ಬೆಂಗಳೂರು
ರಂಗಾಯಣದ ಮಾಜಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಸಾಣೇಹಳ್ಳಿಯ ಪಂಡಿತಾರಾಧ್ಯ ಶ್ರೀಗಳನ್ನು ಅವಹೇಳನಾರಿಯಾಗಿ ಟೀಕಿಸಿ ಮತ್ತೊಂದು ವಿಡಿಯೋ ಮಾಡಿದ್ದಾರೆ.
ಅರಸೀಕೆರೆಯಲ್ಲಿ ಜನವರಿ 11ರಂದು ಪ್ರದರ್ಶನವಾಗಬೇಕಿದ್ದ ಅವರ ನಾಟಕ ಶ್ರೀಗಳ ಒತ್ತಡದಿಂದ ರದ್ದಾಗಿದೆ ಎಂದು ಅಪಾದನೆ ಮಾಡಿದ್ದಾರೆ.

ಆದರೆ ನಾಟಕ ನಿಲ್ಲಿಸಲು ಸಾಣೇಹಳ್ಳಿ ಶ್ರೀಗಳು ಏನು ಮಾಡಿದರೆಂದು 7 ನಿಮಿಷಗಳ ವಿಡಿಯೋದಲ್ಲಿ ಸ್ಪಷ್ಟತೆಯಿಲ್ಲ. ಬರೀ ಬಾಲಿಶ, ಗೊಂದಲದ ಹೇಳಿಕೆಗಳಿವೆ.
ಒಂದು ಕಡೆ ಶ್ರೀಗಳು ನಾಟಕದ ವಿರುದ್ಧ ಫತ್ವಾ ಹೊರಡಿಸಿದ್ದರು ಅಂತ ಕಾರ್ಯಪ್ಪ ಹೇಳುತ್ತಾರೆ. ಯಾವ ಫತ್ವಾ ಇದು? ಎಲ್ಲಿ ಹೊರಡಿಸಿದರು? ಯಾರಿಗೆ ಹೊರಡಿಸಿದ್ದರು? ಇದಕ್ಕೇನು ಪುರಾವೆ ಇದೆ? ಯಾವುದಕ್ಕೂ ಉತ್ತರವಿಲ್ಲ.
ಶ್ರೀ ಗಳು “ಕೆಲವು ಗೂಂಡಾಗಳನ್ನು ಬಿಟ್ಟು ನಾಟಕ ನಿಲ್ಲಿಸಲು ಪತ್ರಿಕಾಗೋಷ್ಠಿ ನಡೆಸುತ್ತಾರೆ,” ಎನ್ನುವುದು ಇನ್ನೊಂದು ಅಸಂಬದ್ಧ ಆಪಾದನೆ.
ಪತ್ರಿಕಾಗೋಷ್ಠಿ ನಡೆಸಲು ಗೂಂಡಾಗಳನ್ನು ಯಾಕ್ರೀ ಬಿಡಬೇಕು? ಗೂಂಡಾಗಳನ್ನು ಬಿಟ್ಟು ನಾಟಕ, ಕಲಾ ಪ್ರದರ್ಶನಗಳನ್ನು ನಿಲ್ಲಿಸುವುದು ಯಾರ ಸಂಸ್ಕೃತಿ ಎನ್ನುವುದು ನಮಗಿಂತ ಕಾರ್ಯಪ್ಪ ಅವರಿಗೆ ಗೊತ್ತು.
ನಾಟಕವನ್ನು ಸಂಘಟಿಸಿದವರು ಸಾಣೇಹಳ್ಳಿ ಶ್ರೀಗಳ ಗುಂಪಿನವರೇ ಆಗಿದ್ದರಂತೆ, ಅದಕ್ಕೆ ಶ್ರೀಗಳ ಮಾತು ಕೇಳಿಕೊಂಡು ನಾಟಕ ರದ್ದು ಪಡಿಸಿದರಂತೆ. ಈ ಮಹಾನುಭಾವರು ಯಾರು, ಅವರ ಹೆಸರೇನು, ಯಾವ ವಿವರವೂ ವಿಡಿಯೋದಲ್ಲಿ ಇಲ್ಲ. ಕೊನೆ ಪಕ್ಷ ನಾಟಕದ ಹೆಸರೇನು, ಅದನ್ನೂ ಕಾರ್ಯಪ್ಪ ಬಾಯಿ ಬಿಟ್ಟಿಲ್ಲ.
ತಾವು ತುಲಾಭಾರ ನಾಟಕದ ಮೇಲೆ ಈ ಹಿಂದೆ ಎತ್ತಿದ್ದ ಆಕ್ಷೇಪಣೆಯಿಂದ ಶ್ರೀಗಳ ಕೆಂಗಣ್ಣು ತಮ್ಮ ಮೇಲೆ ಬಿದ್ದಿದ್ದೆ ಎಂದು ಹೇಳಿದ್ದಾರೆ.
ಕಾರ್ಯಪ್ಪ ಅವರು ತುಲಾಭಾರ ರಚನೆಕಾರರ ವಿರುದ್ಧ ಕಿಡಿ ಕಾರಿದ್ದರು. ಅವರು ಅಂದುಕೊಂಡಿದ್ದಂತೆ ಆ ನಾಟಕ ಬರೆದದ್ದು ಸಾಣೇಹಳ್ಳಿ ಶ್ರೀಗಳಲ್ಲ. ನಾಟಕ ಬರೆದವರು ಯಾರು ಎಂಬ ಕನಿಷ್ಠ ಪ್ರಜ್ಞೆಯಿಲ್ಲದೆ ಯಾವುದೋ ಅಮಲಿನಲ್ಲಿ ಶ್ರೀಗಳನ್ನು ಖಂಡಿಸಿದ್ದರು.
ಆಪಾದನೆ ಮಾಡುವುದು ಪ್ರಜಾತಂತ್ರದಲ್ಲಿ ಪ್ರತಿಯೊಬ್ಬರ ಹಕ್ಕು. ಕಾರ್ಯಪ್ಪ ಅವರ ಮಾತಿನಲ್ಲಿರುವ ಬಾಲಿಶತನ ಅಥವಾ ಪ್ರಭುದ್ದತೆ, ಸ್ಪಷ್ಟತೆ ಅಥವಾ ಅಮಲು ಎಲ್ಲಾ ಅವರ ವೈಯಕ್ತಿಕ ವಿಚಾರ.
ಆದರೆ ಅವರು ತಮ್ಮ ಸಿಟ್ಟನ್ನು ಹೊರಹಾಕಿರಲು ಸಾಣೇಹಳ್ಳಿ ಶೀಗಳ ಮೇಲೆ ಬಳಸಿರುವ ಭಾಷೆ – ಅದು ಅವರ ವೈಯಕ್ತಿಕ ವಿಚಾರವಲ್ಲ. ಅದು ದಕ್ಷಿಣ ಭಾರತದ ಅತೀ ದೊಡ್ಡ ಸಮುದಾಯವನ್ನು ಕೆರಳಿಸುವಂತಹ ಭಾಷೆ.
ಅವರು ಬಳಸಿರುವ ಪದಗಳು ನೋಡಿ: ಕಮ್ಯುನಿಸ್ಟ್ ಸ್ವಾಮಿ, ದಂಧೆಕೋರ ಸ್ವಾಮಿ, ಕುಕೃತ್ಯಗಳನ್ನು ಮಾಡುತ್ತಾ…,…ಇರುವುದೇ ಪ್ರಶಸ್ತಿ ಬಾಚಿಕೊಳ್ಳಲಿಕ್ಕೆ, ಮೂರ್ಖರ ಥರ…
ನಾವು ಪೂಜ್ಯರು ಎಂದು ಗೌರವಿಸೋ ಒಬ್ಬ ಪ್ರಮುಖ ಮಠಾಧಿಪತಿಗಳ ಮೇಲೆ ಇಂತವರು ಎಷ್ಟು ಸಲೀಸಾಗಿ, ಯಾವುದೇ ಹಿಂಜರಿಕೆಯಿಲ್ಲದೆ ಮಾತನಾಡುವುದು ನೋಡಿ. ಈ ನಿಂದನೆಗೆ ಪ್ರತಿಕ್ರಿಯೆ ಬರಬೇಕಿರುವುದು ಶ್ರೀಗಳಿಂದಲ್ಲ. ಅವರ ಹಿಂದಿರುವ ಸಮುದಾಯದಿಂದ.
ತಮ್ಮ ಮೇಲೆ ಬರುವ ಅವಹೇಳನಕಾರಿ ಹೇಳಿಕೆಗಳಿಗೆ ಮೌನದಿಂದಲೇ ಉತ್ತರ ಕೊಡುತ್ತೇವೆ ಎಂದು ಶ್ರೀಗಳು ಒಂದು ಕಾರ್ಯಕ್ರಮದಲ್ಲಿ ಹೇಳಿದ್ದರು. ಇದೇ ನೀತಿಯನ್ನು ಎಲ್ಲಾ ಲಿಂಗಾಯತರೂ ಪಾಲಿಸುತ್ತಿದ್ದಾರೆಯೋ ನೋಡಬೇಕು.
ಲಿಂಗಾಯತ ಸಮುದಾಯ ಅಡ್ಡಂಡ ಕಾರ್ಯಪ್ಪನವರ ಈ ನಡವಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಪ್ರತಿಕ್ರಿಯಿಸಬೇಕು. ಅವರ ಮೇಲೆ ಯಾವುದಾದರೂ ಸ್ಪಷ್ಟವಾದ ದೂರುಗಳಿದ್ದರೆ ಅವರಿಂದ ಅದಕ್ಕೆ ಉತ್ತರ ಪಡೆಯುವುದು ಅವರ ಹಕ್ಕು. ಆದರೆ, ಯಾವುದೇ ಸ್ಪಷ್ಟವಾದ ನಿಖರವಾದ ದೂರುಗಳಿಲ್ಲದೆ ಬಾಯಿಗೆ ಬಂದ ಹಾಗೆ ಮಾತನಾಡುವುದಕ್ಕೆ ತಡೆ ಹಾಕುವ ಕಾಲ ಬಂದಿದೆ.
ಕಾರ್ಯಪ್ಪನ ಯಲುವಿಲ್ಲದ ನಾಲಿಗೆ ಮತ್ತು ಬುದ್ದಿಯಿಲ್ಲದ ಮೆದುಳು ಬಡಬಡಿಸುತ್ತಿದೆ