ಕೂಡಲಸಂಗಮ:
ಕೂಡಲಸಂಗಮ ಬಸವ ಧರ್ಮ ಪೀಠ ಆವರಣದಲ್ಲಿ ನಡೆಯುತ್ತಿರುವ ೩೯ನೇ ಶರಣ ಮೇಳದ ೨ನೇ ದಿನವಾದ ಜನವರಿ ೧೩, ಮಂಗಳವಾರ ಬೆಳಗ್ಗೆ ೧೦:೩೦ಕ್ಕೆ ೩೯ನೇ ಶರಣ ಮೇಳ ಉದ್ಘಾಟನೆಯನ್ನು ಮಹಾರಾಷ್ಟ್ರ ರಾಜ್ಯದ ಮಾಜಿ ಮುಖ್ಯಮಂತ್ರಿ ಸುಶೀಲಕುಮಾರ ಶಿಂಧೆ ಮಾಡುವರು. ಲಿಂಗೈಕ್ಯ ಮಾತೆ ಮಹಾದೇವಿ ಅವರು ರಚಿಸಿದ ತರಂಗಿಣಿ ಕೃತಿಯನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಬಿಡುಗಡೆ ಮಾಡುವರು.
ಧರ್ಮ ಧ್ವಜಾರೋಹಣವನ್ನು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಮಾಡುವರು. ಅಧಕ್ಷತೆಯನ್ನು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ವಹಿಸುವರು. ಮುಖ್ಯ ಅತಿಥಿಗಳಾಗಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್, ಬಸವತತ್ವ ಚಿಂತಕ ರಂಜಾನ್ ದರ್ಗಾ, ಮಹಾಂತೇಶ ಬಿರಾದಾರ, ಜೆ.ಎಸ್. ಪಾಟೀಲ, ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಜಾಮದಾರ, ಮಹಾದೇವ ಹೊರಟ್ಟಿ ಮುಂತಾದವರು ಭಾಗವಹಿಸುವರು.
ಸಮಾರಂಭದಲ್ಲಿ ಬೆಂಗಳೂರಿನ ಸಂಗೀತ ಗಾಯಕಿ ಸಂಗೀತಾ ಕಟ್ಟಿ ಅವರಿಗೆ ೨೦೨೬ರ ಬಸವಾತ್ಮಜೆ ರಾಷ್ಟ್ರೀಯ ಪ್ರಶಸ್ತಿ, ೨೦೨೬ರ ರಾಜ್ಯ ಮಟ್ಟದ ಶರಣ ಕಾಯಕ ರತ್ನ ಪ್ರಶಸ್ತಿಯನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ, ಶರಣ ಜ್ಞಾನ ರತ್ನ ಪ್ರಶಸ್ತಿಯನ್ನು ಪತ್ರಕರ್ತ ರವಿ ಮೂಕಿ ಅವರಿಗೆ ನೀಡಲಾಗುವುದು.
ಸಾಯಂಕಾಲ ೬ ಗಂಟೆಗೆ ಬಸವ ಧರ್ಮ ಮಹಾಜಗದ್ಗುರು ಪೀಠದ ೩೪ನೇ ಪೀಠಾರೋಹಣ ಸಮಾರಂಭದ ಸಾನಿಧ್ಯವನ್ನು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ವಹಿಸುವರು. ಗುರುಬಸವ ಪೂಜೆಯನ್ನು ಬಸವನಬಾಗೇವಾಡಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾಡುವರು. ಧರ್ಮ ಧ್ವಜಾರೋಹಣವನ್ನು ಹಂದಿಗುಂದ ವಿರಕ್ತಮಠದ ಶಿವಾನಂದ ಮಹಾಸ್ವಾಮೀಜಿ ಮಾಡುವರು. ಬಸವ ಧರ್ಮ ಪೀಠದ ಜಂಗಮಮೂರ್ತಿಗಳು, ಗಣನಾಯಕ-ನಾಯಕಿಯರು ಮುಂತಾದವರು ಭಾಗವಹಿಸುವರು.
ಚಂದ್ರಶೇಖರ ಇಟಗಿ ಅವರ ತ್ರಿದಳ, ಶ್ರೀಧರ ಗೌಡರ ಅವರ ಇದೇ ಅಂತರಂಗ ಶುದ್ದಿ, ಇದೇ ಬಹಿರಂಗ ಶುದ್ದಿ ಗ್ರಂಥಗಳ ಬಿಡುಗಡೆಯಾಗಲಿವೆ.
