ಬಸವ ಪರಂಪರೆ ಮುಂದುವರೆಸಿದ ಸಾಣೇಹಳ್ಳಿ ಮಠ
ಸಾಣೇಹಳ್ಳಿ
ಉಘೇ ಮಹಾತ್ಮ ಮಲ್ಲಯ್ಯ…
ಮಾಯಗಾರ ಮಾದೇವನಿಗೆ ಶರಣು ಶರಣಯ್ಯ…
ಹೀಗೆ ಶಿವಕುಮಾರ ಕಲಾ ಸಂಘದ ವಿದ್ಯಾರ್ಥಿಗಳು ಕಂಸಾಳೆ ಹಾಡು ಜೊತೆಗೆ ನೃತ್ಯವಾಡುವಾಗ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ, ಸಾಹಿತಿ ಬಸವರಾಜ ಸಾದರ ಮಧ್ಯಕ್ಕೆ ಬಂದು ತಾಳವನ್ನು ಬಾರಿಸುತ್ತ ಕಲಾವಿದರಿಗೆ ಜೊತೆಯಾದರು. ಈಮೂಲಕ ೨೭ನೇ ರಾಷ್ಟ್ರೀಯ ನಾಟಕೋತ್ಸವವನ್ನು ಉದ್ಘಾಟಿಸಿದರು.
ನಂತರ ಅವರು ಮಾತನಾಡಿ, ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಆರಂಭಿಸಿದ ರಂಗ ಪರಂಪರೆಯನ್ನು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮುಂದುವರೆಸಿಕೊಂಡು ಬಂದಿದ್ದಾರೆ. ನಮ್ಮೆಲ್ಲರ ಅಭಿರುಚಿಗಳನ್ನು ತಣಿಸುವ ಕಲೆ ರಂಗಭೂಮಿ. ಬಣ್ಣ, ಬೆಳಕು, ಬೆಡಗು, ಸಂಗೀತ, ಅಭಿನಯ ಒಳಗೊಂಡ ರಂಗಭೂಮಿಯಿಂದ ಸಾಣೇಹಳ್ಳಿ ಶ್ರೀಮಂತವಾಗಿದೆ. ಗ್ರೀಕ್ ಮಾದರಿಯ ಶಿವಕುಮಾರ ಬಯಲು ರಂಗಮಂದಿರದಲ್ಲಿ ನಿತ್ಯ ಸಾವಿರಾರು ಪ್ರೇಕ್ಷಕರು ನಾಟಕಗಳನ್ನು ನೋಡುತ್ತಾರೆ ಎಂದು ಮೆಚ್ಚುಗೆಯಾಡಿದರು.
ಸರ್ವೋದಯ ಪರಿಕಲ್ಪನೆ ಮಹಾತ್ಮ ಗಾಂಧಿಯವರದಾದರೂ ೧೨ನೇ ಶತಮಾನದಲ್ಲಿಯೇ ಸಕಲ ಜೀವಾತ್ಮರಿಗೆ ಒಳಿತು ಬಯಸಿದ ಬಸವಣ್ಣನವರದು ಸರ್ವೋದಯ ಪರಿಕಲ್ಪನೆ. ಇಂಥ ಬಸವ ಪರಂಪರೆಯನ್ನು ಮುಂದುವರೆಸಿದ್ದು ಸಾಣೇಹಳ್ಳಿ ಮಠ. ಬಸವ ಪರಂಪರೆಯೆಂದರೆ ಪ್ರಜಾಪ್ರಭುತ್ವ. ಸಂಗೀತ, ಸಾಹಿತ್ಯ, ನಾಟಕಗಳ ಮೂಲಕ ಸಂಸ್ಕಾರವನ್ನು ಪಂಡಿತಾರಾಧ್ಯ ಶ್ರೀಗಳು ನೀಡುತ್ತಿದ್ದಾರೆ. ಎಂದು ಶ್ಲಾಘಿಸಿದರು.
ಶಿವಸಂಚಾರದ ಮೂಲಕ ದೇಶದಾದ್ಯಂತ ನಾಟಕಗಳು ಪ್ರದರ್ಶನಗೊಳ್ಳುತ್ತಿವೆ. ಕೇವಲ ವಚನ ಸಂಸ್ಕೃತಿ ಬಿಂಬಿಸುವ ನಾಟಕಗಳಲ್ಲದೆ ಬದುಕಿನ ವಿವಿಧ ಮಗ್ಗಲುಗಳನ್ನು ತೋರಿಸುವ ನಾಟಕಗಳು ಇಲ್ಲಿ ಪ್ರದರ್ಶನಗೊಳ್ಳುತ್ತಿರುವುದು ಗಮನಾರ್ಹ ಎಂದು ಹೇಳಿದರು.
ಏಣಗಿ ಬಾಳಪ್ಪ ಅವರನ್ನು ಬಸವಣ್ಣ ಎಂದೇ ಕರೆಯುತ್ತಿದ್ದರು. ಅವರು ಜಗಜ್ಯೋತಿ ಬಸವೇಶ್ವರ ನಾಟಕದ ಮೂಲಕ ಪ್ರಸಿದ್ಧರಾಗಿದ್ದರು. ಅವರು ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರಾದಾಗ ಆಕಾಶವಾಣಿಗೆ ಸಂದರ್ಶಿಸಿದೆ. ಬಸವಣ್ಣ ನಿಮಗೆ ಏನು ಕೊಟ್ಟ ಎಂದು ಕೇಳಿದಾಗ ಬಸವಣ್ಣ ಏನು ಕೊಟ್ಟ ಎಂದು ಕೇಳಬಾರದು? ಏನು ಕೊಟ್ಟಿಲ್ಲ ಎಂದು ಕೇಳಬೇಕು ಎಂದು ಉದಾಹರಣೆ ಹೇಳಿದರು.
ಹುಬ್ಬಳ್ಳಿಯ ಶಕ್ತಿ ಡ್ರಾಮಾ ಥಿಯೇಟರಿನಲ್ಲಿ ಬಸವೇಶ್ವರ ನಾಟಕವಾಡುವಾಗ ಹಳ್ಳಿಗರು ನೋಡಿ ಅಲ್ಲಿಯೇ ಮಲಗಿ ಬೆಳಿಗ್ಗೆದ್ದು ಸಿಂಗಲ್ ಚಾ ಕುಡಿದು ತಮ್ಮ ಊರಿಗೆ ಹೋಗುತ್ತಾರೆ. ಬಸವೇಶ್ವರ ನಾಟಕ ನೋಡಿದ ನಂತರ ಬೆಳಿಗ್ಗೆ ಚಹಾದಂಗಡಿಯಲ್ಲಿ ಹಳ್ಳಿಗರು ಚಹಾ ಕುಡಿಯುವಾಗ ಏಣಗಿ ಬಾಳಪ್ಪನವರೂ ಚಹಾ ಕುಡಿಯಲು ಹೋಗಿರುತ್ತಾರೆ. ನೋಡ್ರೋ, ಬಸವಣ್ಣ ಚಹಾ ಕುಡಿಯಾಕ ಬಂದಾನ ಎಂದು ಹಳ್ಳಿಯ ಪ್ರೇಕ್ಷಕರು ಹೇಳಿದಾಗ ಅಂದಿನಿಂದ ಚಹಾ ಕುಡಿಯುವುದನ್ನು ಬಿಟ್ಟರು. ಹೀಗೆ ನಿಜವಾದ ಸಾತ್ವಿಕ ಜೀವನ ನಡೆಸಿದರು ಎಂದು ಸ್ಮರಿಸಿದರು.
ಬದುಕಿನ ಕುರಿತು ಶಿಕ್ಷಣ: ಕರ್ನಾಟಕ ರಾಜ್ಯೋತ್ಸವ ಉದ್ಘಾಟಿಸಿದ ಪಶು ಸಂಗೋಪನ ಇಲಾಖೆಯ ಆಯುಕ್ತರಾದ ಅಜಯ್ ನಾಗಭೂಷಣ ಕಲೆ ಎಂದರೇನು, ಜೀವನ ಎಂದರೇನು, ಯಾವ ಉದ್ದೇಶಕ್ಕೆ ಬದುಕಬೇಕು ಎಂದು ನಮ್ಮ ಶಿಕ್ಷಣ ಹೇಳಿಕೊಡುತ್ತಿಲ್ಲ. ಆದರೆ ಸಾಣೇಹಳ್ಳಿಯ ಪಂಡಿತಾರಾಧ್ಯ ಶ್ರೀಗಳು ಬದುಕಿನ ಕುರಿತ ಶಿಕ್ಷಣವನ್ನು ರಂಗಭೂಮಿಯ ಮೂಲಕ ಹೇಳಿಕೊಡುತ್ತಿದ್ದಾರೆ ಎಂದು ಪ್ರಶಂಸಿಸಿದರು.
ಕಲೆ ಎನ್ನುವುದು ಇನ್ನೊಬ್ಬರಿಗೆ ಇಷ್ಟವಾಗುವ ಹಾಗೆ ಪ್ರದರ್ಶಿಸುವುದು. ಬಸವಣ್ಣನವರ ತತ್ವಾದರ್ಶಗಳನ್ನು ಸರಳವಾಗಿ ಸಾಣೇಹಳ್ಳಿ ಶ್ರೀಗಳು ಶಿಕ್ಷಣದ ಮೂಲಕ ಹೇಳಿಕೊಡುತ್ತಿದ್ದಾರೆ. ಇದು ಮಾದರಿಯಾಗಿದ್ದು, ಬೇರೆ ಕಡೆಯೂ ಮುಂದುವರೆಯಬೇಕು ಎಂದು ಸಲಹೆ ನೀಡಿದರು.
ಟ್ರೇನಿಂಗ್ ಕಾಲೇಜು; ಸಚಿವ ಸುಧಾಕರ ಭರವಸೆ
ತುಲಭಾರ, ಬಂಗಾರದ ಮನುಷ್ಯ ಹಾಗೂ ಕೋಳೂರು ಕೊಡಗೂಸು ನಾಟಕದ ಕಲಾವಿದರು ಅಭಿನಯಿಸಿದ ಒಂದೊಂದು ದೃಶ್ಯಗಳನ್ನು ವೀಕ್ಷಿಸುವ ಮೂಲಕ ನಾಟಕಗಳನ್ನು ಯೋಜನೆ ಮತ್ತು ಸಾಂಖಿಕ ಖಾತೆಯ ಸಚಿವರ ಡಿ.ಸುಧಾಕರ ಉದ್ಘಾಟಿಸಿದರು.
ತುಲಭಾರ ನಾಟಕದಲ್ಲಿ ತುಲಭಾರಕ್ಕೆ ಪಾತ್ರರಾದ ಮಾಸ್ತರರು ಪ್ರಸ್ತಾಪಿಸಿದ ಟ್ರೇನಿಂಗ್ ಕಾಲೇಜಿನ ಕುರಿತು ಗಮನಿಸಿದ ಸಚಿವರು, ಸಾಣೇಹಳ್ಳಿಗೆ ಟ್ರೇನಿಂಗ್ ಕಾಲೇಜು ಅವಶ್ಯಕತೆಯಿದೆ ಎಂದು ʼತುಲಾಭಾರʼ ನಾಟಕದಲ್ಲಿ ಪ್ರಸ್ತಾಪ ಬರುತ್ತದೆ. ಟ್ರೇನಿಂಗ್ ಕಾಲೇಜು ಆರಂಭಕ್ಕೆ ಅಗತ್ಯ ಸಹಕಾರ ನೀಡುವೆ ಎಂದು ಭರವಸೆ ನೀಡಿದರು.
ಕಲೆಗೆ, ಸಂಸ್ಕೃತಿಗೆ, ಕಲಾಭಿಮಾನಿಗಳಿಗೆ ಬಹಳಷ್ಟು ಅವಕಾಶಗಳನ್ನು ಸಾಣೇಹಳ್ಳಿ ಶ್ರೀಗಳು ಕಲ್ಪಿಸಿದ್ದಾರೆ. ಜೊತೆಗೆ ಸಾಮಾಜಿಕ ಸೇವಾ ಕೈಂಕರ್ಯಗಳ ಮೂಲಕ, ನಾಟಕಗಳ ಮೂಲಕ ಸಮಾಜದ ಜಾಗೃತಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಈ ಸಾಧನೆ ಹೀಗೆಯೇ ಮುಂದುವರೆಯಲಿ ಎಂದು ಆಶಿಸಿದರು.