ಮುರುಘಾ ಮಠದಲ್ಲಿ 21 ಜೋಡಿಗಳ ಸಾಮೂಹಿಕ ಕಲ್ಯಾಣ ಮಹೋತ್ಸವ

ಬಸವ ಮೀಡಿಯಾ
ಬಸವ ಮೀಡಿಯಾ

‘ಶ್ರೀಮಠವು ಸರಳ ಹಾಗೂ ಅಂತರ್ಜಾತಿ ವಿವಾಹಗಳಿಗೆ ಸಾಕ್ಷಿಯಾಗಿದೆ’

ಚಿತ್ರದುರ್ಗ :

ಸಮಾಜದಲ್ಲಿ ಪ್ರತಿನಿತ್ಯ ನಿರುದ್ಯೋಗ, ಹಸಿವು, ಬಡತನದಿಂದ ಅಸಂಖ್ಯಾತರು ನರಳುತ್ತಿದ್ದಾರೆ. ಅದ್ಧೂರಿ ವಿವಾಹಗಳಿಂದ ಸಾಕಷ್ಟು ತಂದೆ-ತಾಯಿಯರು ಸಾಲಗಾರರಾಗಿ ಸಂಕಷ್ಟಕ್ಕೀಡಾಗಿದ್ದಾರೆ.

ಇದರ ನಡುವೆ ಮುರುಘಾಮಠವು ೩೬ ವರ್ಷಗಳಿಂದ ನಿರಂತರ ಸಾಮೂಹಿಕ ಕಲ್ಯಾಣ ಮಹೋತ್ಸವವನ್ನು ನಡೆಸಿಕೊಂಡು ಬರುತ್ತಿದೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಹೇಳಿದರು.

ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಈಚೆಗೆ ನಡೆದ ಮೂವತ್ತಾರನೇ ವರ್ಷದ ನಾಲ್ಕನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ಕಾರ್ಯಕ್ರಮದಲ್ಲಿ ೨೧ ಜೋಡಿ ವಿವಾಹಗಳನ್ನು ನೆರವೇರಿಸಿ ಮಾತನಾಡಿದರು.

ಶ್ರೀಗಳು ಮುಂದುವರೆದು ಮಾತನಾಡುತ್ತ, ಶ್ರೀಮಠವು ಹಲವಾರು ಅಂತರ್ಜಾತಿ ವಿವಾಹಗಳಿಗೆ ಸಾಕ್ಷಿಯಾಗಿದೆ. ಇಂದು ನಾಲ್ಕು ಜೋಡಿಗಳು ಅಂತರ್ಜಾತಿ ವಿವಾಹ ಆಗುತ್ತಿದ್ದಾರೆ. ಅವರು ಕೂಡ ಮುಂದೆ ತಮ್ಮ ಮಕ್ಕಳಿಗೆ, ಬಂಧುಗಳಿಗೆ ಅದ್ಧೂರಿ ವಿವಾಹಗಳಿಗೆ, ದುಂದುವೆಚ್ಚಗಳಿಗೆ ಕಡಿವಾಣ ಹಾಕಿ ಸರಳ ಸಾಮೂಹಿಕ ವಿವಾಹಗಳಿಗೆ ಪ್ರೇರಣೆಯಾಗಬೇಕೆಂದರು.

ಸಮಾರಂಭದ ಸಾನಿಧ್ಯ ವಹಿಸಿದ್ದ ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮೀಜಿ ಮಾತನಾಡಿ, ಜಾಗತಿಕವಾಗಿ ಇಂದು ಜಗತ್ತು ತಲ್ಲಣಿಸುತ್ತಿದೆ. ಎಲ್ಲೋ ನಡೆಯುವ ಯುದ್ಧದ ಬಿಸಿ ಭಾರತಕ್ಕೂ ತಟ್ಟಿದೆ. ಅದೇ ರೀತಿ ಸಂಸಾರದ ಜೀವನದಲ್ಲಿ ಗಂಡ-ಹೆಂಡತಿಯರ ನಡುವಿನ ಜಗಳ ಇಡೀ ಸಂಸಾರವನ್ನು ಅಷ್ಟೇ ಅಲ್ಲ ತಮ್ಮ ತಮ್ಮ ಬಂಧುಗಳ ನಡುವಿನ ಸಂಬಂಧಕ್ಕೂ ಆತಂಕವನ್ನು ಉಂಟುಮಾಡುತ್ತದೆ. ಸತಿ- ಪತಿಗಳ ಮಾತು ಮುತ್ತಿನಂತೆ ಇರಬೇಕು. ಬಸವಣ್ಣನವರು ಹೇಳಿದ ಹಾಗೆ ಅಯ್ಯಾ ಎಂದರೆ ಸ್ವರ್ಗ. ನಮ್ಮ ಮಾತಿನಲ್ಲಿ ಪ್ರೀತಿ ಇರಬೇಕು. ವ್ಯವಹಾರ ಇರಬಾರದು. ಈ ಪ್ರೀತಿಯಿಂದ ಜಗತ್ತನ್ನೇ ಗೆಲ್ಲಬಹುದು. ಸತಿ-ಪತಿಗಳು ಪರಸ್ಪರ ಗೌರವದಿಂದ ಬಾಳಬೇಕು. ಹಾಗಿದ್ದಾಗ ಜೀವನದ ಸಾಕ್ಷಾತ್ಕಾರವಾಗುತ್ತದೆ. ತಮ್ಮ ಕುಟುಂಬವನ್ನು, ಜಗತ್ತನ್ನು ಪ್ರೀತಿಸುವಂತವರಾಗಬೇಕೆಂದು ತಿಳಿಸಿದರು.

ಚಿತ್ರದುರ್ಗ ಉಪವಿಭಾಗಾಧಿಕಾರಿ ಡಾ. ಕಾಂತರಾಜ ಮಾತನಾಡಿ, ಶ್ರೀಮಠವು ನಿರಂತರವಾಗಿ ೩೬ವರ್ಷಗಳಿಂದ ೨೦ ಸಾವಿರ ದಂಪತಿಗಳ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿರುವಂಥ ಮಠವಾಗಿದೆ. ದಾಂಪತ್ಯ ಜೀವನ ಎರಡು ಮನಸ್ಸುಗಳ ನಡುವೆ ನಡೆಯುವಂತದ್ದು. ಎರಡು ಕುಟುಂಬಗಳನ್ನು ಕೂಡಿಸುವಂತದ್ದು. ಇಂದು ಸಾಕಷ್ಟು ಸಂಸಾರಗಳು ದೂರ ದೂರ ಆಗುತ್ತಿವೆ. ಹಾಗಾಗಿ ಸತಿಪತಿಗಳು ತಮ್ಮೊಳಗಿನ ಅಹಂಕಾರವನ್ನು ಕಳೆದು ಪ್ರೀತಿ, ವಿಶ್ವಾಸದ ಮೂಲಕ ಜೀವನ ನಡೆಸುವಂತಾಗಬೇಕು.

ಇಬ್ಬರ ನಡುವೆ ಪರಸ್ಪರ ಸಹಕಾರ ಇರಬೇಕು. ಆಗಿದ್ದಾಗ ಮಾತ್ರ ಸಂಸಾರದಲ್ಲಿ ಸುಖ ಸಂತೋಷವನ್ನು ಕಾಣಲು ಸಾಧ್ಯ ಎಂದು ತಿಳಿಸಿದರು.

ಸನ್ಮಾನ ಸ್ವೀಕರಿಸಿ ಚಿತ್ರದುರ್ಗ ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್ ಮಾತನಾಡಿ, ಶ್ರೀಮಠವು ಬಸವಾದಿ ಶರಣರ ಆದರ್ಶಗಳನ್ನು ಪಾಲಿಸಿಕೊಂಡು ಬಂದಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಜನಪರ ಕಲ್ಯಾಣ ಕಾರ್ಯಗಳನ್ನು ಆಯೋಜಿಸುತ್ತ ಬಂದಿದೆ. ಸಮಾಜದಲ್ಲಿ ವರ್ಣ, ವರ್ಗ, ಜಾತಿ ಅಸಮಾನತೆಯನ್ನು ತೊಡೆದುಹಾಕಿ ಸಮಾನತೆಯನ್ನು ಸಾರುವಂತಹ ಕೆಲಸಗಳನ್ನು ಮಾಡುತ್ತಿದೆ. ನಮ್ಮೊಳಗಿನ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಶ್ರೀಮಠ ಒಂದು ಪ್ರಯೋಗಶಾಲೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶ್ರಿ ಬಸವ ಮುರುಘೇಂದ್ರ ಸ್ವಾಮಿಗಳು, ಪೈಲ್ವಾನ್ ತಿಪ್ಪೇಸ್ವಾಮಿ, ಕಣಿವೆಮಾರಮ್ಮ ತಿಪ್ಪೇಸ್ವಾಮಿ, ಕವಿ ಗಂಗಾಧರಪ್ಪ, ಸಮಾಜಸೇವಕ ಲಿಂಗರಾಜ ಮತ್ತಿತರರಿದ್ದರು.

ಜಮುರಾ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ಗಿರೀಶಾಚರ‍್ಯ ಸ್ವಾಗತಿಸಿದರು. ಟಿ.ಪಿ. ಜ್ಞಾನಮೂರ್ತಿ ನಿರೂಪಿಸಿ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *