ಬಸವಕಲ್ಯಾಣ:
ಇಷ್ಟಲಿಂಗ ಕಲ್ಪನೆಯು ಕೇವಲ ಧಾರ್ಮಿಕ ಸಂಕೇತವಲ್ಲ, ಅದು ಆತ್ಮದ ದರ್ಶನವಾಗಿದೆ ಎಂದು ಡೋಹರ ಕಕ್ಕಯ್ಯನವರ ವಚನಗಳಿಂದ ತಿಳಿದು ಬರುತ್ತದೆ ಎಂದು ಸರಕಾರಿ ಪದವಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕಿ ಮೀನಾಕ್ಷಿ ಬಿರಾದಾರ ಹೇಳಿದರು.
ನಗರದ ಹರಳಯ್ಯ ಗವಿಯಲ್ಲಿ ಅಂರ‍್ರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ವತಿಯಿಂದ ಜರುಗಿದ ಶರಣು ಶರಣಾರ್ಥಿ ಸಮಾವೇಶ, ಡೋಹರ ಕಕ್ಕಯ್ಯನವರ ಹಾಗೂ ಹರ್ಡೇಕರ ಮಂಜಪ್ಪನವರ ಸ್ಮರಣೋತ್ಸವದಲ್ಲಿ ಮುಖ್ಯ ಅನುಭಾವ ನೀಡಿದರು.
ಕುಲದಿಂದ ವ್ಯಕ್ತಿತ್ವ ಅಳೆಯಬಾರದು, ಗುಣದಿಂದ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎಂದು ಶಿವಶರಣರು ಪರ್ಯಾಯ ವ್ಯವಸ್ಥೆ ಕೊಟ್ಟು ಹೋಗಿದ್ದಾರೆ. ಡೋಹರ ಕಕ್ಕಯ್ಯ ಶ್ರಮಿಕ ವರ್ಗದಿಂದ ಬಂದವರು ಕಾಯಕವೇ ಕೈಲಾಸ ಎಂಬ ತತ್ವವನ್ನು ಪಾಲಿಸಿದ ಇವರು ಜಾತಿ ಪದ್ಧತಿಯನ್ನು ವಿರೋಧಿಸಿ ಸಮಾನತೆಯನ್ನು ಸಾರಿದರು. ಅವರ ವಚನಗಳು ಸಾಮಾಜಿಕ ಸಮಾನತೆ ಅಂತರಂಗದ ಜಾಗೃತಿಯನ್ನು ಎತ್ತಿಹಿಡಿಯುತ್ತವೆ ಎಂದರು.
ಅಕ್ಕಮಹಾದೇವಿ ಗವಿಯ ಪೂಜ್ಯ ಸತ್ಯಕ್ಕತಾಯಿ ಅವರು ಹರ್ಡೇಕರ ಮಂಜಪ್ಪನವರ ಕುರಿತು ಮಾತನಾಡಿ, ಹರ್ಡೇಕರ ಮಂಜಪ್ಪನವರದು ಅನುಕರಣೀಯ ಜೀವನ. ಅಪ್ರತಿಮ ರಾಷ್ಟ್ರಭಕ್ತರಾಗಿದ್ದ ಅವರು ಸಮಾಜ ಸೇವೆಗೆ ತಮ್ಮ ಜೀವನ ಮುಡಿಪಾಗಿಟ್ಟರು.

ಲಿಂಗಾಯತರೆಲ್ಲ ಒಂದುಗೂಡಬೇಕೆಂದು ಮೊಟ್ಟಮೊದಲ ಬಸವ ಜಯಂತಿಯನ್ನು ಆರಂಭಿಸಿದರು. ೧೯೧೩ ರಲ್ಲಿ ಮಹಾತ್ಮ ಗಾಂಧಿಜಿ ಅವರನ್ನು ವಿಶ್ವಗುರು ಬಸವಣ್ಣನವರ ಭಕ್ತನಾಗುವಂತೆ ಮಾಡಿದ ಶ್ರೇಯಸ್ಸು ಮಂಜಪ್ಪನವರಿಗೆ ಸಲ್ಲುತ್ತದೆ.
ಬಸವಣ್ಣವರ ತತ್ವಗಳನ್ನು ಆಧುನಿಕ ಕಾಯಕದೊಂದಿಗೆ ಸಂಜೋಜಿಸಿದ ಇವರು ನಿಜವಾದ ಅರ್ಥದಲ್ಲಿ ನಿರಂಜನ ಶರಣರಾಗಿದ್ದರು. ಧೀರರಾಗಿರಿ, ಪವಿತ್ರರಾಗಿರಿ, ಸ್ವತಂತ್ರ ರಾಷ್ಟ್ರದ ವೀರರಾಗಿರಿ ಇದು ನನ್ನ ಕಡೆಯ ಮನವಿ ಎಂದು ಹೇಳುತ್ತಾ ಬಯಲಲಿ ಬಯಲಾದರು ಎಂದರು.
ಸಾನಿಧ್ಯ ವಹಿಸಿದ ಹರಳಯ್ಯ ಗವಿಯ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಆಶೀರ್ವಚನ ನೀಡಿ, ನಡೆ-ನುಡಿ ಸಿದ್ಧಾಂತವು ಶರಣ ಸಂಸ್ಕೃತಿಯ ಪ್ರಮುಖ ತತ್ವವಾಗಿದ್ದು, ನುಡಿ ಮತ್ತು ನಡೆ ಎರಡೂ ಒಂದೇ ಆಗಿರಬೇಕು. ಅಂತರಂಗ ಬಹಿರಂಗದಲ್ಲಿ ವ್ಯತ್ಯಾಸವಿಲ್ಲದ ನಿರ್ಮಲ ಬದುಕು ಪ್ರಾಮಾಣಿಕತೆ ಮತ್ತು ಸದಾಚಾರವೇ ಈ ಸಿದ್ಧಾಂತದ ಜೀವಾಳ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಸಾವಿತ್ರಿಬಾಯಿ ಫುಲೆ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಜಯಶ್ರೀ ಪಾಟೀಲ ಅವರನ್ನು ಸನ್ಮಾನಿಸಲಾಯಿತು.

ನಿವೃತ್ತ ಚಿತ್ರಕಲಾ ಶಿಕ್ಷಕ ವೀರಭದ್ರಪ್ಪಾ ತೂಗಾಂವೆ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಡೋಹರ ಕಕ್ಕಯ್ಯ ಸಮಾಜದ ಅಧ್ಯಕ್ಷ ಗುಲಾಬರಾವ ತ್ರಿಮುಖೆ ಉಪಸ್ಥಿತರಿದ್ದರು. ಹರಳಯ್ಯ ಸಮಾಜದ ರಿಷೀಕೆಶ ಜಾಧವ ಧ್ವಜಾರೋಹಣಗೈದರು.
ರಂಜನಾ ಭೂಶೆಟ್ಟಿ ಮತ್ತು ರಾಮಚಂದ್ರ ಕಲ್ಲಹಿಪ್ಪರ್ಗಿ ವಚನ ಸಂಗೀತ ನಡೆಸಿಕೊಟ್ಟರು. ಅಕ್ಕನ ಬಳಗದವರು ವಚನ ಪ್ರಾರ್ಥನೆ ಮಾಡಿದರು. ಸಂತೋಷ ಮಡಿವಾಳ ಸ್ವಾಗತಿಸಿದರೆ ಸಂಗಮೇಶ ತೊಗರಖೇಡೆ ನಿರೂಪಿಸಿದರು. ಪೂಜಾ ಸಂತೋಷ ಮಡಿವಾಳ ಭಕ್ತಿ ದಾಸೋಹಗೈದರು.
