ಹಂಡೆವಜೀರ ಸಮಾಜದ ೩ನೇ ರಾಜ್ಯಮಟ್ಟದ ಬೃಹತ್ ಸಮಾವೇಶ
ಕೂಡಲಸಂಗಮ
ದೊಡ್ಡ ಸಮಾಜದ ಉತ್ತಮ ಆಡಳಿತಕ್ಕೆ ಸಣ್ಣ ಸಮಾಜದವರ ಪ್ರಾಮಾಣಿಕ ಕೊಡುಗೆಯಿದೆ ಎಂಬುದನ್ನು ಯಾರು ಮರೆಯಬಾರದು ಎಂದು ಹೊಸಪೇಟೆ ಕೊಟ್ಟೂರು ಸ್ವಾಮಿ ಸಂಸ್ಥಾನಮಠದ ಕೊಟ್ಟೂರು ಬಸವಲಿಂಗ ಸ್ವಾಮೀಜಿ ಹೇಳಿದರು.
ಕೂಡಲಸಂಗಮ ಬಸವ ಸಭಾ ಭವನದಲ್ಲಿ ಭಾನುವಾರ ನಡೆದ ಹಂಡೆವಜೀರ ಸಮಾಜದ ರಾಜ್ಯಮಟ್ಟದ ೩ನೇ ಸಮಾವೇಶ ಉದ್ಘಾಟನಾ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿ, ರಾಜ್ಯದಲ್ಲಿ ಅಲ್ಪ ಸಂಖ್ಯೆಯಲ್ಲಿ ಹಂಡೆವಜೀರ ಸಮಾಜ ಇದ್ದರು, ನಾಡಿಗೆ ಅವರು ನೀಡಿದ ಕೊಡುಗೆ ಅಪಾರ. ಬಳ್ಳಾರಿ ನಗರವನ್ನು ನಿರ್ಮಿಸಿದವರು ಹಂಡೆ ಹನಮಪ್ಪ ನಾಯಕ ಎಂಬುದನ್ನು ಯಾರು ಮರೆಯಬಾರದು. ಜನಾಂಗ, ಸಮುದಾಯ, ಮನೆತನದ ಸಂಸ್ಕೃತಿಯನ್ನು ಮುಂದಿನ ಯುವ ಜನಾಂಗಕ್ಕೆ ಬಿತ್ತರಿಸುವ ಕಾರ್ಯವನ್ನು ಎಲ್ಲ ಸಮಾಜದವರು ಮಾಡಬೇಕು ಎಂದರು.
ಲೋಕಸಭಾ ಸದಸ್ಯ ಪಿ.ಸಿ. ಗದ್ದಿಗೌಡ ಮಾತನಾಡಿ, ಹಂಡೆವಜೀರ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡುವಂತೆ ನಮ್ಮ ಪಕ್ಷದ ನಾಯಕರ ಗಮನಕ್ಕೆ ತರುತ್ತೇನೆ. ಎಲ್ಲರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ಕೊಡುವ ಕಾರ್ಯ ಮಾಡಬೇಕು ಎಂದರು.
ವಿಧಾನ ಪರಿಷತ್ತು ಸದಸ್ಯ ಪಿ.ಎಚ್. ಪೂಜಾರಿ ಮಾತನಾಡಿ, ಸಮಾಜದ ಸಂಘಟನೆ, ಇತಿಹಾಸ ತಿಳಿಯುವ ಜವಾಬ್ದಾರಿ ಇಂದು ಎಲ್ಲರಿಗೂ ಅವಶ್ಯವಿದೆ. ಪ್ರಾಮಾಣಿಕವಾಗಿ ಸಮಾಜ ಸೇವೆ ಮಾಡಿದವರನ್ನು ಸ್ಮರಿಸುವ ಕಾರ್ಯವನ್ನು ಎಲ್ಲರೂ ಮಾಡಬೇಕು. ಸ್ವಾಭಿಮಾನದಿಂದ ಬದುಕಿ ಎಲ್ಲರಿಗೂ ದಾಸೋಹಗೈದ ಹಂಡೆವಂಜೀರ ಸಮಾಜ ಇತರರಿಗೆ ಮಾದರಿಯಾಗಿದೆ ಎಂದರು.
ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಮಾತನಾಡಿ, ಸಮಾಜದ ಇತಿಹಾಸ ಅರಿಯದೆ ಸಮಾಜ ಕಟ್ಟಲು ಸಾಧ್ಯವಿಲ್ಲ. ಸಮಾಜದ ಇತಿಹಾಸವನ್ನು ಇಂದಿನ ಯುವ ಜನಾಂಗಕ್ಕೆ ತಿಳಿಸಲು ಇಂತಹ ಸಮಾವೇಶಗಳ ಅಗತ್ಯ ಇದೆ ಎಂದರು.
ಸಮಾವೇಶದಲ್ಲಿ ಮುತ್ತತ್ತಿಯ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ಬಿಲ್ಲಕೇರೂರ ಬಿಲ್ವಾಶ್ರಮದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಕುಷ್ಟಗಿ ಮದ್ದಾನೇಶ್ವರ ಮಠದ ಕರಿಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ, ಬಸವನಬಾಗೇವಾಡಿ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಕುಂಟೋಜಿ ಹಿರೇಮಠದ ಗುರುಚನ್ನವೀರ ಶಿವಾಚಾರ್ಯ ಸ್ವಾಮೀಜಿ, ಕರಿಭಂಟನಾಳದ ಶಿವಕುಮಾರ ಸ್ವಾಮೀಜಿ, ವೀರಶೈವ ಲಿಂಗಾಯತ ಹಂಡೆ ವಜೀರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಎಸ್.ಎಸ್. ಪಾಟೀಲ, ಗುರುನಗೌಡ ಪಾಟೀಲ, ಚಾಲುಕ್ಯ ಸಂಸ್ಕೃತಿ ಅಧ್ಯಯನ ಪೀಠದ ಅಧ್ಯಕ್ಷ ಜಿ.ಎನ್. ಪಾಟೀಲ ಮುಂತಾದವರು ಇದ್ದರು.
ಸಮಾರಂಭದಲ್ಲಿ ಹಂಡೆವಜೀರ ಸಮಾಜ, ಅರಸು ಮನೆತನಕ್ಕೆ ಸಂಬಂಧಿಸಿದ ೨೫ ಪುಸ್ತಕಗಳು ಲೋಕಾರ್ಪಣೆಗೊಂಡವು. ೨೦೨೫ರ ಹಂಡೆಸಿರಿ ರಾಷ್ಟೀಯ ಪ್ರಶಸ್ತಿಯನ್ನು ಧಾರವಾಡ ಸಂಶೋಧಕ ಎಂ.ಎಸ್. ಚೌಧರಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಕೆ. ರವೀಂದ್ರನಾಥ, ಕಲಬುರ್ಗಿಯ ಪ್ರಾಧ್ಯಾಪಕ ಡಿ.ಎಸ್. ಪಾಟೀಲ ಅವರಿಗೆ ನೀಡಿ ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮಾಜದ ಸಾಧಕರಿಗೆ ಸನ್ಮಾನ ನಡೆಯಿತು. ವಿಶೇಷ ಉಪನ್ಯಾಸ ಕಾರ್ಯಕ್ರಮಗಳು ನಡೆದವು. ರಾಜ್ಯದ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯ ಜನರು ಸೇರಿದ್ದರು.
ಸಂಗಮೇಶ್ವರ ದೇವಸ್ಥಾನದಿಂದ ಸಭಾ ಭವನದವರೆಗೂ ಮಹಿಳೆಯರಿಂದ ಕುಂಬಮೇಳ ನಡೆಯಿತು.