ಸೌಹಾರ್ದ ಬದುಕು ನಡೆಸುವುದೇ ನಿಜವಾದ ಧರ್ಮ: ಚಿಂತಕ ಬಿ. ಪೀರಭಾಷಾ

ಗಜೇಂದ್ರಗಡ

ಜಗತ್ತಿನ ಮನುಷ್ಯರೆಲ್ಲ ಪರಸ್ಪರ ಪ್ರೀತಿ, ವಿಶ್ವಾಸ, ಸ್ನೇಹ, ಸೌಹಾರ್ದತೆ ಹಾಗೂ ಶಾಂತಿಯುತವಾಗಿ ಬದುಕು ನಡೆಸುವುದೇ ನಿಜವಾದ ಧರ್ಮವಾಗಿದೆ ಎಂದು ಪ್ರಗತಿಪರ ಚಿಂತಕ ಬಿ. ಪೀರಭಾಷಾ ಹೇಳಿದರು.

ನಗರದ ಕುಷ್ಟಗಿ ರಸ್ತೆಯ ಶಾದಿಮಹಲ್ ನಲ್ಲಿ ಅಂಜುಮನ್ ಇಸ್ಲಾಂ ಕಮೀಟಿ, ಬಸವಪರ, ಪ್ರಗತಿಪರ, ಕನ್ನಡಪರ, ರೈತಪರ, ಟಿಪ್ಪು ಸುಲ್ತಾನ್ ನೌ ಜವಾನ್ ಕಮೀಟಿ, ಕಾರ್ಮಿಕ ಸಂಘಟನೆಗಳು, ಎಸ್.ಎಫ್. ಐ, ಡಿ.ವೈ.ಎಫ್.ಐ. ಸಂಘಟನೆಗಳ ಜಂಟಿ ಆಶ್ರಯದಲ್ಲಿ ನಡೆದ ಮಹಾತ್ಮ ಗಾಂಧಿಯವರ ಹುತಾತ್ಮದಿನ, ಸೌಹಾರ್ದ ಸಂಕಲ್ಪ ದಿನದ ಪ್ರತಿಜ್ಞಾ ವಿಧಿ ಸಮಾರಂಭದಲ್ಲಿ ಅವರು ಮಾತನಾಡಿದರು.

ಗಾಂಧೀಜಿಯವರು ದೇಶದ ಸೌಹಾರ್ದ ಪರಂಪರೆಯ ಸಂಕೇತವಾಗಿದ್ದರು. ಅವರ ಆದರ್ಶಗಳನ್ನು ನಾವು ಪಾಲಿಸಬೇಕು. ಆದರೆ ಇಂದು ಮತೀಯವಾದಿಗಳು ಹುಸಿ ಸುಳ್ಳುಗಳಿಂದ ಇತಿಹಾಸವನ್ನು ತಿರುಚುತ್ತಾ ದೇಶದ ಸೌಹಾರ್ದತೆಯನ್ನು ಹಾಳುಮಾಡುತ್ತಿದ್ದಾರೆ ನಾವೆಲ್ಲ ಎಚ್ಚರವಾಗಿರಬೇಕೆಂದರು.

ಪುರಸಭೆ ಮಾಜಿ ಸದಸ್ಯ, ವಕೀಲ ಎಂ.ಎಸ್. ಹಡಪದ ಮಾತನಾಡಿ, ಕರ್ನಾಟಕ ಬಸವತತ್ವದ ನಾಡು, ಇಲ್ಲಿ ಸೌಹಾರ್ದತೆ ಎಂಬುದು ಜನರ ಅಂತ:ಕರಣದಲ್ಲಿದೆ. ಈ ಸೌಹಾರ್ದ ಪರಂಪರೆಯನ್ನು ಎತ್ತಿ ಹಿಡಿಯಬೇಕಿದೆ.

ಶರಣರು, ಸೂಫಿ ಸಂತರು ಸಮಾಜದ ಎಲ್ಲಾ ವರ್ಗದ ಜನರನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಬೋಧಿಸಿ, ಮನಕುಲದ ಏಳಿಗೆಯನ್ನು ಬಯಸಿದರು. ಅವರು ಜನತೆ ಶಾಂತಿ, ಸೌಹಾರ್ದತೆ, ಸಹಬಾಳ್ವೆಯಿಂದ ಬಾಳಲು ತತ್ವಾದರ್ಶಗಳನ್ನು ಕೊಟ್ಟು ಹೋಗಿದ್ದಾರೆ. ಅವರ ಆದರ್ಶ ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಸಂಗಾತ ಪತ್ರಿಕೆಯ ಸಂಪಾದಕ ಡಾ. ಟಿ‌. ಎಸ್. ಗೊರವರ, ಶರಣ ಸಾಹಿತ್ಯ ಪರಿಷತ್ತಿನ ಬಸವರಾಜ ಕೊಟಗಿ, ಎ.ಡಿ. ಕೋಲಕಾರ, ಕಾಲಜ್ಞಾನ ಮಠದ ಶ್ರೀ ಶರಣಬಸವ ಸ್ವಾಮೀಜಿ ಮಾತನಾಡಿದರು.

ಟೆಕ್ಕೆದ ದರ್ಗಾದ ನಿಜಾಮುದ್ದಿನಷಾ ಮಕಾನದಾರ ಅವರು ಎಲ್ಲರಿಗೂ ಸೌಹಾರ್ದ ಸಂಕಲ್ಪ ದಿನದ ಪ್ರತಿಜ್ಞಾವಿಧಿ ಬೋಧಿಸಿದರು.

ಇದೇ ವೇಳೆ ಈ ದಿನ ಡಾಟ್ ಕಾಮ್ ನ ನಮ್ಮ ಕರ್ನಾಟಕ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.
ಪ್ರಗತಿಪರ ಚಿಂತಕ ಪ್ರೊ. ಬಿ.ಎ. ಕೆಂಚರೆಡ್ಡಿ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆ ಮೇಲೆ ಕೃಷಿಕೂಲಿಕಾರರ ಸಂಘಟನೆ ಮುಖಂಡ ಬಾಲು ರಾಠೋಡ, ಡಿವಾಯ್ಎಫ್ಐ ಮುಖಂಡ ದಾವಲಸಾಬ ತಾಳಿಕೋಟಿ, ಜಾಗತಿಕ ಲಿಂ. ಮಹಾಸಭಾದ ಗುರುಲಿಂಗಯ್ಯ ಓದಸುಮಠ, ನಾಸೀರ್ ಸುರಪುರ,
ಮೆಹಬೂಬ ಹವಾಲ್ದಾರ, ನಿವೃತ್ತ ಶಿಕ್ಷಕ ಬಿ.ಎನ್. ಜಾಲಿಹಾಳ ಮತ್ತಿತರರು ಉಪಸ್ಥಿತರಿದ್ದರು.

ವಿದ್ಯಾರ್ಥಿ ಮುಖಂಡ ಚಂದ್ರು ರಾಠೋಡ ಸ್ವಾಗತಿಸಿದರು. ವಕೀಲ ಫಯಾಜ್ ತೋಟದ ನಿರೂಪಿಸಿದರು.

ಬೀದಿಬದಿ ವ್ಯಾಪಾರಸ್ಥರು, ಅಂಗನವಾಡಿ‌ ನೌಕರರು, ವಿದ್ಯಾರ್ಥಿ-ಯುವಜನರು, ಕಟ್ಟಡ ಕಾರ್ಮಿಕರು ಸೇರಿದಂತೆ ಅನೇಕರು ಭಾಗವಹಿಸಿದ್ದರು.

Share This Article
Leave a comment

Leave a Reply

Your email address will not be published. Required fields are marked *