ಸಂಭ್ರಮ, ಸೌಹಾರ್ದತೆಯಿಂದ ನಡೆದ ಶಿರೋಳ ರೊಟ್ಟಿ ಜಾತ್ರೆ

ಬಸವ ಮೀಡಿಯಾ
ಬಸವ ಮೀಡಿಯಾ

ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರಿಗೆ ‘ತೋಂಟದ ಶ್ರೀ’ ಪ್ರಶಸ್ತಿ ಪ್ರದಾನ

ನರಗುಂದ:

ತಾಲ್ಲೂಕಿನ ಶಿರೋಳ ಶ್ರೀ ತೋಂಟದಾರ್ಯ ಮಠದ ಜಾತ್ರೆಯ ಎರಡನೆ ದಿನ ಸಂಭ್ರಮದ ಜಂಗಮೋತ್ಸವ ಮತ್ತು ಸೌಹಾರ್ದತೆಯ ರೊಟ್ಟಿ ಜಾತ್ರೆ ನಡೆಯಿತು.

ಉತ್ತರ ಕರ್ನಾಟಕದ ಅಪ್ಪಟ ಗ್ರಾಮೀಣ ಊಟ ಶಿರೋಳ ರೊಟ್ಟಿ ಜಾತ್ರೆಯ ವೈಶಿಷ್ಟ್ಯವಾಗಿದೆ. ಕಡಕ್ ರೊಟ್ಟಿ, ಬಾನ, ಅಗಸಿಚಟ್ನಿ, ಹತ್ತಾರು ತೆರನಾದ ತಪ್ಪಲು ಪಲ್ಲೆ, ಧಾನ್ಯಗಳ ಮಿಶ್ರಣದ ಬಜ್ಜಿ, ಕರಿಂಡಿ, ಇವುಗಳು ಎಲ್ಲರ ಬಾಯಲ್ಲಿ ನೀರೂರಿಸುವಂತಿತ್ತು.

ರೊಟ್ಟಿ ಜಾತ್ರೆಗೆ ಸುಮಾರು ಒಂದು ತಿಂಗಳಿಂದ ಎಲ್ಲ ಸಿದ್ದತೆ ಮಾಡಿಕೊಂಡು, ಈ ಬಾರಿ ೨೫ ಚೀಲ ಜೋಳದ ಹಿಟ್ಟಿನ ರೊಟ್ಟಿಯನ್ನು ಶಿರೋಳ, ರಡ್ಡೇರನಾಗನೂರ, ಖಾನಾಪೂರ, ಕಪ್ಪಲಿ, ಕಲ್ಲಾಪೂರ, ಮೆಣಸಗಿ, ಗುಳಗಂದಿ, ಕರಕೀಕಟ್ಟಿ, ಭೋಪಳಾಪೂರ, ಕಿತ್ತಲಿ ಗ್ರಾಮಗಳ ಎಲ್ಲ ಜನಾಂಗದ ಭಕ್ತರು ಶಕ್ಯಾನುಸಾರವಾಗಿ ತಮ್ಮ ಮನೆಯ ಹಿಟ್ಟು ಸೇರಿಸಿ ಕಡಕ್ ರೊಟ್ಟಿ, ಮತ್ತು ಬೆಳ್ಳೂಳ್ಳಿ, ಜೀರಗಿ, ಸಾಸವಿ, ಅರಿಷಿನ ಪುಡಿ, ಅಲ್ಲಾ, ಬಿಳಿಎಳ್ಳು, ಅಗಸಿ, ಬೆಲ್ಲ, ಒಣಮೆಣಸು, ಇಂಗು, ಉಪ್ಪು ಪುಡಿಮಾಡಿ, ರುಚಿಗೆ ತಕ್ಕಂತೆ ಒಗ್ಗರಣೆ ಬೆರೆಸಿ, ಅದಕ್ಕೆ ೮೦೦ ಕೆಜಿ ಸವತೆಕಾಯಿ, ೬೦೦ ಕೆಜಿ ಗಜ್ಜರಿ ಹೊಳುಗಳಿಗೆ ಒಗ್ಗರಣೆ ಮಿಶ್ರಣ ಮಾಡಿ ೦೫ ಬ್ಯಾರಲ್ಲ, ೦೪ ಮಣ್ಣಿನ ಮಡಿಕೆಗಳಲ್ಲಿ ಶೇಖರಿಸಿದ ಕರಿಂಡಿ ಜೊತೆಗೆ ಧಾನ್ಯಗಳಾದ ಹೆಸರು, ಮಡಿಕೆ, ಅಲಸಂಧಿ, ಹುರಳಿ, ಶೇಂಗಾ, ಹಸಿರು ವಠಾಣೆ, ಕಡ್ಲಿ, ಅವರೆ ಕಾಳುಗಳ  ತಲಾ ೩೦ ಕೆಜಿಯಂತೆ ನೀರಲ್ಲಿ ನೆನೆಸಲಾಗಿತ್ತು.

೮೦೦-ಮೆಂತೆ, ೨೦೦-ಪುಂಡಿ, ೧೦೦-ಹರಿಪಲ್ಲೆ, ೧೦೦-ಪಾಲಕ್, ೧೦೦-ಕಿರಕ್ ಸಾಲಿ ತಪ್ಪಲು ಪಲ್ಲೆ ಸಿವುಡುಗಳೊಂದಿಗೆ, ಬೆಳ್ಳೂಳ್ಳಿ, ಜೀರಗಿ, ಸಾಸವಿ, ಅರಿಷಿನ ಪುಡಿ, ಅಲ್ಲಾ, ಬೆಲ್ಲ, ಉಪ್ಪು ಮಿಶ್ರಣದ ವಗ್ಗರಣೆಗೆ, ೧೫೦ ಕೆಜಿ ಜೋಳದ ನುಚ್ಚು ಸೇರಿಸಿ, ರುಚಿಗೆ ತಕ್ಕಂತೆ ಹಸಿ ಖಾರ ಬೆರೆಸಿ ಸುವಾಸನೆ ಬರುವಂತೆ ಚೆನ್ನಾಗಿ ಕುದಿಸಿ ಸುಮಾರು ೩೫೦೦ ಕೆಜಿಯಷ್ಟು ರುಚಿಯಾದ ಬಜ್ಜಿ ತಯಾರಿಸಲಾಗಿತ್ತು.

ಇದರೊಂದಿಗೆ ೨೦೦ ಕೆಜಿ ಅಕ್ಕಿ ಅನ್ನಕ್ಕೆ ೧೫೦ ಲೀಟರ್ ಮಜ್ಜಿಗೆ ಬೆರೆಸಿ ಚೆನ್ನಾಗಿ ಹದಗೊಳಿಸಿ, ಬೆಳ್ಳೂಳ್ಳಿ, ಜೀರಗಿ, ಅಲ್ಲಾ, ಕರಿಬೇವು, ಕೊತ್ತಂಬರಿ, ಮೆಣಸು, ಉಪ್ಪು ವಗ್ಗರಣೆ ಮಿಶ್ರಣ ಮಾಡಿ ೧೫ ರಿಂದ ೧೬ ಸಾವಿರ ಬಾನದ ಉಂಡಿ ಕಟ್ಟಲಾಯಿತು. ಹುರಿದು ಪುಡಿಮಾಡಿದ ಅಗಸಿ ಚಟ್ನಿಯನ್ನು ಜಾತ್ರೆಯಲ್ಲಿ ಸೇರಿದ್ದ ಸುಮಾರು ೧೫ ಸಾವಿರ ಭಕ್ತಾದಿಗಳಿಗೆ ಏಲಕಾಲಕ್ಕೆ ವಿತರಿಸಲಾಯಿತು. ನೆರೆದಿದ್ದ ಭಕ್ತಾದಿಗಳು ಧನ್ಯತಾಭಾವ ಮೆರೆದು ಪ್ರಸಾದ ಸ್ವೀಕರಿಸುವ ದೃಶ್ಯ ಮನಸ್ಸಿಗೆ ಪುಳಕ ಉಂಟು ಮಾಡುತ್ತಿತ್ತು.

ವೇದಿಕೆ ಕಾರ್ಯಕ್ರಮದ ಸಾನಿಧ್ಯವನ್ನು ಗದಗ ತೋಂಟದಾರ್ಯ ಮಠದ ಡಾ: ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸಿ ಮಾತನಾಡುತ್ತ, ನಿಮ್ಮೂರಿನ ರೊಟ್ಟಿ ಜಾತ್ರೆ ನೋಡಲು ಎರಡು ಕಣ್ಣು ಸಾಲದು ಎನ್ನುತ್ತಿದ್ದ ಲಿಂಗೈಕ್ಯ ಜಗದ್ಗುರು ಸಿದ್ಧಲಿಂಗ ಶ್ರೀಗಳ ಆಶಯದಂತೆ ಚರ್ಚುಗಳಲ್ಲಿಯ ಗಂಟೆ ಶಬ್ದ, ಮಸೀದಿಗಳಲ್ಲಿಯ ಆಜಾನ ಶಬ್ದ ಪ್ರಾರ್ಥನೆ ಸಂಕೇತವಾದರೆ, ಲಿಂಗಾಯತ ಮಠಗಳಲ್ಲಿಯ ಗಂಟೆ ಶಬ್ದ ಪ್ರಸಾದದ ಸಂಕೇತವಾಗಬೇಕು ಎನ್ನುತ್ತಿದ್ದರು.

ಪೂಜ್ಯರು ಶ್ರೀಮಠಕ್ಕೆ ಬರುವ ಭಕ್ತರ ಕೈಗೆ ಪುಸ್ತಕವಿಟ್ಟು, ತರ-ತರಹದ ಪ್ರಸಾದ ಮಾಡಿಸಿ ಸತ್ಕರಿಸುವ ಪರಿಯೇ ಭಿನ್ನ. ತಮ್ಮ ಮಠಗಳಲ್ಲಿ ಸಹಪಂಕ್ತಿ ಭೋಜನೆಕ್ಕೆ ಒತ್ತುಕೊಟ್ಟ ಪರಿಣಾಮವೆ ಪ್ರತಿವರ್ಷ ಶಿರೋಳದಲ್ಲಿ ನಡೆಯುವ ರೊಟ್ಟಿ ಜಾತ್ರೆ ಎಂದರು.

 ಲಿಂಗೈಕ್ಯ ಗುರುಬಸವ ಶ್ರೀಗಳು ಕನ್ನಡಕ್ಕೆ ಸಲ್ಲಿಸಿದ ಸೇವೆ ಅಪಾರ. ಸಾಮಾಜಿಕ, ಜನಪರ, ಸಾಹಿತ್ಯಾತ್ಮಕ, ಮತ್ತು ವೈಚಾರಿಕ ತಳಹದಿಯ ಬದ್ಧತೆ ಹೊಂದಿರುವ ಪೂಜ್ಯರಾಗಿದ್ದರು ಎಂದು ಶ್ರೀಗಳು ಹೇಳಿದರು.

ಡಾ. ಚನ್ನವೀರ ಮಹಾಸ್ವಾಮಿಗಳು ವಿರಕ್ತಮಠ, ಕೊಣ್ಣೂರ ಪೂಜ್ಯರ ಜಂಗಮೋತ್ಸವ ನೇರವೇರಿತು. ಬೆಳಗಾವಿ ಜಿಲ್ಲೆ ಚಿಂಚಣಿ ಅಲ್ಲಮಪ್ರಭು ಸಿದ್ಧಸಂಸ್ಥಾನಮಠದ ನಿಯೋಜಿತ ಉತ್ತರಾಧಿಕಾರಿ ಪೂಜ್ಯ ಶಿವಪ್ರಸಾದ ದೇವರು, ಪೂಜ್ಯ ಶಾಂತಲಿಂಗ ಮಹಾಸ್ವಾಮಿಗಳು ಸಮ್ಮುಖತ್ವ ವಹಿಸಿದ್ದರು.

ಪ್ರಶಸ್ತಿ ಪ್ರದಾನ:

ಕಾರ್ಯಕ್ರಮದಲ್ಲಿ ಧಾರವಾಡದ ಖ್ಯಾತ ಸಾಹಿತಿಗಳಾದ ಪ್ರೊ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರಿಗೆ  “ತೋಂಟದ ಶ್ರೀ” ಮತ್ತು  ಪರಿಸರ ವಿಜ್ಞಾನಿ ಪ್ರಕಾಶಗೌಡ ಖ್ಯಾಮನಗೌಡ್ರ ಅವರಿಗೆ “ಗುರುಬಸವ ಸಿರಿ”ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ಬಿ.ಆರ್. ಯಾವಗಲ್ಲ, ತೋಂಟದಾರ್ಯ ವಿದ್ಯಾಪಿಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟರ, ಬೆಳಗಾವಿಯ ಪ್ರಭಾವತಿ ಫೌಂಡೆಶನ್ ಅಧ್ಯಕ್ಷೆ ಪ್ರಭಾವತಿ ಮಾಸ್ತಮರಡಿ, ದತ್ತಾ ಗ್ರೂಪ್ ವ್ಯವಸ್ಥಾಪಕ ಕಿರಣ ಬೂಮಾ, ನಿರ್ದೇಶಕ ಎಸ್.ಎಚ್. ಶಿವನಗೌಡ್ರ, ಉಧ್ಯಮಿಗಳಾದ ಚನ್ನಯ್ಯ ಸಂಗಳಮಠ, ಜಿಲ್ಲಾ ಗುತ್ತಗೆದಾರರ ಸಂಘದ ಅದ್ಯಕ್ಷ ಸಿದ್ಧು ಪಾಟೀಲ ಇದ್ದರು.

ಶಿರೋಳದ ಹಿರಿಯರಾದ ವೀರಯ್ಯ ಹುಬ್ಬಳ್ಳಿ, ಶೇಖರಯ್ಯ ನಾಗಲೋಟಿಮಠ, ವಿ.ಕೆ. ಮರೆಗುದ್ದಿ, ನಿಂಗಪ್ಪ ಜಂಗೀನ, ಕೌಶಲ್ಯ ಕರ್ನಾಟಕ ೨೦೨೫ ಪ್ರಶಸ್ತಿ ಪಡೆದ ಜಗದ್ಗುರು ತೋಂಟದಾರ್ಯ ವಿಧ್ಯಾಪೀಠದ ಶ್ರೀ ಮಾದಾರ ಚನ್ನಯ್ಯ ಐಟಿಐ ಕಾಲೇಜಿನ ಸಿಬ್ಬಂದಿ, ಶಿರೋಳ ಗ್ರಾಮದ ಪಿಎಚ್ಡಿ ಪದವಿ ಪುರಸ್ಕೃತರು ವೀರಸಂಗಪ್ಪ ಬಸವರಾಜ ಮುದಕವಿ ಅವರನ್ನು ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳು ನಡೆದವು.

ಜಾತ್ರಾ ಸಮಿತಿ ಅಧ್ಯಕ್ಷ ರವೀಂದ್ರ ಹಿರೇಮಠ ಸ್ವಾಗತಿಸಿದರು, ಎಸ್.ವಿ. ಕುಪ್ಪಸ್ತ ನಿರೂಪಿಸಿದರು, ಉಪಾಧ್ಯಕ್ಷ ದ್ಯಾಮಣ್ಣ ತೆಗ್ಗಿ, ಕಾರ್ಯದರ್ಶಿ ಚಂದ್ರಶೇಖರ ಸೊಬರದ, ಸಹಕಾರ್ಯದರ್ಶಿ ಸತ್ಯವಾನಪ್ಪ ಚಿಕ್ಕನರಗುಂದ, ಸುತ್ತಮುತ್ತಲಿನ ಗ್ರಾಮಗಳ ಶ್ರೀಮಠದ ಭಕ್ತಾದಿಗಳು ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FoRS2gZkHkaEzqaRtWk0ZP

Share This Article
Leave a comment

Leave a Reply

Your email address will not be published. Required fields are marked *