೂ ಪ್ರೋತ್ಸಾಹದ ನುಡಿಗಳನ್ನಾ ಡಿದರು. ಶರಣೆ ವಿದ್ಯಾ ಮುಗ್ದುಮ್ ಅವರ ವಚನ ಪ್ರಾರ್ಥನೆ, ಡಾ. ದಾನಮ್ಮ ಝಳಕಿ ಅವರ ಸ್ವಾಗತ, ಶರಣೆ ಜಯಶ್ರೀ ಆಲೂರ ಅವರ ಶರಣು ಸಮರ್ಪಣೆ ಮತ್ತು ಶರಣೆ ಈರಮ್ಮ ಕುಂದಗೋಳ ಅವರ ವಚನ ಮಂಗಳದೊಂದಿಗೆ ಕಾರ್ಯಕ್ರಮ ಸುಸೂತ್ರವಾಗಿ ನಡೆಯಿತು. ಶರಣೆ ವಿಜಯಲಕ್ಷ್ಮಿ ಕಲ್ಬುರ್ಗಿ ಅವರು ಕಾರ್ಯಕ್ರಮ ನಿರ್ವಹಣೆಯನ್ನು ಅತ್ಯಂತ ಸುಂದರವಾಗಿ ನಿರೂಪಿಸಿದರು.