ಗದಗ :
ಮಹಾನಾಯಕ ಡಾ. ಬಿ. ಆರ್. ಅಂಬೇಡ್ಕರ್ ಅವರ ಉದ್ದೇಶ ಸಂವಿಧಾನದ ಮೂಲಕ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸುವುದೇ ಆಗಿದೆ ಎಂದು ಪ್ರಗತಿಪರ ಚಿಂತಕ ಸತೀಶ್ ಪಾಸಿ ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂಘದ ೨೭೭೪ನೇ ಶಿವಾನುಭವದಲ್ಲಿ ಉಪನ್ಯಾಸಕರಾಗಿ ಮಾತನಾಡಿದ ಅವರು, ಸಂವಿಧಾನವೆಂದರೆ ಕಾನೂನು ಪುಸ್ತಕ. ಕಾನೂನಿನಡಿಯಲ್ಲಿ ಎಲ್ಲರೂ ಸಮಾನರು. ಸಮಾಜದಲ್ಲಿ ಅಸಮಾನತೆ, ಮೇಲು-ಕೀಳು ಭಾವನೆ, ನಿಮ್ನ ವರ್ಗದವರನ್ನು ಕೀಳಾಗಿ ಕಾಣುವುದು ಇನ್ನೂ ಇದೆ.
ಜಾತಿಯತೆಯು ಎಲ್ಲ ಕಡೆಗೂ ತಾಂಡವವಾಡುತ್ತಿದೆ. ಅಂಬೇಡ್ಕರವರ ಆಶಯ ಈಡೇರುತ್ತಿಲ್ಲ. ಅಂಬೇಡ್ಕರ್ ಅವರು ಮಾನವನನ್ನು ಮಾನವೀಯತೆಯಿಂದ ಕಾಣಿರಿ ಎಂದು ಹೇಳಿದ್ದಾರೆ. ಸಂವಿಧಾನದ ಮೂಲಕ ಸಮಾನತೆಯ ಸೌಧ ನಿರ್ಮಿಸುವ ಉದ್ದೇಶವನ್ನು ಅಳವಡಿಸಿದರು.
ಸಂವಿಧಾನವೇ ನಮಗೆ ಪವಿತ್ರ ಗ್ರಂಥ. ಸಂವಿಧಾನದಲ್ಲಿ ೨೧ ವಿಧಿ ಸೇರಿಸಿದ್ದರಿಂದ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ ಸಿಗುತ್ತಿದೆ. ನಮ್ಮದು ಜಾತ್ಯಾತೀತ, ಪ್ರಜಾಸತ್ತಾತ್ಮಕ ಗಣರಾಜ್ಯ. ಇದನ್ನು ಸರಿಯಾಗಿ ಅರ್ಥಮಾಡಿಕೊಂಡಾಗ ಮಾತ್ರ ಸಂವಿಧಾನ ದಿನಾಚರಣೆ ಸಾರ್ಥಕ ಎಂದು ನುಡಿದರು.
ಶಿವಾನುಭವ ಸಮಿತಿಯ ಚೇರ್ಮನ್ ಐ.ಬಿ ಯ. ಬೆನಕೊಪ್ಪ ಮಾತನಾಡಿ, ಆ ಜಾತಿ ಈ ಜಾತಿ ನೂರೆಂಟು ಜಾತಿಗಳ ಜಂಜಾಟ ಬಿಟ್ಟು ಸಂವಿಧಾನದ ಮೂಲ ಆಶಯವಾದ ಜಾತ್ಯಾತೀತ, ಪ್ರಜಾಸತ್ತಾತ್ಮಕ ರಾಷ್ಟ್ರದ ಸಮೃದ್ಧ ಕಲ್ಪನೆಗೆ, ಬಲಿಷ್ಟ ಭಾರತ ನಿರ್ಮಾಣಕ್ಕೆ ಭಾರತೀಯರೆಲ್ಲರೂ ಬದ್ಧರಾಗಬೇಕು ಎಂದು ಹೇಳಿದರು.
ನಿವೃತ್ತರಾದ ಶಿಕ್ಷಕ ಬಿ.ಕೆ. ನಿಂಬನಗೌಡ್ರ ಅವರನ್ನು ಸನ್ಮಾನಿಸಲಾಯಿತು. ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ಇವರು ವಚನ ಸಂಗೀತ ಸೇವೆಯನ್ನು ನಡೆಸಿಕೊಟ್ಟರು. ಧಾರ್ಮಿಕಗ್ರಂಥ ಪಠಣವನ್ನು ಅಭಿಷೇಕ ಹುಬ್ಬಳ್ಳಿ, ವಚನ ಚಿಂತನವನ್ನು ಶ್ರದ್ಧಾ ಹೂಲಿ ಪ್ರಸ್ತುತಪಡಿಸಿದರು.
ರಾಜೇಶ್ವರಿ ಕರ್ಜಗಿಶೆಟ್ಟರ ದಾಸೋಹ ಸೇವೆಯನ್ನು ನಡೆಸಿಕೊಟ್ಟರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ ಉಮೇಶ ಪುರದ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮಶೇಖರ ಪುರಾಣಿಕ ಹಾಗೂ ನಾಗರಾಜ್ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ ಹಾಗೂ ಶಿವಾನುಭವ ಸಮಿತಿಯ ಸಹಚೇರ್ಮನ್ ಶಿವಾನಂದ ಹೊಂಬಳ ಹಾಗೂ ಮಠದ ಭಕ್ತರು ಉಪಸ್ಥಿತರಿದ್ದರು. ವಿದ್ಯಾ ಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.
