ಅಕ್ಕನನ್ನು ಭಕ್ತಿಯ ಚೌಕಟ್ಟಿನಿಂದ ಹೊರತಂದು ಹೊಸ ಬೆಳಕಿನಲ್ಲಿ ನೋಡಬೇಕು

ಅಕ್ಕನ ಅರಿವಿನ ಪ್ರಜ್ಞೆಯನ್ನು, ಸ್ತ್ರೀವಾದವನ್ನು, ಬಂಡಾಯದ ಧ್ವನಿಯನ್ನು ಜನಮಾನಸಕ್ಕೆ ತಲುಪಿಸುಬೇಕು

ಗಂಗಾವತಿ

ಕೆಲವು ದಶಕಗಳಿಂದಲೂ ಸೃಜನಶೀಲ ಬರವಣೆಗೆಯ ಮೂಲಕ ಒಂದು ಚೌಕಟ್ಟಿನೊಳಗೆಯೆ ಅಕ್ಕನನ್ನು ಸೀಮಿತಗೊಳಿಸುವ ಪ್ರಯತ್ನ ನಡೆದಿದೆ.

ಅಕ್ಕನನ್ನು ವೈರಾಗ್ಯದ ನಿಧಿಯಾಗಿ, ಚೆನ್ನಮಲ್ಲಿಕಾರ್ಜುನನನ್ನು ಹುಡುಕುವ ವಿರಹದ ಪ್ರೇಮಿಯಾಗಿ, ಕಾಡು ಮೇಡು ಅಲೆಯುತ್ತಾ ಅಲ್ಲಿಯ ಗಿಡ ಮರಗಳ ಬಗ್ಗೆ, ಹಳ್ಳಕೊಳ್ಳಗಳ ಬಗ್ಗೆ, ಪ್ರಾಣಿ ಪಕ್ಷಿಗಳ ಬಗ್ಗೆ ವರ್ಣನೆ ಮಾಡುವ ಒಬ್ಬ ಕವಿಯತ್ರಿಯಾಗಿ ಬಿಂಬಿಸುತ್ತಾ ಅಕ್ಕನ ನಿಜ ವ್ಯಕ್ತಿತ್ವವನ್ನು ಎಲ್ಲೋ ಮರೆಮಾಚಿಸಿದಂತೆ ಕಾಣುತ್ತದೆ.

ಇಂದು ಅಕ್ಕನನ್ನು ಒಂದು ಭಕ್ತಿಯ ಚೌಕಟ್ಟಿನಿಂದ ಹೊರತಂದು ಅವಳನ್ನು ಅರಿವಿನ ಪ್ರಜ್ಞೆಯಾಗಿ, ವೈಚಾರಿಕತೆಯ ಗಣಿಯಾಗಿ, ಸ್ತ್ರೀ ಶೋಷಣೆಯ ವಿರುದ್ದ ಬಂಡಾಯವೇಳುವ ಸ್ತ್ರೀವಾದಿಯಾಗಿ ಹೆಚ್ಚು ಪ್ರಚುರಗೊಳಿಸಬೇಕಾದ ಅನಿವಾರ್ಯತೆ ಇದೆ ಅನಿಸುತ್ತೆ.
ಅಕ್ಕನ ಜನಸಾಮಾನ್ಯವಾದ ಆ ವ್ಯಕ್ತಿತ್ವನ್ನು ಜನಮಾನಸಕ್ಕೆ ತಲುಪಿಸುವ ಕೆಲಸ ಮಾಡಬೇಕಿದೆ.

ಅಕ್ಕನನ್ನು ದೈವದ ಸ್ವರೂಪವಾಗಿ ವಿಜೃಂಭಿಸುವ ಬದಲು, ಅಕ್ಕನು ಸಾಮಾನ್ಯಳು. ಆ ಸಾಮಾನ್ಯಳ ಬದುಕಿನ ಸಾಧನೆ ಅಸಾಮಾನ್ಯಳನ್ನಾಗಿ ಮಾಡಿದ್ದು ಮಾದರಿಯಾಗುವಂತೆ ಚಿತ್ರಿಸಿಬೇಕಿದೆ. ಉಡುತಡಿಯ ಬೀದಿಯಲ್ಲಿ ಕೌಶಿಕ ರಾಜನ ಮಡದಿಯಾಗಿ ಏಕಾಂಗಿಯಾಗಿ ಯಾಕೆ ನಡೆದಳು, ಕೌಶಿಕನು ನಿಯಮ ಮೀರಿದಾಗ ಅವಳುಟ್ಟ ವಸ್ತ್ರವನ್ನು ಎಳೆದಾಗ ಅಕ್ಕನ ಉತ್ತರ “ಉಟ್ಟ ಉಡುಗೆಯ ಸೆಳೆಯಬಹುದಲ್ಲದೆ, ಮುಚ್ಚಿ ಮುಸಗಿರ್ದ ನಿರ್ವಾಣವ ಸೆಳೆಯಬಹುದೇ? ಚೆನ್ನ ಮಲ್ಲಿಕಾರ್ಜುನನ ಬಯಲನುಟ್ಟು ಲಜ್ಜೆಗೆಟ್ಟವಳಿಗೆ, ಉಡುಗೆಯ ಹಂಗೇಕೋ ಮರುಳೇ” ಎಂದು ಅಂದಿನ ರಾಜಪ್ರಭುತ್ವವನ್ನು ಧಿಕ್ಕರಿಸಿ ನಡುಬೀದಿಯಲ್ಲಿ ಅರೆಬೆತ್ತಲೆಯಾಗಿ ನಡೆಯಬೇಕಾದರೆ ಎಂತಹ ಬಂಡಾಯದ ಪ್ರವ್ರತ್ತಿ ಅಕ್ಕನದು ಇರಬೇಕು?

ಪತಿಯೇ ಪರದೈವವೆನ್ನುವ ಆ ಕಾಲದಲ್ಲಿ, ಪತಿಯನ್ನು ಅನುಸರಣೆಗೈಯುವುದೇ ಅವಳ ಆದ್ಯ ಕರ್ತವ್ಯ ಎಂದ ಆ ಸಮಾಜದ ಕಟು ಟೀಕೆಗಳನ್ನು ಹೇಗೆ ಧೈರ್ಯದಿಂದ ಎದುರಿಸಿದಳು. ಇಂತಹ ನಿಲುವಿನ ಅಕ್ಕನನ್ನು ಕಾಣದ ತನ್ನ ಪತಿ ಚೆನ್ನಮಲ್ಲಿಕಾರ್ಜುನನ ಸಲುವಾಗಿ ಪರಿತಪಿಸುವುದು ನೋಡಿದರೆ, ಅಕ್ಕನ ವ್ಯಕ್ತಿತ್ವ ಇದಲ್ಲ ಅನಿಸಿದ್ದು ಸಹ ಸತ್ಯ.

ಅಲ್ಲಿಂದ ಅರೆಬೆತ್ತಲೆಯಾಗಿ ಊರು, ಕಾಡು ಮೇಡು, ದಾಟುತ್ತಾ ಕಲ್ಯಾಣದ ಕಡೆ ಬಂದಾಗಲೂ ಅಕ್ಕನಿಗೇನೂ ಅಲ್ಲಿ ಅದ್ದೂರಿಯ ಸ್ವಾಗತ ಇದ್ದಿಲ್ಲ, ಅಲ್ಲಿಯೂ ಸಹ ಅದೇ ರೀತಿಯಾದ ಅನುಭವ. ಕಲ್ಯಾಣದ ಒಳಗೂ ಅಕ್ಕನ ಪರೀಕ್ಷೆ ಶರಣ ಕಿನ್ನರಯ್ಯಾ ತಡವಿದ ಅವಳ ಸೌಂದರ್ಯ ಹೊಗಳಿದ, ಅವಳ ಉತ್ತರಕ್ಕೆ ಬೆಚ್ಚಿಬಿದ್ದು “ಹುಲಿ ನೆಕ್ಕಿ ಬದುಕಿದೆನು” ಎಂದು ಹೇಳಬೇಕಾದರೆ ಅಕ್ಕನ ಆ ಘನ ವ್ಯಕ್ತಿತ್ವ ಹೇಗೆ ಇರಬೇಕು ಎಂದು ಅರಿಯಬೇಕಿದೆ.

ಅಲ್ಲಮನ ಕಟು ಮಾತುಗಳು “ನಿನ್ನ ಗಂಡನ ಹೆಸರೇಳು ತಾಯಿ ಅದಾಗದಿದ್ದರೆ ಶರಣರು ಮುನಿವರು, ಉತ್ತರಿಸಿದರೆ ಕುಳ್ಳಿರಿ ಇಲ್ಲದಿದ್ದರೆ ತೊಲಗು ತಾಯಿ” ಎನ್ನುವ ಆ ಕಟು ಮಾತುಗಳನ್ನು ಎದುರಿಸುವ ಧೈರ್ಯವಂತೆ ಅಕ್ಕನ “ಲೋಕದ ಗಂಡರ ಒಲೆಯೊಳಗಿಕ್ಕು ಚೆನ್ನಮಲ್ಲಿಕಾರ್ಜುನನೆ ಎನ್ನ ಗಂಡ” ಎಂದು ಅಲ್ಲಮನಿಗೆ ದಿಟ್ಟ ನಿಲುವಿನ ಉತ್ತರ ನೀಡಿದಳು.

ಎಲ್ಲಾ ಪ್ರಶ್ನೆಗಳಿಗೆ ತೊಡಕುಗಳಿಗೊಮ್ಮೆ ಕೈ ಮುಗಿದು “ಕಾಡದಿರಣ್ಣಾ ಚೆನ್ನಮಲ್ಲಿಕಾರ್ಜುನನ ಒಳಗಾದವಳ” ಎಂದಾಗ ಪ್ರಭು ತನ್ನೆಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಾಗ” ಅಕ್ಕಮಹಾದೇವಿಯಕ್ಕನ ಶ್ರೀಪಾದಕ್ಕೆ ನಮೋ ನಮೋ” ಎನ್ನಬೇಕಾದರೆ ಅಕ್ಕನಲ್ಲಿನ ಆ ವ್ಯಕ್ತಿತ್ವಕ್ಕೆ ಅಲ್ಲಮರು ಶರಣಾಗಿದ್ದು ಸತ್ಯ.

ಅಂದಿನಿಂದ ಇಂದಿನವರಿಗೂ ಹೆಣ್ಣನ್ನು ಕೇವಲ ಭೋಗದ ವಸ್ತುವಾಗಿ, ಹೆಣ್ಣು ಹೊನ್ನು ಮಣ್ಣನ್ನು ಮಾಯೆಯಾಗಿ ಬಿಂಬಿಸುತ್ತಾ ಆಧ್ಯಾತ್ಮದ ಸಾಧನೆಗೆ ಹೆಣ್ಣು ತೊಡಕು ಅವಳು ಮಾಯೆ ಅಂತ, ಸಾಧನೆಯ ಪಥದಿಂದ ಅವಳನ್ನು ದೂರವಿಟ್ಟ ಆ ವ್ಯವಸ್ಥೆಗೆ ಸವಾಲಾಗಿ
“ಪುರುಷನ ಮುಂದೆ ಮಾಯೆ ಸ್ತ್ರೀಯೆಂಬ ಅಭಿಮಾನವಾಗಿ ಕಾಡಿತ್ತು, ಸ್ತ್ರೀಯ ಮುಂದೆ ಮಾಯೆ ಪುರುಷನೆಂಬ ಅಭಿಮಾನವಾಗಿ ಕಾಡಿತ್ತು, ಲೋಕವೆಂಬ ಮಾಯೆಗೆ ಶರಣರ ಚಾರಿತ್ರ್ಯವು ಮರುಳಾಗಿ ತೋರುವುದು, ಚೆನ್ನಮಲ್ಲಿಕಾರ್ಜುನನೊಲಿದ ಶರಣರಿಗೆ ಮಾಯೆ ಇಲ್ಲ ಮರಹಿಲ್ಲ ಅಭಿಮಾನವು ಇಲ್ಲ” ಎನ್ನುವ ಸಿದ್ದಾಂತದೊಂದಿಗೆ ಹೆಣ್ಣನ್ನು ಮಾಯೆಯ ಬಂಧನದಿಂದ ಬಿಡುಗಡೆಗೊಳಿಸಿ, ಲಿಂಗಸಮಾನತೆಯನ್ನು ಎತ್ತಿಹಿಡಿದ ಒಬ್ಬ ಸ್ತ್ರೀವಾದಿತ್ವವಾದಿಯಾಗಿ ಕಾಣುತ್ತಾಳೆ ಅಕ್ಕ.

ಇಷ್ಟೆಲ್ಲಾ ಸಾಧನೆಗಳ ಜೊತೆ ಅಕ್ಕನನ್ನು ಬಯಲು ಪ್ರಜ್ಞೆಯಾಗಿ ನೋಡಬೇಕು “ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆಲುವಂಗಾನೊಲಿದೆ. ಭವವಿಲ್ಲದ, ಭಯವಿಲ್ಲದ, ನಿರ್ಭಯ ಚೆಲುವಂಗಾನೊಲಿದೆ, ಕುಲಸೀಮೆಯಿಲ್ಲದ ನಿಸ್ಸೀಮ ಚೆಲುವಂಗಾನೊಲಿದೆ” ಎನ್ನುವಲ್ಲಿ ಅಕ್ಕನ ಆ ಬಯಲು ಪ್ರಜ್ಞೆ ಎದ್ದು ಕಾಣುತ್ತದೆ. ಆಕಾಶದಿಂದ ಅತ್ತತ್ತ, ಪಾತಾಳದಿಂದ ಇತ್ತತ್ತ ಆ ಮಹಾ ಘನ ಬಯಲಲ್ಲಿ ಬೆರೆತು ಬೇರಿಲ್ಲದಂತೆ ಆಗಬೇಕಿದೆ. ಆ ಮಹಾ ಬೆಳಕಿನ ಚಿಜ್ಜ್ಯೋತಿಯಲ್ಲಿ ಒಳಗಾದಂತೆ, ಕದಳಿಬನದಲ್ಲಿ ಆ ಮಹಾಬಯಲು ಕಂಡ ಅಕ್ಕ ಬಿಗಿದಪ್ಪಿದ ಆ ಮಹಾ ಬಯಲಿನ ಹೃದಯ ಕಮಲದಲ್ಲಿ ಅಡಗಿದಳು. ನಡಿಗೆ ನಿಂತಿತ್ತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/FEOgQepEXSP8R5OtHvcD7O

Share This Article
Leave a comment

Leave a Reply

Your email address will not be published. Required fields are marked *