ಬಿದರಿಯವರ ರಾಜಕೀಯ ಮಹತ್ವಾಕಾಂಕ್ಷೆ ಲಿಂಗಾಯತ ಸಮಾಜಕ್ಕೆ ಗಂಡಾಂತರ ತಂದಿದೆ
ವಿಜಯಪುರ
ಒಂದು ಸಮುದಾಯ ಸರ್ವಾಂಗೀಣವಾಗಿ ವಿಕಾಸ ಹೊಂದಬೇಕಾದರೆ ಆ ಸಮುದಾಯದ ಜನರು ಶಿಕ್ಷಣವಂತರಾಗಬೇಕುˌ ಮೌಡ್ಯಗಳಿಂದ ವಿಮುಕ್ತರಾಗಿರಬೇಕು ಎನ್ನುವುದು ಸಾರ್ವತ್ರಿಕ ಅಭಿಪ್ರಾಯ.
ಆದರೆ ಕೆಲವು ಬಾರಿ ಅಂತಹ ಶಿಕ್ಷಣ ಪಡೆದವರಿಂದ ಆ ಇಡೀ ಸಮುದಾಯ ಅಪಾಯಕ್ಕೆ ಸಿಲುಕುತ್ತದೆ. ಶಂಕರ ಬಿದರಿಯವರ ವಿಷಯದಲ್ಲಿ ಇದು ನಿಜವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
ಲಿಂಗಾಯತ ಧರ್ಮದಲ್ಲಿ ಐಎಎಸ್ˌ ಐಪಿಎಸ್ˌ ಕೆಎಎಸ್ ಮುಂತಾದ ಹುದ್ದೆಗಳಲ್ಲಿ ಸೇವೆ ಮಾಡಿದವರು ಹಾಗೂ ಉತ್ತದ ಹುದ್ದೆಗಳಲ್ಲಿ ಕೆಲಸ ಮಾಡಿ ನಿವೃತ್ತರಾದವರಲ್ಲಿ ಲಿಂಗಾಯತ ಧರ್ಮದ ರಕ್ಷಣೆ ಹಾಗೂ ಬೆಳವಣಿಗೆಗೆ ದುಡಿದವರುˌ ದುಡಿಯುತ್ತಿರುವವರು ತುಂಬ ವಿರಳ.
ಅದಕ್ಕೆ ಅಪವಾದ ಎಂಬಂತೆ ಡಾ. ಎಸ್. ಎಮ್. ಜಾಮದಾರ ಅಂತವರು ಸಂಪೂರ್ಣವಾಗಿ ಲಿಂಗಾಯತ ಧರ್ಮದ ರಕ್ಷಣೆ ಹಾಗೂ ಬೆಳವಣಿಗೆ ಕ್ರೀಯೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಷ್ಟೆ ಅಲ್ಲದೆ ಜಾಮದಾರ ಅವರು ಯಾವ ರಾಜಕೀಯ ಮಹತ್ವಾಕಾಂಕ್ಷೆಯನ್ನು ಹೊಂದದೆ ಹಾಗೂ ನಿವೃತ್ತಿಯ ನಂತರ ಯಾವುದೆ ಸರಕಾರಿ ಹುದ್ದೆ ಅಥವಾ ಸ್ಥಾನಮಾನಗಳನ್ನು ಸ್ವೀಕರಿಸಲಾರೆ ಎನ್ನುವ ಸ್ವಯಂ ನಿರ್ಬಂಧವನ್ನು ವಿಧಿಸಿಕೊಂಡು ಲಿಂಗಾಯತ ಸಂಸ್ಕೃತಿ ರಕ್ಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಶಂಕರ ಬಿದರಿಯವರ ವ್ಯಕ್ತಿತ್ವ ಇದಕ್ಕೆ ಭಿನ್ನವಾದದ್ದು. ಜಾಮದಾರ ಅವರು ಸರಕಾರಿ ಸೇವೆಯಲ್ಲಿರುವಾಗಲೂ ಸಹ ದಕ್ಷತೆ ಹಾಗೂ ನಿಷ್ಠುರತೆಗೆ ಹೆಸರಾಗಿದ್ದರು. ಆ ಗುಣ ಶಂಕರ ಬಿದರಿಯವರಲ್ಲಿ ಕಾಣಸಿಗುವುದಿಲ್ಲ.
ಬಿದರಿಯವರು ತಮ್ಮ ಸರಕಾರಿ ಸೇವೆಯಿಂದ ನಿವೃತ್ತಿಯಾದ ತಕ್ಷಣ ರಾಜಕೀಯ ಪಕ್ಷವನ್ನು ಸೇರಿಕೊಂಡರು. ಆ ಪಕ್ಷದಲ್ಲಿ ಭವಿಷ್ಯವಿಲ್ಲ ಎಂದು ನಿರ್ಧರಿಸಿ ಕೇವಲ ಅತ್ಯಲ್ಪ ಅವಧಿಯಲ್ಲಿ ಮತ್ತೊಂದು ಪಕ್ಷಕ್ಕೆ ಪಕ್ಷಾಂತರ ಮಾಡಿದರು.
ರಾಜಕೀಯ ಮಹತ್ವಾಕಾಂಕ್ಷೆ ಹೊಂದಿರುವ ಬಿದರಿಯವರು ರಾಜಕೀಯ ಪುಢಾರಿಗಳ ಹಿತಾಸಕ್ತಿಗಾಗಿಯೆ ಇರುವ ವೀರಶೈವ ಮಹಾಸಭೆಯ ಚಟುವಟಿಕೆಗಳಲ್ಲಿ ಸಕ್ರೀಯರಾದರು.
ಈ ಹಿಂದೆ ವೀರಶೈವ ಮಹಾಸಭೆಯ ರಾಜ್ಯಾಧ್ಯಕ್ಷರಾಗಿದ್ದ ತಿಪ್ಪಣ್ಣ ಮುಂತಾದವರು ಅಪ್ಪಟ ಬಸವ ತತ್ವಾನುಯಾಯಿಗಳಾಗಿದ್ದರು.
ಅವರೆಂದೂ ಬಸವಣ್ಣನವರಿಗೆ ಅಪಚಾರವೆಸಗುವ ಕಾರ್ಯ ಮಾಡಿದಂತಿಲ್ಲ. ಶಂಕರ ಬಿದರಿಯವರು ಮಹಾಸಭೆಯ ರಾಜ್ಯಾಧ್ಯಕ್ಷರಾದಾಗ ಬಹಳಷ್ಟು ಜನ ಬಸವಾನುಯಾಯಿಗಳು ಖುಷಿ ಪಟ್ಟಿದ್ದರು. ಒಬ್ಬ ವಿದ್ಯಾವಂತ ವ್ಯಕ್ತಿ ಮಹಾಸಭೆಯ ಚುಕ್ಕಾಣಿ ಹಿಡಿದಿರುವುದರಿಂದ ಲಿಂಗಾಯತ-ವೀರಶೈವ ಗೊಂದಲಕ್ಕೆ ತೆರೆ ಬೀಳುತ್ತದೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದರು.
ಮಾನ್ವಿ ನಗರದಲ್ಲಿ ವಾಸಿಸುತ್ತಿದ್ದ ಹಿರಿಯ ಬಸವಾನುಯಾಯಿ ಲಿಂಗೈಕ್ಯ ಸಿದ್ಧಯ್ಯ ಸ್ವಾಮಿಗಳು ಒಮ್ಮೆ ನನ್ನ ಎದುರಿಗೆ ಬಿದರಿಯವರ ಕುರಿತು ಸದಾಶಯ ವ್ಯಕ್ತಪದಿಸಿದ್ದರು. ಆಗ ನಾನು ಅವರಿಗೆ “ಬಹಳ ನಿರೀಕ್ಷೆ ಇಟ್ಟುಕೊಳ್ಳಬೇಡಿˌ ಬಿದರಿಯವರು ಲಿಂಗಾಯತ ಧರ್ಮಕ್ಕೆ ಅಪಾಯಕಾರಿಯಾಗಿ ಪರಿಣಮಿಸಲಿದ್ದಾರೆ” ಎಂದಾಗ ಅವರು ಒಪ್ಪಿಕೊಳ್ಳಲು ತಯ್ಯಾರಿರಲಿಲ್ಲ. ಇವತ್ತು ಅವರು ಬದುಕಿದ್ದರೆ ನನ್ನ ವಾದವನ್ನು ಖಂಡಿತ ಒಪ್ಪಿಕೊಳ್ಳುತ್ತಿದ್ದರು. ಇನ್ನೂ ಕೆಲವರು ಬಿದರಿಯವರ ಕುರಿತು ನಾನು ಹೇಳಿದ ಮಾತುಗಳಿಗೆ ಆಶ್ಚರ್ಯ ವ್ಯಕ್ತಪಡಿಸಿದವರು ಈಗ ಅವರೆಲ್ಲ ನಿಮ್ಮ ಮಾತು ನಿಜವಾಗುತ್ತಿದೆ ಎನ್ನುತ್ತಿದ್ದಾರೆ.
ಬಸವ ಜಯಂತಿಯ ದಿನ ಕಲ್ಪಿತ ರೇಣುಕರ ಫೋಟೊ ಇಟ್ಟು ಜಯಂತಿ ಆಚರಿಸಬೇಕು ಎನ್ನುವ ಆದೇಶವನ್ನು ಬಿದರಿಯವರು ಮಹಾಸಭೆಯ ಎಲ್ಲಾ ತಳಮಟ್ಟದ ಘಟಕಗಳಿಗೆ ಸುತ್ತೋಲೆಯ ರೂಪದಲ್ಲಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ವಚನ ದರ್ಶನ ಸತ್ಯ Vs ಮಿತ್ಯ ಪುಸ್ತಕ ಬಿಡುಗಡೆಯ ದಿನವೆ ಬಿದರಿಯವರ ಈ ಅಘಾತಕಾರಿ ಯೋಜನೆ ಬಹಿರಂಗಗೊಂಡಿತ್ತು. ಅದಕ್ಕೆ ಅವರು ಸ್ಥಳದಲ್ಲಿಯೆ ಬಸವಾನುಯಾಯಿಗಳ ತೀವ್ರ ವಿರೋಧ ಎದುರಿಸಿದ್ದರು.
ರಾಜಕೀಯ ಮಹತ್ವಾಕಾಂಕ್ಷೆಯುಳ್ಳ ಬಿದರಿಯವರು ವೀರಶೈವ-ಲಿಂಗಾಯತ ಎರಡೂ ಒಂದೇ ಎನ್ನುವ ನಿಲುವು ಹೊಂದಿರುವದು ಆಶ್ಚರ್ಯದ ಸಂಗತಿಯಲ್ಲ. ಆದರೆ ಹಿಂದೆಂದೂ ಇರದ ಬಸವ ಜಯಂತಿಯ ದಿನ ರೇಣುಕರ ಜಯಂತಿ ಆಚರಿಸಬೇಕೆನ್ನುವ ಬಿದರಿಯವರ ನಿಲುವು ಖಂಡಿತ ಬಸವ ಸಂಸ್ಕೃತಿ ಹಾಗೂ ಲಿಂಗಾಯತ ಧರ್ಮಕ್ಕೆ ದೊಡ್ದ ಅಪಾಯವನ್ನು ತರಬಲ್ಲುದು.
ಜಾಗತಿಕ ಲಿಂಗಾಯತ ಮಹಾಸಭಾದವರು ಎಷ್ಟೆ ವಿರೋಧಿಸಿದರು ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು ಬಿದರಿಯವರು ತುಮಕೂರಿನ ಕಾರ್ಯಕ್ರಮವೊಂದರಲ್ಲಿ ಬಹಿರಂಗವಾಗಿಯೆ ಹೇಳಿದ್ದಾರೆ. ಈ ಆಡಳಿತ ಸೇವೆಯಲ್ಲಿ ಕಾರ್ಯ ಮಾಡಿ ನಿವೃತ್ತರಾದ ಜನರಿಗೆ ಫ್ಯೂಡಲ್ˌ ಸರ್ವಾಧಿಕಾರˌ ಹಾಗೂ ಅದೇಶ ನೀಡುವ ಚಾಳಿ ಇದ್ದೇ ಇರುತ್ತದೆ. ಎದುರಿನವರ ಭಾವನೆˌ ಅನಿಸಿಕೆˌ ಅಭಿಪ್ರಾಯ ತಿಳಿದುಕೊಳ್ಳವˌ ಇನ್ನೊಬ್ಬರ ಮಾತು ಕೇಳಿಸಿಕೊಳ್ಳುವ ವ್ಯವಧಾನ ಇರುವುದಿಲ್ಲ.
ಬಿದರಿ ನಿಲುವನ್ನು ‘ಶ್ವಾನ ಹಸಿದಿತ್ತು ಅನ್ನ ಹಳಸಿತ್ತು’ ಎನ್ನುವಂತೆ ವೀರಶೈವ ಪಂಚಾಚಾರ್ಯರು ಸ್ವಾಗತಿಸಿದ್ದು ಸಹಜ ನಡೆ. ಅದರಿಂದ ತೀರ ಹುಂಬ ಹಾಗೂ ರಾಜಕೀಯ ಮಹತ್ವಾಕಾಂಕ್ಷಿ ಬಿದರಿ ಅವರಿಗೆ ಇನ್ನಷ್ಟು ಬಲ ಬಂದಂತಾಗಿದೆ.
ಇತ್ತೀಚಿಗೆ ವೀರಶೈವ ಮಹಾಸಭೆಯು ಪಂಚಾರ್ಯರಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಂಡಿತ್ತು. ದಾವಣಗೆರೆಯ ಅಧಿವೇಶನದಲ್ಲಿ ವೀರಶೈವರೂ ಸೇರಿದಂತೆ ಲಿಂಗಾಯತರು “ಹಿಂದೂಗಳಲ್ಲ” ಎನ್ನುವ ಮಹತ್ವದ ನಿರ್ಣಯವನ್ನು ಕೈಗೊಂಡಿತ್ತು. ಇದರಿಂದ ಕಂಗಾಲಾಗಿದ್ದ ರಂಭಾಪುರಿ ಸ್ವಾಮಿ ಮಹಾಸಭೆಯ ಕುರಿತು ಬೇಸರವನ್ನು ವ್ಯಕ್ತಪಡಿಸಿದ ಪ್ರಸಂಗ ನಡೆದುಹೋಗಿತ್ತು.
ಲಿಂಗಾಯತ ಮಹಾಸಭೆ ಸನಾತನಿಗಳು ಲಿಂಗಾಯತ ಸಂಸ್ಕೃತಿಯ ಮೇಲೆ ಮಾಡುತ್ತಿರುವ ದಾಳಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ವೀರಶೈವ ಮಹಾಸಭೆಯೊಂದಿಗೆ ಕೈಜೋಡಿಸಿ ಕಾರ್ಯ ಮಾಡಬೇಕು ಎನ್ನುವ ಮಹಾದುದ್ದೇಶದಿಂದ ಶಂಕರ ಬಿದರಿಯವರನ್ನು ಪುಸ್ತಕ ಬಿಡುಗಡೆಗೆ ಸಮಾರಂಭಕ್ಕೆ ಆಹ್ವಾನಿಸಿತ್ತು. ಆದರೆ ಬಿದರಿ ಅದನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋತರು.
ಬಿದರಿಯವರ ಈ ನಿಲವು ಅವರ ರಾಜಕೀಯ ಲಾಭದ ಉದ್ದೇಶ ಹೊಂದಿದ್ದರೆ ಅದನ್ನು ಬೆಂಬಲಿಸುವ ಪಂಚಾಚಾರ್ಯರ ನಿಲುವು ಬಸವಣ್ಣನವರ ಮಹತ್ವವನ್ನು ಗೌಣಗೊಳಿಸುವ ಹಾಗೂ ಕಲ್ಪಿತ ರೇಣುಕರ ಮಹತ್ವ ಹೆಚ್ಚಿಸುವ ‘ಹೂವಿನೊಂದಿಗೆ ನಾರನ್ನು ಸ್ವರ್ಗಕ್ಕೆ ಸೇರಿಸುವ ದುರುದ್ದೇಶ ಹೊಂದಿದೆ.
ಶಂಕರ ಬಿದರಿ ಒಂದು ಐತಿಹಾಸಿಕ ಪ್ರಮಾಧವನ್ನು ಎಸಗಿದ್ದಾರೆ. ಇದು ಬಹುತೇಕ ವೀರಶೈವ ಮಹಾಸಭೆಯ ತಳಮಟ್ಟದ ಪದಾಧಿಕಾರಿಗಳಲ್ಲಿ ಅಸಮಧಾನ ಹುಟ್ಟುಹಾಕಿದೆ. ಬಿದರಿಯವರ ಈ ನಿರ್ಣಯ ಇತಿಹಾಸದಲ್ಲಿ ಒಂದು ಕಪ್ಪುಚುಕ್ಕೆಯಾಗಿ ಉಳಿಯಲಿದೆ. ಬಿದರಿಯವರ ಈ ನಿರ್ಣಯ ಭವಿಷ್ಯದಲ್ಲಿ ಕ್ಷಮೆಯ ಅರ್ಹತೆಯನ್ನು ಕಳೆದುಕೊಳ್ಳಲಿದೆ.