ಸರ್ಪಭೂಷಣ ಶಿವಯೋಗಿಗಳ ಕೈವಲ್ಯ ಕಲ್ಪವರಿಯ ಗ್ರಂಥ – ಭಾಗ 2

ಸುಧಾ ಪಾಟೀಲ್
ಸುಧಾ ಪಾಟೀಲ್

ಶರಣ ಶ್ರೀಧರ ಮುರಾಳೆ ಅವರು ಶಿವಯೋಗ ಸಾಧನೆಯ ಯೋಗ ಪ್ರತಿಪಾದನಾ ಸ್ಥಲದ ಮುಂದುವರೆದ ಭಾಗದಲ್ಲಿ ಬ್ರಹ್ಮನಾಡಿಯನ್ನು ಹೇಗೆ ಪ್ರವೇಶಿಸಬೇಕು ಎನ್ನುವುದನ್ನು ಹೇಳುತ್ತಾ, ತಮ್ಮ ಉಪನ್ಯಾಸ ಪ್ರಾರಂಭ ಮಾಡಿದರು.

ಇಂದ್ರಿಯ ವಿಷಯಗಳಿಂದ ಹಿಂದೆ ಸರಿದು, ಮನಸ್ಸಿನ ಏಕಾಗ್ರಚಿತ್ತದಿಂದ ಇಡಾ ಮತ್ತು ಪಿಂಗಳ ನಾಡಿಗಳ ಮೂಲಕ, ಅಂತರ್ಗತವಾಗಿರುವ ಸುಷುಮ್ನ ದ ಮೂಲಕ, ಬ್ರಹ್ಮನಾಡಿಯನ್ನು ಪ್ರವೇಶ ಮಾಡಬೇಕು, ನಾಲ್ಕು ಹಾದಿಗಳ ನಡುವಣ ಜಾಗದಲ್ಲಿ ಆಜ್ಞಾಚಕ್ರದ ಮಂಟಪದ ವೇದಿಕೆ ಹತ್ತಿದಾಗ ಶಂಖನಾದ, ಭ್ರoಗನಾದ, ವೀಣಾನಾದ, ಮೇಘಗರ್ಜನೆ ಹೀಗೆ ದಶವಿಧದಿ ಪ್ರಣವ ಸ್ವರೂಪ ನಾದ ಕೇಳುತ್ತದೆ ಎನ್ನುವುದನ್ನು ವಿವರಿಸಿದರು.

ಕಣ್ಣುಗುಡ್ಡೆಗಳು ಸ್ಥಿರವಾಗಿ ನಿಲ್ಲಬೇಕು, ವಾಯುವಿನ ಜೊತೆಗೆ ಮನಸ್ಸು ಕೂಡಬೇಕು, ನಾಸಿಕಾಗ್ರದ ನಭೋಲಿಂಗನದಲಿ, ಪರಮಪ್ರಕಾಶ ಗೋಚರವಾಗುತ್ತದೆ, ಎಂದು ಹೇಳುತ್ತಾ ತನು ಎಂಬ ಗರಡಿಯೊಳು ಅನುಭವ ಧೀರರು ಘನಯೋಗ ಸಾಧನೆ ಮಾಡಿರೊ..ಎಂದು ಉಲ್ಲೇಖಿಸುತ್ತ, ಸ್ಥಿರತ್ವ, ಸಮತ್ವ, ಸ್ಥಿರಬುದ್ಧಿಯನ್ನು ಅಳವಡಿಸಿಕೊಂಡು ಹೇಗೆ ಸಾಧನೆಯನ್ನು ಮಾಡಬೇಕು ಎನ್ನುವುದನ್ನು ಹಂಚಿಕೊಂಡರು

ಗುರುಬೋಧೆಯೆoಬ ದಂಡಿಗೆಗಳು, ಪರತತ್ವವೆಂಬ ವಿಚಾರಗಳು, ಅರಿವೆಂಬ ಜ್ಞಾನವನ್ನು ಹೊಂದಿ, ಆದಿಚಿತ್ಕಳೆಯೊಡನೆ ತಿರುಗಬೇಕು, ಇಡಾ ಪಿಂಗಳ ಸುಷುಮ್ನದಿಂದ ಸಹಸ್ರಾರದವರೆಗೆ ತುಟ್ಟತುದಿಗೇರಿ, ಬ್ರಹ್ಮಸಾಧನೆಗೈಯಬೇಕು, ಆಗ ಘನಯೋಗಸಾಧನೆ ಮಾಡಲು ಬರುತ್ತದೆ ಎನ್ನುವುದನ್ನು ತಿಳಿಸಿದರು.

ವೇದ-ಆಗಮ-ಉಪನಿಷತ್ತು ಓದಿ ಹೊಡೆದಾಡುತ್ತೀರಿ ಏಕೆ, ಪಂಚವಾಯು ಮತ್ತು ಪಂಚಕ್ರಿಯೆಯಿಂದ ಪಂಚಾಗ್ನಿ ಮಧ್ಯ ನಿಂತು ಸಾಧನೆ ಮಾಡಬೇಕು.ದೃಷ್ಟಿ, ಮನ ಮತ್ತು ಪವನ ಬೆರೆಸಿ, ಸ್ಥಿರಕಾಯನಾಗಿ ಕುಳಿತು, ಸಾಧನೆ ಮಾಡಿದರೆ ಶಾoಭವಿ ಮುದ್ರೆಯಲ್ಲಿನ ಪರಬಿಂದು ಕಾಣಿಸುತ್ತದೆ ಎಂದು ನಮ್ಮ ಜೊತೆಗೆ ಹಂಚಿಕೊಂಡರು.

ಮಂತ್ರಯೋಗ, ಹಠಯೋಗ, ಲಯಯೋಗ, ರಾಜಯೋಗ ಮತ್ತು ಶಿವಯೋಗದ ಮಹತ್ವವನ್ನು ಹೇಳುತ್ತಾ, ಇಷ್ಟಲಿಂಗ ಯೋಗ, ಭಾವಲಿಂಗಯೋಗ, ಪ್ರಾಣಲಿಂಗ ಯೋಗದ ಬಗೆಗೆ
ಸಾಕಷ್ಟು ವಿಚಾರಗಳನ್ನು ಹೇಳಿ ತಮ್ಮ ಉಪನ್ಯಾಸವನ್ನು ಮುಗಿಸಿದರು.

ಡಾ. ಶಶಿಕಾಂತ ಪಟ್ಟಣ ಅವರು ನಡೆ -ನುಡಿ ಒಂದಾಗಿರಬೇಕು ಎಂದು ಹೇಳುತ್ತಾ, ಇಷ್ಟಲಿಂಗದ ಪರಿಕಲ್ಪನೆಯ ಬಗೆಗೆ ವಿವರಿಸಿ, ಸಾಧನಾಹಂತದ ವಿಕಸಿತಭಾಗವನ್ನು ನಮ್ಮೆಲ್ಲರ ಜೊತೆಗೆ ಹಂಚಿಕೊಳ್ಳುತ್ತ,ತಮ್ಮ ಮಾರ್ಗದರ್ಶನದ ನುಡಿಗಳ ಜೊತೆಗೆ ದತ್ತಿದಾಸೋಹಿಗಳಾದ ಶರಣೆ ಸುಧಾ ಪಾಟೀಲ ಅವರ ಪರಿಚಯವನ್ನು ಮಾಡಿಕೊಟ್ಟರು.

ಶರಣೆ ಪ್ರೇಮಾ ಹೊರಟ್ಟಿ ಅವರ ವಚನ ಪ್ರಾರ್ಥನೆ ಮತ್ತು ಶರಣೆ ವಿದ್ಯಾ ಮುಗ್ದುಮ್ ಅವರ ವಚನ ಮಂಗಳದೊಂದಿಗೆ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು. ಡಾ. ಶಶಿಕಾಂತ ಪಟ್ಟಣ ಸರ್ ಅವರ
ನೇತೃತ್ವದಲ್ಲಿ ಇಂದಿನ ಕಾರ್ಯಕ್ರಮ ನಡೆಯಿತು.

(ವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣೆ ಸುಧಾ ಪಾಟೀಲ ಅವರ ತಂದೆಯವರಾದ ಲಿಂ. ಶರಣ ಬಿ. ಎಂ. ಪಾಟೀಲ ಮತ್ತು ತಾಯಿಯವರಾದ ಲಿಂ. ಶರಣೆ ಅಕ್ಕಮಹಾದೇವಿ ಪಾಟೀಲ ಅವರ ಸ್ಮರಣಾರ್ಥ ನಡೆದ ಶ್ರಾವಣ ಮಾಸದ ದತ್ತಿ ಉಪನ್ಯಾಸದ 22 ನೆಯ ದಿವಸದ ವರದಿ ಆಗಸ್ಟ್ 25.)

Share This Article
Leave a comment

Leave a Reply

Your email address will not be published. Required fields are marked *