ಚಿತ್ರದುರ್ಗ
ಶರಣ ಸಂಸ್ಕೃತಿ ಉತ್ಸವ ೨೦೨೫ರ ಅಂಗವಾಗಿ ಶ್ರೀ ಮುರುಘಾಮಠದಲ್ಲಿ ಅಯೋಜಿಸಲಾಗಿದ್ದ ಕೃಷಿ ಮತ್ತು ಕೈಗಾರಿಕೆ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ. ಅಶೋಕ್ ದಳವಾಯಿ, ಶರಣ ಸಂಸ್ಕೃತಿ ಎಂದರೆ ಕೇವಲ ಧಾರ್ಮಿಕ ಪದ್ಧತಿ ಅಲ್ಲ. ಅದು ಮಾನವ ಶ್ರೇಷ್ಠತೆಯ ಜೀವನಕ್ರಾಂತಿ. ಕರ್ಮ ಸಂಸ್ಕೃತಿಗೆ ಶರಣ ಸಂಸ್ಕೃತಿ ಉತ್ತರ ನೀಡುತ್ತದೆ. ೧೨ನೇ ಶತಮಾನದಲ್ಲಿ ಶರಣರು ಕಾಯಕ ಪರಿಕಲ್ಪನೆ ಮೂಲಕ ಕರ್ಮ ಸಂಸ್ಕೃತಿಗೆ ಸ್ಪಷ್ಟ ಉತ್ತರ ನೀಡಿದರು.
ನಾವು ಮಾಡುವ ಕೆಲಸ ಅದುವೇ ಕೈಲಾಸ. ಶರಣರು ಇದನ್ನು ಜಗತ್ತಿಗೆ ತಿಳಿಸಿದರು. ಕೃಷಿ ಕಾಯಕ ಶ್ರೇಷ್ಠವಾದದ್ದು, ಬಸವಣ್ಣನವರು ಹೇಳುವ ಹಾಗೆ ಕೃಷಿ ಕಾರ್ಯ ಮಾಡುವ ಸದ್ಭಕ್ತನ ಪಾದವ ತೋರಿಸಿ ಎನ್ನುತ್ತಾರೆ. ಮೇಟಿ ಮತ್ತು ನಾಟಿಗಳ ಮಧ್ಯೆ ನಿರರ್ಥಕ ಸಂಬಂಧವಿದೆ. ನಂತರದ್ದು ದಾಸೋಹ ಪರಿಕಲ್ಪನೆ. ಕಾಯಕದಿಂದ ದುಡಿದಿದ್ದನ್ನು ಸ್ವಾರ್ಥಕ್ಕಾಗಿ ಬಳಸದೆ ದಾಸೋಹಕ್ಕೆ ನೀಡುವುದೇ ಪರಮಸುಖ. ಸಂಪಾದನೆ ನಿನ್ನದಾದರೆ ಲಾಭ ಸಮಾಜಕ್ಕೆ ಸೇರಬೇಕು.

ಶರಣ ಸಂಸ್ಕೃತಿಯು ಇಂದಿನ ಜ್ವಲಂತ ಸಮಸ್ಯೆಗಳ ನಿರ್ಮೂಲನೆಗೆ ಇರುವ ಒಂದು ಉತ್ತರ. ಯೋಗಿ ಎಂದರೆ ಜಗತ್ತಿಗೆ ಅನ್ನ ಕೊಡುವವನು. ಕೃಷಿಕರ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಬೇಕು. ಇಲ್ಲವಾದಲ್ಲಿ ರೈತರ ಸಂಖ್ಯೆ ಕಡಿಮೆಯಾಗುವ ಸಂಭವವಿದೆ. ಎಲ್ಲಾ ಉದ್ಯೋಗಗಳಿಗಿಂತ ಕೃಷಿಯಿಂದ ಹೆಚ್ಚಿನ ಮಾನ್ಯತೆ ದೊರೆಯುತ್ತದೆ. ನಮ್ಮ ಯೋಚನೆ ವಿಚಾರ ಕೃತಿಗಳಲ್ಲಿ ಹತ್ತಿರದ ಸಂಬಂಧವಿರಬೇಕು. ಜಾಗತಿಕ ಪರಿವರ್ತನೆಗೆ ಶರಣ ಸಂಸ್ಕೃತಿ ಸಹಕಾರವಾಗಿದೆ ಎಂದು ನುಡಿದರು.
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಶಿವಯೋಗಿ ಕಳಸದ ಅವರು ಮಾತನಾಡಿ, ಕೃಷಿಯಲ್ಲಿ ಆಸಕ್ತಿ ಇರುವವರನ್ನು ಸೇರಿಸಿ ಉತ್ತಮ ವೇದಿಕೆಯನ್ನು ಶ್ರೀಮಠದ ವತಿಯಿಂದ ಕಲ್ಪಿಸಿಕೊಡುತ್ತೇವೆ. ರೈತರ ಬೆಳೆಗೆ ಯೋಗ್ಯವಾದ ಬೆಲೆ ಬರುವಲ್ಲಿ ಶ್ರಮಿಸಬೇಕಿದೆ. ಶ್ರೀಮಠವು ಅನೇಕ ಜಾಗದಲ್ಲಿ ಉಪಯೋಗವಾಗುವಂತೆ ಗಿಡಮರ, ತೋಟಗಾರಿಕೆಯನ್ನು ಶ್ರೀಮಠದ ವತಿಯಿಂದ ಮಾಡಿಸುತ್ತಿದ್ದೇವೆ.
ಕೃಷಿ ಪದ್ಧತಿ ದಾಖಲಾತಿಯನ್ನು ಮುಂದಿನ ಪೀಳಿಗೆಗೆ ಅನುಕೂಲವಾಗುವಂತೆ ಮಾಡಲು ಶ್ರೀಮಠ ಬದ್ಧವಾಗಿದೆ. ಶ್ರೀಮಠದ ಮುಂದಿನ ಕಾರ್ಯಕ್ರಮಗಳಲ್ಲಿ ಎಲ್ಲರೂ ಉತ್ಸಾಹದಿಂದ ಭಾಗವಹಿಸಿ ಯಶಸ್ವಿಗೊಳಿಸಿ ಎಂದು ಕರೆ ನೀಡಿದರು.

ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ರೈತರು ಅನ್ನ ಕೊಡುತ್ತಾರೆ, ಆದರೆ ಅವರೇ ಬಡವರು ಎಂಬ ಮಾತಿದೆ. ಅದಕ್ಕೆ ನಾವು ರೈತರು ಬೆಳೆದ ಬೆಳೆಗೆ ಬೆಂಬಲ ನೀಡುವಂತೆ ಕೇಳುತ್ತಿದ್ದೇವೆ. ನಮ್ಮ ರೈತರ ಆದಾಯ ಹೆಚ್ಚು ಮಾಡದಿದ್ದರೆ, ನಮ್ಮ ರೈತರ ಸಂಖ್ಯೆ ಕಡಿಮೆಯಾಗುತ್ತದೆ. ಜೊತೆಗೆ ರೈತರು ಬಹುಬೆಳೆಯ ಪದ್ಧತಿ ಅಳವಡಿಸಿಕೊಳ್ಳಬೇಕಿದೆ.
ರೈತರು ಮಾರುಕಟ್ಟೆ ಪದ್ಧತಿಯನ್ನು ಕೃಷಿ ಸಹಕಾರ ಸಂಘಗಳ ಮೂಲಕ ಮಾಡಬೇಕಾಗಿದೆ. ಗಾಂಧೀಜಿಯವರ ಗ್ರಾಮ ಸ್ವರಾಜ್ ಕಲ್ಪನೆಯನ್ನು, ರೈತರ ಸಮಸ್ಯೆಗಳನ್ನು ರೈತರೇ ಪರಿಹಾರೋಪಾಯ ಮಾಡಿಕೊಂಡರೆ ಸಾಧ್ಯ ಎಂದು ನುಡಿದರು.
ಅಕ್ಕಡಿ ಬೇಸಾಯ ತಜ್ಞರಾದ ಅರಿವು ಪ್ರಭಾಕರ್ ಬಿ. ಮಾತನಾಡಿ, ನಾನು ರೈತರ ಅನುಭವ ಎಂಬ ಸಂಸ್ಥೆ ಸ್ಥಾಪಿಸಿದ್ದೇನೆ. ಅಕ್ಷಯ ಪಾತ್ರೆಯ ರೂಪದಲ್ಲಿ ೧೮ ಬೆಳೆಗಳನ್ನು ಅಕ್ಕಡಿ ಸಾಲುಗಳ ಮೂಲಕ ಬೆಳೆಯಬಹುದು. ಮಳೆಯ ಮುಖಾಂತರ ಈ ಬೆಳೆಗಳನ್ನು ಬೆಳೆಯಬಹುದು.
ಬೆಳಗಾವಿಯನ್ನು ಬೇಳೆಕಾಳು ರಾಜ ಎನ್ನುತ್ತಾರೆ. ನಮ್ಮ ಪೂರ್ವಜರು ಮಾಡಿದ ನೈಸರ್ಗಿಕ ಬೇಸಾಯ ಪದ್ಧತಿಯಲ್ಲಿ ಬೇಸಾಯ ಮಾಡುವುದರಿಂದ ಪೌಷ್ಟಿಕಾಂಶಯುತವಾದ ಬೆಳೆಯನ್ನು ಬೆಳೆಯಬಹುದು ಎಂದರು.
ಹುಲಿಕೆರೆ ಕೃಷಿಕರಾದ ಶ್ರೀ ವಿಶ್ವೇಶ್ವರ ಸಜ್ಜನ್ ಮಾತನಾಡಿ, ರಾಶಿ ಬೆಳೆಯನ್ನು ಬೆಳೆಯುಲು ರೈತರು ಸಿದ್ದ ಪ್ರಸಾದಕರಾಗಿದ್ದರು. ದೇಶ ಕೃಷಿ ಸಮೃದ್ಧವಾಗಿ ಬೆಳೆದರು ಕೃಷಿಕ ಮಾತ್ರ ಬೆಳೆಯಲಿಲ್ಲ. ಕಾರಣ ಕೃಷಿ ಕೃಷಿ ಎನ್ನುತ್ತ ಖುಷಿಯನ್ನೇ ಕಳೆದುಕೊಂಡಿದ್ದೇವೆ. ಆದ್ದರಿಂದ ಗಿಡಮರ ಆಧಾರಿತ ವೆಚ್ಚರಹಿತ ಕೃಷಿ ಮಾಡಿದರೆ ಮಾಡಿದರೆ ಲಾಭದಾಯಕ ಆಗಬಹುದು. ಇಂದು ಕೇಳಿದಷ್ಟು ಕೂಲಿ ಮಾಡಿದಷ್ಟು ಕೆಲಸ ಎಂಬಂತಾಗಿದೆ. ಆದ್ದರಿಂದ ಗಿಡಮರ ಸಂಗ್ರಹ ಮಾಡುತ್ತ ಮಳೆಯ ಬೆಳೆಯನ್ನು ಬೆಳೆಯಿರಿ ಎಂದು ಕರೆ ನೀಡಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀ ಚಂದ್ರಶೇಖರ ನಾರಾಣಪುರ ಮಾತನಾಡಿ, ಇಂದು ಕೃಷಿ ಭಾರತದ ಭಾರತದಲ್ಲಿ ಶ್ರೀಮಂತವಾಗಿದೆ. ಆದರೆ ಕೃಷಿಕರು ಶ್ರೀಮಂತರಾಗಿಲ್ಲ. ಅಧಿಕ ರಾಸಾಯನಿಕ ಉಪಯೋಗ ಮಾಡುತ್ತ ಹೋದರೆ ಬೆಳೆ ಕಡಿಮೆಯಾಗುತ್ತಿದೆ. ರಾಜ್ಯದಲ್ಲಿ ೧೪೦ ಕಂಪನಿಗಳಿದ್ದಾವೆ. ಸಹಜ ಕೃಷಿಗೆ ಬೇಕಾದ ಕಂಪನಿಗಳು ಅಗಣಿತ. ಆದರೂ ಅದರ ಸದುಪಯೋಗ ಕಡಿಮೆ. ಭಾರತದಲ್ಲಿ ಜನ ಜಾನುವಾರುಗಳ ಮೂಲಕ ಕೃಷಿ ಮಾಡುತ್ತಿದ್ದಾರೆ. ಅವುಗಳನ್ನು ನಾವು ಅನುಕರಣೆ ಮಾಡೋಣ ಎಂದು ಹೊರದೇಶದವರು ನಿಂತಿದ್ದಾರೆ.
ರಾಸಾಯನಿಕ ಕೃಷಿಯಿಂದ ವಾತಾವರಣದಲ್ಲಿ ತಾಪಮಾನ ಹೆಚ್ಚಾಗಿ ಕೃಷಿ ಅಸ್ತವ್ಯಸ್ತವಾಗುತ್ತಿದೆ. ಸಾವಯವ ಕೃಷಿ ಅಥವಾ ನೈಸರ್ಗಿಕ ಕೃಷಿಯಿಂದ ರೈತರ ಬದುಕು ಹಸನಾಗುತ್ತದೆ ಎಂದು ತಿಳಿಸಿದರು.

ಶಿವಮೊಗ್ಗ ಪಶುವೈದ್ಯಾಧಿಕಾರಿ ಡಾ. ಟಿ.ವಿ. ಗಿರೀಶ್ ಮಾತನಾಡಿ, ಕೃಷಿ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯನ್ನು ನೀಡುತ್ತಿದೆ. ಕಳೆದ ೭೮ ವರ್ಷಗಳಿಂದ ಹಾಲು ಉತ್ಪಾದನೆಯಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ. ಕಾರಣ ಅನೇಕ ರೀತಿಯ ತಳಿಗಳ ಹಸುಗಳನ್ನು ಸಾಕಿ ಅದರ ಮುಖಾಂತರ ಸಾವಯವ ಕೃಷಿಯನ್ನು ಮಾಡುತ್ತಿದ್ದೇವೆ.
ರಮೇಶ ಎಂಬ ರೈತ ಸುಮಾರು ೨೫ ಹಸುಗಳಿಂದ ೨೫೦ರಿಂದ ೩೦೦ ಲೀಟರ್ ಹಾಲು ಉತ್ಪಾದನೆ ಮಾಡುತ್ತಾರೆ, ಮತ್ತು ಹಸುಗಳ ಸಗಣಿಯಿಂದ ಬಯೊಗ್ಯಾಸ್ ಮುಖಾಂತರ ವಿದ್ಯುತ್ ತಯಾರು ಮಾಡಿ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಜೊತೆಗೆ ಆ ಸಗಣಿಯನ್ನು ತೋಟಕ್ಕೆ ಹಾಕುವುದರ ಮೂಲಕ ಭೂಮಿಯ ಫಲವತ್ತತೆಯನ್ನು ಸಮೃದ್ಧಗೊಳಿಸುತ್ತಿದ್ದಾರೆ.
ಅದರಿಂದ ಅವರ ಬೆಳೆ ಉತ್ತಮವಾಗಿ ಬೆಳೆಯುತ್ತಿದ್ದಾರೆ. ಆದುದರಿಂದ ಈ ಸಗಣಿ ಗೊಬ್ಬರವನ್ನು ಉತ್ತಮವಾಗಿ ಉಪಯೋಗಿಸಿಕೊಂಡು ಆಧುನಿಕ ಯಂತ್ರೋಪಕರಣಗಳ ಮೂಲಕ ಹೊಲಗದ್ದೆಗಳಿಗೆ ಹಾಕಿ, ಗ್ರಾಮದ ಸುತ್ತಮುತ್ತ ತಿಪ್ಪೆಗಳ ಸಂಗ್ರಹ ಮಾಡಬೇಡಿ ಎಂದು ತಿಳಿಸಿದರು.
ಜಲತಜ್ಞರಾದ ಡಾ. ದೇವರಾಜರೆಡ್ಡಿ ಮಾತನಾಡಿ, ಭೂಮಿಯ ಜಲ ಪದರಗಳ ಮೂಲಕ ಒಳಸೇರಿ ಹೋಗಿ ಬೋರ್‌ವೆಲ್ ಮೂಲಕ ಹೊರತರುತ್ತೇವೆ. ನಮ್ಮ ದೇಶದಲ್ಲಿ ೬ ಕೋಟಿ ಬೋರ್‌ವೆಲ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಅದರಿಂದ ಸಾವಿರಾರು ಕ್ಯೂಸೆಕ್ಸ್ ನೀರು ಹೊರತೆಗೆದರೆ ಕ್ರಮೇಣ ಮೇಲ್ಪದರದ ನೀರು ಖಾಲಿಯಾಗಿ ಹೋಗುತ್ತದೆ. ಆದ್ದರಿಂದ ಇಂಗು ನೀರು ಪದ್ದತಿಯನ್ನು ಅಳವಡಿಸಿಕೊಂಡು ಜಲ ಸಂರಕ್ಷಣೆ ಮಾಡಬೇಕು ಇಲ್ಲದೆ ಹೋದರೆ ಕೆಲವೇ ದಿನಗಳಲ್ಲಿ ನಮ್ಮ ದೇಶ ಬರಡು ಭೂಮಿಯಾಗಬಹುದು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಹಮ್ಮದ್ ನೂರುಲ್ಲಾ, ನಮ್ಮ ಹೊಲದಲ್ಲಿ ಪ್ರತಿಯೊಂದು ಜಾತಿಯ ಹುಲ್ಲುಇದೆ. ೧೦ ಹಸುಗಳನ್ನು ಸಾಕಿದ್ದೇನೆ, ಹಣ್ಣಿನಗಿಡ ಬೆಳೆದಿದ್ದೇನೆ. ಬಾಳೆಹಣ್ಣಿನ ವಿವಿಧ ೮-೯ ರೀತಿಯ ಬಾಳೆಹಣ್ಣು ಬೆಳೆಯುತ್ತಿದ್ದೇನೆ. ಬಿದಿರನ್ನೂ ಸಹ ಬೆಳೆದಿದ್ದೇನೆ. ಇದಕ್ಕೆಲ್ಲ ಸಾವಯವ ಕೃಷಿ ಸಹಾಯಕವಾಗಿದೆ ಎಂದರು.
ಸನ್ಮಾನ ಸ್ವೀಕರಿಸಿದ ಮಂಗಳಾ ಕಿರಣ್ ನೀಲಗುಂದ ಮಾತನಾಡಿ, ಎಲ್ಲಾ ಕಡೆ ದೇವರು ಇರಲು ಸಾದ್ಯವಿಲ್ಲವೆಂದು ತಂದೆ-ತಾಯಿ, ಅಕ್ಕ-ತಂಗಿಯರನ್ನು, ಮಕ್ಕಳನ್ನು ಸೃಷ್ಟಿ ಮಾಡಿರುತ್ತಾನೆ. ನಾನು ನೌಕರಿಗೆ ಹೋಗದೆ ನೈಸರ್ಗಿಕ ಕೃಷಿ ಕಡೆಗೆ ಗಮನ ನೀಡಿದೆ. ಕಡಲೆ, ಮೆಣಸಿನಕಾಯಿ ಮುಂತಾದ ಬೆಳೆ ಬೆಳೆದು ಮೆಣಸಿನಕಾಯಿಯನ್ನು ಪುಡಿ ಮಾಡಿ ಖಾರದಪುಡಿಯನ್ನು ತಯಾರಿಸಿ ಮಾರುಕಟ್ಟೆಗೆ ನೀಡುತ್ತಿದ್ದೇನೆ.
ಹಸುವಿನ ಹಾಲಿನಿಂದ ಪನ್ನೀರು, ಸಗಣಿಯಿಂದ ಕುಳ್ಳು ತಯಾರಿಸಿ ಮಾರಾಟ ಮಾಡಿ ಆರ್ಥಿಕವಾಗಿ ಮುನ್ನಡೆಯಲು ಶ್ರಮಿಸುತ್ತಿದ್ದೇನೆ ಎಂದರು.
ಹಾವೇರಿಯ ಸಿದ್ದನಗೌಡ ಪಾಟೀಲ್ ಮಾತಾಡಿ, ರೈತರು ಚಿಂತಾಜನಕರಾಗಿದ್ದಾರೆ. ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಕಾಲಕಾಲಕ್ಕೆ ಮಳೆಯ ಅಭಾವದಿಂದ ಬೆಳೆ ಒಣಗುತ್ತಿವೆ. ಕೆಲವೆಡೆ ಬೆಳೆಗೆ ಮಳೆ ಹೆಚ್ಚಾಗಿ ಕೊಳೆತು ಹೋಗುತ್ತಿವೆ. ಆದ್ದರಿಂದ ಸರ್ಕಾರಕ್ಕೆ ಪರಿಹಾರ ನೀಡಲು ನಮ್ಮ ಒತ್ತಾಯವಿದೆ. ರೈತರ ಮಕ್ಕಳಿಗೆ ಯಾರು ಹೆಣ್ಣು ನೀಡುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.

ಕಾರ್ಯಕ್ರಮದಲ್ಲಿ ಗೋಕಾಕ್ ಶ್ರೀ ಶೂನ್ಯ ಸಂಪಾದನೆ ಮಠದ ಮುರುಘರಾಜೇಂದ್ರ ಸ್ವಾಮಿಗಳು, ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ, ಶ್ರೀ ವಚನಾನಂದ ಸ್ವಾಮೀಜಿ, ಭದ್ರಾ ಮೇಲ್ದಂಡೆ ಯೋಜನೆ ಹೋರಾಟ ಸಮಿತಿ ಅಧ್ಯಕ್ಷರಾದ ಶ್ರೀ ಲಿಂಗಾರೆಡ್ಡಿ, ರೈತಸಂಘದ ಅಧ್ಯಕ್ಷರಾದ ಬಡಗಲಪುರ ನಾಗೇಂದ್ರ, ಸಂಗನಗೌಡ ಪಾಟೀಲ್, ಹೆಚ್.ಎಂ .ಸೋಮಶೇಖರಪ್ಪ, ಕೆ. ಚಿಕ್ಕಣ್ಣ, ಶಾಂತ ಅಶೋಕ್, ಧನಂಜಯ, ಕೆಸಿ ಹೊರಕೇರಪ್ಪ, ರೆಡ್ಡಿಹಳ್ಳಿ ವೀರಣ್ಣ, ಭೂತಯ್ಯ, ಸಿದ್ದರಾಮಪ್ಪ ಹಿರಿಯೂರು, ತಿಮ್ಮಯ್ಯ, ಬಸ್ತಹಳ್ಳಿ ಸುರೇಶ್ ಬಾಬು, ಚಿಕ್ಕಪ್ಪನಳ್ಳಿ ರುದ್ರಸ್ವಾಮಿ, ಚಿಕ್ಕಪ್ಪನಹಳ್ಳಿ ಎನ್ ಜೆ ಸಂತೋಷ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮುಳಗುಂದ ಸಮಗ್ರ ಕೃಷಿಕರಾದ ಶ್ರೀಮತಿ ಮಂಗಳ ಕಿರಣ್ ನೀಲಗುಂದ, ರಾಜಶೇಖರ ನಿಂಬರಗಿ, ಕೊರಟಗೆರೆ ತಾಲೂಕು ಪಾತಗನಹಳ್ಳಿ ಶ್ರೀ ಎ ಎಸ್ ನಟರಾಜ್, ಮಂಡ್ಯಜಿಲ್ಲೆ ಸಾತೇನಹಳ್ಳಿ ನೈಸರ್ಗಿಕ ಕೃಷಿಕರಾದ ಶ್ರೀ ಕುಮಾರಸ್ವಾಮಿ, ತಿಪಟೂರು ಜಾಬಘಟ್ಟ ಶ್ರೀ ಆರ್ ರಮೇಶ್, ಮಹಮದ್ ನೂರುಲ್ಲಾ ಇವರನ್ನು ಸನ್ಮಾನಿಸಲಾಯಿತು.
ಹಸುವಿಗೆ ಮೇವು ತಿನ್ನಿಸುವುದರ ಮೂಲಕ ಸಾಕುಪ್ರಾಣಿಗಳ ಪ್ರದರ್ಶನವನ್ನು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಶಿವಯೋಗಿ ಕಳಸದ ಅವರು ಉದ್ಘಾಟಿಸಿದರು.
ವಿವಿಧ ತಳಿಗಳಾದ ಹಳ್ಳಿಕಾರು, ಅಮೃತ ಮಹಲ್, ಶಿಲಾರಿ ಸ್ಥಳೀಯ ಎತ್ತುಗಳು, ಜಾಫರ್, ಬಾಡಿ, ಮುರ ತಳಿಯ ಎಮ್ಮೆಗಳು, ಜರ್ಸಿ, ಮಲೆನಾಡಗಿಡ್ಡ ತಳಿಯ ಆಕಳುಗಳು, ನಂದಿದುರ್ಗದ ಮೇಕೆಗಳು, ಕೋಳಿ, ಕುದುರೆ ವಿವಿಧ ಗಿಳಿಗಳು ಪ್ರದರ್ಶನಗೊಂಡವು.
ಕೃಷಿ ಮತ್ತು ಕೈಗಾರಿಕಾ ಮೇಳದಲ್ಲಿ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದ ಜೈವಿಕ ಇಂಧನ ಉತ್ಪನ್ನದ ಘಟಕ, ಅಮೃತ್ ಆರ್ಗ್ಯಾನಿಕ್ ಫರ್ಟಿಲೈಜರ್ಸ್, ವಾಹಿನಿಪೈಪ್ಸ್, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಕೌಶಲ್ಯಅಭಿವೃದ್ಧಿ ಉದ್ಯಮಶೀಲತಾ ಅಭಿವೃದ್ಧಿ ಇಲಾಖೆ, ರೇಷ್ಮೆ ಇಲಾಖೆ, ಚಳ್ಳಕೆರೆಯ ಹೂವಿನ ಹಾರ ಹಾಗೂ ರೊಟ್ಟಿ ಉತ್ಪಾದನೆ, ಸೆಲ್ಕೋ ಸೋಲಾರ್ ಲೈಟಿಂಗ್ ವಿದ್ಯುತ್ ಉತ್ಪಾದನೆ, ಕಾಟನ್ ಬ್ಯಾಗು ಉತ್ಪಾದನೆ ಮಾರಾಟ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಶಿವಮೊಗ್ಗದ ಅಂಜನಾ ಆರ್ಗಾನಿಕ್ಸ್, ಚಿತ್ರದುರ್ಗದ ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್ ಕೈಮಗ್ಗ ಮತ್ತು ಜವಳಿ ಇಲಾಖೆ, ಕಡೂರಿನ ಅಡಿಕೆ ಬೇಸಾಯ, ತರೀಕೆರೆಯ ಸ್ವಸಹಾಯ ಸಂಘದ ತರಕಾರಿಬೀಜ ಉತ್ಪಾದನೆ, ಶ್ರೀ ಕಲ್ಲೇಶ್ವರ ಕಾಯರ್ ಇಂಡಸ್ಟ್ರೀಸ್ ಅಂಡ್ ಆರ್ಗಾನಿಕ್ ಮ್ಯಾನುಫ್ಯಾಕ್ಚರರ್ಸ್, ಬಸವೇಶ್ವರ ವೈದ್ಯಕೀಯ ಆರೋಗ್ಯ ತಪಾಸಣೆಯ ಮಾಹಿತಿ, ಮಹಿಳಾ ಮತ್ತು ಮಕ್ಕಳ ಇಲಾಖೆ ಸಮಗ್ರ ಮಕ್ಕಳ ರಕ್ಷಣೆ, ಸಾಮಾಜಿಕ ಅರಣ್ಯ ವಿಭಾಗ ಜಿಲ್ಲಾ ಪಂಚಾಯತ್, ಚಿತ್ರದುರ್ಗ ಜಲಸಂಪನ್ಮೂಲ ಇಲಾಖೆ ವಿಶ್ವೇಶ್ವರಯ್ಯ ಜಲನಿಗಮ ಮಂಡಳಿ, ಭದ್ರಾ ಮೇಲ್ದಂಡೆ ಯೋಜನೆ, ವಾಹಿನಿ ಪಾಲಿಟೆಕ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್, ಶ್ರೀದೇವಿ ಸ್ತ್ರೀಶಕ್ತಿ ಮಹಿಳಾ ಸಂಘ ಕೃಷಿ ಮತ್ತು ವಸ್ತು ಪ್ರದರ್ಶನ, ತಾಲೂಕು ಪ
ಕೃಷಿ ಮತ್ತು ಕೈಗಾರಿಕ ವಸ್ತು ಪ್ರದರ್ಶನದಲ್ಲಿ ಕೃಷಿ ಇಲಾಖೆ, ಚಿತ್ರದುರ್ಗ ಪ್ರಥಮ, ತೋಟಗಾರಿಕಾ ಇಲಾಖೆ ಚಿತ್ರದುರ್ಗ ದ್ವಿತೀಯ, ಭದ್ರಾ ಮೇಲ್ದಂಡೆ ಯೋಜನೆ-ತೃತೀಯ, ಜಿಲ್ಲಾ ಪಂಚಾಯತ್ ಮಹಿಳಾ ಸಂಘ ಸಮಾಧಾನಕರ ಬಹುಮಾನಗಳನ್ನು ಪಡೆದವು.
ಮೇಳದಲ್ಲಿ ತೀರ್ಪುಗಾರರಾಗಿ ಡಾ. ರೇವಣ್ಣ, ಡಾ. ಯೋಗಾನಂದ, ಡಾ. ಮುರುಗೇಶ್, ಡಾ. ಶಿವಕುಮಾರ್, ಡಾ. ಕೃತಿಕ, ಡಾ. ಸಿ. ತಿಪ್ಪೇಸ್ವಾಮಿ ಆಗಮಿಸಿದ್ದರು.