ಕಲಬುರಗಿ
ನೀವು ಸಂಘ ಪರಿವಾರದ ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಹೋಗುವುದಾದರೆ ನಮಗೆ ವಿಷಕೊಟ್ಟು ಹೋಗಿ. ಬಸವಣ್ಣನ ಪರವಾಗಿ ಇರುವ ಸ್ವಾಮೀಜಿಗಳು ಫ್ಯಾಸಿಸ್ಟರ್ ಜತೆಗೆ ಇರಬಾರದು. ಅವರೊಂದಿಗೆ ಹೋಗಬಾರದು, ಎಂದು ಚಿಂತಕ ಪ್ರೊ. ಆರ್.ಕೆ.ಹುಡಗಿ ಹೇಳಿದರು.
ಕಲಬುರಗಿಯಲ್ಲಿ ರವಿವಾರ ನಡೆದ ಬಹುತ್ವ ಸಂಸ್ಕೃತಿ ಭಾರತೋತ್ಸವದ ಬಹಿರಂಗ ಸಮಾವೇಶದಲ್ಲಿ ಪ್ರೊ. ಆರ್.ಕೆ.ಹುಡಗಿ ಮಾತನಾಡಿದರು.
‘ಸಂಘ ಪರಿವಾರದ ಸಂಸ್ಕೃತಿ ಉತ್ಸವದ ಆಮಂತ್ರಣ ಪತ್ರಿಕೆಯಲ್ಲಿ 22 ಮಂದಿ ವಿರಕ್ತ ಮಠಾಧೀಶರ, 11 ಮಂದಿ ಪಟ್ಟದೇವರ, 19 ಮಂದಿ ಲಿಂಗಾಯತ ನಾಯಕರ, 13 ಮಂದಿ ಲಿಂಗಾಯತ ಉದ್ಯಮಿಗಳ ಹಾಗೂ ನಾಲ್ವರು ಮುಸ್ಲಿಂ ನಾಯಕರ ಹೆಸರುಗಳಿವೆ. ಅವರ್‍ಯಾರೂ ರಾಷ್ಟ್ರೀಯ ಸರ್ವನಾಶ ಸಂಘಟನೆಗೆ ಸಹಕಾರ ನೀಡಬಾರದು. ಆರೆಸ್ಸೆಸ್ ಎನ್ನುವುದು ರಾಷ್ಟ್ರೀಯ ಸರ್ವನಾಶ ಸಂಘಟನೆಯಾಗಿದೆ, ಇವರು ನಮ್ಮ ಬಹುತ್ವವನ್ನು ನಾಶಮಾಡಲು ಮುಂದಾಗಿದ್ದಾರೆ’ ಎಂದರು.
ಕಲಬುರಗಿಯ ಬಹುತ್ವ ಸಂಸ್ಕೃತಿ ಭಾರತೋತ್ಸವದಲ್ಲಿ ಶರಣ ಸಮಾಜದ ಹತ್ತು ಗುರುಗಳು ಸಮಾವೇಶದಲ್ಲಿ ಭಾಗವಹಿಸಿ ಬೆಂಬಲ ನೀಡಿದರು: ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ, ಪೂಜ್ಯ ಚನ್ನಬಸವ ಪಟ್ಟದೇವರು, ಪೂಜ್ಯ ಕೊರಣೇಶ್ವರ ಸ್ವಾಮೀಜಿ, ಪೂಜ್ಯ ಚನ್ನಬಸವಾನಂದ ಸ್ವಾಮೀಜಿ, ಪೂಜ್ಯ ಬಸವ ಪ್ರಭು ಸ್ವಾಮೀಜಿ, ಪೂಜ್ಯ ವೀರತಿಶಾನಂದ ಸ್ವಾಮೀಜಿ, ಪೂಜ್ಯ ಬಸವಲಿಂಗ ಶರಣರು, ಪೂಜ್ಯ ಗಂಗಾಂಬಿಕೆ ಅಕ್ಕಾ, ಓಂಕಾರೇಶ್ವರ ಸ್ವಾಮೀಜಿ, ಪೂಜ್ಯ ದಾಕ್ಷಾಯಿಣಿ ಶರಣಬಸವಪ್ಪಾ ಅಪ್ಪಾ.

ಗದಗಿನ ಮತ್ತು ಇಳಕಲ್ ಶ್ರೀಗಳು ಕಾರಣಾಂತರದಿಂದ ಕಾರ್ಯಕ್ರಮಕ್ಕೆ ಬರಲಾಗದೆ ತಮ್ಮ ಪ್ರತಿನಿಧಿಗಳನ್ನು ಕಳಿಸಿದ್ದರು.
ಲಡಾಯಿ ಪ್ರಕಾಶನದ ಬಸೂ ಮಾತನಾಡಿ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಹೆಸರಿರುವ ಮಠಾಧೀಶರು ಭಾಗವಹಿಸುವುದಿಲ್ಲ ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಹಿಂದುತ್ವದ ಹೆಸರಲ್ಲಿ ಲಿಂಗಾಯತರನ್ನು ಖೆಡ್ಡಾಕೆ ಬೀಳಿಸುವ ಹುನ್ನಾರ ನಡೆಯುತ್ತಿದೆ. ಯುವಕರು ಇವರು ತೋಡಿದ ಖೆಡ್ಡಾಕೆ ಬೀಳುತ್ತಿದ್ದಾರೆ. ಸಂಸ್ಕೃತಿ ಹೆಸರಲ್ಲಿ ಕಾಡ್ಗಿಚ್ಚು ಹಚ್ಚಲಾಗಿದೆ. ಇದಕ್ಕೆ ನೀರು ಎರಚಬೇಕಾಗಿದೆ, ಎಂದು ಹೇಳಿದರು.
ಬಸವಕಲ್ಯಾಣದಲ್ಲಿ ಕಾಯಕ ಜೀವಿಗಳ ಮಕ್ಕಳ ಕೈಗೆ ಕತ್ತಿ, ತ್ರಿಶೂಲ, ಲಾಠಿ, ನೀಡಿ ಸ್ವಾಮಿಗಳ ಮೇಲೆ ಮನಬದಂತೆ ಸಾಮಾಜಿಕ ಜಾಲತಾಣದಲ್ಲಿ ನಿಂದನಾತ್ಮಕ ದಾಳಿ ನಡೆಸೆಟ್ಟಿದ್ದಾರೆ. ಬಹುತ್ವವನ್ನು ಹಾಳು ಮಾಡಿ ಏಕ ಸಂಸ್ಕೃತಿ ಹೆರಲಾಗುತ್ತಿದೆ ಇದನ್ನ ಖಂಡಿಸಬೇಕೆಂದು ಕೋರಣೇಶ್ವರ ಮಹಾಸ್ವಾಮಿಗಳು ಒತ್ತಾಯಿಸಿದರು.
ಭಾರತೀಯ ಸಮಾಜವನ್ನು ಧರ್ಮದ ವ್ಯವಸ್ಥೆಯಲ್ಲಿ ವಿಭಾಗಿಸಿ ಬಹು ಸಮಾಜದ ಮೇಲೆ ಶೋಷಣಕಾರಿಗಳು ಅನ್ಯಾಯ ಎಸಗಿದ್ದಾರೆ ಎಂದು ಬೀದರ್ ನ ಗಂಗಾಂಬಿಕಾ ಅಕ್ಕ ಹೇಳಿದರು.
