ಕಾಲೇಜು ಮಕ್ಕಳಿಗೆ ವಚನ ವಿಶ್ಲೇಷಣೆ ಲಿಖಿತ ಸ್ಪರ್ಧೆ
ದಾವಣಗೆರೆ:
ಕದಳಿ ಮಹಿಳಾ ವೇದಿಕೆಯ 178ನೇ ಕದಳಿ ಕಮ್ಮಟದಲ್ಲಿ ವಚನ ದಾಸೋಹ, ದತ್ತಿ ಉಪನ್ಯಾಸ ಮತ್ತು ಶರಣ ಮರುಳ ಶಂಕರದೇವ ಹಾಗೂ ಶರಣ ಕಿನ್ನರಿ ಬೊಮ್ಮಯ್ಯ ಅವರ ಶರಣೋತ್ಸವವನ್ನು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ನಡೆಸಲಾಯಿತು.
ಹೆಚ್.ಎಂ.ಮಂದಾಕಿನಿ ಸ್ವಾಮಿ ಇವರ ದತ್ತಿ ಕಾರ್ಯಕ್ರಮದಲ್ಲಿ 12ನೇ ಶತಮಾನದ ವಚನಕಾರ್ತಿಯರ ಬಗ್ಗೆ ಎವಿಕೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಕವಿತಾ ಆರ್.ಜಿ. ಅವರು ಎಲ್ಲರ ಮನ ಮುಟ್ಟುವಂತೆ ಶರಣೆಯರ ಚರಿತ್ರೆಯನ್ನು ಸವಿಸ್ತಾರವಾಗಿ ವಿವರಿಸಿದರು.

ಅಂದಿನ ಶತಮಾನದಲ್ಲಿ ಮಹಿಳೆಯರು ಯಾವುದಕ್ಕೂ ಅಂಜದೆ, ಕುಗ್ಗದೆ ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದದ್ದು, ನಮ್ಮೆಲ್ಲರಿಗೂ ಇಂದಿಗೂ ಸ್ಪೂರ್ತಿದಾಯಕವಾಗಿದೆ. ಅಂದಿನ ಅವರ ಗಟ್ಟಿತನ ನಾವು ಇಂದಿಗೂ ಅದನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗಬೇಕೆಂದು ತಿಳಿಸಿಕೊಟ್ಟರು.

ಮುಖ್ಯ ಅತಿಥಿಗಳಾದ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಕರಿಬಸಪ್ಪ̤.ಟಿ. ಅವರು ಇಂದಿನ ದಿನಮಾನಗಳಲ್ಲಿ ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ಅತ್ಯವಶ್ಯಕ. 12ನೇ ಶತಮಾನದ ಶರಣ ಶರಣೆಯರ ಬಗ್ಗೆ ತಿಳಿದುಕೊಂಡು, ಅವರ ವಚನಗಳನ್ನ ಅಧ್ಯಯನ ಮಾಡಿ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆಯುವುದು ತುಂಬಾ ಅವಶ್ಯಕ ಎಂದು ಮಕ್ಕಳಿಗೆ ತಿಳಿಹೇಳಿದರು.
ಕದಳಿ ಮಹಿಳಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಮಮತಾ ನಾಗರಾಜ್ ಅವರು ಶರಣ ಮರುಳ ಶಂಕರದೇವ ಹಾಗೂ ಶರಣ ಕಿನ್ನರಿ ಬೊಮ್ಮಯ್ಯನವರ ಬಗ್ಗೆ ಮಾಹಿತಿ ನೀಡಿ, ಮಕ್ಕಳು ಪ್ರತಿದಿನ ದಿನಕ್ಕೊಂದು ವಚನದಂತೆ ಕಲಿತು ಅರಿತುಕೊಂಡು ನಡೆಯಬೇಕೆಂದು ಹೇಳಿದರು.

ಕಾಲೇಜಿನ ಮಕ್ಕಳಿಗೆ ವಚನ ವಿಶ್ಲೇಷಣೆ ಲಿಖಿತ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಶರಣೆ ಮಂದಾಕಿನಿ ಸ್ವಾಮಿ ಅವರು ಬಹುಮಾನದ ಪ್ರಾಯೋಜಕರಾಗಿದ್ದರು. ಕಾಲೇಜಿನ ಮಕ್ಕಳಿಗೆ ವಚನ ದಾಸೋಹವನ್ನು ಭವಾನಿ ಶಂಭುಲಿಂಗಪ್ಪ ಅವರು ನಡೆಸಿಕೊಟ್ಟರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ.ಬಿ. ಪರಮೇಶ್ವರಪ್ಪ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹಪ್ರಾಧ್ಯಾಪಕರಾದ ಸಿದ್ದಲಿಂಗಮ್ಮ, ವಿನೋದ ಅಜಗಣ್ಣನವರು, ವೇದಿಕೆಯ ತಾಲ್ಲೂಕು ಅಧ್ಯಕ್ಷರಾದ ನಿರ್ಮಲ ಶಿವಕುಮಾರ್, ರತ್ನ ಸಿ. ರೆಡ್ಡಿ, ಚಂದ್ರಿಕಾ ಮಂಜುನಾಥ, ಗಿರಿಜಮ್ಮ, ಮಧುಮತಿ, ಕಾಲೇಜಿನ ಸಿಬ್ಬಂದಿ ವರ್ಗದವರು, ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವೇದಿಕೆಯ ಸದಸ್ಯರಿಂದ ಪ್ರಾರ್ಥನೆ, ವಸಂತ.ಕೆ.ಆರ್. ಸ್ವಾಗತಿಸಿದರು, ನಂದಿನಿ ಗಂಗಾಧರ ಅವರು ದತ್ತಿ ಹಾಗೂ ದತ್ತಿ ದಾನಿಗಳ ಪರಿಚಯವನ್ನು ಮಾಡಿಕೊಟ್ಟರೆ, ಪೂರ್ಣಿಮಾ ಪ್ರಸನ್ನ ಇವರು ದತ್ತಿ ಉಪನ್ಯಾಸಕರ ಪರಿಚಯವನ್ನು ಮಾಡಿದರು. ಸೌಮ್ಯ ಸತೀಶ ವಂದಿಸಿದರು. ವಿಜಯ ಚಂದ್ರಶೇಖರ ಕಾರ್ಯಕ್ರಮ ನಿರೂಪಿಸಿದರು.
