ಶಾಮನೂರು ಶಿವಶಂಕರಪ್ಪ: ಇಂದು ಸಂಜೆ ದಾವಣಗೆರೆಯಲ್ಲಿ ಅಂತ್ಯಕ್ರಿಯೆ

ಬಸವ ಮೀಡಿಯಾ
ಬಸವ ಮೀಡಿಯಾ

ದಾವಣಗೆರೆ

ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ನಗರದ ಹೈಸ್ಕೂಲ್‌ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ನಿಧರಾಗಿರುವ ಶಾಮನೂರು ಶಿವಶಂಕರಪ್ಪ ಅವರ ಪಾರ್ಥಿವ ಶರೀರವನ್ನು ರಸ್ತೆ ಮಾರ್ಗವಾಗಿ ದಾವಣಗೆರೆಗೆ ತರಲಾಗಿದೆ.

ಎಂಸಿಸಿ ಬಡಾವಣೆಯಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರ ನಿವಾಸದಲ್ಲಿ ಕುಟಂಬದ ಸದಸ್ಯರು ಹಾಗೂ ಸಂಬಂಧಿಕರಿಗೆ ಮಾತ್ರ ಇಲ್ಲಿ ಅವಕಾಶ ಕಲ್ಪಿಸಲಾಗಿದೆ.

10.30ರಿಂದ ಮಧ್ಯಾಹ್ನ 3.30ರವರೆಗೆ ಸಾರ್ವಜನಿಕರು ಅಂತಿಮ ದರ್ಶನ ಪಡೆಯಬಹುದಾಗಿದೆ. ಬಳಿಕ ಕಲ್ಲೇಶ್ವರ ಮಿಲ್‌ ಆವರಣಕ್ಕೆ ಮೆರವಣಿಗೆ ಮೂಲಕ ಕೊಂಡೊಯ್ದು ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಶಾಮನೂರು ಶಿವಶಂಕರಪ್ಪ ಅವರ ಪತ್ನಿ ಪಾರ್ವತಮ್ಮ ಅವರ ಅಂತ್ಯಕ್ರಿಯೆ ಕೂಡ ಇಲ್ಲಿಯೇ ನಡೆದಿತ್ತು.

ಬಿಗಿ ಪೊಲೀಸ್ ಬಂದೋಬಸ್ತ್‌

ಶಾಮನೂರು ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ಅಭಿಮಾನಿಗಳು, ಪಕ್ಷದ ಮುಖಂಡರು ಅಧಿಕ ಸಂಖ್ಯೆಯಲ್ಲಿ ಸ್ಪರ್ಶ ಆಸ್ಪತ್ರೆಯತ್ತ ಧಾವಿಸಿದರು.

ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದರೂ, ಆಸ್ಪತ್ರೆಯ ಒಳಗೆ ಯಾರನ್ನೂ ಬಿಡಲಿಲ್ಲ. ಪೊಲೀಸರು ಎಲ್ಲರನ್ನೂ ಹೊರಗೆ ನಿಲ್ಲಿಸಿ, ಕುಟುಂಬದವರಿಗೆ ಅಷ್ಟೇ ಒಳಗೆ ಹೋಗಲು ಅವಕಾಶ ಮಾಡಿಕೊಟ್ಟಿದ್ದರು.

ಸದಾಶಿವನಗರ ಕಚೇರಿಗೆ ಕೊನೆಯ ಭೇಟಿ

ಶಾಮನೂರು ಶಿವಶಂಕರಪ್ಪ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಸದಾಶಿವನಗರದಲ್ಲಿ ಇರುವ ಅಖಿಲ ಭಾರತ ವೀರಶೈವ ಮಹಾಸಭಾ ಕಚೇರಿಗೆ ತರಲಾಯಿತು. ಅಲ್ಲಿ ಸೇರಿದ್ದ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು.

ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ವಚನಾನಂದ ಶ್ರೀ, ಸಚಿವ ವಿ.ಸೋಮಣ್ಣ, ಸಂಸದ ಬಸವರಾಜ ಬೊಮ್ಮಾಯಿ, ಶಾಸಕರಾದ ಎಂ.ಕೃಷ್ಣಪ್ಪ, ಅಶ್ವತ್ಥನಾರಾಯಣ ಸೇರಿದಂತೆ ವಿವಿಧ ಮಠಾಧೀಶರು, ರಾಜಕೀಯ ಪಕ್ಷದ ಮುಖಂಡರು ಅಂತಿಮ ದರ್ಶನ ಪಡೆದರು. ಬಳಿಕ ಪಾರ್ಥಿವ ಶರೀರವನ್ನು ದಾವಣಗೆರೆಗೆ ತೆಗೆದುಕೊಂಡು ಹೋಗಲಾಯಿತು.

ಸಿಎಂ ಸಿದ್ದರಾಮಯ್ಯ ಸಂತಾಪ

ಮಾಜಿ ಸಚಿವರು, ಶಾಸಕರು, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಪಕ್ಷದ ಹಿರಿಯ ನಾಯಕರು ಆದ ಶಾಮನೂರು ಶಿವಶಂಕರಪ್ಪ ಅವರ ನಿಧನವಾರ್ತೆ ನೋವುಂಟುಮಾಡಿದೆ. ತಮ್ಮ ಸುದೀರ್ಘ ಸಾರ್ವಜನಿಕ ಜೀವನದಲ್ಲಿ ಅಪವಾದ, ಆರೋಪಗಳಿಂದ ದೂರವಿದ್ದು, ಸಿಕ್ಕ ಅಧಿಕಾರವನ್ನು ಜನಕಲ್ಯಾಣಕ್ಕಾಗಿಯೇ ಮುಡುಪಿಟ್ಟಿದ್ದ ಮುತ್ಸದ್ದಿ ನಾಯಕನ ಅಗಲಿಕೆಯಿಂದ ಸಮಾಜ ಬಡವಾಗಿದೆ. ದಾವಣಗೆರೆ ಜಿಲ್ಲೆಯನ್ನು ಮಾದರಿ ಜಿಲ್ಲೆಯಾಗಿಸಿದ ಶಿವಶಂಕರಪ್ಪನವರ ಕಾರ್ಯಗಳು ಅವರನ್ನು ಜನಮಾನಸದಲ್ಲಿ ಚಿರಸ್ಥಾಯಿಯಾಗಿಸಲಿದೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ ಮತ್ತವರ ಕುಟುಂಬಕ್ಕೆ ಈ ನೋವು ಭರಿಸುವ ಶಕ್ತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

ಎಂ ಬಿ ಪಾಟೀಲ್ ಸಂತಾಪ

ಶಾಸಕರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು, ನಮ್ಮ ಸಂಬಂಧಿಕರೂ ಆಗಿರುವ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪ ಅವರ ನಿಧನದ ಸುದ್ದಿ ತಿಳಿದು ಅತೀವ ದುಃಖವಾಗಿದೆ.

ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ. ಸಾರ್ವಜನಿಕ ಜೀವನದಲ್ಲಿ ಅವರ ಸೇವೆ, ಸಂಘಟನೆಗೆ ನೀಡಿದ ನಾಯಕತ್ವ ಮತ್ತು ಸಮಾಜಕ್ಕೆ ಸಲ್ಲಿಸಿದ ಅಮೂಲ್ಯ ಕೊಡುಗೆಗಳು ಸದಾ ಸ್ಮರಣೀಯ. ಅವರ ಅಗಲಿಕೆಯಿಂದ ರಾಜ್ಯಕ್ಕೆ ಮತ್ತು ಸಮಾಜಕ್ಕೆ ಅಪಾರ ನಷ್ಟವಾಗಿದೆ.

ಭಗವಂತನು ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ. ಶೋಕತಪ್ತ ಕುಟುಂಬಸ್ಥರು, ಅಭಿಮಾನಿಗಳಿಗೆ ಈ ದುಃಖ ಭರಿಸುವ ಶಕ್ತಿಯನ್ನು ಕರುಣಿಸಲಿ.

ಶಾಲಾ, ಕಾಲೇಜುಗಳಿಗೆ ರಜ

ಶಿವಶಂಕರಪ್ಪ ನಿಧನ ಹಿನ್ನೆಲೆಯಲ್ಲಿ ಡಿ.15ರಂದು ದಾವಣಗೆರೆ ನಗರ ವ್ಯಾಪ್ತಿಯ ಎಲ್ಲಾ ಶಾಲಾ, ಕಾಲೇಜುಗಳಿಗೆ ಜಿಲ್ಲಾಧಿಕಾರಿ ಜಿ.ಎಂ ಗಂಗಾಧರಸ್ವಾಮಿ ರಜೆ ಘೋಷಿಸಿದ್ದಾರೆ.

ಈ ಬಗ್ಗೆ ದಾವಣಗೆರೆ ಡಿಡಿಪಿಐ ಕಚೇರಿ ಮಾಹಿತಿ ನೀಡಿದೆ. ” ಶಾಮನೂರು ಶಿವಶಂಕರಪ್ಪನವರು ನಿಧನ ಹಿನ್ನೆಲೆ ಅವರ ಗೌರವಾರ್ಥವಾಗಿ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಡಿಸೆಂಬರ್ 15 ರಂದು ದಾವಣಗೆರೆ ಜಿಲ್ಲೆ ವ್ಯಾಪ್ತಿಯ ಎಲ್ಲಾ ಸರ್ಕಾರಿ ಅನುದಾನಿತ ಅನುದಾನ ರಹಿತ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಈ ರಜೆಯನ್ನು ಮುಂದಿನ ಶನಿವಾರ ಡಿಸೆಂಬರ್ 27 ರಂದು ಪೂರ್ತಿ ದಿನ ಶಾಲೆಯನ್ನು ನಡೆಸಿ ಸರಿದೂಗಿಸಲು ಸೂಚಿಸಲಾಗಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/ILsKluXiq8VG6CRftVzc2g

Share This Article
Leave a comment

Leave a Reply

Your email address will not be published. Required fields are marked *