ದಾವಣಗೆರೆ:
ಈಗಿರುವ ಪ್ರಜಾಸಂಸತ್ತಿನ ಪರಿಕಲ್ಪನೆಯನ್ನು ಶರಣರು 12ನೇ ಶತಮಾನದಲ್ಲಿ ಅನುಭವ ಮಂಟಪದ ರೂಪದಲ್ಲಿ ಜಗತ್ತಿಗೆ ಪರಿಚಯಿಸಿದ್ದರು. ಸಮಸಮಾಜವನ್ನು ರೂಪಿಸುವ ಕುರಿತು ಅಲ್ಲಿ ಅನೇಕ ಚರ್ಚೆ ನಡೆಯುತ್ತಿತ್ತು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಅವರು ಹೇಳಿದರು.
ಜಿಲ್ಲಾ ಕದಳಿ ಮಹಿಳಾ ವೇದಿಕೆ ವತಿಯಿಂದ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಮಹಿಳಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಚನ ಸಾಹಿತ್ಯ ಜೀವನದ ಪಾಠವಾಗಿದ್ದು ಸಮಾನತೆ, ಕಾಯಕ, ಶುದ್ಧತೆ ಹಾಗೂ ಉತ್ತಮ ಸಮಾಜ ನಿರ್ಮಾಣದ ಮೌಲ್ಯಗಳನ್ನು ಶರಣರು ಬೋಧಿಸಿದ್ದಾರೆ ಎಂದು ಅವರು ತಿಳಿಸಿದರು.

ಸಮಾವೇಶದ ಸರ್ವಾಧ್ಯಕ್ಷರಾದ ಪ್ರೊ.ಟಿ. ನೀಲಾಂಬಿಕೆ ಅವರು ಶರಣ ತತ್ವವನ್ನು ನಾವೆಲ್ಲ ಜೀವನದಲ್ಲಿ ಅಳವಡಿಸಿಕೊಂಡು ಅದನ್ನು ಬದುಕಾಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ವೇದಿಕೆ ಜಿಲ್ಲಾ ಅಧ್ಯಕ್ಷೆ ಮಮತಾ ನಾಗರಾಜ ಪ್ರಾಸ್ತಾವಿಕವಾಗಿ ಮಾತನಾಡುತ್ತ, 650ಕ್ಕೂ ಹೆಚ್ಚು ಸದಸ್ಯರಿರುವ ವೇದಿಕೆ ಶಾಲಾ–ಕಾಲೇಜು ಹಾಗೂ ಸಾರ್ವಜನಿಕ ವಲಯದಲ್ಲಿ ಶರಣ ಸಾಹಿತ್ಯದ ಪ್ರಚಾರ ಮಾಡುತ್ತಿದೆ. ವಚನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಎಲ್ಲ ತಾಲೂಕುಗಳಲ್ಲಿ ವಚನ ಗಾಯನ ತರಬೇತಿ ನಡೆಸಿ ವಚನೋತ್ಸವ ಆಯೋಜಿಸಲಾಗಿದೆ ಎಂದು ಚಟುವಟಿಕೆಗಳ ಕುರಿತು ಹೇಳಿದರು.
ಪರಿಷತ್ತು ರಾಜ್ಯಾಧ್ಯಕ್ಷ ಡಾ.ಸಿ. ಸೋಮಶೇಖರ ಅವರು ಅಧ್ಯಕ್ಷೀಯ ನುಡಿಯಲ್ಲಿ ಶರಣರು ಸಮಾನತೆ, ಸ್ತ್ರೀ ಸ್ವಾತಂತ್ರ್ಯ, ಕಾಯಕ ಸಿದ್ಧಾಂತ ಹಾಗೂ ಜಾತ್ಯತೀತ ಸಮಾಜದ ಪರಿಕಲ್ಪನೆಯನ್ನು ಮುಂದಿಟ್ಟಿದ್ದಾರೆ ಎಂದು ತಿಳಿಸಿದರು.

ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ ಅವರು, ಜಿಲ್ಲೆಯಲ್ಲಿ 1800 ಆಜೀವ ಸದಸ್ಯರಿದ್ದು, ಈ ಸಂಖ್ಯೆಯನ್ನು 3,000 ಕ್ಕೆ ಹೆಚ್ಚಿಸುವ ಗುರಿಯಿದೆ. ಹಲವು ದಾನಿಗಳು ಸ್ಥಾಪಿಸಿದ 108 ದತ್ತಿಗಳ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಶರಣರ ವಿಚಾರಗೋಷ್ಠಿಯಲ್ಲಿ ಡಾ. ಗೀತಾ ಬಸವರಾಜ ಅವರು ಶರಣ ಸಂಸ್ಕೃತಿ, ಭಕ್ತಿ–ಕಾಯಕ–ದಾಸೋಹದ ಕುರಿತು ಮಾತನಾಡಿದರು. ಹರಿಹರದ ನಾಗಮಣಿ ಶಾಸ್ತ್ರೀ ಅವರು ವಚನಕಾರ್ತಿಯರ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಸುಮಾರು 225 ಮಂದಿ ಸಾಮೂಹಿಕ ವಚನ ಗಾಯನ ನಡೆಸಿದರು.

ಇತ್ತೀಚೆಗೆ ಲಿಂಗೈಕ್ಯರಾದ ಶಾಮನೂರು ಶಿವಶಂಕರಪ್ಪ ಹಾಗೂ ಭೀಮಣ್ಣ ಖಂಡ್ರೆ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಡಾ. ನೀತಾ ಹಾಗೂ ವಿನೋದ ಅಜಗಣ್ಣ ಮಾತನಾಡಿದರು.
ಸಮಾವೇಶದಲ್ಲಿ ಕದಳಿ ಮಹಿಳಾ ವೇದಿಕೆಯ ಪ್ರತಿಭಾನ್ವಿತ ಸದಸ್ಯರಿಗೆ ಅಭಿನಂದನಾ ಪತ್ರ ಹಾಗೂ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ರಾಜ್ಯ ಉಪಸಂಚಾಲಕಿ ಪ್ರಮೀಳಾ ನಟರಾಜ, ಉಪಾಧ್ಯಕ್ಷ ಕೆ.ಎಂ. ವೀರೇಶ, ಕಾರ್ಯದರ್ಶಿ ಸೋಮಶೇಖರ ಗಾಂಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
