ಕೂಡಲಸಂಗಮ
ಸಮಸಮಾಜ, ಸ್ವಸ್ಥಸಮಾಜ ನಿರ್ಮಾಣಕ್ಕೆ ಬಸವಾದಿ ಶರಣರ ಚಿಂತನೆಗಳು ಅಗತ್ಯ ಇದೆ. ಬಸವಣ್ಣನವರ ನೆಲದಿಂದಲೇ ಶರಣರ ಚಿಂತನೆಗಳು ಭಿತ್ತರಿಸುವ ಕಾರ್ಯವನ್ನು ಪ್ರವಚನದ ಮೂಲಕ ಮಾಡಲಾಗುತ್ತಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಮಂಗಳವಾರ ರಾತ್ರಿ ಸಂಗಮೇಶ್ವರ ದೇವಾಲಯ ಆವರಣದಲ್ಲಿ, ಕೂಡಲಸಂಗಮ ಅಭಿವೃದ್ಧಿ ಮಂಡಳಿಯಿಂದ ಶ್ರಾವಣ ಮಾಸದ ನಿಮಿತ್ಯ ಹಮ್ಮಿಕೊಂಡ ಜ್ಞಾನ ದಾಸೋಹ ಪ್ರವಚನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಂಡಳಿ ಆರಂಭವಾದಾಗಿನಿಂದ ಶ್ರಾವಣ ಮಾಸದಲ್ಲಿ ಬಸವಾದಿ ಶರಣರ ಕುರಿತು ಒಂದು ತಿಂಗಳು ಪ್ರವಚನ ಹಮ್ಮಿಕೊಳ್ಳುತ್ತಿದೆ, ಈ ಪ್ರವಚನಕ್ಕೆ ಸುತ್ತಮುತ್ತಲ್ಲಿನ ಜನ ಆಗಮಿಸಿ ಶರಣರ ಚಿಂತನೆಗಳ ಜ್ಞಾನ ಪಡೆದು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಕ್ಷೇತ್ರಾಧಿಪತಿ ಸಂಗಮನಾಥನ ಕಳಸಕ್ಕೆ ಈ ವರ್ಷ ಬಂಗಾರ ಲೇಪನ ಮಾಡಿಸಿದೆ, ರಥವನ್ನು ನವೀಕರ ಮಾಡಿದೆ. ಈ ಭಾಗದ ಜನರ ಬಹುದಿನದ ಬೇಡಿಕೆ ಇದಾಗಿತ್ತು. ಸುಕ್ಷೇತ್ರದಲ್ಲಿ ನಿತ್ಯ ಶರಣರ ಚಿಂತನೆಗಳು ನಡೆಯುವಂತಹ ಯೋಜನೆಯನ್ನು ಮಾಡುತ್ತಿದ್ದು, ಕೂಡಲೇ ಜಾರಿಗೆ ತರುವ ಕಾರ್ಯವನ್ನು ಮಂಡಳಿಯಿಂದ ಮಾಡಲಾಗುವುದು ಎಂದರು.
ಮಂಡಳಿಯ ಆಯುಕ್ತ ಮಹಾದೇವ ಮುರಗಿ ಮಾತನಾಡಿ, ಶ್ರಾವಣ ಮಾಸ ಅತ್ಯಂತ ಪವಿತ್ರವಾಗಿದ್ದು, ನಾಡಿನ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯ ಭಕ್ತರು ಸುಕ್ಷೇತ್ರಕ್ಕೆ ಬರುವರು, ಅವರೆಲ್ಲರೂ ಬಸವಾದಿ ಶರಣರ ಚಿಂತನೆಗಳನ್ನು ಅರಿತುಕೊಳ್ಳಬೇಕು ಎಂಬ ಉದ್ದೇಶದಿಂದ ಪ್ರವಚನ ಹಮ್ಮಿಕೊಂಡಿದೆ. ಪ್ರತಿ ದಿನ ಸಂಜೆ ೭ ರಿಂದ ೮:೩೦ರ ವರೆಗೆ ಒಂದು ತಿಂಗಳು ಕಾಲ ಶರಣರ ಚರಿತಾಮೃತ ಪ್ರವಚನ ನಡೆಯುವುದು. ಸುತ್ತಮುತ್ತಲ್ಲಿನ ಗ್ರಾಮದ ಭಕ್ತಜನ ಇದರ ಸದುಪಯೋಗ ಪಡೆಯಬೇಕು ಎಂದರು.
ಸಮಾರಂಭದಲ್ಲಿ ಮುಖಂಡರಾದ ಶಿವಾನಂದ ಕಂಠಿ, ಶೇಖರಗೌಡ ಗೌಡರ, ಮುತ್ತಣ್ಣ ಕುರಿ, ಎಸ್.ಎಂ.ಪುರಾಣಿಕ, ಪ್ರಭು ಹಿರೇಮಠ, ಮಹಾಂತೇಶ ಲಗಮನ್ನವರ, ರೇವಣಸಿದ್ದಪ್ಪ ಇಜಾರದಾರ, ಶ್ರೀದೇವಿ ಗೌಡರ, ನಿರ್ಮಲಾ ಪತ್ತಾರ, ಜಿ.ಜಿ. ಬಾಗೇವಾಡಿ, ಶ್ರೀಕಾಂತ ಚಲವಾದಿ, ನಾಗಪ್ಪ ಅಂಬಿಗೇರ, ಪ್ರವಚನಕಾರ ರೇವಣಸಿದ್ದಯ್ಯ ಹಿರೇಮಠ ಮುಂತಾದವರು ಇದ್ದರು. ಜೆ.ಎಸ್. ಚಿನಿವಾಲರ ಸ್ವಾಗತಿಸಿದರು, ಪಿ.ಆರ್. ಗಣಾಚಾರಿ ನಿರೂಪಿಸಿ, ವಂದಿಸಿದರು.