ಸಂಡೂರು
ಜ್ಞಾನದ ದಾಸೋಹವನ್ನು ಮಾಡುವಂತಹ ಮಠಗಳಲ್ಲಿ ಸಂಡೂರಿನ ಶ್ರೀ ಪ್ರಭುದೇವರ ಸಂಸ್ಥಾನ ವಿರಕ್ತಮಠ ಅದ್ಭುತವಾದ ಕಾರ್ಯಮಾಡಿದೆ, ಅದರಲ್ಲಿ ಸಾಧಕರನ್ನು ಗುರುತಿಸಿ ಅವರಿಗೆ ವಿಶೇಷವಾಗಿ ಬಸವಬೆಳಗು ಹಾಗೂ ಬಸವ ಸೇವಾ ಪ್ರಶಸ್ತಿಯನ್ನು ನೀಡುತ್ತಿರುವುದು ನಿಜವಾದ ಸಾಮಾಜಿಕ ಕಳಕಳಿಯನ್ನು ಹೊಂದಿದೆ ಎಂದು ನಿವೃತ್ತ ಹಂಪಿ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗದ ಮುಖ್ಯಸ್ಥರಾಗಿದ್ದ ಡಾ. ಕೆ.ರವೀಂದ್ರನಾಥ ತಿಳಿಸಿದರು.
ಅವರು ಪಟ್ಟಣದ ಶ್ರೀ ಪ್ರಭುದೇವರ ಸಂಸ್ಥಾನ ವಿರಕ್ತಮಠದಲ್ಲಿ ಹಮ್ಮಿಕೊಂಡಿದ್ದ ಬಸವ ಬೆಳಗು ಹಾಗೂ ಬಸವ ಸೇವಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಬಸವ ಬೆಳಗು ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿ ೧೯೯೭ರಿಂದ ಪ್ರಕಟಣಾ ಕಾರ್ಯವನ್ನು ಮಾಡುತ್ತಾ ಇಂದು ೪೩ ಕೃತಿಗಳನ್ನು ಪ್ರಕಟಿಸುವುದು ಸಾಮಾನ್ಯ ಕೆಲಸವಲ್ಲ, ಮಠ ಶ್ರೀಮಂತ ಮಠವಲ್ಲ, ಅದರೂ ದಾನಿಗಳಿಂದ ಪಡೆದು ಪ್ರತಿ ವರ್ಷ ಇಂತಹ ಹೆಮ್ಮೆಯ ಕಾರ್ಯವನ್ನು ಮಾಡಲು ಜನಕಲ್ಯಾಣ ಸಂಸ್ಥೆಯನ್ನು ಹುಟ್ಟು ಹಾಕುವ ಮೂಲಕ ಸೇವಾ ಕರ್ತರರನ್ನು ಗುರುತಿಸಿ ಅವರಿಗೆ ಬಸವ ಬೆಳಗು ಪ್ರಶಸ್ತಿಯನ್ನು ನೀಡುತ್ತಿದೆ.
ಇದು ಕಲೆ, ಸಾಹಿತ್ಯ, ಸಮಾಜ ಸೇವೆಯನ್ನು ಗುರುತಿಸಿ ಸಮಾಜ ಮುಖಿಯಾದವರಿಗೆ ನೀಡುತ್ತಿರುವುದು ಪ್ರಮುಖ ಅಂಶವಾಗಿದೆ, ಈ ಬಾರಿ ಅಂಧರಾಗಿದ್ದು ೧೭೦ ಅಂಧರಿಗೆ ವಿಶೇಷ ಶಾಲೆಯನ್ನು ಪ್ರಾರಂಭಿಸಿ ಸೇವೆ ಸಲ್ಲಿಸುತ್ತಿರುವ ಅಶ್ವಿನಿ ಅಂಗಡಿ ಚಳ್ಳಗುರ್ಕಿ ಅವರಿಗೆ ನೀಡುತ್ತಿರುವುದು ಹೆಮ್ಮೆ ಅಲ್ಲದೆ ಅಂಗವಿಕಲರಾಗಿದ್ದು ಒಂದು ಕಂಪ್ಯೂಟರ್ ಶಿಕ್ಷಣ ನೀಡುತ್ತಿರುವ ಸಂಡೂರಿನವರೇ ಅದ ಸಿದ್ದರಾಮೇಶ್ ಬಸವರಾಜಪ್ಪ ಅಂಕಮನಾಳ್ ಅವರಿಗೆ ಬಸವ ಸೇವಾ ಪ್ರಶಸ್ತಿಯನ್ನು ನೀಡುವ ಮೂಲಕ ಗೌರವಿಸಿ ಅವರ ಸೇವೆಗೆ ಬೆಂಬಲವಾಗಿರುದು, ಶ್ರೀಗಳು ಮಠದಲ್ಲಿ ಸಾಂಸ್ಕೃತಿಕ, ಶೈಕ್ಷಣಿಕ, ಬಸವ ತತ್ವವನ್ನು ಪಸರಿಸುವ ವ್ಯವಸ್ಥಿತ ಕಾರ್ಯ ನಡೆಯುತ್ತಿರುವುದು ಇಂದಿನ ವಿಚಾರ ಸಂಕೀರ್ಣವೇ ಸಾಕ್ಷಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಬಸವ ಬೆಳಗು ಪ್ರಶಸ್ತಿಯನ್ನು ಪಡೆದ ಅಂಧರಾದ ಅಶ್ವಿನಿ ಅಂಗಡಿ ಚಳ್ಳಗುರ್ಕಿಯವರು ಮಾತನಾಡಿ ಮಠಗಳು ಅಂಧರನ್ನು ಗುರುತಿಸಿ ಅವರ ಕಾರ್ಯಕ್ಕೆ ಬೆನ್ನು ತಟ್ಟುತ್ತಿರುವುದು ನನಗೆ ಬಹು ಸಂತಸವಾಗಿದೆ, ಇಂತಹ ಮಠಗಳ ಪ್ರೇರಣೆಯೇ ನನಗೆ ಅಂಧರ ಆಶ್ರಮ ಕಟ್ಟಲು ಸಾಧ್ಯವಾಗಿದೆ, ಅದ್ದರಿಂದ ಇಂತಹ ಸೇವಾ ಕಾರ್ಯ ಮಾಡುವ ಮಠಗಳು ಮತ್ತು ದಾನ ಮಾಡುವ ಭಕ್ತರು ಬಹು ಮುಖ್ಯ ಎಂದರು.
ಪ್ರಭುದೇವರ ಸಂಸ್ಥಾನ ವಿರಕ್ತಮಠದ ಪ್ರಭುಮಹಾಸ್ವಾಮಿಗಳು ಮಾತನಡಿ ಬಸವಣ್ಣ ನಿತ್ಯ ವಿಶ್ವಜ್ಯೋತಿಯಾಗಿದ್ದಾರೆ, ನಮ್ಮ ಮಠದಿಂದ ೨೦೦೭ ರಿಂದ ಈ ವರೆಗೆ ೩೧ ಜನರಿಗೆ ಬಸವ ಬೆಳಗು, ೯ ಜನರಿಗೆ ಬಸವ ಸೇವಾ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಭುದೇವರ ಜನಕಲ್ಯಾಣ ಸಂಸ್ಥೆಯಿಂದ ೪೩ ಕೃತಿಗಳನ್ನು ಪ್ರಕಟಿಸಲಾಘಿದೆ, ೬ ಕೃತಿಗಳಿಗೆ ಪಿ.ಹೆಚ್.ಡಿ. ೬ ಕೃತಿಗಳಿಗೆ ಎಂ.ಫಿಲ್ ಪದವಿ ದೊರೆತಿದೆ. ಶೂನ್ಯ ಸಂಪಾದನೆ ಕೃತಿಯನ್ನು ೫೨ ವರ್ಷಗಳ ನಂತರ ಪ್ರಕಟಣೆ ಮಾಡಿದ್ದು ನಮ್ಮ ಸಂಸ್ಥೆಯ ಹೆಮ್ಮೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೂಡ್ಲಿಗಿ ಹಿರೇಮಠದ ಪ್ರಶಾಂತಸಾಗರ ಶಿವಾಚರ್ಯ ಮಹಾಸ್ವಾಮಿಗಳು ಮಾತನಾಡಿ ಸಾಹಿತ್ಯದ ನಿರಂತರ ಪಸರಿಸುವ ಮತ್ತು ಕೃತಿಗಳನ್ನು ಪ್ರಕಟಿಸುವ ಕನ್ನಡದ ಸೇವೆ ಅದ್ಬುತವಾದುದು ಎಂದರು.
ಕಾರ್ಯಕ್ರಮ ನಿರೂಪಣೆಯನ್ನು ಶಿಕ್ಷಕ ಪ್ರದೀಪ ನೆರವೇರಿಸಿದರು. ವೀರಭದ್ರಯ್ಯ ಗವಾಯಿಗಳು ಸಂಗೀತ ಕಾರ್ಯಕ್ರಮ ನೆರವೇರಿಸಿದರು. ಅಕ್ಕನ ಬಳಗದ ಅಧ್ಯಕ್ಷೆ ಗುಡೇಕೋಟೆ ನಾಗರಾಜ ಹಾಗೂ ಎಲ್ಲಾ ಸದಸ್ಯರು ಕಾರ್ಯಕ್ರಮ ಅಚ್ಚುಕಟ್ಟಾಗಿ ಅಯೋಜಿಸಿದ್ದರು.