ಸಂಸಾರದಲ್ಲಿದ್ದು ಸದ್ಗತಿಯ ಎತ್ತರಕ್ಕೇರಿದ ಶರಣೆ ನೀಲಮ್ಮ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ

ಸಂಸಾರದಲ್ಲಿದ್ದುಕೊಂಡೇ ಸದ್ಗತಿಯ ಎತ್ತರಕ್ಕೇರಿದ ಮಹಾತಾಯಿ ನೀಲಮ್ಮ ಎಂದು ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಬಣ್ಣಿಸಿದರು.

ಇಲ್ಲಿಯ ಬಸವಗಿರಿಯ ಲಿಂಗಾಯತ ಮಹಾ ಮಠದಲ್ಲಿ ನಡೆದ ಮಾಸಿಕ ಶರಣ ಸಂಗಮ ಕಾರ್ಯಕ್ರಮದಲ್ಲಿ ‘ಮಹಾಮನೆಯ ಮಹಾತಾಯಿ ನೀಲಮ್ಮ’ ಕುರಿತು ಅವರು ಮಾತನಾಡಿದರು.

ಬಿಜ್ಜಳ ರಾಜನ ಸಾಕು ತಂಗಿಯಾಗಿದ್ದ ನೀಲಮ್ಮ, ಬಸವಣ್ಣನವರ ಧರ್ಮಪತ್ನಿಯಾಗಿದ್ದರು. ಬಸವಣ್ಣನವರ ಮಾನವೀಯ ಕ್ರಾಂತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ಎಂದು ಹೇಳಿದರು.

ಬಸವಣ್ಣನವರು ಕಲ್ಯಾಣದಲ್ಲಿ ಮಹಾಮನೆ ಕಟ್ಟಿದ್ದರು. ಆ ಮಹಾಮನೆಗೆ ದಿಕ್ಕು ದಿಕ್ಕುಗಳಿಂದ ಬಂದ ಜಂಗಮರನ್ನು ತನ್ನವರೆಂದು ಇಂಬಿಟ್ಟುಕೊಂಡು, ಆದರಾತಿಥ್ಯ, ಪ್ರಸಾದ ದಾಸೋಹಗೈದು, ಲಿಂಗಾಂಗ ಸಾಮರಸ್ಯದ ಮಾರ್ಗ ತೋರಿದವರು ನೀಲಮ್ಮ ಎಂದು ತಿಳಿಸಿದರು.

ನೀಲಮ್ಮನವರ ಪ್ರೀತಿ, ಆದರಗಳಿಗೆ ಮನ ಸೋತು ಲಕ್ಷ ಲಕ್ಷ ಶರಣರು ಕಲ್ಯಾಣದತ್ತ ಹರಿದು ಬಂದರು. ಮತ್ತೆಯೂ ಬಸವ ನಿಮ್ಮ ದಂಡು ಬೆಳೆಯಲಿ ಎಂದು ಹಾರೈಸುತ್ತಿದ್ದ ನೀಲಮ್ಮ ವಿಶಾಲ ಹೃದಯಿಯಾಗಿದ್ದರು ಎಂದು ಹೇಳಿದರು.

ಬಸವನ ಕ್ರಾಂತಿಗೆ ಬೆನ್ನೆಲುಬಾಗಿ, ಬಸವನ ಬಾಳು ಬಂಗಾರ ಮಾಡಿದ ನೀಲಮ್ಮ ಗೃಹಿಣಿಯರಿಗೆಲ್ಲ ಆದರ್ಶ. ಅವರ ನಡೆ-ನುಡಿಗಳನ್ನು ಅನುಸರಿಸಿದರೆ ಮನೆಗಳು ಸ್ವರ್ಗ ಸಮನಾಗುತ್ತವೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಕಲಬುರಗಿಯ ವಾಣಿಜ್ಯ ತೆರಿಗೆ ಅಧಿಕಾರಿ ಖಾಜಾ ಖಲೀಲುಲ್ಲಾ ಮಾತನಾಡಿ, ಬಸವಣ್ಣನವರ ಕ್ರಾಂತಿಯ ಫಲವಾಗಿ ಮಹಿಳೆಯರು ಶೋಷಣೆಯಿಂದ ಮುಕ್ತರಾಗಿ ಸ್ವತಂತ್ರರಾದರು ಎಂದು ನುಡಿದರು.

ಬಸವಣ್ಣ ತನ್ನಕ್ಕನಿಗಿಲ್ಲದ ಧರ್ಮ ಸಂಸ್ಕಾರ ತನಗೂ ಬೇಡವೆಂದು ಎಂಟನೇ ವಯಸ್ಸಿನಲ್ಲೇ ಮನೆ ಬಿಟ್ಟರು. ಸಮಾಜದ ಪಿಡುಗಾಗಿದ್ದ ಜಾತಿ ಪದ್ಧತಿಯನ್ನು ಹೊಡೆದೊಡಿಸಿದ್ದರು ಎಂದರು.

ಸಾಹಿತಿ ಸುನಿತಾ ಗೌಡರ ಮಾತನಾಡಿ, ಅಕ್ಕಮಹಾದೇವಿ ನಂತರ ಹೆಚ್ಚು ವಚನ ಬರೆದವರು ನೀಲಾಂಬಿಕೆ. ಅವರ 288 ವಚನಗಳು ದೊರೆತಿವೆ ಎಂದು ಹೇಳಿದರು.

ನೀಲಾಂಬಿಕೆ ಅವರ ವಚನಗಳಲ್ಲಿ ಆಧ್ಯಾತ್ಮಿಕ ತಿರುಳು ತುಂಬಿ ತುಳುಕುತ್ತಿದೆ. ಮನಸ್ಸನ್ನು ನಿಲ್ಲಿಸುವ, ಪ್ರಸನ್ನವಾಗಿರಿಸುವ ಬಗೆಯನ್ನು ಸೊಗಸಾಗಿ ಬಣ್ಣಿಸಿದ್ದಾರೆ ಎಂದು ತಿಳಿಸಿದರು. ನೀಲಮ್ಮ ತಾಯಿ ವಚನಗಳ ಮನನದಿಂದ ಮನದ ಚುರುಕುತನ ಹೆಚ್ಚುತ್ತದೆ. ಸಾತ್ವಿಕ ಕಳೆ ವೃದ್ಧಿಸುತ್ತದೆ ಎಂದು ಹೇಳಿದರು.

ಶಿಕ್ಷಕಿ ವನಿತಾ ಚಂದ್ರಕಾಂತ ಸೋಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಡಗಾಂವ್(ಡಿ) ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಕುಮಾರ ಹೇಡೆ, ಉದಗಿರದ ಉದ್ಯಮಿ ಸಂತೋಷ ಪಟವಾರಿ, ಸಾಹಿತಿ ರಮೇಶ ಮಠಪತಿ, ರೈತ ಮುಖಂಡ ರಮೇಶ ಮೋರಗೆ ಉಪಸ್ಥಿತರಿದ್ದರು.

ಸುನಿತಾ ರಮೇಶ ಚಿಕ್ಕಲಿಂಗೆ ಭಕ್ತಿ ದಾಸೋಹಗೈದರು. ಬಸವಕುಮಾರ ಚಿಕ್ಕಲಿಂಗೆ ಸ್ವಾಗತಿಸಿದರು.

Share This Article
Leave a comment

Leave a Reply

Your email address will not be published. Required fields are marked *