ಸಾಣೇಹಳ್ಳಿ
ಜನರು ಹೊಸವರ್ಷವನ್ನು ಎಲ್ಲಿ, ಹೇಗೆ ಸ್ವಾಗತಿಸುವರೆಂಬುದನ್ನು ಹೇಳಬೇಕಿಲ್ಲ. ಅದಕ್ಕೊಂದು ಸಾಂಸ್ಕೃತಿಕ ರೂಪ ಕೊಡಬೇಕೆಂಬುದನ್ನು ಯೋಚಿಸಿದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ನಮ್ಮ, ನಾಡು, ನುಡಿ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ಕಳೆದ ೨೭ ವರ್ಷಗಳಿಂದ ‘ವರ್ಷದ ಹರ್ಷ’ ಎನ್ನುವ ವಿಶಿಷ್ಟ ಕಾರ್ಯಕ್ರಮವನ್ನು ಪ್ರತಿವರ್ಷದಂತೆ ಈ ವರ್ಷ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರ ನೇತೃತ್ವದಲ್ಲಿ ವರ್ಷದ ಹರ್ಷ’ ಹಾಗೂ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರ "ಜೀವ ಇದ್ದರೆ ಜೀವನ' ಮತ್ತು
ಕೋಳೂರು ಕೊಡಗೂಸು’ ನಾಟಕಗಳ ಕೃತಿ ಲೋಕಾರ್ಪಣೆ ಅಭಿನಂದನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುವು.
ಡಿಸೆಂಬರ್ ೩೧ ರ ಸಂಜೆ ೬.೩೦ ರಿಂದ ಆರಂಭವಾಗುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಹೊಸದುರ್ಗ ತಾಲ್ಲೂಕಿನ ಬ್ರಹ್ಮವಿದ್ಯಾನಗರದ ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮಿಗಳು, ಜಗದ್ಗುರು ಶ್ರೀ ಶಾಂತವೀರ ಮಹಾಸ್ವಾಮಿಗಳು, ಶ್ರೀ ಬಸವ ಮಾದಾರ ಚೆನ್ನಯ್ಯ ಸ್ವಾಮಿಗಳು ಹಾಗೂ ಶ್ರೀ ಈಶ್ವರಾನಂದಪುರಿ ಸ್ವಾಮಿಗಳು ಸಾನ್ನಿಧ್ಯ ವಹಿಸಿಕೊಳ್ಳಲಿದ್ದಾರೆ. ಚಿಂತಕ ಚಟ್ನಳ್ಳಿ ಮಹೇಶ್ ಉಪನ್ಯಾಸವನ್ನು ನೀಡಲಿದ್ದಾರೆ. ೮೭ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷರು ನಾಡೋಜ ಡಾ. ಗೊ ರು ಚನ್ನಬಸಪ್ಪ ಹಾಗೂ ಕೇದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಕೃಷ್ಣಮೂರ್ತಿ ಬಿಳಿಗೆರೆಯವರನ್ನು ಅಭಿನಂದಿಸಲಾಗುವುದು.
ಇದೇ ಸಂದರ್ಭದಲ್ಲಿ ಶಿವಸಂಚಾರ ತಂಡದ ಕೆ. ಜ್ಯೋತಿ, ದಾಕ್ಷಾಯಿಣಿ, ನಾಗರಾಜ್ ಹೆಚ್. ಎಸ್. ಮತ್ತು ಶರಣಕುಮಾರ ಸಂಗೀತ ಸುಧೆ ಕಾರ್ಯಕ್ರಮ ನಡೆಸಿಕೊಡುವರು. ಸಾಣೇಹಳ್ಳಿಯ ಶ್ರೀ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀ ಗುರುಪಾದೇಶ್ವರ ಪ್ರೌಢಶಾಲಾ ಮಕ್ಕಳಿಗೆ ನೃತ್ಯ ಪ್ರದರ್ಶನ ಇರುತ್ತದೆ. ಬನಹಟ್ಟಿಯ ಬಿ. ಆರ್. ಪೋಲೀಸಪಾಟೀಲ ತಂಡದವರಿಂದ ಲಾವಣಿ ಮತ್ತು ತತ್ವಪದಗಳ ಸಂಗೀತ ಕಾರ್ಯಕ್ರಮ ನಡೆಯಲಿದೆ. ರಿಚರ್ಡ್ ಲೂಯಿಸ್, ಮೈಸೂರು ಆನಂದ, ಮಿಮಿಕ್ರಿ ಗೋಪಿ, ಕಿರ್ಲೋಸ್ಕರ ಸತ್ಯ ಇವರಿಂದ ನಗೆ ಹಬ್ಬ, ಹಾಸ್ಯ ಕಾರ್ಯಕ್ರಮ ನಡೆಯಲಿದೆ ಎಂದು ಕಲಾಸಂಘದ ಪ್ರಕಟಣೆಯಲ್ಲಿ ತಿಳಿಸಿದೆ.

