ಸಿರಿಗೆರೆ, ಸಾಣೇಹಳ್ಳಿ ಶ್ರೀ ಒಗ್ಗೂಡಿಸಲು ಹಿಂದುಳಿದ ಮಠಾಧೀಶರ ಪ್ರಯತ್ನ

ಬಸವ ಮೀಡಿಯಾ
ಬಸವ ಮೀಡಿಯಾ

ಹೊಸದುರ್ಗ

“ಹಿಂದುಳಿದ ದಲಿತ ಮಠಾಧೀಶರ ಒಕ್ಕೂಟದಿಂದ ಸಿರಿಗೆರೆ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಸಾಣೇಹಳ್ಳಿ ಸ್ವಾಮೀಜಿಯನ್ನು ಒಗ್ಗೂಡಿಸಿಬೇಕೆಂದು ಪ್ರಯತ್ನ ಪಡುತ್ತಿದ್ದೇವೆ,” ಎಂದು ಕುಂಚಿಟಿಗ ಮಠದ ಪೂಜ್ಯ ಶಾಂತವೀರ ಸ್ವಾಮೀಜಿ ಬುಧವಾರ ಹೇಳಿದರು.

ಸಾಣೇಹಳ್ಳಿಯಲ್ಲಿ ಆಯೋಜಿಸಿದ್ದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 34ನೇ ಶ್ರದ್ಧಾಂಜಲಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

“ತಳಸಮುದಾಯದ ಮಠಗಳಿಗೆ ತರಳಬಾಳು ಮಠ ಸ್ಫೂರ್ತಿ. ಈ ಮಠಗಳು ರಾಜ್ಯ ಹೆದ್ದಾರಿಯಂತಿರಬೇಕು. ವಿವಿಧ ಮಠಾಧೀಶರಿಗೆ ದಾರಿ ತೋರಬೇಕು. ಕವಲುದಾರಿಯಾಗಬಾರದು. ಇಬ್ಬರೂ ಸ್ವಾಮೀಜಿಗಳನ್ನು ಒಂದೇ ವೇದಿಕೆಯಲ್ಲಿ ನೋಡುವಂತಾಗಬೇಕು,’ ಎಂಬ ಆಶಯ ಕುಂಚಿಟಿಗ ಶ್ರೀ ವ್ಯಕ್ತಪಡಿಸಿದರು.

ಇದಕ್ಕೆ ಸ್ಪಂದಿಸಿದ ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ “ನಮ್ಮ ತಪ್ಪುಗಳಿದ್ದರೆ ತಿದ್ದಿಕೊಳ್ಳಲು ತಯಾರಿದ್ದೇವೆ. ಮುಖಂಡರೊಂದಿಗೆ ಶೀಘ್ರದಲ್ಲೇ ಸಿರಿಗೆರೆ ಮಠಕ್ಕೆ ಭೇಟಿ ನೀಡಿ, ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರನ್ನು ನಾಟಕೋತ್ಸವಕ್ಕೆ ಆಹ್ವಾನಿಸಲಾಗುವುದು,” ಎಂದು ಹೇಳಿದರು.

‘ಬಡ್ಡಿ ವ್ಯವಹಾರ, ಬೇರೆಯವರ ಹೆಸರಿನಲ್ಲಿ ಜಮೀನು ಖರೀದಿ ಸೇರಿದಂತೆ ನನ್ನ ಮೇಲೆ ಹಲವು ಆರೋಪಗಳಿವೆ. ನಾನು ಯಾವುದೇ ಅವ್ಯವಹಾರ ಮಾಡಿಲ್ಲ. ಪ್ರಾಮಾಣಿಕವಾಗಿ ಮಠಕ್ಕೆ ದುಡಿದಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

“ಕಳೆದ 4 ವರ್ಷಗಳಿಂದಲೇ ಮಠಕ್ಕೆ ಉತ್ತರಾಧಿಕಾರಿ ನೇಮಿಸುವಂತೆ ಭಕ್ತರಿಗೆ ಹೇಳುತ್ತಾ ಬಂದಿದ್ದೇನೆ. ಆರೋಗ್ಯದಲ್ಲೂ ಏರುಪೇರು ಆಗುತ್ತಿದೆ. ಸಿರಿಗೆರೆ ಮಠಕ್ಕೆ ಯಾವಾಗಾಲಾದರೂ ಉತ್ತರಾಧಿಕಾರಿ ನೇಮಕವಾಗಲಿ, ಆದರೆ ತಕ್ಷಣ ಸಾಣೇಹಳ್ಳಿಗೆ ಉತ್ತರಾಧಿಕಾರಿ ನೇಮಿಸಿ. ಅವರಿಗೆ ಮಠದ ಆಗುಹೋಗುಗಳ ಬಗ್ಗೆ, ಸಮಾಜದ ಬಗ್ಗೆ ತರಬೇತಿ ನೀಡಬೇಕು,” ಎಂದು ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

“ಪಂಡಿತಾರಾಧ್ಯ ಸ್ವಾಮೀಜಿ 40 ವರ್ಷ ಪೀಠ ಅಲಂಕರಿಸಿ, ಸುಟ್ಟ ಬಟ್ಟೆಯಂತಿದ್ದ ಪೀಠವನ್ನು ಉಡುವ ಬಟ್ಟೆಯಂತೆ ಮಾಡಿದ್ದಾರೆ. ಅವರ ತತ್ವಾದರ್ಶಗಳನ್ನು ಮಾತು ಮತ್ತು ಕೃತಿಯಲ್ಲಿ ಅಳವಡಿಸಿಕೊಂಡು ಸ್ವಾಸ್ಥ್ಯ ಸಮಾಜ ನಿರ್ಮಿಸೋಣ,” ಎಂದು ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಹೇಳಿದರು.

ಭಗೀರಥ ಗುರುಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ, ಯಳನಾಡು ಮಹಾಸಂಸ್ಥಾನದ ಜ್ಞಾನಪ್ರಭು ಸಿದ್ಧರಾಮ ದೇಶಿಕೇಂದ್ರ ಸ್ವಾಮೀಜಿ, ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ, ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಶಂಕರ್ ಬಿದರಿ, ಉಪಾಧ್ಯಕ್ಷ ಅಣಬೇರು ರಾಜಣ್ಣ, ಶಾಸಕ ಬಿ‌.ಜಿ. ಗೋವಿಂದಪ್ಪ, ಆಕಾಶವಾಣಿ ನಿವೃತ್ತ ನಿರ್ದೇಶಕ ಬಸವರಾಜ ಸಾದರ, ಚಿಂತಕ ಚಟ್ನಳ್ಳಿ ಮಹೇಶ್, ಮುಖಂಡರಾದ ಎಸ್. ರುದ್ರೇಗೌಡ, ಬಿ.ಸಿ. ಪಾಟೀಲ್, ವಡ್ನಾಳ್ ರಾಜಣ್ಣ, ಡಿ.ಎಸ್. ಸುರೇಶ್, ಡಿ.ಜಿ. ಬೆನಕಪ್ಪ, ಕೆ.ಸಿದ್ದಪ್ಪ, ಮಲ್ಲೇಶಪ್ಪ ಅರಕೆರೆ, ಹನುಮಲಿ ಷಣ್ಮುಖಪ್ಪ, ಧನಂಜಯ್ ಸರ್ಜಿ, ಎಚ್. ಓಂಕಾರಪ್ಪ, ಜೆ.ಆರ್. ಷಣ್ಮುಖಪ್ಪ ಸೇರಿದಂತೆ ರಾಜಕೀಯ ಮುಖಂಡರು, ಸಮಾಜದ ಬಂಧುಗಳು ಹಾಗೂ ಭಕ್ತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/BvguxN7Z0AG9g7Il7l5Lzh

Share This Article
1 Comment
  • ತುಂಬಾ ಒಳ್ಳೆಯ ಪ್ರಯತ್ನ ಮತ್ತು ಅವರ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂದು ಆಶಿಸುತ್ತೇನೆ 🌹🙏

Leave a Reply

Your email address will not be published. Required fields are marked *