ಸರ್ವರೂ ಇಷ್ಟಲಿಂಗ ಸಾಧಕರಾಗಬೇಕು: ಡಾ. ರಾಜಶೇಖರ ದಾನರೆಡ್ಡಿ

ಸಿದ್ದಣ್ಣ ಅಂಗಡಿ
ಸಿದ್ದಣ್ಣ ಅಂಗಡಿ

ಗದಗ

ಅರಿವಿನ ಮಾರಿತಂದೆ ಅನುಭವ ಮಂಟಪದ ೭೭೦ ಅಮರಗಣಂಗಳಲ್ಲಿ ಒಬ್ಬರಾಗಿದ್ದರು. ಅವರ ೩೦೯ ವಚನಗಳು ದೊರಕಿವೆ. ಇನ್ನೂ ಸಂಶೋಧನೆ ನಡೆಯುತ್ತಿದೆ. ಶರಣ ಸಂಕುಲದಲ್ಲಿ ಒಟ್ಟಾರೆ ಆರು ಮಾರಿತಂದೆಗಳು ಬರುತ್ತಾರೆ. ಇವರ ವಚನಗಳು ಅನುಭಾವಪೂರ್ಣವಾಗಿವೆ. ಇವರ ಅನುಭಾವವನ್ನು ಗಮನಿಸಿ ಇವರಿಗೆ ಅರಿವಿನ ಮಾರಿತಂದೆ ಎಂದು ಶರಣರು ಕರೆದರು ಎಂದು ಡಾ. ರಾಜಶೇಖರ ದಾನರೆಡ್ಡಿ ಹೇಳಿದರು.

ಅವರು ಬಸವದಳದ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ, ವಿವೇಕಾನಂದ ನಗರದ ಶಾಂತಾದೇವಿ ಮಲ್ಲಣ್ಣ ತುಪ್ಪದ ಅವರ ಮನೆಯಲ್ಲಿ ನಡೆದ ಬಸವಣ್ಣನವರ ೮೫೮ನೇ ಸ್ಮರಣೆಯಂಗವಾಗಿ ‘ವಚನ ಶ್ರಾವಣ-೨೦೨೫’ರ ಕಾರ್ಯಕ್ರಮದಲ್ಲಿ ಮಾತನಾಡಿದರು.

“ಕಾಯವಿದ್ದು ಕಾಬುದು ವಿಜ್ಞಾನ, ಜೀವವಿದ್ದು ಕಾಬುದು ಸುಜ್ಞಾನ, ಎರಡಳಿದು ತೋರಿಕೆಯಲ್ಲಿ ಕಾಬುದು ಪರಂಜ್ಯೋತಿಜ್ಞಾನ, ಇಂತೀ ಮೂರು ಮುಖವ ಏಕವ ಮಾಡಿ, ಬೇರೊಂದು ಕಾಬುದು ಪರಮಪ್ರಕಾಶಜ್ಞಾನ, ಇಂತೀ ಅಂತರಪಟಂತರದಲ್ಲಿ ನಿಂದು ನೋಡುವ, ಸಂದೇಹವ ಹರಿದ ಸಂದಿನಲ್ಲಿ, ಕುಂದದ ಬೆಳಗು ತೋರುತ್ತದೆ, ಸದಾಶಿವಮೂರ್ತಿಲಿಂಗದಲ್ಲಿ,” ವಚನ ನಿರ್ವಚನ ಮಾಡುತ್ತಾ ಈ ದೇಹದ ಮೂಲಕ ನಮ್ಮ ಪಂಚೇಂದ್ರಿಯಗಳನ್ನು ಅರಿವುದೇ ವಿಜ್ಞಾನವಾಗಿದೆ. ಒಳ ಅಂತರಂಗವನ್ನು ಕಾಣುವುದೇ ಸುಜ್ಞಾನವಾಗಿದೆ.

ಎರಡಳಿದು ಅಂದರೆ ತನು, ಮನ, ಭಾವ ಅಂದರೆ ಕಾಯಗುಣ, ಜೀವಭಾವವನ್ನು ಅಳಿಯಬೇಕು. ಆಗಲೇ ಆತ್ಮತತ್ವದ ಪರಂಜ್ಯೋತಿ ಜ್ಞಾನ ಲಭಿಸುತ್ತದೆ. ಈ ರೀತಿಯಾದ ಮೂರು ಏಕತ್ರ ಮಾಡಿದಾಗ ಪರಮಪ್ರಕಾಶ ಜ್ಞಾನವೆಂದರೆ ಅಘೋಚರವಾದ ಜ್ಞಾನ ದೊರಕುವುದು. ಇದೆಲ್ಲವನ್ನೂ ಬಸವಣ್ಣ ನೀಡಿದ ಇಷ್ಟಲಿಂಗದಿಂದ ಸಾಧಕನು ಪಡೆಯುವಂತಹ ಕ್ರಿಯೆಯಾಗಿದೆ, ಎಂದರು.

ಶಿವ ಸಾಧಕನಾಗುವಾತ ತನ್ನಲ್ಲಿಯ ಅಜ್ಞಾನವನ್ನು ಹೋಗಲಾಡಿಸಿ, ಸಂದೇಹಗಳನ್ನು ಪರಿಹರಿಸಿ, ಇಷ್ಟಲಿಂಗ ಯೋಗದಲ್ಲಿ, ಲಿಂಗಾರ್ಚನೆ, ಲಿಂಗನಿರೀಕ್ಷಣೆ, ಲಿಂಗಧ್ಯಾನದಲ್ಲಿ ತೊಡಗಿದಾಗ ಅರಿವಿನ ಬೆಳಕು, ಜ್ಞಾನದ ಬೆಳಕು ಕಾಣವುದು. ಅದೇ ಲಿಂಗ ಸಾಧಕನ ಹಂತ. ಇದನ್ನೇ ಬಸವಾಧಿ ಶರಣರು ಸಾಧಿಸಿ ತೋರಿಸಿದ್ದಾರೆ. ಈ ಅರಿವಿನ ಬೆಳಕು ಸದಾಶಿವಮೂರ್ತಿ ಲಿಂಗದಲ್ಲಿ ಅಡಗಿದೆ ಎಂದು ಹೇಳುತ್ತಾ, ಲಿಂಗವನ್ನರಿಯಲು ನಾವು ಇಷ್ಟಲಿಂಗಧಾರಿಗಳಾಗಬೇಕು. ಈ ಸಂಸ್ಕಾರವನ್ನು ತಂದೆ-ತಾಯಿಗಳು ಮಕ್ಕಳಿಗೆ ನೀಡಬೇಕು. ಲಿಂಗ ಪೂಜೆ, ನಿರೀಕ್ಷಣೆಯಲ್ಲಿ ತೊಡಗಬೇಕು. ಆಗ ಲಿಂಗದ ಮಹತ್ವನ್ನರಿಯಲು ಸಾಧ್ಯವೆಂದು ದಾನರೆಡ್ಡಿ ತಿಳಿಸಿದರು.

ನಂತರ ವಿ.ಕೆ. ಕರೇಗೌಡ್ರ, ಎಸ್. ಎ. ಮುಗದರವರು, ಪ್ರಕಾಶ ಅಸುಂಡಿಯವರು ಇದೇ ವಚನದ ಕುರಿತು ವಿಶ್ಲೇಷಿಸಿದರು.

ಶೇಖರ ಕವಳಿಕಾಯಿ ಅವರು ಇದೇ ೨೪ರಂದು ಜರುಗುವ ಜಿಲ್ಲಾ ಕದಳಿ ಸಮಾವೇಶದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.

ಬಸವದಳದ ಶರಣೆಯರ ವಚನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸರ್ವರನ್ನೂ ಶಾಂತಾದೇವಿ ಮಲ್ಲಣ್ಣ ತುಪ್ಪದ ಸ್ವಾಗತ, ನಿರೂಪಣೆ ಎನ್. ಎಚ್. ಹಿರೇಸಕ್ಕರಗೌಡ್ರ ಮಾಡಿದರು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bo3i1f468pxBcYJIXNRpTK

Share This Article
Leave a comment

Leave a Reply

Your email address will not be published. Required fields are marked *