ಗದಗ
ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟವಾಗಿರುವ ಭಾರತದ ಆತ್ಮವೇ ನಮ್ಮ ಸಂವಿಧಾನ. ನಮ್ಮ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೆ ಸಮಾನವಾದ ಅವಕಾಶಗಳನ್ನು ಕಲ್ಪಿಸಲಾಗಿದೆ. ಸಮಾನತೆ ಮತ್ತು ಸಾಮಾಜಿಕ ನ್ಯಾಯವೇ ಸಂವಿಧಾನದ ಸಂದೇಶವಾಗಿದೆ ಎಂದು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂಘದ ೨೭೨೨ ನೇ ಶಿವಾನುಭವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಸಂವಿಧಾನ ಎಷ್ಟೇ ಪ್ರಭಲವಾಗಿದ್ದರೂ ಅದನ್ನು ಜಾರಿಗೆ ತರುವವರು ದುರ್ಬಲವಾಗಿದ್ದರೆ, ಪ್ರಬಲ ಸಂವಿಧಾನವು ಕೂಡ ದುರ್ಬಲವಾಗುತ್ತದೆ. ಧರ್ಮದ ಹೆಸರಿನಲ್ಲಿ ಸಂವಿಧಾನಕ್ಕೆ ಅಪಚಾರ ಮಾಡಬಾರದು. ಅನೇಕ ಧರ್ಮ ಭಾಷೆ ಜಾತಿ ಮತಗಳನ್ನು ಒಳಗೊಂಡ ವೈವಿಧ್ಯಮಯ ದೇಶ ನಮ್ಮದು ಎಂದು ಶ್ರೀಗಳು ಹೇಳಿದರು.
ಉಪನ್ಯಾಸಕರಾಗಿ ಆಗಮಿಸಿದ ಕರ್ನಾಟಕ ರಾಜ್ಯ ಸಂಸ್ಥೆ ಸಿಸ್ಲೆಪ್ ಧಾರವಾಡದ ನಿರ್ದೇಶಕರಾದ ಡಾ. ಬಿ. ಕೆ. ಎಸ್. ವರ್ಧನ್ ರವರು ಮಾತನಾಡುತ್ತಾ ಈ ದೇಶದ ಕಟ್ಟಕಡೆಯ ಹಳ್ಳಿಯ ಮನುಷ್ಯನು ಇಂದು ಪವಿತ್ರ ವೇದಿಕೆಯಲ್ಲಿ ನಿಂತು ಮಾತನಾಡುವ ಸ್ವಾತಂತ್ರ್ಯವನ್ನು ನಮ್ಮ ಸಂವಿಧಾನ ಕೊಟ್ಟಿದೆ. ಸರ್ವಧರ್ಮಗಳಿಗೂ ಸ್ವಾತಂತ್ರ‍್ಯ ಸಮಾನತೆ ಮತ್ತು ಭಾತೃತ್ವ ಭಾವದಿಂದ ಮುನ್ನಡೆಯುವ ಅಂಶಗಳನ್ನು ನಮ್ಮ ಸಂವಿಧಾನ ಒಳಗೊಂಡಿದೆ ಎಂದರು.
ಮುಖ್ಯ ಅತಿಥಿಗಳಾಗಿ ಗದಗ ಜಿಲ್ಲೆಯ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಆರ್.ಎಸ್. ಬುರಡಿಯವರು ಉಪಸ್ಥಿತರಿದ್ದರು. ಗುರುನಾಥ ಸುತಾರ ಹಾಗೂ ಸವಿತಾ ಗುಡ್ಡದ ಅವರಿಂದ ವಚನ ಸಂಗೀತ ನಡೆಯಿತು. ಧರ್ಮಗ್ರಂಥ ಪಠಣವನ್ನು ಶ್ರೀಮತಿ ದಿನ್ನಿಯವರು, ವಚನ ಚಿಂತನವನ್ನು ಶ್ರೀಮತಿ ಉಮಾ ಬಸನಗೌಡ ಬಿನ್ನಾಳವರು ನೆಡೆಸಿಕೊಟ್ಟರು. ದಾಸೋಹ ಸೇವೆಯನ್ನು ಶ್ರೀ ಎಚ್.ಎಚ್. ನೀಲಗುಂದ ನಿವೃತ್ತ ಪಿ.ಎಸ್.ಐ. ಗದಗ ಇವರು ವಹಿಸಿಕೊಂಡಿದ್ದರು.
ಎ.ಎ.ರಡ್ಡೇರ, ಅಂದಾನಪ್ಪ ವಡಿಗೇರಿ, ಜಿ.ಎಲ್.ಬಾರಾಟಕ್ಕೆ, ವಿ.ವಿ. ನಡುವಿನಮನಿ, ಶಂಕರ್ ಹಡಗಲಿ, ಎಂ.ಎಸ್. ಕಂಬಳಿ ಉಪಸ್ಥಿತರಿದ್ದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಶ್ರೀ ಬಾಲಚಂದ್ರ ಭರಮಗೌಡ್ರ ಸ್ವಾಗತಿಸಿದರು. ಮಂಜುಳಾ ಹಾಸಲಕರ ನಿರೂಪಿಸಿದರು. ಐ.ಬಿ. ಬೆನಕೊಪ್ಪ ಅತಿಥಿಗಳನ್ನು ಪರಿಚಯಿಸಿದರು. ಉಪಾಧ್ಯಕ್ಷರಾದ ಡಾ. ಉಮೇಶ ಪುರದ, ಕಾರ್ಯದರ್ಶಿ ವೀರಣ್ಣ ಗೋಟಡಕಿ ಸರ್ವ ಸದಸ್ಯರು ಉಪಸ್ಥಿತರಿದ್ದರು.