ಚಿತ್ರದುರ್ಗ
ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಸೆಪ್ಟೆಂಬರ್ ೨೫ರಿಂದ ಅಕ್ಟೋಬರ್ ೩ರವರೆಗೆ ನಡೆಯುವ ಶರಣಸಂಸ್ಕೃತಿ ಉತ್ಸವದ-೨೦೨೫ ನಡೆಯಲಿದೆ.
ಇತೀಚೆಗೆ ಆಡಳಿತ ಮಂಡಳಿಯ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಉತ್ಸವದ ಕಾರ್ಯಕ್ರಮಗಳನ್ನು ವಿವರಿಸಲಾಯಿತು.

ಈ ಉತ್ಸವದ ಮೊದಲ ಮೂರು ದಿನ ಅಥಣಿ ಮುರುಘೇಂದ್ರ ಶಿವಯೋಗಿಗಳ ಜೀವನ ಸಾಧನೆ ಕುರಿತು ಹಾಗೂ ಚಿತ್ರದುರ್ಗದ ಮೂಲಕರ್ತೃ ಮುರಿಗಾ ಶಾಂತವೀರ ಸ್ವಾಮಿಗಳ ಕುರಿತಾಗಿ ವಿಚಾರ ಸಂಕಿರಣ ನಡೆಯಲಿದೆ.
೨೮ಕ್ಕೆ ಬಸವಸಂಸ್ಕೃತಿ ಅಭಿಯಾನ, ೨೯ಕ್ಕೆ ಯುವಜನಗೋಷ್ಠಿ, ಪದವಿ ಪಡೆದ ಸುಮಾರು ೩ ಸಾವಿರ ವಿದ್ಯಾರ್ಥಿಗಳು ಮತ್ತು ವಿವಿಧ ಸಂಪನ್ಮೂಲ ತಜ್ಞರೊಂದಿಗೆ ಸಂವಾದಗೋಷ್ಠಿ, ಅದೇ ದಿನ ಹಾಸ್ಯಸಂಜೆ ಇದೆ.
೩೦ರಂದು ಮಹಿಳಾ ಗೋಷ್ಠಿ, ಕೃಷಿ ಮೇಳ, ಆರೋಗ್ಯಮೇಳ, ಸಂಗೀತಗೋಷ್ಠಿಯೊಂದಿಗೆ ಸಮಾರಂಭ ಸಂಪನ್ನಗೊಳ್ಳಲಿದೆ.

ಜಾನಪದ ಉತ್ಸವ, ಪೀಠಾರೋಹಣ, ಜಯದೇವ ಜಂಗೀಕುಸ್ತಿ, ಜೆ.ಎಂ. ಶಾಲಾ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರ ಸಮಾವೇಶ, ವಚನಕಮ್ಮಟ ಪರೀಕ್ಷೆಗಳ ರ‍್ಯಾಂಕ್ ವಿಜೇತರಿಗೆ ಪ್ರಶಸ್ತಿ ಪ್ರದಾನ ಸಮಾರಂಭ, ಜಾನುವಾರು ಮೇಳ, ಸಾಕುಪ್ರಾಣಿಗಳ ಪ್ರದರ್ಶನ, ಸೇರಿದಂತೆ ವಿವಿಧ ವಿಶೇಷ ಕಾರ್ಯಕ್ರಮಗಳು ಜರುಗಲಿವೆ.
ಹಾಗೆಯೇ ಸ್ವಸ್ಥ ಆರೋಗ್ಯಕ್ಕಾಗಿ ಯೋಗಗುರು ಚೆನ್ನಬಸವಣ್ಣ ಅವರಿಂದ ಸೆ. ೨೦ ರಿಂದ ೨೮ರವರೆಗೆ ಹಾಗೂ ೨೯ರಿಂದ ಶ್ವಾಸಗುರು ಖ್ಯಾತಿಯ ವಚನಾನಂದ ಸ್ವಾಮೀಜಿಯವರು ಯೋಗದ ಬಗ್ಗೆ ಪ್ರದರ್ಶನ ಪ್ರಾತ್ಯಕ್ಷಿಕೆ ಇರುತ್ತದೆ.
೧ ಗಂಟೆ ವಚನ ಝೇಂಕಾರ ಹೆಸರಿನಡಿಯಲ್ಲಿ ೪-೫ ಸಾವಿರ ಶರಣ-ಶರಣೆಯರ ವಚನಾಮೃತ ಗಾನಸುಧೆಯ ಕಾರ್ಯಕ್ರಮದ ತಯಾರಿ ಕೂಡ ನಡೆದಿದೆ ಎಂದು ಡಾ. ಬಸವಕುಮಾರ ಸ್ವಾಮೀಜಿ ತಿಳಿಸಿದರು.