ಸಾಣೇಹಳ್ಳಿ
ಜನವರಿ 27ರಿಂದ 30ರ ತನಕ “ನಮ್ಮ ನಡೆ ಸರ್ವೋದಯದೆಡೆಗೆ” ಪಾದಯಾತ್ರೆ ಸಾಣೇಹಳ್ಳಿಯಿಂದ ಸಂತೆಬೆನ್ನೂರಿನ ತನಕ ನಡೆಯಲಿದೆ.
ಪಾದಯಾತ್ರೆಯ ನೇತೃತ್ವವನ್ನು ವಹಿಸಿಕೊಂಡಿರುವ ಪೂಜ್ಯ ಪಂಡಿತಾರಾಧ್ಯ ಸ್ವಾಮೀಜಿ ಈ ಪ್ರಯತ್ನದ ಉದ್ದೇಶ ಮತ್ತು ಪೂರ್ವಸಿದ್ಧತೆಯ ಬಗ್ಗೆ ಬಸವ ಮೀಡಿಯಾದ ಎಚ್ ಎಂ ಸೋಮಶೇಖರಪ್ಪ ಅವರ ಜೊತೆ ಮಾತನಾಡಿದ್ದಾರೆ.
ಶ್ರೀಗಳಿಗೆ 74 ವರ್ಷಗಳಾಗಿದ್ದರೂ ಇಡೀ 75 ಕಿಲೋಮೀಟರುಗಳ ಪಾದಯಾತ್ರೆಯನ್ನು ನಡೆಯಲು ಉತ್ಸಾಹದಿಂದ ಸಿದ್ದರಾಗಿದ್ದಾರೆ. ಬಿಪಿ, ಶುಗರ್ ‘ಬಹುಕಾಲದ ಮಿತ್ರರಂತೆ’ ಇದ್ದರೂ ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ, ಎನ್ನುತ್ತಾರೆ.
`ನಮ್ಮ ನಡೆ ಸರ್ವೋದಯದೆಡೆಗೆ’; ಈ ಕಲ್ಪನೆ ತಮಗೆ ಹೇಗೆ ಬಂತು?
ಪಂಡಿತಾರಾಧ್ಯ ಸ್ವಾಮೀಜಿ: ಈ ಕಲ್ಪನೆ ನಮ್ಮದಲ್ಲ. ಸರ್ವೋದಯ ಸಂಘಟನೆಯ ಹಲವು ಚಿಂತಕರು ಪ್ರತಿ ಬುಧವಾರ ಬೆಳಗ್ಗೆ ಮೊಬೈಲ್‌ನಲ್ಲಿ ಕಾನ್ಫರೆನ್ಸ್ ಕಾಲ್ ಮೂಲಕ ಮಾತನಾಡುತ್ತಿದ್ದರು. ಸರ್ವೋದಯದ ಹಿನ್ನೆಲೆಯಲ್ಲಿ ಏನೇನು ಮಾಡಬಹುದು ಎಂದು ದಾವಣಗೆರೆ, ಕಾರಿಗನೂರು, ಸಾಣೇಹಳ್ಳಿ ಮತ್ತು ಚಾಮರಾಜನಗರದಲ್ಲಿ ಸೇರಿಕೊಂಡು ಚಿಂತನೆ ನಡೆಸಿದ್ದರು. ಚಾಮರಾಜನಗರದಲ್ಲಿ ನಾವು ಸಹ ಭಾಗವಹಿಸಿದ್ದೆವು.
ಆಗ ಶ್ರೀ ಜಿ ಎಸ್ ಜಯದೇವ ಅವರು ಚರ್ಚೆಯಲ್ಲೇ ಕಾಲ ಕಳೆಯಬಾರದು. ಮಾತನ್ನು ಕೃತಿಗಿಳಿಸಲು ಗಾಂಧೀಜಿಯವರ ಅಸ್ತ್ರವಾದ ಪಾದಯಾತ್ರೆಯನ್ನು ನಾವೂ ಮಾಡಬಾರದೇಕೆ ಎಂದರು. ಅದಕ್ಕೆ ಅಲ್ಲಿದ್ದ ೪೦-೫೦ ಚಿಂತಕರು ಒಪ್ಪಿ ಆರಂಭದಲ್ಲಿ ಸಾಣೇಹಳ್ಳಿಯಿಂದ ಸಂತೆಬೆನ್ನೂರಿಗೆ ಪಾದಯಾತ್ರೆ ಮಾಡೋಣ ಎಂದರು. ಅದಕ್ಕೆ ಅವರು ನೀಡಿದ ಕಾರಣ ಸಾಣೇಹಳ್ಳಿ ಕಲೆ, ಸಾಹಿತ್ಯ, ಧರ್ಮ, ಸಂಸ್ಕೃತಿಯ ಕೇಂದ್ರ; ಸಂತೆಬೆನ್ನೂರು ಐತಿಹಾಸಿಕ ಕ್ಷೇತ್ರ ಎನ್ನುವುದಾಗಿತ್ತು.
ಸಾಣೇಹಳ್ಳಿ ಕಲೆ, ಸಾಹಿತ್ಯ, ಧರ್ಮ, ಸಂಸ್ಕೃತಿಯ ಕೇಂದ್ರ; ಸಂತೆಬೆನ್ನೂರು ಐತಿಹಾಸಿಕ ಕ್ಷೇತ್ರ
ಪಾದಯಾತ್ರೆಯ ಮಾರ್ಗದಲ್ಲಿ ತಮ್ಮ ನಿರೀಕ್ಷೆ ಮತ್ತು ಚಟುವಟಿಕೆಗಳು ಹಾಗೂ ಜನರ ಪ್ರತಿಕ್ರಿಯೆಗಳು ಏನಿರಬಹುದು?
ಪಂಡಿತರಾಧ್ಯ ಸ್ವಾಮೀಜಿ: ಪಾದಯಾತ್ರೆಯ ಹಿಂದಿನ ಮುಖ್ಯ ವಿಷಯಗಳು: ಪರಿಸರ, ಕೃಷಿ, ಆರೋಗ್ಯ, ಶಿಕ್ಷಣ ಮತ್ತು ರಾಜಕಾರಣ. ಇವುಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು; ವ್ಯಕ್ತಿಗತ ಬದಲಾವಣೆಗೆ ಒತ್ತು ಕೊಡಬೇಕು ಎನ್ನುವುದು ನಮ್ಮ ನಿರೀಕ್ಷೆ. ಇದಕ್ಕೆ ಪೂರಕವಾದ ಚಟುವಟಿಕೆಗಳು ಎಂದರೆ ಈ ವಿಷಯಗಳನ್ನು ತಿಳಿಸುವ ಹಾಡು, `ಒಕ್ಕಲಿಗ ಒಕ್ಕಿದರೆ ಜಗವೆಲ್ಲ ನಕ್ಕೀತು’ ಎನ್ನುವ ಬೀದಿ ನಾಟಕ ಮಾಡಿಸುವುದು. ಇಬ್ಬರು ಸಾಧಕರಿಂದ ಸಂಬಂಧಿಸಿದ ವಿಷಯಗಳ ಮೇಲೆ ಉಪನ್ಯಾಸ ನೀಡಿಸುವುದು.
ಈಗಾಗಲೇ ಸಾರ್ವಜನಿಕರಿಂದ ಪಾದಯಾತ್ರೆಗೆ ಅತ್ಯುತ್ತಮ ಪ್ರತಿಕ್ರಿಯೆ ಬರುತ್ತಿದೆ. ನಾವೂ ಇದರಲ್ಲಿ ಭಾಗವಹಿಸುತ್ತೇವೆ ಎಂದು ಹೇಳಿದ್ದಾರೆ. ಪಾದಯಾತ್ರೆಯ ಮಾರ್ಗ ಮತ್ತು ಅಕ್ಕಪಕ್ಕದ ಗ್ರಾಮಗಳಲ್ಲಿ ಸಭೆ ಕರೆದು ತಾವು ಇದಕ್ಕೆ ಹೇಗೆ ಪ್ರೋತ್ಸಾಹ ನೀಡಬಹುದು ಎಂದು ಚರ್ಚೆ ನಡೆಸುತ್ತಿದ್ದಾರೆ.
ಈಗಾಗಲೇ ಸಾರ್ವಜನಿಕರಿಂದ ಪಾದಯಾತ್ರೆಗೆ ಅತ್ಯುತ್ತಮ ಪ್ರತಿಕ್ರಿಯೆ ಬರುತ್ತಿದೆ.
ಪಾದಯಾತ್ರೆಯನ್ನು ಹೇಗೆ ಆಯೋಜಿಸುತ್ತಿದ್ದೀರಿ? ಬೇರೆ ಬೇರೆ ಸಂಸ್ಥೆಗಳು ಭಾಗಿಯಾಗಲಿವೆಯೇ? ಎಷ್ಟು ಜನ ಕಾರ್ಯಕರ್ತರಿರುತ್ತಾರೆ?
ಪಂಡಿತರಾಧ್ಯ ಸ್ವಾಮೀಜಿ: ಐದು ವಿಷಯಗಳ ಸಾಧಕ ಬಾಧಕ ಕುರಿತಂತೆ ಒಂದು ಪ್ರಚಾರ ವಾಹನ ಇರುತ್ತದೆ. ಗಾಂಧಿ, ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು ಹಾಗೂ ನಮ್ಮ ಹಿರಿಯ ಗುರುಗಳ ಪ್ರತಿಮೆಗಳು ವಾಹನದಲ್ಲಿರುತ್ತವೆ. ಸಂಸ್ಥೆಗಳು ಎನ್ನುವುದಕ್ಕಿಂತ ಅಧ್ಯಾಪಕರು, ಸ್ವಾಮಿಗಳು, ಸರ್ವೋದಯ ಸಂಘಟಕರು, ಜನಪರ ಕಾಳಜಿಯುಳ್ಳ ಆಸಕ್ತರು ತಾವಾಗಿಯೇ ಭಾಗವಹಿಸಲಿದ್ದಾರೆ. ಬೀದಿನಾಟಕ, ಹೋರಾಟ ಗೀತೆ ಹಾಡುವ ನಮ್ಮ ಕಾರ್ಯಕರ್ತರೇ ಸುಮಾರು ೩೦ ಜನರಿರುತ್ತಾರೆ. ಇದರಲ್ಲಿ ಮೈಕ್ ಇತ್ಯಾದಿ ತಂತ್ರಜ್ಞರು ಸಹ ಸೇರಿದ್ದಾರೆ.
ತಾವು ನಾಲ್ಕು ದಿನಗಳಲ್ಲೂ ಪಾದಯಾತ್ರೆಯಲ್ಲಿ ನಡೆಯುತ್ತೀರಾ? ತಮಗೀಗ ೭೪ ವಯಸ್ಸು. ವಯೋಸಹಜ ಸಮಸ್ಯೆಗಳನ್ನು ಹೇಗೆ ಎದುರಿಸುತ್ತೀರಿ? ದೈಹಿಕ, ಮಾನಸಿಕ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳುತ್ತೀರಿ?
ಪಂಡಿತರಾಧ್ಯ ಸ್ವಾಮೀಜಿ: ನಾಲ್ಕೂ ದಿನ ಕಾಲ್ನಡಿಗೆಯ ಮೂಲಕವೇ ಗುರಿ ತಲುಪುವ ಸಂಕಲ್ಪವಿದೆ. ವಯೋಸಹಜ ಕಾಯಿಲೆಗಳೇನೂ ಇಲ್ಲ. ಬಿಪಿ, ಶುಗರ್ ಬಹುಕಾಲದ ನಮ್ಮ ಮಿತ್ರರಂತಿವೆ. ಸೂಕ್ತ ಚಿಕಿತ್ಸೆ ಪಡೆಯುತ್ತಿರುವುದರಿಂದ ಅವು ನಮ್ಮ ಆರೋಗ್ಯದ ಮೇಲೆ ಹೆಚ್ಚಿನ ದುಷ್ಟಪರಿಣಾಮ ಬೀರಿಲ್ಲ. ಆದರೆ ದಿನಕ್ಕೆ ೨೨ ಕಿ ಮಿ ನಡೆಯಲು ತಮ್ಮಿಂದ ಅಸಾಧ್ಯ ಎಂದು ಹೆದರಿಸುತ್ತಿದ್ದಾರೆ. ಮನಸ್ಸು ಮಾಡಿದರೆ ಅಸಾಧ್ಯ ಎನ್ನುವುದಿಲ್ಲ. ಸಧ್ಯಕ್ಕಂತೂ ದೈಹಿಕ ಮತ್ತು ಮಾನಸಿಕ ಆರೋಗ್ಯ ಚನ್ನಾಗಿಯೇ ಇದೆ. ಅದೇ ನಮ್ಮ ನಡಿಗೆಗೆ ಸ್ಪೂರ್ತಿ. ಆ ಸ್ಪೂರ್ತಿಯೇ ದೈಹಿಕ, ಮಾನಸಿಕ ಆರೋಗ್ಯವನ್ನೂ ಕಾಪಾಡುತ್ತದೆ ಎನ್ನುವ ವಿಶ್ವಾಸ ನಮಗಿದೆ.
ದಿನಕ್ಕೆ ೨೨ ಕಿ ಮಿ ನಡೆಯಲು ತಮ್ಮಿಂದ ಅಸಾಧ್ಯ ಎಂದು ಹೆದರಿಸುತ್ತಿದ್ದಾರೆ

`ನಮ್ಮ ನಡೆ ಸರ್ವೋದಯದೆಡೆಗೆ’ ಘೋಷಣೆಗೆ ಪ್ರೇರಣೆ ಏನು? ಈ ಸಂದರ್ಭದಲ್ಲಿ ಸರ್ವೋದಯವನ್ನು ಹೇಗೆ ಅರ್ಥೈಸುತ್ತೀರಿ?
ಪಂಡಿತರಾಧ್ಯ ಸ್ವಾಮೀಜಿ: ನಮ್ಮ ನಡೆ ಸರ್ವೋದಯದೆಡೆಗೆ’ ಘೋಷಣೆಗೆ ಪ್ರೇರಣೆ ೨೦೧೯ರಲ್ಲಿ ನಾವು ಪ್ರಾರಂಭಿಸಿದ್ದ
ಮತ್ತೆ ಕಲ್ಯಾಣ’ ಎನ್ನುವ ಅಭಿಯಾನ. ಸರ್ವೋದಯ ಎಂದರೆ ಸಕಲ ಜೀವಾತ್ಮರಿಗೆ ಒಳಿತನ್ನು ಬಯಸುವುದು. ಆದರೆ ಇಂದು ಮಾನವ ದುರಾಸೆ ಮತ್ತು ಕೊಳ್ಳುಬಾಕ ಸಂಸ್ಕೃತಿ ಅವನ ಅಹಂಕಾರವನ್ನು ಹೆಚ್ಚಿಸಿ ಅವನತಿಯ ದಾರಿಯತ್ತ ಕರೆದೊಯ್ಯುತ್ತಿದೆ. ಇದರ ಅರಿವು ಅವನಿಗಿಲ್ಲ. ಹಾಗಾಗಿ ಆತ ತನ್ನ ದಾಹವನ್ನು ಹೆಚ್ಚಿಸಿಕೊಳ್ಳುತ್ತಲೇ ಇದ್ದಾನೆ. ಈ ದಾಹ, ದುರಾಸೆ, ಕೊಳ್ಳುಬಾಕ ಸಂಸ್ಕೃತಿಯಿಂದ ಹೊರಬರದಿದ್ದರೆ ಪರಿಸರ, ಕೃಷಿ, ಆರೋಗ್ಯ, ಶಿಕ್ಷಣ ಮತ್ತು ಆಡಳಿತ ಇನ್ನಷ್ಟು ಹದಗೆಡುವುದು. ಈ ಬಗ್ಗೆ ಜನರನ್ನು ಜಾಗೃತಗೊಳಿಸುವ ಸದಾಶಯ ನಮ್ಮ ಸರ್ವೋದಯ ನಡೆಯದಾಗಿದೆ.
ಕೊಳ್ಳುಬಾಕ ಸಂಸ್ಕೃತಿಯಿಂದ ಹೊರಬರದಿದ್ದರೆ ಪರಿಸರ, ಕೃಷಿ, ಆರೋಗ್ಯ, ಶಿಕ್ಷಣ ಮತ್ತು ಆಡಳಿತ ಇನ್ನಷ್ಟು ಹದಗೆಡುವುದು.
ಪಾದಯಾತ್ರೆಯಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಈ ಐದು ಕ್ಷೇತ್ರಗಳನ್ನೇ ಆಯ್ಕೆ ಮಾಡಿಕೊಳ್ಳುವ ಉದ್ದೇಶವೇನು?
ಪಂಡಿತರಾಧ್ಯ ಸ್ವಾಮೀಜಿ: ಏನೇ ಕೆಲಸ ಮಾಡಬೇಕಿದ್ದರೂ ಅದಕ್ಕೊಂದು ಉದ್ದೇಶ ಇದ್ದೇ ಇರುತ್ತದೆ. ಇವತ್ತು ಮಾನವನ ದುರಾಸೆಯ ದುಷ್ಫಲವಾಗಿ ಸಕಲ ಜೀವಜಾಲಕ್ಕೇ ಕುತ್ತು ಬಂದಿದೆ. ಪ್ರಕೃತಿಮಾತೆ ಮುನಿಸಿಕೊಂಡರೆ ತಾಯಿಯ ಎದೆಯ ಹಾಲೇ ನಂಜಾದಂತೆ. ಈ ದಿಶೆಯಲ್ಲಿ ಪರಿಸರದ ಪಾವಿತ್ರತೆಯ ಕಾಪಾಡುವುದು ಬಹುಮುಖ್ಯ. ಮನುಷ್ಯ ಅನ್ನವಿಲ್ಲದೆ ನೀರು, ಗಾಳಿ ಕುಡಿದು ಬದುಕಲು ಸಾಧ್ಯವಿಲ್ಲ.
ಇಂದು ಕೃಷಿಯ ಬಗ್ಗೆ ಉಪೇಕ್ಷೆ ಹೆಚ್ಚಾಗಿದೆ. ಅದರಲ್ಲೂ ಸಾವಯವ ಕೃಷಿ ಕಣ್ಮರೆಯಾಗುತ್ತಿದೆ. ಹಸಿರು ಕ್ರಾಂತಿಯಿಂದ ನಮ್ಮ ನೆಲ, ಜಲ, ಗಾಳಿ ಸಹ ವಿಷಯುಕ್ತವಾಗಿದೆೆ. ಹಾಗಾಗಿ ಸಾವಯವ ಕೃಷಿಯತ್ತ ಒಲವು ಬೆಳೆಸಬೇಕಾಗಿದೆ. ಆರೋಗ್ಯವೇ ಭಾಗ್ಯ ನಿಜ. ಆದರೆ ವಿಷಯುಕ್ತ ನೀರು, ಗಾಳಿ, ಆಹಾರ ಸೇವಿಸಿದರೆ ಹೇಗೆ ಆರೋಗ್ಯ ಕಾಯ್ದುಕೊಳ್ಳಲು ಸಾಧ್ಯ? ಆರೋಗ್ಯವೇ ಕೈಕೊಟ್ಟರೆ ಮನುಷ್ಯ ಎಷ್ಟು ಸಂಪಾದಿಸದರೆ ಏನು ಪ್ರಯೋಜನ ಎಂದು ಆರೋಗ್ಯ ಕ್ಷೇತ್ರಕ್ಕೂ ಒತ್ತು ಕೊಡಲಾಗಿದೆ.
ಶಿಕ್ಷಣ ಮಾನವನ ಮೂಲಭೂತ ಹಕ್ಕು.
ಶಿಕ್ಷಣ ಮಾನವನ ಮೂಲಭೂತ ಹಕ್ಕು. ಆದರೆ ನಮ್ಮ ನೆಲದ ಭಾಷೆಯನ್ನು ಬಿಟ್ಟು ಈಗ ಆಂಗ್ಲಭಾಷೆಯ ವ್ಯಾಮೋಹ ಅತಿಯಾಗಿ ಕನ್ನಡ ಭಾಷೆಯನ್ನು ಮತ್ತು ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳುವುದೇ ಕಷ್ಟವಾಗಿದೆ. ಕನ್ನಡ ಭಾಷೆಯೇ ಕಳೆದುಹೋದರೆ ಕನ್ನಡ ಸಂಸ್ಕೃತಿ, ಕನ್ನಡ ಸಾಹಿತ್ಯ, ಕನ್ನಡತನ ಹೇಗೆ ಉಳಿದೀತು? ಈ ಬಗ್ಗೆ ತುರ್ತಾಗಿ ಸರ್ಕಾರ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸುವ ಅಗತ್ಯವಿದೆ. ಕೊನೆಯದು ರಾಜಕೀಯ. ಉಳಿದೆಲ್ಲ ಕ್ಷೇತ್ರಗಳು ರೋಗಮುಕ್ತವಾಗಬೇಕು ಎಂದರೆ ರಾಜಕಾರಣ ಆರೋಗ್ಯಪೂರ್ಣವಾಗಿರಬೇಕು. ಇಂದು ರಾಜಕಾರಣ ಕ್ಷಣ ಕ್ಷಣಕ್ಕೂ ಗೋಸುಂಬೆಯಂತೆ ತನ್ನ ಬಣ್ಣ ಬದಲಾಯಿಸುತ್ತಿದೆ.
ರಾಜಕಾರಣಿಗಳು ಸ್ವಾರ್ಥಿಗಳು, ಭ್ರಷ್ಟರು, ದುಷ್ಟರು, ಸ್ವಜನಪಕ್ಷಪಾತಿಗಳು, ಸುಳ್ಳುಗಾರರು ಆಗುತ್ತಿದ್ದಾರೆ. ಈ ನೆಲೆಯಲ್ಲಿ ರಾಜಕೀಯ ಶುದ್ಧೀಕರಣ ಮಾಡುವುದು ಹೇಗೆ ಎನ್ನುವ ಚಿಂತನೆ ಬಹುಮುಖ್ಯ. ಹೀಗಾಗಿ ಐದು ಕ್ಷೇತ್ರಗಳನ್ನು ಪ್ರಮುಖವಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.

ವಿಳಾಸ: ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಶ್ರೀ ತರಳಬಾಳು ಜಗದ್ಗುರು ಶಾಖಾಮಠ
ಸಾಣೇಹಳ್ಳಿ-೫೭೭೫೧೫
ಹೊಸದುರ್ಗ-ತಾ, ಚಿತ್ರದುರ್ಗ-ಜಿ
ಈಮೇಲ್: sತಿಚಿmiರಿi.ಠಿss@gmಚಿiಟ.ಛಿom
ಗುರುಗಳ ಇಚ್ಛಾಶಕ್ತಿ. ಸಲೀಸಾಗಿ 75 ಕಿಲೋಮೀಟರ್ ದೂರ ಕ್ರಮಿಸುವಂತೆ ಮಾಡುತ್ತದೆ.