ಸಿರಿಗೆರೆಯ ಮಠಕ್ಕೂ ಮುಸ್ಲಿಂ ಭಾಂಧವರಿಗೂ ಅವಿನಾಭಾವ ಸಂಭಂದ

ಇಂದು ಶ್ರೀ ಪಂಡಿತಾರಾಧ್ಯ ಶ್ರೀಗಳು ಚಿತ್ರದುರ್ಗದಲ್ಲಿ ಕುರಾನ್ ಪ್ರವಚನದ ಉದ್ಘಾಟನೆಗೆ ಹೋಗುತಿದ್ದಾರೆ. ಸಿರಿಗೆರೆಯ ಮಠ ಮತ್ತು ಮುಸ್ಲಿಂ ಸಮುದಾಯ ಯಾವತ್ತೂ ಅನ್ಯೋನ್ಯವಾಗಿ ಇವೆ ಎಂಬುದನ್ನು ಇದು ಮತ್ತೊಮ್ಮೆ ತೋರಿಸಿಕೊಟ್ಟಂತಾಗಿದೆ

ಹೌದು ಸಿರಿಗೆರೆಯ ಶ್ರೀ ತರಳಬಾಳು ಬೃಹನ್ಮಠದ ಇತಿಹಾಸದಲ್ಲಿ ಮುಸ್ಲಿಮರ ನಡುವೆ ಅತ್ಯಂತ ಮಧುರ ಬಾಂಧವ್ಯ ಶತಮಾನಗಳಿಂದ ಇದೆ ಅಂದರೆ ಕೆಲವರಿಗೆ ಆಶ್ಚರ್ಯ ಆಗಬಹುದು.

ಈ ಬಾಂಧವ್ಯದ ಕೆಲವು ಘಟನೆಗಳನ್ನು ಮೆಲುಕು ಹಾಕುವುದಾದರೆ:

ತರಳಬಾಳು ಜಗದ್ಗುರು ಬೃಹನ್ಮಠದ ಹತ್ತೊಂಬತ್ತನೆಯ ಪೀಠಾಧೀಶ್ವರರಾದ ಶ್ರೀ ಗುರುಶಾಂತ ದೇಶೀಕೇಂದ್ರ ಮಹಾಸ್ವಾಮಿಗಳ ಪರಮ ಶಿಷ್ಯರಲ್ಲಿ ಜಗಳೂರು ಇಮಾಂ ಸಾಹೇಬರು ಪ್ರಮುಖರು. ಇವರು ಆಗಿನ ಮೈಸೂರು ಸಂಸ್ಥಾನದ ಪ್ರಜಾಪ್ರತಿನಿಧಿಯಾಗಿ ಬೃಹನ್ಮಠದ ಹಲವಾರು ಅಭಿವೃದ್ಧಿ ಕಾರ್ಯಗಳಲ್ಲಿ ಗುರುಶಾಂತ ಗುರುಗಳಿಗೆ ಸಹಾಯ ಮಾಡಿದ್ದಾರೆ.

ಗುರುಶಾಂತ ಶ್ರೀಗಳ ನಂತರ ಬಂದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ಕಾಲದಲ್ಲೂ ಇಮಾಂ ಸಾಹೇಬರ ಬಾಂಧವ್ಯ ಮುಂದುವರೆದು ಜಗಳೂರಿನಲ್ಲಿ ನಡೆದ ಪ್ರಪ್ರಥಮ ತರಳಬಾಳು ಹುಣ್ಣಿಮೆಯ ಯಶಸ್ವಿ ರುವಾರಿಗಳಲ್ಲಿ ಪ್ರಮುಖರಾದವರು ಇಮಾಂ ಸಾಹೇಬರು.

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಭರಮಸಾಗರದಲ್ಲಿ ಮಸೀದಿ ಉದ್ಘಾಟನೆ ಮಾಡಿ ಆ ಕಾಲದಲ್ಲಿ ವಿವಾದ ಆಗಿದ್ದರೂ ಬಾಂಧವ್ಯಕ್ಕೆ ಚುತಿ ಬಾರದಂತೆ ನೋಡಿಕೊಂಡರು.

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ಕನಸಿನ ಕೂಸಾದ ಬೆಂಗಳೂರಿನ ತರಳಬಾಳು ಕೇಂದ್ರದ ನಿರ್ಮಾಣದಲ್ಲಿ ಸಾಕಷ್ಟು ಮುಸ್ಲಿಂ ಭಾಂಧವರ ಕೊಡುಗೆ ಇರುವುದನ್ನು ನಾವು ನೋಡ ಬಹುದು.

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ನಂತರ ಬಂದ ಈಗಿನ ಜಗದ್ಗುರುಗಳಾದ ಡಾಕ್ಟರ್ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಮುಸ್ಲಿಂ ಸಮುದಾಯದ ಜೊತೆಗೆ ಮತ್ತೊಷ್ಟು ಅನ್ಯೋನ್ಯತೆ ಬೆಳಸಿದರು.

ದಾವಣಗೆರೆಯಲ್ಲಿ ನಡೆದ ಕೋಮು ಗಲಭೆಯ ಸಂದರ್ಭದಲ್ಲಿ ಮುಸ್ಲಿಂ ಸಮುದಾಯ ಇರುವ ಪ್ರದೇಶದಲ್ಲಿ ಕೋಮು ಸೌಹಾರ್ದತೆಯನ್ನು ಕಾಪಾಡಲು ಪಾದಯಾತ್ರೆ ಮಾಡಿ ಮುಸ್ಲಿಂ ಸಮುದಾಯದ ಗೌರವಕ್ಕೆ ಪಾತ್ರರಾಗಿದ್ದರು.

ನಂತರ ಹರಪನಹಳ್ಳಿಯಲ್ಲಿ ನಡೆದ ತರಳಬಾಳು ಹುಣ್ಣಿಮೆಯ ಕಾರ್ಯಕ್ರಮಕ್ಕೆ ದಾವಣಗೆರೆ ಮೂಲಕ ಹೋಗುವಾಗ ಮುಸ್ಲಿಂ ಸಮುದಾಯದವರು ಜಗದ್ಗುರುಗಳಿಗೆ ಕೊಟ್ಟ ಗೌರವವನ್ನು ಸಮಾಜದ ಯಾವೊಬ್ಬರೂ ಮರೆಯುವಂತಿಲ್ಲ.

ಇಂದಿನ ದಿನಮಾನಗಳಲ್ಲಿ ಕೋಮವಾದಿಗಳ ಕೆಂಗಣ್ಣಿಗೆ ಗುರಿಯಾದ ಟಿಪ್ಪು ಸುಲ್ತಾನ್ ಬಗ್ಗೆ ಡಾಕ್ಟರ್ ಜಗದ್ಗುರುಗಳಿಗೆ ಅಪಾರ ಗೌರವ. ಟಿಪ್ಪು ಸುಲ್ತಾನ್ ಖಡ್ಗ ಅಂತ ಒಂದು ಪುಸ್ತಕ ಶ್ರೀ ಮಠದಿಂದಲೇ ಹೊರತಂದು ಆತನಿಗೆ ಗೌರವ ಕೊಟ್ಟಿದ್ದಾರೆ. ಟಿಪ್ಪು ಸುಲ್ತಾನ್ ಎಂಬ ನಾಟಕವನ್ನು ಸಿ ಜಿ ಕೆ ಎಂಬ ರಂಗ ನಿರ್ದೇಶಕರಿಂದ ನಿರ್ದೇಶಿಸಲ್ಪಟ್ಟು ದೇಶದಾದ್ಯಂತ ಅದರ ಅಭಿನಯಿಸಲು ಸಾಕಷ್ಟು ತಯಾರಿಯೂ ಆಗಿತ್ತು.

ಇದೇ ತಿಂಗಳು ಸಿರಿಗೆರೆಯಲ್ಲಿ ನಡೆಯುವ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ಶ್ರದ್ಧಾಂಜಲಿ ಸಭೆಯ ದಾಸೋಹಕ್ಕೆ ಸಾಕಷ್ಟು ಮುಸ್ಲಿಂ ಭಾಂದವರು ಅಹಾರ ದಾನ್ಯಗಳನ್ನು ದಾಸೋಹ ಮಾಡಿ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ಬಗ್ಗೆ ಶ್ರೀ ಮಠದ ಬಗ್ಗೆ ಅಪಾರ ಭಕ್ತಿ ಗೌರವ ಇರುವುದನ್ನು ನಾವು ನೋಡಬಹುದು.

Share This Article
1 Comment

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ, ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ತಾಲ್ಲೂಕು