ಸಾಣೇಹಳ್ಳಿ:
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಶ್ರೀಮಠಕ್ಕೆ ಪಟ್ಟಾಧ್ಯಕ್ಷರಾಗಿ ೪೯ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದರ ಗೌರವಾರ್ಥ, ಶ್ರೀಮಠದಲ್ಲಿ ಶಾಲಾ ಕಾಲೇಜಿನ ಮುಖ್ಯಸ್ಥರು, ಸಿಬ್ಬಂದಿಗಳು, ರಂಗಶಾಲೆಯ ವಿದ್ಯಾರ್ಥಿಗಳು ಹಾಗೂ ಊರಿನ ಗ್ರಾಮಸ್ಥರು ಭಕ್ತಿ ಗೌರವವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀಗಳು ಮಾತನಾಡುತ್ತ, ಸ್ವಾಮಿಗಳಿಗೆ ಗೌರವ ಬರುವುದು ಸ್ವಾಮಿಗಳ ಸುತ್ತಮುತ್ತ ಇರುವ ಜನರ ನಡಾವಳಿಕೆಗಳಿಂದ. ನಮ್ಮ ಸುತ್ತಮುತ್ತಲಿದ್ದವರು ಸನ್ಮಾರ್ಗದಲ್ಲಿ ಸಾಗಿದರೆ, ತಮ್ಮ ತಮ್ಮ ಕಾಯಕ ಶ್ರದ್ಧೆಯನ್ನು ಮೈಗೂಡಿಸಿಕೊಂಡರೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ನಮಗೂ ನಿಮಗೂ ಗೌರವ ದೊರೆಯುವುದು ಎಂದರು.
ನಮ್ಮ ಹಿರಿಯ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು “ಗುರುವಿಗೆ ಅಂಜಿ ನಡೆಯುವ ಭಕ್ತ, ಭಕ್ತನಿಗೆ ಅಂಜಿ ನಡೆಯುವ ಗುರು” ಇದ್ದಾಗ ಆ ಸಮಾಜ, ನಾಡು ಅಭಿವೃದ್ಧಿ ಹೊಂದುವುದು ಎಂದು ಪದೇ ಪದೇ ಹೇಳುತ್ತಿದ್ದರು ಎಂದು ಹೇಳಿದರು.
ಗುರುಗಳ ಬಯಕೆಯಂತೆ ೧೯೭೭ ಡಿಸೆಂಬರ್ ೨೫ ರಂದು ಸಾಣೇಹಳ್ಳಿ ಮಠಕ್ಕೆ ಸ್ವಾಮಿಗಳಾದ್ವಿ. ಮೊದಲು ಸಾಣೇಹಳ್ಳಿಯಲ್ಲಿ ಗಣಪತಿ ಕಾರ್ಯಕ್ರಮಗಳನ್ನು ಮಾಡ್ತಾ ಇದ್ದರು. ರಾತ್ರಿ ಹತ್ತು ಗಂಟೆಯ ನಂತರ ಸೌಂಡ್ ಹಾಕಿಕೊಂಡು ಕುಣಿಯುವುದನ್ನು ನೋಡಕ್ಕೆ ಜನ ಬರ‍್ತಾ ಇದ್ದರು. ಅವರನ್ನು ವೈಚಾರಿಕವಾಗಿ ಬೆಳೆಸಬೇಕು. ಒಳ್ಳೆಯ ವಿಚಾರಗಳನ್ನು ಹೇಳಬೇಕು ಅಂದರೆ ಯಾರೂ ಇಲ್ಲಿಗೆ ಬರ‍್ತಾ ಇರಲಿಲ್ಲ. ಯಾಕಾದ್ರು ಈ ಮಠಕ್ಕೆ ಬಂದಿದ್ದೇವೆ, ಎಲ್ಲೋ ಒಂದು ಉದ್ಯೋಗ ಮಾಡಬಹುದಾಗಿತ್ತು ಅಂತ ಎಷ್ಟೋ ಸಾರಿ ಅಂದುಕೊಂಡಿದ್ದುಂಟು.
ಪಟ್ಟಾಧಿಕಾರಿ ಆದ ಸಂದರ್ಭದಲ್ಲಿ ಸಾಣೇಹಳ್ಳಿಗಿಂತ ಸಿರಿಗೆರೆಯಲ್ಲೇ ಹೆಚ್ಚು ಇದ್ದದ್ದು. ನಮ್ಮ ಹಿರಿಯ ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಡಾ. ಜಗದ್ಗುರುಗಳಿಗೆ, ನಮಗೆ ಹಾಗೂ ಮರುಳಸಿದ್ಧಯ್ಯನವರಿಗೆ ಒಂದೊಂದು ಕೆಲಸದ ಜವಾಬ್ದಾರಿಯನ್ನು ಕೊಟ್ಟರು. ಅವರು ಕೊಟ್ಟ ಜವಾಬ್ದಾರಿಯನ್ನು ಕಾಯಾ, ವಾಚಾ, ಮನಸ್ಸಿನಿಂದ ಮಾಡ್ತಾ ಬಂದ್ವಿ.
ಕ್ರಮೇಣ ಸಾಣೇಹಳ್ಳಿ ಹಾಗೂ ಸುತ್ತಮುತ್ತ ಜನರಲ್ಲಿ ಜಾಗೃತಿ ಉಂಟಾಯಿತು. ಸಾರ್ವಜನಿಕರು ಸಹಕಾರವನ್ನು ನೀಡೋದಕ್ಕೆ ಪ್ರಾರಂಭ ಮಾಡಿದ್ರು. ಆಗ ಯೋಚನೆ ಮಾಡಿದ್ದು ಸಾಣೇಹಳ್ಳಿಯಲ್ಲಿ ಹೈಸ್ಕೂಲ್ ಕಟ್ಟಡ ಕಟ್ಟಬೇಕು ಅಂತ. ಈ ಭಾಗದ ಎಲ್ಲ ಮುಖಂಡರ ಪರಿಚಯ ನಮಗೆ ಇರಲಿಲ್ಲ. ಒಂದು ಸಭೆ ಕರೆದ್ವಿ. ನೂರಾರು ಜನ ಆ ಸಭೆಯಲ್ಲಿ ಭಾಗವಹಿಸಿದ್ದರು.
ಇಲ್ಲೊಂದು ಹೈಸ್ಕೂಲ್ ಕಟ್ಟಡಕಟ್ಟಬೇಕು ಅಂತ ಇದ್ದೇವೆ. ಯಾರ‍್ಯಾರು ಎಷ್ಟೆಷ್ಟು ಆರ್ಥಿಕ ನೆರವು ನೀಡ್ತೀರಿ ಅಂತ ಕೇಳಿದ್ವಿ. ಆಗ ಐದುನೂರು, ಸಾವಿರ ಇದೇ ದೊಡ್ಡ ಮೊತ್ತ. ಆಗ ಆ ಸಭೆಯಲ್ಲಿ ವಾಗ್ಧಾನ ಆಗಿದ್ದು ನಲವತ್ತು ಸಾವಿರ ರೂಪಾಯಿ. ಅದುವರೆಗೂ ನಾವು ನಾಲ್ಕು ರೂಪಾಯಿ ನೋಡಿದವರಲ್ಲ. ಇದ್ದಕ್ಕಿದ್ದಂತೆ ನಲವತ್ತು ಸಾವಿರ ವಾಗ್ಧಾನ ಆದಾಗ ಇಲ್ಲಿ ಏನು ಬೇಕಾದರೂ ಅಭಿವೃದ್ಧಿಯ ಕಾರ್ಯಗಳು ಮಾಡಬಹುದು ಎನ್ನುವ ಧೈರ್ಯ, ಮನೋಸ್ಥೈರ್ಯ, ಆತ್ಮವಿಶ್ವಾಸ ಮೂಡಿತು. ಅಲ್ಲಿಂದ ಮುಂದೆ ಸಾಣೇಹಳ್ಳಿಯಲ್ಲಿ ಒಂದೊಂದೇ ಕೆಲಸಕಾರ್ಯಗಳು ಪ್ರಾರಂಭ ಆದ್ವು.
ನಮಗೆ ಪಟ್ಟಾಧಿಕಾರ ಆಗಿ ನಲವತ್ತೆಂಟು ವರ್ಷ ಆಗಿದೆ ಅಂತ ನಮಗೇ ಗೊತ್ತಿಲ್ಲ. ಇವತ್ತು ಬೆಳಗ್ಗೆ ಗೊತ್ತಾಯಿತು. ನಮಗೆ ಎಷ್ಟು ವರ್ಷ ಆಗಿದೆ ಎನ್ನುವುದು ಮುಖ್ಯವಲ್ಲ. ಅಷ್ಟು ವರ್ಷಗಳಲ್ಲಿ ಏನು ಮಾಡಿದ್ದೇವೆ ಎನ್ನುವುದನ್ನು ನಮಗೆ ನಾವೇ ಆತ್ಮಾವಲೋಕನ ಮಾಡಿಕೊಳ್ಳಬೇಕು.
ಸ್ವಾಮಿಗಳಾಗಿ ನಲವತ್ತೆಂಟು ವರ್ಷ. ನಾವು ಈ ಲೋಕಕ್ಕೆ ಬಂದು ಎಪ್ಪತ್ತೈದು ವರ್ಷ. ಎಪ್ಪತ್ತೈದು ವರ್ಷಗಳಲ್ಲಿ ಮಾಡಿರುವಂಥ ಕೆಲಸ ನಗಣ್ಯ ಅಂತ ನಾವು ಭಾವಿಸಿಕೊಂಡಿದ್ದೇವೆ.
ಸ್ವಾಮಿ ವಿವೇಕಾನಂದರು, ಮಹಾತ್ಮ ಗಾಂಧೀಜಿ, ೧೨ನೆಯ ಶತಮಾನದ ಬಸವಾದಿ ಶಿವಶರಣರು ಇವರೆಲ್ಲಾ ಅತ್ಯಂತ ಕಡಿಮೆ ಅವಧಿಯಲ್ಲಿ ಅದ್ಭುತವಾದ ಸಾಧನೆ ಮಾಡಿದ್ದಾರೆ. ಅದಕ್ಕೆ ಅವರಿಗೆ ಇದ್ದದ್ದು ಮನೋಬಲ ಹಾಗೂ ಛಲ. ಹಾಗೆಯೇ ಇಲ್ಲಿಯೂ ಸಾರ್ವಜನಿಕರ ಸಹಕಾರ ನಮ್ಮ ಹಿರಿಯ ತರಳಬಾಳು ಜಗದ್ಗುರುಗಳ ಪ್ರೋತ್ಸಾಹ ಹಾಗೂ ನಮಗೆ ಏನಾದರೂ ಮಾಡಬೇಕು ಎನ್ನುವಂಥ ಮನೋಬಲ ಇವುಗಳ ಕಾರಣದಿಂದ ಏನೋ ಅಲ್ಪಸ್ವಲ್ಪ ಕಾರ್ಯಗಳು ಮಾಡುತ್ತಾ ಬಂದಿದ್ದೇವೆ ಎಂದು ಸ್ವಾಮೀಜಿ ಹೇಳಿದರು.
ಈ ಸಂದರ್ಭದಲ್ಲಿ ರಂಗಕರ್ಮಿ ನಟರಾಜ ಹೊನ್ನವಳ್ಳಿ ಮಾತನಾಡಿ; ಇಡೀ ಕರ್ನಾಟಕದಲ್ಲಿ ವೈಚಾರಿಕ ಸ್ವಾಮಿಗಳು ಯಾರಾದರು ಇದ್ದರೆ ಪಂಡಿತಾರಾಧ್ಯ ಸ್ವಾಮಿಗಳು ಮಾತ್ರ. ನಾನು ಯಾವುದೇ ಮಠಗಳಿಗೆ ಹೋದವನಲ್ಲ. ಆದರೆ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ರಂಗಭೂಮಿಯ ಮೂಲಕ ಸದಾ ವೈಚಾರಿಕ ಚಿಂತನೆ ಮಾಡುತ್ತಿದ್ದಾರೆ. ಇದು ನನ್ನನ್ನು ಮಠದ ಕಡೆ ಸೆಳೆಯುವಂತಾಯಿತು ಎಂದರು.
ರಂಗಶಾಲೆಯ ಪ್ರಾಚಾರ್ಯ ರಘು ಪುರಪ್ಪೇಮನೆ ಮಾತನಾಡಿ, ಪಂಡಿತಾರಾಧ್ಯ ಸ್ವಾಮಿಗಳವರು ತಾಯಿ ಹೃದಯದವರು. ಅವರೆಂದು ನಕರಾತ್ಮಕ ಚಿಂತನೆ ಮಾಡಿದವರಲ್ಲ. ಆದ್ದರಿಂದಲೇ ಅತ್ಯಂತ ಕಡಿಮೆ ಅವಧಿಯಲ್ಲಿ ಇಷ್ಟೆಲ್ಲಾ ಸಾಧಿಸಲು ಕಾರಣವಾಯಿತು ಎಂದರು.
ಶಿವಕುಮಾರ ಕಲಾಸಂಘದ ಸದಸ್ಯ ಸಾ.ನಿ. ರವಿಕುಮಾರ ಮಾತನಾಡಿ; ನನಗೆ ಪಂಡಿತಾರಾಧ್ಯ ಶ್ರೀಗಳ ಒಡನಾಟ ಕಳೆದ ೪೦ ವರ್ಷಗಳಿಂದ ನಿರಂತರವಾಗಿ ಇದೆ. ನಾನು ಪರಮಪೂಜ್ಯರ ಆಶೀರ್ವಾದದಿಂದ ಮನುಷ್ಯನಾಗಿದ್ದೇನೆ. ಪೂಜ್ಯರ ಬಗ್ಗೆ ಹೆಚ್ಚು ಮಾತನಾಡಬೇಕೆಂದು ಅನಿಸುವುದಿಲ್ಲ. ಕಾರಣ ಪೂಜ್ಯರ ಸಾಧನೆಗಳೆ ಸಾಣೇಹಳ್ಳಿಯಲ್ಲಿ ಮಾತನಾಡುತ್ತಿವೆ ಎಂದರು.
ಮುಖ್ಯ ಶಿಕ್ಷಕ ಶಿವಕುಮಾರ ಬಿ. ಎಸ್. ನಿರೂಪಿಸಿದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಬಸವರಾಜ, ರಂಗಶಾಲೆಯ ಶಿಕ್ಷಕಿ ಸಂಗೀತ ಬಿಡೇ, ಎಲ್. ಷಣ್ಮುಖಯ್ಯ ಹಾಗೂ ರಂಗಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

