ಗಂಗಾವತಿ
ಸೆಪ್ಟೆಂಬರ್ 8ರಂದು ಕೊಪ್ಪಳ ಜಿಲ್ಲೆಯಲ್ಲಿ ನಡೆಯುವ ಬಸವ ಸಂಸ್ಕ್ರತಿ ಅಭಿಯಾನಕ್ಕೆ ಸ್ಥಳೀಯ ಸರ್ವ ಸಮಾಜದವರಿಗೆ ಆಮಂತ್ರಣ ನೀಡುವುದಕ್ಕಾಗಿ ಸೋಮವಾರ ಶ್ರೀ ಕೊಟ್ಟೂರೇಶ್ವರ ದೇವಸ್ಥಾನದಲ್ಲಿ ಸಭೆ ನಡೆಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಲಿಂಗಾಯತ ಸಮಾಜದ ಮುಖಂಡರಾದ ಹೊಸಳ್ಳಿ ಶಂಕ್ರಗೌಡರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಕೊಪ್ಪಳದ ಬಸವರಾಜಪ್ಪ ಬಳ್ಳೊಳ್ಳಿ ಮತ್ತು ಬಸವರಾಜಪ್ಪ ಇಂಜಿನೀಯರ್ ಅವರು ವಹಿಸಿಕೊಂಡಿದ್ದರು.
ಮುಖ್ಯ ಅತಿಥಿಗಳಾಗಿದ್ದ ಬಸವರಾಜಪ್ಪ ಅವರು ಶರಣ ವಿಚಾರಗಳನ್ನು ವಿಸ್ತ್ರೃತವಾಗಿ ಸಭೆಗೆ ತಿಳಿಸಿದರು. ಇನ್ನೋರ್ವ ಮುಖ್ಯ ಅತಿಥಿಗಳಾದ ಬಸವರಾಜಪ್ಪ ಬಳ್ಳೊಳ್ಳಿ ಅವರು ಬಸವ ಸಂಸ್ಕ್ರತಿ ಅಭಿಯಾನದ ರೂಪರೇಷೆಗಳ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಹೊಸಳ್ಳಿ ಶಂಕ್ರಗೌಡರು, ಅಭಿಯಾನಕ್ಕೆ ಗಂಗಾವತಿ ತಾಲೂಕಿನ ಎಲ್ಲಾ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಪ್ರಾಸ್ತಾವಿಕವಾಗಿ ಮಾತಾಡಿದ ಡಾ. ರಾಜಶೇಖರ ನಾರನಾಳ ಅವರು, “ಸಂಸ್ಕ್ರತಿ ಅಂದರೆ ಒಂದು ಸಮುದಾಯ ನಿರ್ದಿಷ್ಟವಾಗಿ ಆಚರಿಸಬೇಕಾದಂತ ಆಚಾರ ಮತ್ತು ವಿಚಾರಗಳಿಗೆ ಸಂಸ್ಕ್ರತಿ ಎನ್ನುವರು. ಬಸವ ಸಂಸ್ಕ್ರತಿಯೆಂದರೆ ಅದು ವಿಶ್ವ ಪ್ರಜ್ಞೆಯ ಸಂಸ್ಕ್ರತಿ. ಇವನಾರವ ಇವನಾರವ ಎಂದೆನಿಸದೆ ಇವ ನಮ್ಮವ ಇವ ನಮ್ಮವ ಎನ್ನುವ ವಿಶ್ವಮಾನವ ಸಂಸ್ಕೃತಿಯಾಗಿದೆ. ಇಂತಹ ವಿಶ್ವ ಮಾನವ ಪ್ರಜ್ಞೆಯ ತತ್ವ ಸಿದ್ದಾಂತಗಳನ್ನು ಇಂದು ಮನೆ ಮನೆಗೆ, ಮನ ಮನಕ್ಕೆ ಮುಟ್ಟಿಸುವ ಸದುದ್ದೇಶದಿಂದ ನಡೆಯುವ ಕಾರ್ಯಕ್ರಮವೆ ಬಸವ ಸಂಸ್ಕ್ರತಿ ಅಭಿಯಾನ. ಈ ಕಾರ್ಯಕ್ರಮದ ಮೂಲ ಆಶಯವೆ ವಿಶ್ವಮಾನವ ಪ್ರಜ್ಞೆ, ಹಾಗಾಗಿ ಈ ಕಾರ್ಯಕ್ರಮದಲ್ಲಿ ಬಸವಣ್ಣನನ್ನು ಅಪ್ಪಿ ಒಪ್ಪಿಕೊಳ್ಳುವ ಮನಸ್ಸುಗಳೆಲ್ಲಾ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗಿಸಬೇಕೆಂದು” ಹೇಳಿದರು.
ಪ್ರಾರ್ಥನೆಯನ್ನು ಕೆ. ಪಂಪಣ್ಣ ಮಾಡಿದರು. ಸ್ವಾಗತವನ್ನು ಬಸವಕೇಂದ್ರದ ಅಧ್ಯಕ್ಷರಾದ ಕೆ. ಬಸವರಾಜ ನೆರವೇರಿಸಿದರು. ಶರಣು ಸಮರ್ಪಣೆಯನ್ನು ಬಸವ ದಳದ ಅಧ್ಯಕ್ಷರಾದ ದಿಲೀಪ್ ಅವರು ನಡೆಸಿಕೊಟ್ಟರು. ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಶೈಲ ಪಟ್ಟಣಶೆಟ್ಟಿಯವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಹೊಸಕೇರಾ, ತಿಪ್ಪಣ್ಣ ಗುಗ್ರಿ, ಶರಬಣ್ಣ ಮಾಸ್ಟರ್, ಶರಣಪ್ಪ ಹೀರೆಜಂತಕಲ್ , ಬಸವ ನೀಲಾಂಬಿಕ ಸಂಸ್ಥೆಯ ರೇಣುಕಮ್ಮ ಮತ್ತು ಇನ್ನಿತರ ಬಸವಪರ ಸಂಘಟನೆಗಳು ಮತ್ತು ಗಂಗಾವತಿಯ ಎಲ್ಲಾ ಬಸವಾಭಿಮಾನಿಗಳು ಭಾಗವಹಿಸಿ ಯಶಸ್ವಿಗೊಳಿಸಿದರು.