ಚಿತ್ರದುರ್ಗ:
ಹನ್ನೆರಡನೇ ಶತಮಾನದ ವಚನ ಚಳುವಳಿಯ ತರುವಾಯ ಲಿಂಗಾಯತ ಪರಂಪರೆಯ ಪ್ರಚಾರ ಮತ್ತು ಪ್ರಸಾರ ಕಾರ್ಯಕ್ಕೊಂದಷ್ಟು ಮಸುಕು ಅಥವಾ ಅದನ್ನು ಮುನ್ನಡೆಸುವವರು ಬರದ ಕಾರಣ ಮತ್ತೆ ಈ ಪರಂಪರೆಯನ್ನು ಉಜ್ವಲವಾಗಿ ೧೬ನೇ ಶತಮಾನದಲ್ಲಿ ಬೆಳಕಿಗೆ ಅಂದರೆ ಮುನ್ನೆಲೆಗೆ ತಂದವರು ಯಡಿಯೂರು ಸಿದ್ಧಲಿಂಗ ಶಿವಯೋಗಿಗಳು ಎಂದರೆ ತಪ್ಪಾಗಲಾರದು ಎಂದು ಚಿತ್ರದುರ್ಗ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಅಧಿಕಾರಿ ಶಿವಪ್ರಕಾಶ್ ಡಿ.ಆರ್. ಅವರು ಅಭಿಪ್ರಾಯಪಟ್ಟರು.
ಅವರು ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮೂಲಕರ್ತೃ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ಆಯೋಜಿಸಲಾಗಿದ್ದ ಶೂನ್ಯಪೀಠದ ಹದಿನೆಂಟನೆಯ ಅಧ್ಯಕ್ಷರಾದ ಯಡಿಯೂರು ತೋಂಟದ ಸಿದ್ಧಲಿಂಗ ಯತಿಗಳ ಜಯಂತ್ಯುತ್ಸವ (ಶರಣೋತ್ಸವ)ದಲ್ಲಿ ಶಿವಯೋಗಿಗಳ ಬಗೆಗೆ ವಿಷಯಾವಲೋಕನ ಮಾಡುತ್ತಿದ್ದರು.
೧೨ನೇ ಶತಮಾನ ಜಗತ್ತಿನ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಕಾಲಘಟ್ಟ. ೮೫೦ ವರ್ಷಗಳ ಹಿಂದೆ ನಮ್ಮ ನಿಮ್ಮಂತೆಯೇ ಬದುಕಿ ಬಾಳಿಹೋದ ಶರಣರು ಸಾಮಾಜಿಕ ಹಿತಕ್ಕಾಗಿ, ಸಮಾನತೆಗಾಗಿ ಪರಿಶ್ರಮಕ್ಕೆ ಬೆಲೆಯನ್ನು ಕೊಡಿಸುವುದಕ್ಕಾಗಿ ಹೋರಾಟ ಮಾಡಿದ ಶತಮಾನ. ಬಸವಣ್ಣ, ಅಲ್ಲಮ, ಅಕ್ಕಮಹಾದೇವಿ, ಸಿದ್ಧರಾಮ ಸೇರಿದಂತೆ ನೂರಾರು ಶರಣರು ನಮ್ಮಂತೆಯೇ ಬದುಕಿದವರು. ಅವರ ಬದುಕಿನ ರೀತಿ ಕೊಟ್ಟ ಕೊಡುಗೆ ಎಲ್ಲದರ ಪರಿಣಾಮವಾಗಿ ನಾವು ಅವರನ್ನು ದೈವದ ಸ್ಥಾನದಲ್ಲಿರಿಸಿದ್ದೇವೆ.
ಮೂಲತಃ ಆ ಎಲ್ಲ ಶರಣರು ಜೀವನದ ಎಲ್ಲ ಅವಸ್ಥೆಗಳನ್ನು ಕಂಡು ಅಧ್ಯಯನಶೀಲರಾಗಿ ವಚನ ಸಾಹಿತ್ಯವನ್ನು ಸೃಷ್ಟಿಸುವ ಮೂಲಕ ಬಹುದೊಡ್ಡ ಜ್ಞಾನಭಂಡಾರವನ್ನು ಜಗತ್ತಿಗೆ ಬಿಟ್ಟು ಹೋದರು. ಹಾಗಾಗಿ ೧೨ನೇ ಶತಮಾನದ ವಚನ ಸಾಹಿತ್ಯವು ಅದು ಪ್ರಜಾ ಸಾಹಿತ್ಯವಾಗಿತ್ತು. ಪ್ರಜೆಗಳಿಗಾಗಿ ಇರುವ ಒಂದು ಸಾಹಿತ್ಯ ಅದು ಎಲ್ಲಿಯಾದರೂ ಇದೆ ಎಂದರೆ ಅದು ವಚನ ಸಾಹಿತ್ಯ ಎಂದೇ ಹೇಳಬೇಕಿದೆ.
ವಚನ ಸಾಹಿತ್ಯ ಹೋರಾಟದ ಸಾಹಿತ್ಯ ಅಂತಲೂ ಕರೆಯುತ್ತಾರೆ. ಆತ್ಮಜ್ಞಾನವನ್ನು ಸಾಧಿಸಿಕೊಳ್ಳುವುದರ ಜತೆಗೆ ಸಮಾಜದ ಕಲ್ಯಾಣವನ್ನು ಸಾಧಿಸಬೇಕು. ಸಮಾಜವನ್ನು ಉದ್ಧಾರ ಮಾಡಬೇಕೆನ್ನುವ ಹೋರಾಟದ ಮನೋಭಾವ ಮತ್ತು ಕ್ರಿಯಾತ್ಮಕ ಸಂಘಟಿತ ಸಾಧನೆಯ ಒಳಗಡೆ ಅನೇಕ ಶರಣರು ಮಾಡಿದಂತಹ ಒಂದು ಸಾಹಿತ್ಯ.
ಹಾಗೆಯೇ ವಚನ ಸಾಹಿತ್ಯವನ್ನು ಹುತಾತ್ಮರ ಸಾಹಿತ್ಯವೆಂತಲೂ ಕರೆಯುವುದುಂಟು. ಈ ಹಿನ್ನೆಲೆಯಲ್ಲಿ ಅನೇಕ ಶರಣರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅವರ ಸಾಹಿತ್ಯ ಸುಟ್ಟು ಹಾಕಲಾಯಿತು. ಇದರಲ್ಲಿ ಅಳಿದುಳಿದ ಸಾಹಿತ್ಯ ಮಾತ್ರ ದಕ್ಕಿರುವುದು. ಪ್ರಪಂಚದಲ್ಲಿ ಎಲ್ಲಿಯಾದರೂ ವರ್ಗ, ವರ್ಣ, ಲಿಂಗಭೇದವನ್ನು ವಿರೋಧಿಸಿದ ಹೋರಾಟ ಮತ್ತವರಿಂದ ರಚಿತವಾದ ಸಾಹಿತ್ಯವೆಂದರೆ ಅದು ವಚನ ಸಾಹಿತ್ಯ ಎಂದು ಧೈರ್ಯವಾಗಿ ಹೇಳಬಹುದಾಗಿದೆ. ಬಸವ ಯುಗದಲ್ಲಿ ಸೃಷ್ಟಿಯಾದ ವಚನ ಸಾಹಿತ್ಯ ಕಲ್ಯಾಣ ಕ್ರಾಂತಿಯ ನಂತರ ಸ್ಥಗಿತಗೊಂಡಿತು. ಅಳಿದುಳಿದ ಸಾಹಿತ್ಯ ದೇಶದ ನಾನಾಕಡೆಗೆ ಹರಿದು ಹಂಚಿ ಹೋಯಿತು ಎಂದು ನುಡಿದರು.

ಮುಂದುವರೆದು ಮಾತನಾಡುತ್ತ, ೧೬ನೇ ಶತಮಾನದಲ್ಲಿ ತೋಂಟದ ಸಿದ್ಧಲಿಂಗ ಯತಿಗಳು ಬಸವಣ್ಣನವರಂತೆ ಈ ನೆಲದಲ್ಲಿ ಹುಟ್ಟಿ ಬೆಳೆದು ಜ್ಞಾನ ಸಂಪಾದನೆಗಾಗಿ ಅಧ್ಯಯನ ನಡೆಸಿದರು. ನಂತರದಲ್ಲಿ ಬಸವೋತ್ತರ ಯುಗದ ವಚನ ಸಾಹಿತ್ಯ ಸೃಷ್ಟಿಗೆ ಕಾರಣಕರ್ತರಾದರು. ೧೨ನೇ ಶತಮಾನದದಿಂದ ಸ್ಥಗಿತಗೊಂಡಿದ್ದಕ್ಕೆ ಮರುಹುಟ್ಟು ನೀಡಿ ಮುಂದೆ ಅದನ್ನು ಶ್ರೀಮಂತಗೊಳಿಸಲು ಶ್ರಮಿಸಿದ ಸಿದ್ಧಲಿಂಗರು ವಿರಕ್ತ ಲಿಂಗಾಯತ ಪರಿಕಲ್ಪನೆಯ ಒಳಗಡೆ ಸಾಹಿತ್ಯ ಸೃಷ್ಟಿಗೆ ಪ್ರೇರಣೆಯಾಯಿತು.
ಚಾಮರಾಜನಗರ ಜಿಲ್ಲೆಯ ಹರದನಹಳ್ಳಿಯ ಸಿದ್ಧೇಶ್ವರ ಮಠದ ಪೀಠಾಧಿಪತಿಗಳಾಗಿ ಅಧ್ಯಯನ ಬಲದಿಂದ ಸುಮಾರು ೭೦೦ಕ್ಕು ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಇವರ ಜ್ಞಾನಕ್ಕೆ ಬೆರಗಾಗಿ ನೂರಾರು ಶಿಷ್ಯರು ಇವರನ್ನು ಹಿಂಬಾಲಿಸಿದರು. ಇವರು ಒಂದು ಕಡೆ ನೆಲೆ ನಿಂತವರಲ್ಲ. ಸದಾ ಕ್ರಿಯಾಶೀಲರಾಗಿ ಚರಜಂಗಮನಂತೆ ಸಂಚರಿಸುತ್ತ ದಕ್ಷಿಣ ಭಾರತದ ಅನೇಕ ಕಡೆಗಳಲ್ಲಿ ತಿರುಗಾಡುತ್ತ ಭಾರತದ ಅನೇಕ ಸ್ಥಳಗಳಿಗೆ ಹೋಗಿ ಹೋದ ಕಡೆಗಳಲೆಲ್ಲ ಲಿಂಗಾಯತ- ವಿರಕ್ತಮಠಗಳನ್ನು ಸ್ಥಾಪನೆ ಮಾಡುತ್ತ ವಚನ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು.
ಈ ಹಿನ್ನೆಲೆಯಲ್ಲಿ ಲಿಂಗಾಯತ – ವಿರಕ್ತ ಪರಂಪರೆಗೆ ಭದ್ರ ಬುನಾದಿ ಹಾಕಿದರು. ಬಸವಣ್ಣನವರನ್ನು ಹೊರತುಪಡಿಸಿದರೆ ಸಿದ್ಧಲಿಂಗ ಯತಿವರ್ಯರಿಗೆ ಹೆಚ್ಚು ಜನಪ್ರಿಯತೆ ಇತ್ತು. ನಾವು ಅಂತಹವರನ್ನು ದೇವರಾಗಿ ನೋಡುತ್ತ ಗುಡಿಯನ್ನು ಕಟ್ಟಿ ಆರಾಧಿಸುತ್ತಿದ್ದೇವೆ. ಅವರ ವಚನಗಳನ್ನು ಅಧ್ಯಯನ ಮಾಡಿದರೆ ಅವರೂ ಸಹ ನಮ್ಮ ನಿಮ್ಮಂತೆಯೇ ಇದ್ದು ಜೀವನದಲ್ಲಿ ನೋವು ನಲಿವುಗಳನ್ನು ಅನುಭವಿಸಿದವರೆ ಆಗಿದ್ದರು.
೧೨ನೇ ಶತಮಾನದ ವಿಚಾರಧಾರೆಗಳನ್ನು ೧೬ನೇ ಶತಮಾನದಲ್ಲಿ ಮತ್ತೆ ಪ್ರವರ್ಧಮಾನಕ್ಕೆ ತರಲು ಅವರು ಅವಿರತ ಶ್ರಮ ವಹಿಸಿದರು. ಅಲ್ಲಮಪ್ರಭುವಿನಂತೆ ಇವರ ವಚನಗಳು, ಬೆಡಗಿನ, ಒಗಟಿನ ರೂಪದಲ್ಲಿ ರಚಿತವಾಗಿವೆ. ಅವುಗಳು ಅಷ್ಟು ಸುಲಭವಾಗಿ ಅರ್ಥವಾಗುವುದಿಲ್ಲ. ಅದಕ್ಕೆ ತಕ್ಕ ರೀತಿಯ ಅಧ್ಯಯನ ನಾವು ಮಾಡಿದರೆ ಅವುಗಳ ನಿಗೂಢತೆ ಅರ್ಥವಾಗುತ್ತದೆಂದು ಅವರ ಅನೇಕ ವಚನಗಳಲ್ಲಿನ ಒಳಾರ್ಥವನ್ನು ವಿಶ್ಲೇಷಿಸಿದರು.
ಇವರ ಬಗೆಗೆ ಅನೇಕ ಕವಿಗಳಿಂದ ೪೦ಕ್ಕು ಹೆಚ್ಚು ಕೃತಿಗಳು ಹೊರಬಂದಿವೆ. ಸಮಾಜದ ಒಳಿತಿಗೆ ಅಹರ್ನಿಶಿ ದುಡಿದ ಶಿವಯೋಗಿಗಳೆಂದು ಸ್ಮರಿಸಿದರು.

ಸಮಾರಂಭದ ಸಮ್ಮುಖ ವಹಿಸಿದ್ದ ಬಸವ ಮುರುಘೇಂದ್ರ ಶ್ರೀಗಳು ಮಾತನಾಡುತ್ತ, ೧೫-೧೬ನೇ ಶತಮಾನದಲ್ಲಿ ಈ ಭೂಮಿಯಲ್ಲಿ ಜನ್ಮತಾಳಿ ಜಗವ ಪಾವನ ಮಾಡಿದ ಮಹಾಶಿವಯೋಗಿ ಯಡಿಯೂರು ಸಿದ್ಧಲಿಂಗರು. ಇವರ ವಚನಗಳಲ್ಲಿ ೩ ಸೂತ್ರಗಳನ್ನು ಗಮನಿಸಬಹುದು. ಸುಜ್ಞಾನ, ಸತ್ಕ್ರೀಯೆ ಮತ್ತು ಸದ್ಭಾವ. ಈ ಮೂರು ಲಕ್ಷಣಗಳು ಯಾರಲ್ಲಿ ಅಳವಟ್ಟಿರುತ್ತವೆಯೋ ಅವರಿಗೆ ಪರಮಾನಂದ ಹಾಗೂ ಪರಮಾನುಭವ ಪ್ರಾಪ್ತಿಯಾಗುತ್ತದೆಂದು ಗೊತ್ತಾಗುತ್ತದೆ.
ಹಾಗೆಯೇ ಮತ್ತೆ ನೋಡುವುದಾದರೆ ಸಂಕಲ್ಪ ಸಾಧನೆ ಸಿದ್ಧಿ ಮತ್ತು ಪ್ರಸಿದ್ಧಿ ಈ ನಾಲ್ಕು ಸೂತ್ರಗಳನ್ನು ತಿಳಿಸಿರುವ ಯತಿಗಳು ಯಾವ ವ್ಯಕ್ತಿ ತನ್ನ ಕಾರ್ಯಗಳಿಗೆ ಲೋಕಕಲ್ಯಾಣದ ಮೆರಗನ್ನು ನೀಡುತ್ತಾನೆ ಅದು ಸಂಕಲ್ಪವಾಗಿ ಅದನ್ನು ಸಾಧಿಸ ಹೊರಟರೆ ಸಿದ್ಧಿ ಪ್ರಾಪ್ತವಾಗುತ್ತದೆ. ಇದರಿಂದ ಈ ಕಾರ್ಯಗಳು ಪ್ರಸಿದ್ಧಿ ಪಡೆಯುತ್ತವೆಂಬ ನಿಗೂಢ ಅರ್ಥ ಅವರ ವಚನಗಳಲ್ಲಿ ವ್ಯಕ್ತವಾಗಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಈಚಲನಾಗೇನಹಳ್ಳಿ ಗೋವಿಂದ ಸ್ವಾಮೀಜಿ, ಸವಿತಾ ಸಮಾಜದ ಶ್ರೀನಿವಾಸ್, ಗಾಣಿಗ ಸಮಾಜದ ತಿಪ್ಪೇಸ್ವಾಮಿ, ಹೇಮರೆಡ್ಡಿ ಮಲ್ಲಮ್ಮ ಸಮಾಜದ ನಾಗರಾಜ ಸಂಗಂ, ಕುಂಚಿಟಿಗ ಸಮಾಜದ ಕುಬೇರಪ್ಪ, ಕಮ್ಮಾರ ಸಮಾಜದ ವಕೀಲ ಹನುಮಂತಪ್ಪ, ಶಿವಸಿಂಪಿ ಸಮಾಜದ ಜಯದೇವ ಮೂರ್ತಿ, ಇಟಗಿ ವಿಜಯಕುಮಾರ್ ದಂಪತಿ, ಕಣಿವೆ ಮಾರಮ್ಮ ಸಂಘದ ತಿಪ್ಪೇಸ್ವಾಮಿ, ಅವರ ಸದಸ್ಯರು, ಕುರುಬ ಸಮಾಜದ ಪೈಲ್ವಾನ್ ತಿಪ್ಪೇಸ್ವಾಮಿ ಸೇರಿದಂತೆ ಸಾಹಿತಿ, ಸಂಶೋಧಕರಾದ ಡಾ. ಬಿ. ರಾಜಶೇಖರಪ್ಪ, ನಿವೃತ್ತ ಪ್ರಾಚಾರ್ಯರಾದ ಎಸ್.ಎಂ. ಕೊಟ್ರೇಶಪ್ಪ, ರೋ| ಎಸ್. ವೀರೇಶ್, ನೇತಾಜಿ ತಿಪ್ಪೇಸ್ವಾಮಿ, ಅಂಚೆ ಇಲಾಖೆ ಮಹೇಂದ್ರಕುಮಾರ್, ಬಸವಾಭಿಮಾನಿಗಳಾದ ಚಂದ್ರಣ್ಣ, ಹೆಚ್.ಡಿ.ಪುರ ಗಂಗಾಧರಪ್ಪ, ಶಿವಾನಂದ, ಗಂಗಾಧರ ಸೇರಿದಂತೆ ವಿವಿಧ ಸಮಾಜಗಳ, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಎಸ್.ಜೆ.ಎಂ. ಐಟಿಐ ತರಬೇತಿ ಕೇಂದ್ರದ ನಿರ್ವಹಣೆಯಲ್ಲಿ ನಡೆದ ಸಮಾರಂಭಕ್ಕೆ ಜಮುರಾ ಕಲಾವಿದ ಉಮೇಶ ಪತ್ತಾರ್ ಸಿದ್ಧಲಿಂಗ ಶಿವಯೋಗಿಗಳ ವಚನ ಪ್ರಾರ್ಥನೆ ಮಾಡಿದರು. ಪ್ರಾಚಾರ್ಯ ಬೋರೇಶ ಸ್ವಾಗತಿಸಿದರು. ಚಲ್ಮೇಶ ಶರಣು ಸಮರ್ಪಣೆ ಮಾಡಿದರು.
