ಸಾಣೇಹಳ್ಳಿ:
ಇಲ್ಲಿನ ಶ್ರೀ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀ ಗುರುಪಾದೇಶ್ವರ ಪ್ರೌಢಶಾಲೆಗಳ ಸಂಯುಕ್ತಾಶ್ರಯದಲ್ಲಿ ನಡೆದ 77 ನೆಯ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು, ಭಾರತ ಸರ್ವಜನಾಂಗದ ಶಾಂತಿಯ ತೋಟವೆಂದು ಅನೇಕ ವರ್ಷಗಳಿಂದ ಬಹಳ ಶ್ರದ್ಧೆಯಿಂದ ಹೇಳಿಕೊಳ್ಳುತ್ತಾ ಬಂದಿದ್ದೇವೆ. ಇದು ಶಾಂತಿಯ ತೋಟವಾಗಿ ಉಳಿಯಬೇಕು ಎಂದರೆ ನಮ್ಮ ಸಂವಿಧಾನವನ್ನು ಗೌರವಿಸಬೇಕು.
ಗೌರವಿಸುವುದೆಂದರೆ ಪೂಜೆ ಮಾಡುವುದಲ್ಲ; ಅದರಲ್ಲಿರುವ ತತ್ವಾದರ್ಶಗಳನ್ನು ನಮ್ಮ ರಾಜಕೀಯ ನೇತಾರರು, ಪ್ರಜೆಗಳು, ಅಧಿಕಾರಿಗಳು ಪರಿಪಾಲನೆ ಮಾಡುವಂಥ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಆಗ ಭಾರತ ಶಾಂತಿಯ ತೋಟವಾಗಿ ಉಳಿಯಲಿಕ್ಕೆ ಸಾಧ್ಯ.
ನಮಗೆ ಸ್ವಾತಂತ್ರ್ಯ ಸಿಕ್ಕರೂ ನಮ್ಮದೇ ಆದ ಸಂವಿಧಾನ ಇರಲಿಲ್ಲ. ಅಂಬೇಡ್ಕರ್, ರಾಜೇಂದ್ರ ಪ್ರಸಾದ್ ಮತ್ತಿತರರು ಸೇರಿಕೊಂಡು ಅಪರೂಪದ ಸಂವಿಧಾನವನ್ನು ರಚನೆ ಮಾಡಿದರು. ಇಡೀ ವಿಶ್ವದಲ್ಲಿ ಬಹುದೊಡ್ಡ ಪ್ರಜಾಸತ್ತಾತ್ಮಕ ಸಂವಿಧಾನ ಭಾರತದ್ದು. ನಮ್ಮ ಸಂವಿಧಾನ ನಮ್ಮ ಬದುಕಿಗೆ ಬೆಳಕನ್ನು ನೀಡುವಂಥದ್ದು. ಆದರೆ ಇತ್ತೀಚಿನ ದಿನಮಾನಗಳಲ್ಲಿ ಸಂವಿಧಾನವನ್ನೇ ಅನುಮಾನದಿಂದ ನೋಡುವಂಥ ರಾಜಕೀಯ ದುರೀಣರು ನಮ್ಮ ಮಧ್ಯೆ ಸೃಷ್ಟಿಯಾಗಿದ್ದಾರೆ. ಭಾರತ ಸಂವಿಧಾನ ನಮ್ಮ ದೇಶದ ಧರ್ಮಗ್ರಂಥ. ಸಂವಿಧಾನಕ್ಕೆ ಧಕ್ಕೆ ತರುವಂಥ ವಾತಾವರಣ ಇವತ್ತಿನ ರಾಜಕೀಯ ವಿದ್ಯಮಾನಗಳಲ್ಲಿ ನಡೆಯುತ್ತಿರುವುದನ್ನು ನೋಡುತ್ತಿದ್ದೇವೆ.

ಭಾರತ ವೈವಿದ್ಯಮಯ ನಾಡು. ಇಲ್ಲಿ ಅನೇಕ ಭಾಷೆ, ಧರ್ಮ, ಜನಾಂಗವಿದ್ದರೂ ವೈವಿಧ್ಯತೆಯಲ್ಲಿ ಏಕತೆಯನ್ನು ಉಳಿಸಿಕೊಂಡು ಹೋಗುವಂಥ ವ್ಯವಸ್ಥೆ ನಮ್ಮ ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಏಕರಾಷ್ಟ್ರ, ಏಕಭಾಷೆ, ಏಕಧರ್ಮ ಎನ್ನುವ ಕೂಗು ಆಗಿಂದಾಗ್ಗೆ ಕೇಳಿಬರುತ್ತದೆ. ಇದು ತುಂಬ ಅಪಾಯಕಾರಿಯಾದದ್ದು. ಇದರ ಬಗ್ಗೆ ಎಲ್ಲರೂ ಗಂಭೀರವಾಗಿ ಆಲೋಚನೆ ಮಾಡಬೇಕು.
ಗಣರಾಜ್ಯೋತ್ಸವದ ಸಂದರ್ಭದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು, ಧ್ವಜಾರೋಹಣ, ಪ್ರಭಾತ್‌ಪೇರಿ ತುಂಬ ವೈಭವದಿಂದ ನಡೆಯುತ್ತವೆ. ಇಷ್ಟು ಮಾಡಿದರೆ ಸಾಕೇ? ಈ ಪ್ರಶ್ನೆಯನ್ನು ನಾವು ನೀವು ಹಾಕಿಕೊಳ್ಳುವುದರ ಬದಲು ನಮ್ಮ ಜನಪ್ರತಿನಿಧಿಗಳು ಹಾಕಿಕೊಳ್ಳಬೇಕಾಗಿದೆ. ಭ್ರಷ್ಟತೆ ಮಿತಿಮೀರುತ್ತಿದೆ. ಪ್ರಜಾಪ್ರತಿನಿಧಿ ಸರ್ವಾಧಿಕಾರಿಯಾಗುತ್ತಿದ್ದಾನೆ. ಕಾನೂನನ್ನು ನಾನು ರಚನೆ ಮಾಡುತ್ತೇನೆಯೇ ಹೊರತು ಕಾನೂನು ನನ್ನ ಮೇಲೆ ಏನು ಮಾಡಲು ಸಾಧ್ಯವಿಲ್ಲ ಎನ್ನುವ ಅಹಂಕಾರ ಅತಿಯಾಗುತ್ತಿದೆ.
ದುಷ್ಟ, ಭ್ರಷ್ಟ, ಲಂಚಕೋರನಿಗೆ ಯಾವುದೇ ಕಾನೂನಿನ ಭಯವಿಲ್ಲ. ಕಾನೂನಿನಲ್ಲಿ ಶಿಕ್ಷೆಯಾದರೂ ಆ ಶಿಕ್ಷೆಯಿಂದ ಹೊರಬರುವ ಉಪಾಯಗಳೇನು ಎನ್ನುವುದನ್ನು ಆಲೋಚನೆ ಮಾಡುವನು. ಆದ್ದರಿಂದ ನಮ್ಮಲ್ಲಿ ಸಂವಿಧಾನದ ಬಗ್ಗೆ ಸರಿಯಾದ ಅರಿವು ರಾಜಕಾರಣಗಳಿಗೂ ಇಲ್ಲ, ಪ್ರಜಾಪ್ರಭುಗಳಿಗೂ ಇಲ್ಲ.

ಪ್ರಜಾಪ್ರಭುವಿನ ಜವಾಬ್ದಾರಿ ಚುನಾವಣೆಯ ಸಂದರ್ಭದಲ್ಲಿ ಅರ್ಹರನ್ನು ಆಯ್ಕೆ ಮಾಡಬೇಕು. ಯಾವುದೇ ಆಮಿಷಗಳಿಗೆ ಬಲಿಯಾಗದೇ ನಮ್ಮ ಮತವನ್ನು ಚಲಾಯಿಸಬೇಕು. ಆದರೆ ಇವತ್ತು ಮತದಾನ ದಾನವಾಗಿ ಉಳಿಯದೇ ಅದೊಂದು ಉದ್ಯಮವಾಗುತ್ತಿದೆ. ಅಲ್ಲಿ ಕೊಳ್ಳುವ ಮಾರುವ ಕ್ರಿಯೆ ಪ್ರಧಾನವಾಗುತ್ತಿದೆ. ಕಾರಣ ಅರ್ಹರು ರಾಜಕೀಯ ಕ್ಷೇತ್ರಕ್ಕೆ ಕಾಲಿಡಲು ಹೆದರುವಂಥ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ ನಾವು ಯಾವುದೇ ಆಮಿಷಕ್ಕೆ ಬಲಿಯಾಗದೇ ನಮ್ಮ ಮತವನ್ನು ಅರ್ಹರಿಗೆ ದಾನ ಮಾಡಿದರೆ ಆಗ ಉತ್ತಮ ಆಡಳಿತವನ್ನು ನಿರೀಕ್ಷೆ ಮಾಡಲು ಸಾಧ್ಯ.
ವಿದ್ಯಾರ್ಥಿಗಳ ಜವಾಬ್ದಾರಿ ಗುರುತರವಾದದ್ದು. ದೇಶ ಅಭಿವೃದ್ಧಿಯಾಗಲು ಕೇವಲ ಪ್ರತಿಭೆಯೊಂದಿದ್ದರೆ ಸಾಲದು. ಜನರಲ್ಲಿ ನೈತಿಕ ತಳಹದಿ, ಧಾರ್ಮಿಕ ನಂಬಿಕೆ ಮತ್ತು ಕಾಯಕ ಶ್ರದ್ಧೆ ಇದ್ದಾಗ ಮಾತ್ರ ಒಂದು ದೇಶ ನಿಜವಾದ ಅಭಿವೃದ್ಧಿ ಹೊಂದಲು ಸಾಧ್ಯ.
ಅಭಿವೃದ್ಧಿ ಕುಂಠಿತಗೊಳ್ಳಲು ಕಾರಣಗಳನ್ನು ನಮ್ಮನ್ನು ಬಿಟ್ಟು ಹೊರಗೆ ಹುಡುಕಬೇಕಾಗಿಲ್ಲ. ಮೊದಲು ನಮ್ಮ ನಮ್ಮ ಅಂತರಂಗವನ್ನು ಶ್ರದ್ಧೆ, ಸತ್ಯ, ನಂಬಿಕೆ, ಪರಸ್ಪರ ಪ್ರೀತಿ, ಸೌಹಾರ್ದಗಳಿಂದ ತುಂಬಿಕೊಳ್ಳಬೇಕು. ಆಗ ತನ್ನಿಂದ ತಾನೆ ಬಹಿರಂಗದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ. ನಮ್ಮ ತಪ್ಪುಗಳನ್ನು ನಾವೇ ಅರಿತು ಸರಿಪಡಿಸಿಕೊಳ್ಳಬೇಕು. ವ್ಯಕ್ತಿ ಸರಿಯಾದರೆ ದೇಶ ತನ್ನಿಂದ ತಾನೇ ಸರಿಹೋಗುವುದು.
ಬಹುತೇಕರು ಹೇಳುವಂತೆ ನಮ್ಮ ದೇಶ ಪೂರ್ಣವಾಗಿ ಹಾಳಾಗಿಲ್ಲ. ಒಳಿತಿಗಿಂತ ಕೆಡುಕನ್ನು ವಿಜೃಂಭಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಇದು ಸರಿಯಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಅಸಂಖ್ಯಾತರ ತ್ಯಾಗ ಬಲಿದಾನವಿದೆ. ಆ ಎಲ್ಲ ಹಿರಿಯರು ಯಾವ ಕನಸು ಹೊತ್ತು ದೇಶಕ್ಕಾಗಿ ತನು-ಮನ-ಧನವನ್ನು ತ್ಯಾಗ ಮಾಡಿದರೋ ಆ ಕನಸು ಇನ್ನೂ ನನಸಾಗಿಲ್ಲ. ಇಂಥ ರಾಷ್ಟ್ರೀಯ ಹಬ್ಬಗಳಂದು ದೇಶಕ್ಕಾಗಿ ತ್ಯಾಗ ಮಾಡಿದವರನ್ನು ನೆನಪು ಮಾಡಿಕೊಂಡು ಅವರಂತೆ ನಾವು ದೇಶಪ್ರೇಮಿಗಳಾಗಬೇಕು ಎನ್ನುವ ದೃಢಸಂಕಲ್ಪ ಮಾಡಬೇಕಾಗಿತ್ತು. ಆದರೆ ಇಂದು ಕೇವಲ ಆದರ್ಶಗಳನ್ನು ಹೇಳುವ ದಿನವಾಗಿದೆ.

ಆದರ್ಶಗಳನ್ನು ಹೇಳುವ ದಿನವಾಗದೆ ಆಚರಣೆಗೆ ತರುವ ಸಂಕಲ್ಪದ ದಿನವಾಗಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸ್ವಚ್ಛತೆಯನ್ನು ಕಾಯ್ದುಕೊಳ್ಳುವ, ಕೆಟ್ಟದ್ದನ್ನು ಪ್ರತಿಭಟಿಸುವ, ಪ್ರತಿಭೆಯನ್ನು ಗೌರವಿಸುವ, ನೋವಿನಲ್ಲಿರುವವರಿಗೆ ಸ್ಪಂದಿಸುವ ಸಂಕಲ್ಪ ಮಾಡಿ ಅದರಂತೆ ನಡೆದುಕೊಂಡಾಗ ರಾಷ್ಟ್ರೀಯ ಹಬ್ಬಗಳಿಗೆ ಇನ್ನೂ ಹೆಚ್ಚು ಅರ್ಥ ಬರುವುದು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸ್ಥಳೀಯ ಸಲಹಾ ಸಮಿತಿಯ ಉಪಾಧ್ಯಕ್ಷ ಎಸ್. ಆರ್. ಚಂದ್ರಶೇಖರಯ್ಯ ಮಾತನಾಡಿದರು. ವಿದ್ಯಾರ್ಥಿಗಳಾದ ಸುಕನ್ಯಾ, ಪ್ರಾರ್ಥನ, ಇಂಚರ, ಮನೋಜ ವೇದಾಂತ ಕನ್ನಡ, ಹಿಂದಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಗಣರಾಜ್ಯೋತ್ಸವದ ಇತಿಹಾಸ, ಔಚಿತ್ಯ ಕುರಿತಂತೆ ಭಾಷಣ ಮಾಡಿದರು.
ಆರನೆಯ ತರಗತಿಯ ವಿದ್ಯಾರ್ಥಿಗಳು ದೇಶಭಕ್ತಿಗೀತೆಗಳನ್ನು ಹಾಡಿದರು. ಶಾಲಾ ಮಕ್ಕಳು ಊರಿನ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಸಿದರು. ಧ್ವಜಾರೋಹಣದ ನಂತರ ಆಕರ್ಷಕ ಧ್ವಜವಂದನೆ ನೆರವೇರಿಸಿದರು. ಶಾಲಾ ಕಾಲೇಜಿನ ನೌಕರರು, ಗ್ರಾಮಸ್ಥರು ಭಾಗವಹಿಸಿದ್ದರು.
ಅಧ್ಯಾಪಕಿ ಸಂಧ್ಯಾ ಪಿ.ಎಲ್. ಸ್ವಾಗತಿಸಿದರೆ, ಮಲ್ಲಿಕಾರ್ಜುನ ನಿರೂಪಿಸಿ ವಂದಿಸಿದರು. ವೇದಿಕೆಯ ಮೇಲೆ ಉಭಯ ಶಾಲೆಗಳ ಮುಖ್ಯಶಿಕ್ಷಕರು ಅಧ್ಯಾಪಕರು ಉಪಸ್ಥಿತರಿದ್ದರು.
