ಶರಣಗ್ರಾಮ ಗುಳೆಯಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಇಷ್ಟಲಿಂಗ ಶಿವಯೋಗ

ಯಲಬುರ್ಗಾ

ತಾಲೂಕಿನ ಶರಣಗ್ರಾಮ ಗುಳೆಯಲ್ಲಿ ರಾಷ್ಟ್ರೀಯ ಬಸವ ದಳ, ಅಕ್ಕ ನಾಗಲಾಂಬಿಕ ಮಹಿಳಾ ಗಣ ಹಾಗು ರಾಷ್ಟ್ರೀಯ ಬಸವ ದಳ ಯುವ ಘಟಕದ ವತಿಯಿಂದ ಮಹಾಶಿವರಾತ್ರಿ ಪ್ರಯುಕ್ತ ವಿಶ್ವ ಗುರು ಬಸವ ಮಂಟಪದಲ್ಲಿ ಇಷ್ಟಲಿಂಗಯೋಗ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಪ್ರಥಮದಲ್ಲಿ ಗುರು ಬಸವೇಶ್ವರ ಪೂಜೆ, ಪ್ರಾರ್ಥನೆ ನಂತರ ಪ್ರಾತ್ಯಕ್ಷಿಕವಾಗಿ ಸಾಮೂಹಿಕ ಇಷ್ಟಲಿಂಗ ಶಿವಯೋಗ ಮತ್ತು ಅನುಭಾವ ಕಾರ್ಯ ನಡೆಯಿತು.

ಪ್ರಾಸ್ತಾವಿಕವಾಗಿ ಶರಣ ಬಸಣ್ಣ ಹೊಸಳ್ಳಿ ಇವರು ಮಾತನಾಡಿ, ಈ ಪವಿತ್ರವಾದ ಮಹಾ ಶಿವಯೋಗದಲ್ಲಿ ಸುತ್ತ ಮುತ್ತಲಿನ ಗ್ರಾಮದ ಶರಣ ಸದ್ಭಕ್ತರು ಪಾಲ್ಗೊಂಡು ಅಂಗದ ಮೇಲೆ ಲಿಂಗ ಧರಿಸಿ ಸಾಮೂಹಿಕವಾಗಿ ಇಷ್ಟಲಿಂಗಯೋಗದಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಿದರೆ ನಮ್ಮ ಆತ್ಮಶುದ್ಧಿಯಾಗುತ್ತದೆ ಎಂದರು.

ಶರಣ ಡಾ ಸಂಗಮೇಶ ಕಲಹಾಳ ಅವರು ತಮ್ಮ ಅನುಭಾವದಲ್ಲಿ ಶಿವರಾತ್ರಿ ಎಂದರೆ ಸುಮ್ಮನೆ ದಿನಕಳೆಯುವದಲ್ಲ, ಆತ್ಮ ಪರಮಾತ್ಮನನ್ನ ಕೂಡುವದು. ಆತ್ಮ ಶುದ್ಧಿ ಮಾಡಿಕಳ್ಳಬೇಕಾದರೆ ಪ್ರತಿಯೊಬ್ಬರು ಅಂಗದ ಮೇಲೆ ಲಿಂಗ ಧರಿಸಿ ದಿನನಿತ್ಯ ಶಿವಯೋಗ ಮಾಡುವುದೆ ಶಿವರಾತ್ರಿ ಎಂದು ನುಡಿದರು.

ಅಧ್ಯಕ್ಷತೆ ವಹಿಸಿ ಶರಣ ಬಸವನಗೌಡ ಪೋಲಿಸ್ ಪಾಟೀಲ ಮಾತನಾಡಿ,
ಅಸತ್ಯದ ಭ್ರಮೆಯನ್ನು ತೊಲಗಿಸಿ, ಸತ್ಯದ ಭಾವನೆಗಳನ್ನ ಮೂಡಿಸಿಕೊಳ್ಳಲು ಶಿವಯೋಗ ಅತ್ಯಂತ ಸಹಾಯಕವಾಗಿರುತ್ತದೆ. ದೇವಾಲಯ ವ್ಯವಸ್ಥೆ ಜಡಗೊಂಡಿದ್ದು ಮೇಲು-ಕೀಳು ಶ್ರೇಷ್ಠ-ಕನಿಷ್ಠಗಳೆಂಬ
ತಾರತಮ್ಯ ತಾಂಡವ ಆಡುತ್ತಿದೆ.

ಇದಕ್ಕೆ ರೋಸಿಹೋಗಿ, ಗುರು ಬಸವಣ್ಣನವರ ಸಾಕ್ಷಾತ್ಕಾರದಿಂದ ಹುಟ್ಟಿದ್ದೇ ಇಷ್ಟ ಲಿಂಗದ ಪರಿಕಲ್ಪನೆ. ಇಲ್ಲಿ ದೇವಸ್ಥಾನಕ್ಕೆ ಭಕ್ತ ಹೋಗಬೇಕಾದ ಅಗತ್ಯವಿಲ್ಲ, ಭಕ್ತನ ದೇಹವನ್ನೇ ದೇವಾಲಯವಾಗಿಸುವ ಪರಿಕಲ್ಪನೆಯೇ ಇಷ್ಟಲಿಂಗ ಮತ್ತು ಶಿವಯೋಗದ ಪರಿಕಲ್ಪನೆಯಾಗಿದೆ.

ದೇವಸ್ಥಾನವೆಂಬ ಕೇಂದ್ರೀಕರಣ ಗೊಳ್ಳುವ ಜಡ ವ್ಯವಸ್ಥೆಯನ್ನು ನಿರಾಕರಿಸಿ, ಕೇಂದ್ರೀಕರಣ ತತ್ವದಲ್ಲಿ ಜಂಗಮವನ್ನು ಒಳಗೊಳ್ಳುವ ವ್ಯಕ್ತಿ ಸ್ವಾತಂತ್ರ್ಯವನ್ನು ವ್ಯಕ್ತಿತ್ವದ ಘನತೆಯನ್ನು ಗೌರವಿಸುವಂತದ್ದು. ಇಷ್ಟಲಿಂಗ ಪ್ರಕಲ್ಪನೆಯಲ್ಲಿ ಸಂಕೇತವನ್ನು ಚಿನ್ಮುಲಕ ಹಲಗೆಯಂತೆ ಬಳಸಲಾಗಿದೆ, ವಸ್ತುರೂಪದಲ್ಲಿ ಭಾವ ಸ್ವರೂಪವನ್ನು ಲೀನಗೊಳಿಸಿ ಮೂರ್ತದಲ್ಲಿ ಅಮೂರ್ತವನ್ನು ಸೂಕ್ಷ್ಮದಲ್ಲಿ ಬ್ರಹ್ಮಾಂಡವನ್ನು ಬಯಲಿನಲ್ಲಿ ಬೆಳಗನ್ನು ಕಾಣುವ ಅನುಭವಿಸುವ ಸಾಧನೆಯೇ ಇಷ್ಟಲಿಂಗಯೋಗ.

ನಿರಂತರ ಸಾಧನೆಯಲ್ಲಿ ಕಷ್ಟ ಕಾರ್ಪಣ್ಯಗಳಿಂದ ತುಂಬಿದ ಮನಸ್ಸು ಏಳು ಬೀಳುಗಳ ಹಾದಿಯಲ್ಲಿ ಆಗಮಿಸುತ್ತ ಮೇಲಿರುತ್ತವೆ ಕೊನೆಗೆ ಲಿಂಗದ ಹಂಗನ್ನು ಹರಿದುಕೊಂಡು ಅಂಗವನ್ನೇ ಲಿಂಗಸ್ವರೂಪಿಯಾಗಿಸಿಕೊಂಡು ದೇಹವನ್ನೇ ದೇವಾಲಯವಾಗಿಸಿಕೊಳ್ಳುತ್ತದೆ ಇದನ್ನೇ ಬಸವಣ್ಣನವರು ದೇಹವೇ ದೇಗುಲ ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂದರು.

ಇಷ್ಟಲಿಂಗ ಧರಿಸಿ ಪಂಚಾಕ್ಷರಿ ಬೋಧಿಸಿದ ಮೇಲೆ ಆ ಭಕ್ತನ ಕಾಯವೆ ಕೈಲಾಸ ಅವನ ಒಡಲೇ ಸೇತುಬಂಧ ರಾಮೇಶ್ವರ ಅವನ ಶಿರವೇ ಶ್ರೀಶೈಲ ಆತ ಮಾಡುವ ಆಚರಣೆಯೇ ಶಿವಯೋಗ. ಇದನ್ನೆಲ್ಲ ತಿಳಿಯದೆ ಮಂದ ಬುದ್ಧಿಯಿಂದ ಪರ್ವತಕ್ಕೆ ಹೋಗಿ ಪಾತಾಳ ಗಂಗೆಯಲ್ಲಿ ಮುಳುಗಿ ಮುಳುಗಿ, ಎದ್ದರೆ ನಮ್ಮ ಮೈ ಮೇಲಿನ ಮಣ್ಣು ಹೋಗುತ್ತದೆ ಹೋರೆತು, ಮನದಲ್ಲಿ ಇರುವ ಪಾಪ ಕರ್ಮ ಹೋಗಲಿಲ್ಲವೋ ಎಂಬುದು ಮಹಾತ್ಮರ ವಾಣಿಯಾಗಿದೆ. ಶಿವಯೋಗ ದರ್ಶನವು ಮೋಕ್ಷ ಸಾಧನೆಗೆ ಕಾರಣವಾಗಿದೆ ಎಂದರು.

ಕಾರ್ಯಕ್ರಮದ ಪ್ರಥಮದಲ್ಲಿ ಶರಣ ಬಸವರಾಜ ಹೂಗಾರ ಇವರು ಪ್ರಾತ್ಯಕ್ಷಿಕೆಯಾಗಿ, ಸೋಡಾಸೋಪಾಚರ, ಅಷ್ಟವಿದಾರ್ಚನೆ ಮೂಲಕ ಇಷ್ಟಲಿಂಗ ಪೂಜೆ ನೆರವೇರಿಸಿಕೊಟ್ಟರು. ಶರಣ ನಿಂಗಪ್ಪ ಪರಂಗಿ ಸಾ. ವನಜಭಾವಿ ಇವರು ಗುರು ಪೂಜೆ ಗೈದರು. ಶರಣ ಶರಣಪ್ಪ ಹೊಸಳ್ಳಿ ನಿರೂಪಿಸಿದರು.

ಶರಣ ಬಾಪುಗೌಡ ವಣಗೇರಿ, ನಾಗನಗೌಡ ಜಾಲಿಹಾಳ , ಶಿವಾನಂದಪ್ಪ ಬೇವೂರು, ಶರಣ ದೇವಪ್ಪ ಕೋಳೂರು ರಾಷ್ಟ್ರೀಯ ಬಸವ ದಳದ ಗೌರವಾಧ್ಯಕ್ಷರು ವನಜಭಾವಿ, ಗಿರಿಮಲ್ಲಪ್ಪ ಪರಂಗಿ, ಶಿವಬಸಯ್ಯ ಹಿರೇಮಠ, ಹನಮೇಶ್ ಹೊಸಳ್ಳಿ, ನಿಜಲಿಂಗಪ್ಪ ಮಂತ್ರಿ, ಶರಣಪ್ಪ ಮಂತ್ರಿ, ಯಮನಪ್ಪ ಕೋಳೂರು, ಪಕೀರಪ್ಪ ಮಂತ್ರಿ ಮತ್ತು ಯುವ ಘಟಕದ ಅಧ್ಯಕ್ಷ ಶಿವಕುಮಾರ್ ಹೊಸಳ್ಳಿ, ಮಲ್ಲಿಕಾರ್ಜುನ ನಿಂಗಪ್ಪ ಮಂತ್ರಿ, ಹನಮಂತಪಜ್ಜ ಮಂತ್ರಿ, ಶರಣಪ್ಪ ಮೇಟಿ ಹಾಗು ಅಕ್ಕ ನಾಗಲಾಂಬಿಕ ಮಹಿಳಾ ಗಣದ ಶರಣೆ ಶರಣಮ್ಮ ಪೋಲಿಸಪಾಟೀಲ್, ಬಸಮ್ಮ ಹಿರೇಮಠ ವೀರಾಪುರ, ಸಾವಿತ್ರಮ್ಮ ಆವಾರಿ, ಅಕ್ಕಮಹಾದೇವಿ ಮೇಟಿ, ಶಂಕ್ರಮ್ಮ ಹೊಸಳ್ಳಿ, ಕಸ್ತೂರಿ ಹೊಸಳ್ಳಿ, ಗುರುಲಿಂಗಮ್ಮ ಚನ್ನಮ್ಮ ಬಸಮ್ಮ ಸುಮಂಗಲಮ್ಮ ವಿಶಾಲಾಕ್ಷಿ ಕೋಳೂರು ಇತರರು ಪಾಲ್ಗೊಂಡಿದ್ದರು.

Share This Article
Leave a comment

Leave a Reply

Your email address will not be published. Required fields are marked *