ಕೂಡಲಸಂಗಮ :
ಇದೇ ಧರ್ಮ ಭವಿಷ್ಯದಲ್ಲಿ ಜಗತ್ತನ್ನು ಆಳುವ ಏಕೈಕ ಧರ್ಮವಾಗಲಿದೆ ಎಂದು ಬಾಗಲಕೋಟೆ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.
ಕೂಡಲಸಂಗಮ ಬಸವ ಧರ್ಮ ಪೀಠದ ಆವರಣದಲ್ಲಿ ನಡೆದ ೩೯ನೇ ಶರಣ ಮೇಳದ ಮೊದಲ ದಿನವಾದ ಸೋಮವಾರ ರಾತ್ರಿ ನಡೆದ ಮಠಾಧಿಪತಿಗಳ ಧರ್ಮ ಚಿಂತನ ಗೋಷ್ಠಿ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ಬಸವ ಧರ್ಮದಲ್ಲಿ ವಿಜ್ಞಾನ, ತಂತ್ರಜ್ಞಾನ, ವೈಚಾರಿಕತೆ ಎಲ್ಲವೂ ಇದೆ. ಸರ್ವಕಾಲಕ್ಕೂ, ಸರ್ವರಿಗೂ ಅವಶ್ಯ ಇರುವ ಧರ್ಮವಾಗಿದೆ. ೧೨ನೇ ಶತಮಾನದ ಬಸವಾದಿ ಶರಣರು ಪ್ರಶ್ನಿಸದೇ ಯಾವುದನ್ನು ಒಪ್ಪಿಕೊಳ್ಳಲಿಲ್ಲ. ಪ್ರಶ್ನಿಸುವ ಹಕ್ಕು ಜಗತ್ತಿನ ಯಾವ ಧರ್ಮದಲ್ಲಿಯೂ ಇಲ್ಲ ಅದು ಬಸವ ಧರ್ಮದಲ್ಲಿ ಮಾತ್ರ ಇದೆ. ಇಂದು ಪ್ರಶ್ನಿಸುವವರನ್ನು ವಿರೋಧಿಗಳು ಎನ್ನುವ ಭಾವನೆಯನ್ನು ಬಿಡಬೇಕು ಎಂದರು.
ಚಾಮರಾಜನಗರ ಜಿಲ್ಲೆ ಹರವೆ ವಿರಕ್ತ ಮಠದ ಸರ್ಪಭೂಷಣ ಸ್ವಾಮೀಜಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಭಕ್ತರು ಮಠಾಧೀಶರನ್ನು ಜಾಗೃತಗೊಳಿಸುವ ಕಾರ್ಯವನ್ನು ಶರಣ ಮೇಳ ಮಾಡುತ್ತ ಬಂದಿದೆ. ಇಂತಹ ಸಮಾರಂಭಗಳ ಅಗತ್ಯ ಇಂದು ಸಮಾಜಕ್ಕೆ ಇದೆ. ಮಠಗಳು ಹಿಂದೆ ಮಾಡಿದ ಸೇವೆಯಿಂದಲೇ ಇಂದು ಜೀವಂತವಾಗಿವೆ.

ಸಮಾಜಮುಖಿ ಕಾರ್ಯದಲ್ಲಿ ಎಲ್ಲ ಮಠಗಳು ತೊಡಗಬೇಕು. ಸರಳ ಬದುಕನ್ನು ನಾವು ಕಲಿಯಬೇಕು. ಬಸವಣ್ಣನವರ ಕಾಯಕ, ದಾಸೋಹ ಸಿದ್ಧಾಂತವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಇಳಕಲ್ಲ ವಿಜಯಮಹಾಂತೇಶ್ವರ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ಮಾತನಾಡಿ, ಎಲ್ಲ ಕಡೆ ಶಿವಾನುಭವದ ಸಂತೆ ಮಾಡಬೇಕು. ನಾಡಿನ ಪ್ರತಿ ಮನೆ ಮನೆಗೂ ವಚನ ಸಾಹಿತ್ಯದ ಅರಿವು ಮೂಡಿಸುವ ಕಾರ್ಯವನ್ನು ನಾವೆಲ್ಲರೂ ಮಾಡಬೇಕು. ಎಲ್ಲ ಭಕ್ತರು ಮನೆಯಲ್ಲಿ ವಿಭೂತಿ ಧಾರಣೆ, ಇಷ್ಟಲಿಂಗ ಪೂಜೆ ಮಾಡಿಕೊಳ್ಳಬೇಕು. ಮನೆಗೆ ಬರುವ ಬಂಧುಗಳಿಗೂ ಈ ಆಚರಣೆ ಮಾಡಲು ಪ್ರೇರೆಪಿಸಬೇಕು ಎಂದರು.
ಬಸವ ಧರ್ಮ ಪೀಠದ ಮಾತೆ ಗಂಗಾದೇವಿ ಮಾತನಾಡಿ, ಈ ವರ್ಷ ಕೇಂದ್ರ ಸರ್ಕಾರ ನಡೆಸುವ ಜನಸಂಖ್ಯಾ ಸಮೀಕ್ಷೆಯಲ್ಲಿ ಭಕ್ತರು ಧರ್ಮ ಕಾಲಂನಲ್ಲಿ ಲಿಂಗಾಯತ ಎಂದೇ ಬರೆಸಬೇಕು. ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಎಲ್ಲ ಸ್ವಾಮೀಜಿಗಳು ಕೂಡಿ ಸಮೀಕ್ಷೆ ಜಾಗೃತಿ ಮೂಡಿಸುವ ಕುರಿತು ಚರ್ಚಿಸುತ್ತೆವೆ ಎಂದರು.
ಸಮಾರಂಭದಲ್ಲಿ ತಂಗಡಗಿ ಹಡಪದ ಅಪ್ಪಣ್ಣ ದೇವರ ಮಹಾಸಂಸ್ಥಾನ ಮಠದ ಅಪ್ಪಣ್ಣ ಭಾರತಿ ಸ್ವಾಮೀಜಿ, ಗುಳೇದಗುಡ್ಡ ಗುರುಸಿದ್ದೇಶ್ವರ ಬೃಹನ್ಮಠದ ಬಸವರಾಜ ಪಟ್ಟದಾರ್ಯ ಸ್ವಾಮೀಜಿ, ಗುರುಬಸವ ಪಟ್ಟದಾರ್ಯ ಸ್ವಾಮೀಜಿ, ಚಿಕ್ಕಮಗಳೂರು ವಿರಕ್ತಮಠದ ಜಯಬಸವಾನಂದ ಸ್ವಾಮೀಜಿ, ಚಾಮರಾಜನಗರ ಜಿಲ್ಲೆ ಶಿವಕುಮಾರಪುರ ವಿರಕ್ತಮಠದ ಇಮ್ಮಡಿ ಮಹಾಂತ ಸ್ವಾಮೀಜಿ, ನಾಗನೂರು ಗುರುಬಸವ ಮಠದ ಬಸವಗೀತಾ ತಾಯಿ, ಕಲಬುರ್ಗಿ ಅಕ್ಕಮಹಾದೇವಿ ಮಠದ ಮಾತೆ ಪ್ರಭುಶ್ರೀ ತಾಯಿ, ಮಹಾರಾಷ್ಟ್ರ ಮುಗಳಿ ಬಸವ ಮಂಟಪದ ಮಾತೆ ಮಹಾನಂದ ತಾಯಿ ಮಾತನಾಡಿದರು. ಗೋಷ್ಠಿಯಲ್ಲಿ ೩೦ಕ್ಕೂ ಅಧಿಕ ಸ್ವಾಮೀಜಿಗಳು ಭಾಗವಹಿಸಿದ್ದರು.

ಸನಾತನ ವ್ಯವಸ್ಥೆ ಇಲ್ಲ:
ಬಸವ ಧರ್ಮ ಪೀಠದಲ್ಲಿ ಎಂದು ಸನಾತನ ವ್ಯವಸ್ಥೆ ಬರುವುದಿಲ್ಲ. ವಚನ ಸಾಹಿತ್ಯ ಪ್ರಸಾರ, ಲಿಂಗಾಯತ ತತ್ವ ಸಿದ್ದಾಂತಕ್ಕೆ ಬದ್ದವಾಗಿ ನಡೆದುಕೊಂಡು ಬಂದಿದೆ, ಮುಂದೆಯೂ ಅದೇ ಸಿದ್ದಾಂತದಲ್ಲಿ ನಡೆದುಕೊಂಡು ಹೋಗುವುದು. ಬಸವ ಧರ್ಮ ಪೀಠದ ಏಳಿಗೆ ಸಹಿಸದ ಕೆಲವರು ಹತಾಶೆಗೊಂಡು ಇಲ್ಲಸಲ್ಲದ ಆರೋಪ ಮಾಡುವರು. ಅವರಿಗೆ ತಕ್ಕ ಉತ್ತರ ನೀಡಲು ಸಿದ್ದರಿದ್ದೇವೆ.
ಮಠಾಧಿಪತಿಗಳ ಧರ್ಮ ಚಿಂತನಗೋಷ್ಠಿ ಈ ವರ್ಷದಿಂದ ಆರಂಭಿಸಿದ್ದೇವೆ. ಲಿಂಗಾಯತ ಧರ್ಮದ ಕುರಿತು-ಚಿಂತನ ಮಂಥನ ಮಾಡಲಾಗುವುದು. ನಾಡಿನ ಎಲ್ಲ ಭಾಗದಿಂದ ಅಪಟ್ಟ ಬಸವ ತತ್ವದ ಸ್ವಾಮೀಜಿಗಳನ್ನು ಆಹ್ವಾನಿಸಲಾಗಿದೆ ಎಂದು ಬಸವ ಧರ್ಮ ಪೀಠದ ಮಹದೇಶ್ವರ ಸ್ವಾಮೀಜಿ ಹೇಳಿದರು.

ಸಮಾರಂಭದಲ್ಲಿ ದಾವಣಗೆರೆ ಬಸವ ತತ್ವ ಪ್ರಚಾರಕ ಎ.ಎಚ್. ಹುಚ್ಚಪ್ಪ ಮಾಸ್ಟರ್ ಅವರಿಗೆ ಬಸವ ರತ್ನ, ಚಾಮರಾಜ ನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕು ನೇನೆಕಟ್ಟೆಯ ನಾಗಮಲ್ಲಪ್ಪ ಅವರಿಗೆ ಶರಣ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು.
ಹೆಚ್.ಎಂ.ಹಂಪಣ್ಣ ಅವರ ಶ್ರೀ ಚೆನ್ನಮಲ್ಲೇಶ್ವರ ಪುಸಕ್ತ ಬಿಡುಗಡೆಗೊಂಡಿತು. ಹಾವೇರಿ ಪತ್ರಕರ್ತ ಮಾಲತೇಶ ಅಂಗೂರ, ಚಾಮರಾಜ ನಗರ ಜಿಲ್ಲೆ ಹಳ್ಳದ ಮಾದಹಳ್ಳಿಯ ಎಚ್.ವಿ. ಬಸವರಾಜಪ್ಪ ಅವರಿಗೆ ವಿಶೇಷ ಸತ್ಕಾರ ಮಾಡಿದರು.

ಆರಂಭದಲ್ಲಿ ಮಠಾಧಿಪತಿಗಳ ಧರ್ಮ ಚಿಂತನ ಗೋಷ್ಠಿ ಸಮಾರಂಭದ ಧರ್ಮ ಧ್ವಜಾರೋಹಣವನ್ನು ಬಾಗಲಕೋಟೆ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾಡಿದರು.
