ಗದಗ
ಗದಗ ತಾಲೂಕ ಶರಣ ಸಾಹಿತ್ಯ ಪರಿಷತ್ತು ಹಾಗೂ ತಾಲೂಕ ಕದಳಿ ಮಹಿಳಾ ವೇದಿಕೆಯ ಸಹಯೋಗದಲ್ಲಿ ಗದುಗಿನ ತೋಂಟದಾರ್ಯ ಮಠದಲ್ಲಿರುವ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯಾಲಯದಲ್ಲಿ ತಾಲೂಕಿನ ಆಜೀವ ಸದಸ್ಯರ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ, ತಾಲೂಕ ಅಧ್ಯಕ್ಷರಾದ ಶರಣ ಪ್ರಕಾಶ ಅಸುಂಡಿ ಅವರು ಮಾತನಾಡುತ್ತಾ, ಶರಣರ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಪರಿಷತ್ತು ಕಾರ್ಯ ನಿರ್ವಹಿಸುತ್ತಿದೆ. ಜೊತೆಗೆ ಆಜೀವ ಸದಸ್ಯರ ಸಂಖ್ಯೆ ಹೆಚ್ಚಾಗಬೇಕು ಹಾಗೂ ದತ್ತಿದಾನಿಗಳು ತಮ್ಮ ಮನೆಯ ಹಿರಿಯರ ಹೆಸರಿನಲ್ಲಿ ಸೇವಾ ಮನೋಭಾವನೆಯಿಂದ ಪರಿಷತ್ತಿಗೆ ದತ್ತಿನಿಧಿ ನೀಡಬೇಕು. ಮಹಾಮನೆ ಪತ್ರಿಕೆಗೆ ಹೆಚ್ಚೆಚ್ಚು ಸದಸ್ಯರಾಗುವ ಮೂಲಕ ಉತ್ತಮ ಮೌಲಿಕ ವಿಚಾರಗಳನ್ನು ಮಹಾಮನೆ ಪತ್ರಿಕೆಯಿಂದ ನಾವೆಲ್ಲರೂ ಪಡೆಯಬಹುದು ಎಂದರು.
ಸಭೆಯಲ್ಲಿ ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಕೆ.ಎ. ಬಳಿಗೇರ ಅವರನ್ನು ಪರಿಷತ್ತಿನ ವತಿಯಿಂದ ಗೌರವಿಸಲಾಯಿತು.
ಗೌರವ ಸ್ವೀಕರಿಸಿ ಮಾತನಾಡಿದ ಕೆ. ಎ. ಬಳಿಗೇರ, ಗದಗ ಜಿಲ್ಲೆಯಲ್ಲಿ ಎಲ್ಲಾ ತಾಲೂಕುಗಳಲ್ಲಿ, ಕ್ರಿಯಾಶೀಲ ಚಟುವಟಿಕೆಗಳು ನಡೆಯಬೇಕು ಹಾಗೂ ತಮ್ಮೆಲ್ಲರ ಸಹಾಯ, ಸಹಕಾರದ ಮೂಲಕ ಸೇವಾ ಮನೋಭಾವನೆಯಿಂದ ಕಾರ್ಯಪ್ರವೃತ್ತನಾಗುತ್ತೇನೆ. ಆಜೀವ ಸದಸ್ಯರ ಸಂಖ್ಯೆ ಹೆಚ್ಚಿಸುವಲ್ಲಿ ನಾವೆಲ್ಲರೂ ಗಮನ ಹರಿಸಬೇಕು ಎಂದರು.

ಗದಗ ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಶರಣೆ ಸುಧಾ ಹುಚ್ಚಣ್ಣವರ ಪ್ರಸ್ತಾವಿಕವಾಗಿ ಮಾತನಾಡುತ್ತಾ, ಶರಣ ಸಾಹಿತ್ಯ ಪರಿಷತ್ತಿನ ಒಂದು ಭಾಗವಾಗಿ ಕದಳಿ ಮಹಿಳಾ ವೇದಿಕೆಯು ಗದಗ ಜಿಲ್ಲೆಯಲ್ಲಿ ತುಂಬಾ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯ ಏಳು ತಾಲೂಕುಗಳಲ್ಲಿ ಶರಣರ ವಿಚಾರಧಾರೆಗಳನ್ನು ಅರ್ಥಪೂರ್ಣ ಕಾರ್ಯಕ್ರಮಗಳ ಮೂಲಕ ಜನಮಾನಸಕ್ಕೆ ತಲುಪಿಸುವ ಕೆಲಸ ನಡೆಯುತ್ತಿದೆ. ಜೊತೆಗೆ ಪರಿಷತ್ತಿನ ಆಜೀವ ಸದಸ್ಯರ ಸಂಖ್ಯೆ, ಮಹಾಮನೆ ಪತ್ರಿಕೆ, ದತ್ತಿನಿದಿ ಸಂಗ್ರಹದಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಉಪನಿರ್ದೇಶಕರಾದ ಶರಣ ಐ.ಬಿ. ಬೆನಕೋಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಅವರು ಮಾತನಾಡಿದರು. ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಸಿ. ಎಸ್. ಚಟ್ಟಿ ಅವರು ಮಾತನಾಡುತ್ತಾ, ಗದಗ ಜಿಲ್ಲೆಯಲ್ಲಿ ಎಲ್ಲಾ ಸಂಘಟನೆಗಳು ಒಗ್ಗೂಡಿ ಶರಣರ ವಿಚಾರಧಾರೆಯಂತೆ ಕಾರ್ಯನಿರ್ವಹಿಸುತ್ತೇವೆ ಎಂದರು. ಸಭೆಯಲ್ಲಿ ಶಿರಹಟ್ಟಿ ಅಧ್ಯಕ್ಷ ಶರಣ ಎಂ.ಕೆ. ಲಮಾಣಿ ಅವರು ಉಪಸ್ಥಿತರಿದ್ದರು.

ಶರಣೆ ಸುಲೋಚನಾ ಐಹೊಳಿಯವರು ಸ್ವಾಗತಿಸಿದರು. ಮಂಜುಳಾ ಹಾಸಲಕರ ವಚನ ಪ್ರಾರ್ಥನೆ ಗೈದರು. ಪ್ರಾಧ್ಯಾಪಕ ಎಸ್.ಯು. ಸಜ್ಜನಶೆಟ್ಟರ ಕಾರ್ಯಕ್ರಮ ನಿರೂಪಿಸಿದರು. ಎಂ.ಬಿ. ಲಿಂಗದಾಳವರು ಶರಣು ಸಮರ್ಪಣೆ ಸಲ್ಲಿಸಿದರು.
ರಮಣಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ.ಅಂದಯ್ಯ ಅರವಟಿಗೆಮಠ ಅವರನ್ನು ಸತ್ಕರಿಸಲಾಯಿತು. ಕದಳಿ ಮಹಿಳಾ ವೇದಿಕೆಯ ರತ್ನಕ್ಕ ಪಾಟೀಲ, ಶೇಖಣ್ಣ ಕವಳಿಕಾಯಿ, ನಾಗರತ್ನ ಅಸುಂಡಿ, ಮಹಾಂತೇಶ ಅಂಗಡಿ, ಎಸ್.ಎಸ್. ಕಳಸಾಪುರಶೆಟ್ರ, ನ್ಯಾಯವಾದಿ ಕೋಟೆಗೌಡ್ರು, ಅ.ದ. ಕಟ್ಟಿಮನಿ, ಎಸ್.ಎ. ಮುಗದ, ಜಿ.ಪಿ. ಕಟ್ಟಿಮನಿ, ರೇಣುಕಾ ಹಾಸಲಕರ, ರಾಜೇಂದ್ರ ಗಡಾದ, ಡಿ.ಎಸ್. ಬಾಪುರೆ, ಶಾಂತಾ ಮುಂದಿನಮನಿ, ಜ್ಯೋತಿ ಹೇರಲಗಿ, ಗೌರಕ್ಕ ಬಡಿಗಣ್ಣನವರ ಪರಿಷತ್ತಿನ ಆಜೀವ ಸದಸ್ಯರು ಉಪಸ್ಥಿತರಿದ್ದರು.