ದೇವಾಲಯದ ಬದಲು ಬಸವಣ್ಣ ದೇಹಾಲಯ ಕಟ್ಟಿದರು: ಸಾಣೇಹಳ್ಳಿ ಶ್ರೀ

Basava Media
Basava Media

‘ಸಂಸ್ಕಾರವಂತರಾಗಿ ಬದುಕಲು ಲಿಂಗದೀಕ್ಷಾ ಸಂಸ್ಕಾರ ಬಹಳ ಮುಖ್ಯ’

ಸಾಣೇಹಳ್ಳಿ

ಇಲ್ಲಿನ ಗುರುಬಸವ ಮಹಾಮನೆಯಲ್ಲಿ ಏರ್ಪಡಿಸಿದ್ದ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರದ ಸಾನ್ನಿಧ್ಯ ವಹಿಸಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಆಶೀರ್ವಚನ ನೀಡಿದರು.

ಮನುಷ್ಯ ಭೂತಕಾಲದ ಬಗ್ಗೆ ಯೋಚಿಸದೇ ಭವಿಷ್ಯದ ಬಗ್ಗೆ ಚಿಂತಿಸದೇ ವರ್ತಮಾನದಲ್ಲಿ ಸಂಸ್ಕಾರವಂತನಾಗಿ ಬದುಕಬೇಕು ಎನ್ನುವ ಸಂಕಲ್ಪ ಮಾಡಿಕೊಳ್ಳಬೇಕು. ಇದಕ್ಕೆ ಲಿಂಗದೀಕ್ಷಾ ಸಂಸ್ಕಾರ ಬಹಳ ಮುಖ್ಯ.

ದೀಕ್ಷೆ ಎಂದರೆ ಕೊಡುವುದು ಕಳೆಯುವುದು. ದೇವರ ಬಗ್ಗೆ ಇದ್ದ ಅಜ್ಞಾನವನ್ನು ಕಳೆದುಕೊಂಡು ಸುಜ್ಞಾನ ಪಡೆದುಕೊಳ್ಳಬೇಕು. ನಂತರ ನಿಷ್ಠೆ ಬದ್ದತೆಯಿಂದ ಬದುಕುವುದೇ ದೀಕ್ಷೆ.

ದೇವರು ಸರ್ವಾಂತರ್ಯಾಮಿ ಗಾಳಿ, ಬೆಳಕು, ಪ್ರಕೃತಿಯ ಸುತ್ತಲೂ ದೇವರಿದ್ದಾನೆ. ಗುಡಿಯಲ್ಲಿ ಮಾತ್ರ ದೇವರಿದ್ದಾನೆ ಎಂದು ಭಾವಿಸಿದ್ದೇವೆ. ಆದರೆ ದೇವರ ಹೆಸರಿನಲ್ಲಿ ಪೂಜಾರಿ ಪುರೋಹಿತರು ಭಯವನ್ನು ಹುಟ್ಟಿಸಿ ದೊಡ್ಡ ಪ್ರವೀಣನಾಗ ಹೊರಟಿದ್ದಾನೆ. ಭಗವಂತ ಸರ್ವಂತರ್ಯಾಮಿ. ಹೊರಗಡೆ ಇರುವ ದೇವರು ನಮ್ಮೊಳಗಡೆ ಇಲ್ಲವೇ ಎನ್ನುವ ಪ್ರಶ್ನೆ ಹಾಕಿ ಇಷ್ಟಲಿಂಗದ ಪರಿಕಲ್ಪನೆಯನ್ನು ಬಸವಣ್ಣನವರು ಜಾರಿಗೆ ತಂದರು.

ಬಸವಣ್ಣ ಮನಸ್ಸು ಮಾಡಿದ್ರೆ ಬೇಕಾದಷ್ಟು ದೇವಸ್ಥಾನವನ್ನು ಕಟ್ಟಿಸಬಹುದಾಗಿತ್ತು. ಆದರೆ ಆ ದೇವಸ್ಥಾನದಲ್ಲಿ ನಡೆಯುವ ಕುತಂತ್ರಗಳನ್ನು ನೋಡಿ ದೇಹವನ್ನೇ ದೇವಾಲಯ ಮಾಡಿಕೊಂಡರು. ದೇಹಾಲಯದ ಮೂಲಕ ಜಂಗಮತ್ವವನ್ನು ಸಾರಿ ಜೀವಂತಿಕೆಯ ಕಲ್ಪನೆ ಕೊಟ್ಟರು.

ಬಸವಣ್ಣನವರು ಅಂಗೈಯಲ್ಲಿ ಇಷ್ಟಲಿಂಗ ಕರುಣಿಸಿ ದೇವರ ಬಗ್ಗೆ ತಪ್ಪು ಕಲ್ಪನೆ ಹೊಡೆದೋಡಿಸಿ, ಸತ್ಯದ ಮಾರ್ಗವನ್ನು ತೋರಿಸಿಕೊಟ್ಟರು.

ಲಿಂಗಾಯತ ಧರ್ಮ ಅಪರೂಪದ ಧರ್ಮ. ಬೇರೆ ಬೇರೆ ಧರ್ಮದಲ್ಲಿ ದೇವರನ್ನು ಕೈಮುಟ್ಟಿ ಪೂಜಿಸುವುದಕ್ಕೆ ಅವಕಾಶವಿಲ್ಲ. ಆದರೆ ಲಿಂಗಾಯತ ಧರ್ಮದಲ್ಲಿ ಕೈಮುಟ್ಟಿ ಪೂಜಿಸುವ ಅವಕಾಶ ಇದೆ. ನನ್ನೊಳಗಡೆ ಚೈತನ್ಯದ ಕುರುಹಾಗಿ ಇಷ್ಟಲಿಂಗವನ್ನು ಕರುಣಿಸಿದರು‌.

ಮನುಷ್ಯನಿಗೆ ಜಾತಿಗಿಂತ ನೀತಿ ಮುಖ್ಯ. ಜಾತಿ ಕತ್ತರಿ ಕೆಲಸವಾದರೆ ಸೂಜಿ ಧರ್ಮದ ಕೆಲಸ. ಧರ್ಮ ಕೂಡಿಸುವ ಕೆಲಸ ಮಾಡಿದರೆ ಜಾತಿ ಕತ್ತರಿಸುವ ಕೆಲಸ ಮಾಡುತ್ತದೆ.

ಲಿಂಗಾಯತ ಧರ್ಮದ ಗುರು ಬಸವಣ್ಣ. ಹಿನ್ನಲೆಯಲ್ಲಿ ಕರ್ನಾಟಕ ಸರಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿತು. ಸಾಂಸ್ಕೃತಿಕತೆಯಲ್ಲಿ ಕಲೆ, ಸಾಹಿತ್ಯ, ಶಿಕ್ಷಣ ಇವೆಲ್ಲವುಗಳನ್ನು ಒಳಗೊಂಡಿದ್ದು ಲಿಂಗಾಯತ.

ಲಿಂಗಾಯತ ಎನ್ನುವುದು ಹುಟ್ಟಿನಿಂದ ಬರುವಂಥದ್ದಲ್ಲ. ಅರಿವು ಆಚಾರದಿಂದ ಬರುವಂಥದ್ದು. ಲಿಂಗಾಯತ ಧರ್ಮದಲ್ಲಿ ತತ್ವ, ನಿಷ್ಟೆ, ಬದ್ದತೆ ಮುಖ್ಯ. ಗುರುವಾದವರು ಅಷ್ಟಾವರಣ, ಪಂಚಾಚಾರ, ಷಟ್ ಸ್ಥಲಗಳ ಬಗ್ಗೆ ಅರಿವನ್ನು ಮೂಡಿಸಿ ಜಾಗೃತಗೊಳಿಸಬೇಕು.

ಲಿಂಗಾಯತ ಧರ್ಮದಲ್ಲಿ ಗುರುವಿಗೆ ವಿಶೇಷ ಸ್ಥಾನವಿದೆ. ಗುರು ಅಜ್ಞಾನ ನಿವಾರಿಸಿಕೊಂಡು ಸುಜ್ಞಾನ ಪಡೆದು ಸನ್ಮಾರ್ಗದ ಕಡೆಗೆ ಕೊಂಡೊಯ್ಯುವವನಾಗಿರಬೇಕು.

ಪಂಚಾಚಾರ, ಅಷ್ಟಾವರಣ, ಪಂಚಾಚಾರಗಳು ಬದುಕಿನ ನೀತಿ ಸಂಹಿತೆಗಳು. ಇಷ್ಟಲಿಂಗ ದೀಕ್ಷೆ ಪಡೆದುಕೊಂಡವರು ಸದಾಚಾರಿಯಾಗಿರಬೇಕು. ಜಾತಿಭೇದವನ್ನು ಮಾಡದೇ ನಾವೆಲ್ಲರೂ ಶಿವನ ಮಕ್ಕಳು ಎನ್ನುವ ಭಾವನೆ ಬೆಳೆಸಿಕೊಳ್ಳಬೇಕು. ಅನ್ಯಾಯದ ವಿರುದ್ಧ ಪ್ರತಿಭಟಿಸುವ ಗುಣ ಬೆಳೆಸಿಕೊಳ್ಳಬೇಕು. ವಿವೇಕಶೀಲರಾಗಿ ವಿನಯವಂತರಾಗಿ ಬದುಕಬೇಕೆಂದು ಸ್ವಾಮೀಜಿ ಹೇಳಿದರು.

ಸಂಗೀತ ಶಿಕ್ಷಕ ನಾಗರಾಜ, ಹೆಚ್. ಎಸ್. ವಚನಗಳನ್ನು ಹೇಳಿಕೊಟ್ಟರು‌. ಸಿರಿಮಠ ಹಾಗೂ ಧನಂಜಯ ದೀಕ್ಷಾ ಕಾರ್ಯವನ್ನು ಸಿದ್ಧತೆ ಮಾಡಿದರು.

Share This Article
Leave a comment

Leave a Reply

Your email address will not be published. Required fields are marked *