ದಾವಣಗೆರೆ
ವಚನ ದರ್ಶನದ ನಂತರ ಬಸವಾದಿ ಶರಣರನ್ನು ಹಿಂದುತ್ವದ ಮಡಿಲಿಗೆ ಸೇರಿಸಲು ಮತ್ತೊಂದು ಪ್ರಯತ್ನ ನಡೆದಿದೆ. ಈಚೆಗೆ ಪ್ರಕಟವಾದ ‘ಬಸವ ಶೈವದಲ್ಲಿ ಹಿಂದುತ್ವ’ ಪುಸ್ತಕ ಹಿಂದೂ ಧರ್ಮಕ್ಕೆ ಪೂರಕವಾದಂತೆ ಕಾಣಿಸುವ ಕೆಲವು ವಚನಗಳನ್ನು ಸಂಗ್ರಹಿಸಿ ವಿಶ್ಲೇಷಿಸಿದೆ.
ಇದಕ್ಕೆ ಪ್ರತಿಯಾಗಿ ಬಸವ ತತ್ವ ಚಿಂತಕ ವಿಶ್ವೇಶ್ವರಯ್ಯ ಬಿ. ಎಂ. ವೈದಿಕತೆಯನ್ನು ನಿರಾಕರಿಸುವ ಹಲವಾರು ಶರಣರ ವಚನಗಳನ್ನು ಆಯ್ಕೆ ಮಾಡಿದ್ದಾರೆ.
‘ಬಸವ ಶೈವದಲ್ಲಿ ಹಿಂದುತ್ವ’ ಲೇಖಕರ ಪಾಂಡಿತ್ಯ, ಉದ್ದೇಶ, ಬಸವಾದಿ ಶರಣರ ಸಾಧನೆ, ಅವರ ವಚನಗಳ ನಿಲುವು ಪ್ರತಿಯೊಂದು ಗಂಭೀರ ಚರ್ಚೆಯ ವಿಷಯಗಳು. ಈ ನಿಟ್ಟಿನಲ್ಲಿ ಇದು ಬಸವ ಮೀಡಿಯಾದ ಸಣ್ಣ ಪ್ರಯತ್ನ.
ಅಂಬಿಗರ ಚೌಡಯ್ಯನವರ ವಚನಗಳು
ಅಂಬಿಗರ ಚೌಡಯ್ಯನವರು ಬಸವಣ್ಣನವರ ಪರಮಶಿಷ್ಯರಾಗಿ ಅನುಭವ ಮಂಟಪದ ಸದಸ್ಯರಾಗಿದ್ದವರು. ಅವರ ವಚನಗಳು ಬಹಳ ಗಟ್ಟಿತನದಿಂದ ಕೂಡಿವೆ. ಅಂತಹ ಶರಣರು ಸನಾತನ ಧರ್ಮದ ಆಚರಣೆಗಳನ್ನು ಖಂಡಿಸಿದ ವಚನಗಳನ್ನು ನೋಡೋಣ.
ಅಸುರರ ಮಾಲೆಗಳಿಲ್ಲ, ತ್ರಿಶೂಲ ಡಮರುಗವಿಲ್ಲ,
ಬ್ರಹ್ಮಕಪಾಲವಿಲ್ಲ, ಭಸ್ಮಭೂಷಣನಲ್ಲ,
ವೃಷಭವಾಹನನಲ್ಲ, ಋಷಿಯರುಗಳೊಡನಿದ್ದಾತನಲ್ಲ.
ಎಸಗುವ ಸಂಸಾರದ ಕುರುಹಿಲ್ಲದಾಂತಗೆ
ಹೆಸರಾವುದಿಲ್ಲೆಂದನಂಬಿಗರ ಚೌಡಯ್ಯ.
ಸನಾತನ ಧರ್ಮದಲ್ಲಿ ಪೌರಾಣಿಕ ಶಿವನನ್ನು ನಮಗೆ ತೋರಿಸಿದ್ದಾರೆ. ಆದರೆ ಅಂಬಿಗರ ಚೌಡಯ್ಯನವರು ಮೇಲಿನ ವಚನದಲ್ಲಿ ಪೌರಾಣಿಕ ಶಿವನನ್ನು ಅಲ್ಲಗಳೆದಿದ್ದಾರೆ
ಅಯ್ಯ! ಪಾಷಾಣಕ್ಕೆ ಗಿರಿ ಸವೆದವು.ಪತ್ರೆಗೆ ತರು ಸವೆದವು.
ಸಪ್ತಸಾಗರಂಗಳು ಮಜ್ಜನಕ್ಕೆ ಸವೆದವು.
ಅಗ್ನಿ ಧೂಪಕ್ಕೆ ಸವೆಯಿತ್ತು.
ವಾಯು ಕಂಪಿತಕ್ಕೆ ಸವೆಯಿತ್ತು
ಉಘೆ! ಚಾಂಗು ಭಲಾ! ಎಂಬ ಶಬ್ದ ಸವೆಯಿತ್ತು. ಎನ್ನಗಿನ್ನೆಂತೊ,
ಉಮೇಶನ ಶರಣರು ಮಹಮನೆಯಲ್ಲಿ
ಶಿವಲಿಂಗಾರ್ಚನೆಗೆ ಕುಳ್ಳಿದ್ದಡೆ, ನಾನವರ
ಪಾದರಕ್ಷೆಯ ಕಾಯ್ದಕೊಂಡಿದ್ದೇನೆಂದನಂಬಿಗರ ಚೌಡಯ್ಯ.
ಸನಾತನ ಧರ್ಮದಲ್ಲಿ ಮಾಡುವ ಒಣ, ಡಾಂಭಿಕತೆಯ ಪೂಜೆ ಅವಶ್ಯಕತೆ ಇಲ್ಲ ಎಂದು ಮೇಲಿನ ವಚನದಲ್ಲಿ ಹೇಳಿದ್ದಾರೆ.
ಕಂಥೆ ತೊಟ್ಟವ ಗುರುವಲ್ಲ,
ಕಾವಿ ಹೊತ್ತವ ಜಂಗಮವಲ್ಲ,
ಶೀಲ ಕಟ್ಟಿದವ ಶಿವಭಕ್ತನಲ್ಲ,
ನೀರು ತೀರ್ಥವಲ್ಲ, ಕೂಳು ಪ್ರಸಾದವಲ್ಲ.
ಹೌದೆಂಬವನ ಬಾಯ ಮೇಲೆ
ಅರ್ಧಮಣದ ಪಾದರಕ್ಷೆಯ ತೆಗೆದುಕೊಂಡು
ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ ಟೊಕಟೊಕನೆ
ಹೊಡೆ ಎಂದಾತ ನಮ್ಮ ಅಂಬಿಗರ ಚೌಡಯ್ಯ.
ಸನಾತನ ಧರ್ಮದಲ್ಲಿ ವೇಷ ತೊಟ್ಟವರಿಗೆ ಗೌರವ. ಆದರೆ ಲಿಂಗಾಯತ ಧರ್ಮದಲ್ಲಿ ವೇಷಕ್ಕೆ ತಕ್ಕಂತೆ ಆಚರಣೆ ಇರಬೇಕು ಎಂದು ಅಂಬಿಗರ ಚೌಡಯ್ಯನವರು ಹೇಳಿದ್ದಾರೆ.
ಕಲ್ಲದೇವರ ಪೂಜೆಯ ಮಾಡಿ,ಕಲಿಯುಗ[ದಿ]
ಕತ್ತೆಗಳಾಗಿ ಹುಟ್ಟಿದರು.
ಮಣ್ಣದೇವರ ಪೂಜಿಸಿ ಮಾನಹೀನರಾದರು.
ಮರನ ದೇವರೆಂದು ಪೂಜಿಸಿ ಮಣ್ಣ ಕೂಡಿದರು.
[ಇಂತಪ್ಪ] ದೇವರ ಪೂಜಿಸಿ ಸ್ವರ್ಗಕ್ಕೇರದೆ ಹೋದರು!
ಜಗದ್ಭರಿತವಾದ ಪರಶಿವನೊಳಗೆ ಕಿಂಕರನಾದ
ಶಿವಭಕ್ತನೆ ಶ್ರೇಷ್ಠನೆಂದಾತ ನಮ್ಮ ಅಂಬಿಗರ ಚೌಡಯ್ಯ.
ಸನಾತನ ಧರ್ಮದಲ್ಲಿ ಕಲ್ಲು ಮಣ್ಣು ಕಟ್ಟಿಗೆಗಳ ದೇವರನ್ನು ಪೂಜಿಸುವ ಆಚರಣೆಗಳು ಇವೆ. ಆದರೆ ಅಂಬಿಗರ ಚೌಡಯ್ಯನವರು ಇಂಥಹ ಕಾಲ್ಪನಿಕ ದೇವರುಗಳನ್ನು ಪೂಜೆ ಮಾಡುವುದನ್ನು ತಮ್ಮದೇ ಭಾಷೆಯಲ್ಲಿ ಖಂಡಿಸಿದ್ದಾರೆ.
