ಶರಣೆ ಗುಡ್ಡಾಪುರದ ದಾನಮ್ಮ ದೇವಿಯ ಜಯಂತ್ಯೋತ್ಸವ
ಚಿತ್ರದುರ್ಗ:
ಇನ್ನೊಬ್ಬರ ಕಣ್ಣಲ್ಲಿ ನೀರು ತರಿಸಬಹುದು. ಆದರೆ ಜನರನ್ನು ನಗಿಸುವುದು ಕಷ್ಟಕರವಾಗಿದೆ. ೧೨ನೇ ಶತಮಾನದಲ್ಲಿಯೂ ನಗುವವರ ಸಂಖ್ಯೆ ವಿರಳವಾಗಿದ್ದನ್ನು ಕಂಡ ವೃತ್ತಿಯಲ್ಲಿ ಕುಂಬಾರಿಕೆ ಕಸುಬನ್ನು ಮಾಡಿಕೊಂಡಿದ್ದರೂ ಸಹಿತ ಅದನ್ನು ಬಿಟ್ಟು ಅಂದಿನ ಶರಣರನ್ನು ನಗಿಸುವತ್ತ ತಮ್ಮ ಚಿತ್ತ ಹರಿಯಬಿಟ್ಟ ಕಾರಣ ನಗೆಯ ಮಾರಿತಂದೆ ಎಂದು ಕರೆದಿರಬಹುದು ಎಂದು ನಿವೃತ್ತ ಉಪನ್ಯಾಸಕಿ, ಕವಿ ಚಿತ್ರದುರ್ಗದ ಸಿ.ಬಿ. ಶೈಲಾ ಜಯಕುಮಾರ ಅಭಿಪ್ರಾಯಪಟ್ಟರು.
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ೩೩ದಿನಗಳ ಕಾಲ ಆಯೋಜಿಸಿರುವ ವಚನ ಕಾರ್ತಿಕ ಮಹೋತ್ಸವದ ೨೯ನೇ ದಿನ ಗುರುವಾರ ಸಂಜೆ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾ ವಿಶ್ರಾಂತಿ ಸನ್ನಿಧಾನದಲ್ಲಿ ನಡೆದ ಶಿವಶರಣ ನಗೆಯ ಮಾರಿತಂದೆ ಹಾಗೂ ಅಗ್ಘವಣಿ ಹೊನ್ನಯ್ಯ ಶರಣರ ವಚನ, ವ್ಯಕ್ತಿತ್ವ ದರ್ಶನ ಹಾಗೂ ಶರಣೆ ಗುಡ್ಡಾಪುರದ ದಾನಮ್ಮ ದೇವಿಯ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಗೆಯ ಮಾರಿತಂದೆಯವರ ಸುಮಾರು ೧೦೦ ವಚನಗಳು ಲಭ್ಯವಿದ್ದು, ಅವುಗಳನ್ನು ಗಮನಿಸಿದರೆ ಭಾಷೆ ಸರಳವಾಗಿದ್ದು, ಸಂಸ್ಕೃತ ವಿಭಿಷ್ಟವಾಗಿದೆ. ಇದರಿಂದ ಅವರು ಚೆನ್ನಾಗಿ ಓದಿಕೊಂಡಿದ್ದರೆಂದು ಗೊತ್ತಾಗುತ್ತದೆ. ವಚನಗಳಲ್ಲಿ ಉಪಮಾಲಂಕಾರ, ರೂಪಕ ಅಲಂಕಾರಗಳಿವೆ. ಜತೆಗೆ ಇವರು ವಚನಗಳನ್ನಷ್ಟೇ ಬರೆಯದೆ ಸಮಾಜ ತಿದ್ದುವ ಕಾರ್ಯದಲ್ಲಿಯೂ ತೊಡಗಿಸಿಕೊಂಡಿದ್ದನ್ನು ಗಮನಿಸಬಹುದು.
ಇವರ ಅಂಕಿತನಾಮ ಆತುರಮಾರಿ ಮಾರೇಶ್ವರ ಅಂತಿದೆ. ಇಂದಿನವರ ಬದುಕಿನಲ್ಲಿ ಸಮಾಧಾನಕ್ಕಿಂತ ಅವಸರವೇ ಜಾಸ್ತಿ ಇದೆ. ಅಂತಹ ಅವಸರದವರಿಗೆ ವೈರಿಯಾದವನು ಈಶ್ವರ ಅಂತ ಭಾವಿಸಬಹುದಾಗಿದೆ.
ಮತ್ತೊಬ್ಬ ಶಿವಶರಣ ಅಗ್ಘವಣಿ ಹೊನ್ನಯ್ಯನವರ ಬಗೆಗೆ ವಿಷಯಾವಲೋಕನ ಮಾಡಿದ ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದ ಬಿ. ಶಾರದಾ ಜಯರಾಮ ಅವರು ಮಾತನಾಡಿ, ಹೊನ್ನಯ್ಯನವರು ಸಹ ಅನುಭಾವಿ ಶರಣರು. ನೀರು ತಂದು ಪೂಜೆ ಮಾಡುವ ಕಾಯಕ ಇವರದಾಗಿದ್ದು, ಇವರ ೪ ವಚನಗಳು ಲಭ್ಯವಿವೆ. ಹುಲಿಗೆರೆಯ ವರದ ಸೋಮನಾಥ ಎನ್ನುವುದು ಇವರ ವಚನಗಳ ಅಂಕಿತ.

ನೇಮ ಹಿಡಿದವರಿಗೆ ಛಲ ಅಥವಾ ನಿಷ್ಠೆ ಇರಬೇಕೆನ್ನುವ ಇವರು ಇಷ್ಟಲಿಂಗ ಕಳೆದು ಹೋದಾಗ ಜೀವ ಬಿಡಬೇಕೆನ್ನುವ ವ್ರತನಿಷ್ಠರು ಇವರಾಗಿದ್ದರು ಎಂದು ಹೇಳಿದರು.
ಗುಡ್ಡಾಪುರ ದಾನಮ್ಮನವರ ಜಯಂತಿ ಅಂಗವಾಗಿ ಶರಣೆಯರ ಬಗ್ಗೆ ಮಾತನಾಡಿದ ಮೈಸೂರು ಜಿಲ್ಲೆಯ ಲಾಳನಹಳ್ಳಿಯ ಗುರುಬಸವೇಶ್ವರ ಮಠದ ಶರಣೆ ಜಯದೇವಿ ತಾಯಿ ಅವರು, ೧೨ನೇ ಶತಮಾನದಲ್ಲಿ ೩೩ ಜನ ವಚನಕಾರತಿಯರಿದ್ದರು.
ಅವರಲ್ಲಿ ಗುಡ್ಡಾಪುರದ ದಾನಮ್ಮನವರೂ ಒಬ್ಬರು. ತಗ್ಗು ಇದ್ದ ಕಡೆ ನೀರು ಹರಿಯುವ ಹಾಗೆ ನಮ್ಮಲ್ಲಿ ಬೆಳೆದವರನ್ನೇ ಬೆಳೆಸುವ ಪ್ರೋತ್ಸಾಹಿಸುವ ಪದ್ಧತಿ ಇರುವುದನ್ನು ಕಾಣಬಹುದಾಗಿದೆ. ಆದರೆ ಬಸವಣ್ಣನವರು ಬೆಳೆಯಲಾರದವರನ್ನೂ ಬೆಳೆಸಿದರು. ಅದಕ್ಕೇ ಅವರನ್ನು ಬಸವಣ್ಣ ಅಂದದ್ದು.
ದಾನಕ್ಕೆ ಮತ್ತೊಂದು ಹೆಸರೇ ದಾನಮ್ಮ ತಾಯಿ. ಅಂತಹ ತಾಯಿ ಮಹಾರಾಷ್ಟ್ರ ಭಾಗದಲ್ಲಿ ಅಪರಿಮಿತ ಪ್ರಭಾವ ಹೊಂದಿರುವ ಮಹಾತಾಯಿ. ಸಂಸಾರದೊಂದಿಗೆ ಇದ್ದರೂ ಕಲ್ಯಾಣದತ್ತ ಸಾಗಿ ದಾರಿಯಲ್ಲಿ ಬರುವ ಅನೇಕ ಸಂಗತಿಗಳಿಗೆ ಕಿವಿಯಾಗಿ, ಆಸರೆಯಾಗಿ ನಿಂತು ಮುಂದೆ ಹೋಗುತ್ತಾಳೆ ಎಂದರು.
ಸಾನಿಧ್ಯ ವಹಿಸಿದ್ದ ಅಥಣಿ ಗಚ್ಚಿನಮಠದ ಶಿವಬಸವ ಸ್ವಾಮಿಗಳು ಮಾತನಾಡಿ, ಅಥಣಿ ಗಚ್ಚಿನಮಠಕ್ಕೂ ಚಿತ್ರದುರ್ಗ ಬೃಹನ್ಮಠಕ್ಕೂ ಅವಿನಾಭಾವ ಸಂಬಂಧವಿದೆ. ಹಾಗೆಯೇ ಅಥಣಿ ಗಚ್ಚಿನಮಠಕ್ಕು ಗುಡ್ಡಾಪುರ ದಾನಮ್ಮನವರ ಕ್ಷೇತ್ರಕ್ಕು ಅದೇ ರೀತಿಯ ಬಾಂಧವ್ಯವಿದೆ ಎಂದರೆ ತಪ್ಪಿಲ್ಲ. ಗುಡ್ಡಾಪುರ ಹಾಗೂ ಅಥಣಿ ಮಠ ಅಥವಾ ಸುಕ್ಷೇತ್ರಗಳು ಬಸವ ಪರಂಪರೆಯ ಕೈಗನ್ನಡಿಯಾಗಿವೆ. ಅದರಂತೆ ಬಸವಣ್ಣನವರ ಆಶಯ ಕಾಯಕ, ದಾಸೋಹ, ಶಿವಯೋಗ ಈ ತ್ರಿವಿಧ ತತ್ವದ ಮೇಲೆ ಶರಣಸಂಸ್ಕೃತಿ ನಿಂತಿದೆ ಎಂದರು.
ಶ್ರೀ ಬಸವಮುರುಘೇಂದ್ರ ಶ್ರೀಗಳು, ಚಿನ್ಮಯಿ ತಾಯಿ, ಎಸ್. ಷಣ್ಮುಖಪ್ಪ, ಎಸ್. ವೀರೇಶ, ಟಿ. ವೀರಭದ್ರಸ್ವಾಮಿ, ಪ್ರಾಚಾರ್ಯರಾದ ಪಿ.ಎಂ.ಜಿ. ರಾಜೇಶ್, ಡಾ.ಎಂ.ಆರ್. ಚಿದಾನಂದಪ್ಪ ಸೇರಿದಂತೆ ಭಕ್ತರು, ಅಭಿಮಾನಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇಬ್ಬರು ವಚನಕಾರರ ಒಂದೊಂದು ವಚನವನ್ನು ಕಲಾವಿದ ಉಮೇಶ್ ಪತ್ತಾರ ಹಾಡಿದರು. ವಿದ್ಯಾರ್ಥಿಗಳಾದ ಬಿಂಧು ಪಿ.ಸಿ. ಸ್ವಾಗತಿಸಿದರೆ, ನಿತ್ಯಾ ಕಾರ್ಯಕ್ರಮ ನಿರೂಪಿಸಿದರು. ಸೌಮ್ಯ ಎನ್. ಶರಣು ಸಮರ್ಪಣೆ ಮಾಡಿದರು.
