ಗದಗ:
12ನೇ ಶತಮಾನದ ಹಲವಾರು ಶಿವಶರಣೆಯರು ಗಟ್ಟಿ ಸ್ತ್ರೀತನದ ನಿಲುವನ್ನು ವ್ಯಕ್ತಪಡಿಸಿದರು ಎಂದು ಮುಂಡರಗಿ ಚೈತನ್ಯ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ವೀಣಾ ಪಾಟೀಲ ಅವರು ಹೇಳಿದರು.
ಜಿಲ್ಲಾ ಕದಳಿ ಮಹಿಳಾ ವೇದಿಕೆ ವತಿಯಿಂದ ಈಚೆಗೆ ವಿವೇಕಾನಂದ ನಗರದ ನಿರ್ಮಲಾ ಗುರುಲಿಂಗನಗೌಡ ಪಾಟೀಲ ಅವರ ಮಹಾಮನೆಯಲ್ಲಿ ದಿ. ಗಿರೋಸಾ ಹಾಗೂ ಎಲ್ಲೂಬಾಯಿ ಬದಿ ಸಂಸ್ಮರಣ ದತ್ತಿ ಕಾರ್ಯಕ್ರಮದಲ್ಲಿ ‘ಶರಣ ಸಂಸ್ಕೃತಿಯಲ್ಲಿ ಸ್ತ್ರೀ ಸಂವೇದನೆ’ ಎಂಬ ವಿಷಯ ಕುರಿತು ಮಾತನಾಡಿದರು.

ಶರಣರ ಪರಂಪರೆ ಸಮಾನತೆಯನ್ನು ನೀಡಿದೆ. ಯಾವುದೇ ಜಾತಿ ಮತ ಪಂಥ ಧರ್ಮ ಲಿಂಗ ಭೇದವಿಲ್ಲದೆ ಸರ್ವ ಏಳಿಗೆಯನ್ನು ಬಯಸಿದ ಕಾಲ ಅದಾಗಿದೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ ಎಂ.ಎನ್. ಕಾಮನಹಳ್ಳಿ ಅವರು ಮಾತನಾಡುತ್ತಾ, ಸ್ತ್ರೀಯನ್ನು ಪೂಜ್ಯ ಭಾವನೆಯಿಂದ ಗೌರವದಿಂದ ಕಂಡಂತ ನಾಡು ನಮ್ಮದು. ಇಂದು ಆಧುನಿಕತೆಯ ಭರದಲ್ಲಿ ಬದಲಾದ ಜೀವನ ಶೈಲಿಯಲ್ಲಿ ಚಿತ್ತ ವಿಚಲತೆಯಿಂದ ಹಲವಾರು ರೀತಿಯ ದುರ್ಘಟನೆಗಳನ್ನು ಕಾಣಲಾಗುತ್ತಿದೆ.

ಶರಣರ ತತ್ವ ಸರ್ವ ಸಮಾನತೆಯನ್ನು ಸಾಧಿಸಿದ ತತ್ವವದು. ಪ್ರತಿಯೊಬ್ಬರು ಆ ಮೌಲ್ಯವನ್ನು ಅರಿತು ಮನೆಯಲ್ಲಿ, ಸಮಾಜದಲ್ಲಿ ಅಷ್ಟೇ ಸಮಾನ ಸ್ಥಾನಮಾನ, ಗೌರವದಿಂದ ಕಾಣುವಂತಾಗಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವೇದಿಕೆಯ ಜಿಲ್ಲಾಧ್ಯಕ್ಷೆ ಸುಧಾ ಹುಚ್ಚಣ್ಣವರ ಶರಣ ಸಂಸ್ಕೃತಿ ಇಡೀ ಮನುಕುಲಕ್ಕೆ ಬೆಳಕಾಗಿದೆ. 12ನೇ ಶತಮಾನದ ಸ್ತ್ರೀ ಸಮಾನತೆಯನ್ನು ಇಂದು ಬೂದಿ ಮುಚ್ಚಿದ ಕೆಂಡದಂತೆ ಸ್ತ್ರೀ ಹಲವು ರೀತಿಯ ನಕಾರಾತ್ಮಕ ಸಂವೇದನೆಯನ್ನು ಅನುಭವಿಸುತ್ತಿದ್ದಾಳೆ. ಶರಣರ ಅನುಭಾವದ ನುಡಿಗಳನ್ನು ಇಂದು ಪ್ರತಿಯೊಬ್ಬರು ಬದುಕಿಗೆ ಅನ್ವಯಿಸಿಕೊಂಡಾಗ ಮಾತ್ರ ಸ್ತ್ರೀ ಸಮಾನತೆ ಸಾಧ್ಯ ಎಂದರು.
ಮಕ್ಕಳ ಸಾಹಿತಿ ಡಾ. ರಾಜೇಂದ್ರ ಗಡಾದವರು ಮಾತನಾಡುತ್ತಾ, ಇಂದಿನ ಯುವ ಪೀಳಿಗೆಗೆ ಶರಣ ಸಂಸ್ಕೃತಿ ಪ್ರಸಾರ ಅವಶ್ಯವಾಗಿದೆ. ಕಾಲಘಟ್ಟದ ಬದಲಾವಣೆಗಳೊಂದಿಗೆ ಸ್ತ್ರೀ ಸಂವೇದನೆಯ ವಿಚಾರಗಳು ಸಂಸ್ಕೃತಿಯ ಪ್ರತಿಬಿಂಬವಾಗಿವೆ. ಇಂತಹ ದತ್ತಿ ಕಾರ್ಯಕ್ರಮಗಳು ಹಿರಿಯರ ಸ್ಮರಣೆಗೆ ಮಹತ್ವವನ್ನು ಕಲ್ಪಿಸಿವೆ ಎಂದು ಅಧ್ಯಕ್ಷೀಯ ನುಡಿಗಳನ್ನಾಡಿದರು.
ದತ್ತಿದಾನಿಗಳಾದ ರತ್ನಾ ಬದಿ ಮಾತನಾಡುತ್ತಾ, ಈ ದತ್ತಿ ಕಾರ್ಯಕ್ರಮ ನಮ್ಮ ತಂದೆ ತಾಯಿಗಳ ಪೂಜನೀಯ ಸ್ಮರಣೆಯಾಗಿದೆ. ಅವಕಾಶ ಕಲ್ಪಿಸಿಕೊಟ್ಟ ವೇದಿಕೆಗೆ ವಿಶೇಷ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.
ವೇದಿಕೆ ತಾಲೂಕ ಅಧ್ಯಕ್ಷೆ ಸುಲೋಚನಾ ಐಹೊಳೆ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಧ್ಯಾಪಕರಾದ ಡಾ. ಎಂ.ಬಿ ಗೌಡರ, ತಾಲೂಕ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರಕಾಶ ಅಸುಂಡಿ ಆಗಮಿಸಿದ್ದರು.

ಬಸವಣ್ಣನವರ ವಚನವನ್ನು ಶರಣ ಚಿಂತಕ ಅಶೋಕ ಬರಗುಂಡಿ ಅವರು ವಿಶ್ಲೇಷಣೆ ಮಾಡಿದರು.
ತಾಲೂಕ ಗ್ರಾಮೀಣ ಘಟಕದ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಸ್.ಎಂ. ಮರಿಗೌಡರ ನಿರೂಪಿಸಿದರು. ದತ್ತಿದಾನಿಗಳ ಪರಿಚಯವನ್ನು ನಿವೃತ್ತ ಉಪನ್ಯಾಸಕಿ ಶಕುಂತಲಾ ಸಿಂಧೂರಿ ನೆರವೇರಿಸಿದರು.
ಡಾ. ಗಿರಿಜಾ ಹಸಬಿ ಸ್ವಾಗತಿಸಿದರು. ಪುಷ್ಪಾ ಭಂಡಾರಿ ಹಾಗೂ ಶ್ರೀಮತಿ ವಾರದ ಸಂಗಡಿಗರು ವಚನ ಗಾಯನ ನೆರವೇರಿಸಿದರು.
ಅನ್ನಪೂರ್ಣ ವರವಿ ಶಾಂತಾ ಮುಂದಿನಮನಿ, ಗೌರಕ್ಕ ಬಡಿಗಣ್ಣವರ್, ಬೂದಪ್ಪ ಅಂಗಡಿ, ವಿ.ಕೆ. ಕರೇಗೌಡ್ರ, ಶರಣ ಶರಣೆಯರು ಉಪಸ್ಥಿತರಿದ್ದರು.
