ಶರಣ, ಸಂತ, ತತ್ವಪದಕಾರ, ಸಾಹಿತಿಗಳ ಕುರಿತು ಚಿಂತನ ಕಾರ್ಯಕ್ರಮ

ಬೆಳಗಾವಿ:

ಲಿಂಗಾಯತ ಸಂಘಟನೆ ವತಿಯಿಂದ ವಚನ ಪಿತಾಮಹ ಡಾ.ಫ. ಗು. ಹಳಕಟ್ಟಿ ಭವನದಲ್ಲಿ ರವಿವಾರ ವಚನ ವಿಶ್ಲೇಷಣೆ, ಚಿಂತನೆ ಕಾರ್ಯಕ್ರಮ ನಡೆಯಿತು.

ನ್ಯಾಯವಾದಿ ಸುನೀಲ ಸಾಣಿಕೊಪ್ಪ ಅವರು 12ನೇ ಶತಮಾನದ ಶರಣ ಕಡಕೋಳ ಮಡಿವಾಳಪ್ಪ, 18ನೇ ಶತಮಾನದ ಶರಣ ಗರಗದ ಮಡಿವಾಳಪ್ಪ, 18ನೇ ಶತಮಾನದ ತತ್ವಪದಕಾರ ಕಡಕೋಳ ಮಡಿವಾಳಪ್ಪ ಹಾಗೂ 19ನೇ ಶತಮಾನದ ಸಾಹಿತಿಯಾದ ಗಂಗಾಧರ ಮಡಿವಾಳಪ್ಪ ತುರಮರಿ ಇವರ ಕುರಿತು ಮಾತನಾಡಿದರು.

12ನೇ ಶತಮಾನದ ಶರಣ ಕಡಕೋಳ ಮಡಿವಾಳಪ್ಪ ಅವರು 78 ವಚನಗಳನ್ನು ರಚಿಸಿದ್ದಾರೆ. ಇವರ ಅಂಕಿತನಾಮ ನಿರೂಪಮ ನಿರಾಳ ಮಹತ್ಪ್ರಭು ಮಹಾಂತ ಯೋಗಿ. ಬಂದದ್ದು ಅತಿಗಳೆಯದೆ, ಬಾರದ್ದು ಬಯಸದೆ

ಷಡ್ರಸವನೊಂದು ಮಾಡಿಕೊಂಡು ಸವಿದುಂಡು ಚಿಂತೆಗೆಟ್ಟು ಸಂತೋಷವು ಅಳವಟ್ಟು ನಗಿಗೆ ಹಗೆಗೆ ಒಂದಾಗಿ, ಝಗಝಗನೆ ಹೊಳೆದು ವೈರಾಗ್ಯವೇ ಆರೋಗ್ಯವಾಗಿ ಭವರೋಗ ಬ್ಯಾನಿಗೆ ನೆಲಿಯಾಗಿ ಬಾಳಬೇಕು ಎಂದು ಸಾರಿದರು.

18ನೇ ಶತಮಾನದ ಶರಣ ಗರಗದ ಮಡಿವಾಳಪ್ಪ ಮಲ್ಲಸರ್ಜ್ ದೇಸಾಯಿ, ಚೆನ್ನಮ್ಮ, ರುದ್ರಮ್ಮ ಅವರ ಕೃಪಾಕಟಾಕ್ಷದಲ್ಲಿ ಬೆಳೆದದ್ದು, ಶಿವಲಿಂಗ ಸರ್ಜನ ಸಹಪಾಠಿಯಾಗಿದ್ದರು. ಅವರು ಯಾವುದೇ ಸಾಹಿತ್ಯ ರಚನೆ ಮಾಡಿಲ್ಲವಾದರೂ, ತಮ್ಮ ಸಮಕಾಲೀನರಾದ ಸಿದ್ದಾರೂಢರು, ನಾಗಲಿಂಗ ಸ್ವಾಮಿಗಳು, ಹಾಲಕೆರೆ ಸ್ವಾಮಿಗಳು, ಶಿಶುನಾಳ ಶರೀಫರ ಜೊತೆಗೆ ಆಧ್ಯಾತ್ಮದ ಬಗೆಗೆ ಚಿಂತನ-ಮಂಥನ ಮಾಡುತ್ತಿದ್ದರು.

ಯಾವಾಗಲೂ ಅರಿವಿನ ಕುರುಹಾದ ಇಷ್ಟಲಿಂಗವನ್ನು ಅಂಗದ ಮೇಲೆ ಕಟ್ಟಿಕೊಂಡಿದ್ದರು ಮತ್ತು ಮೂಢನಂಬಿಕೆಯನ್ನು ವಿರೋಧಿಸುತ್ತಿದ್ದರು. ಮೂರ್ತಿ ಪೂಜೆಗೆ ಆಸ್ಪದ ಕೊಡುತ್ತಿರಲಿಲ್ಲ. ನೇಪಾಳ, ಮೆಕ್ಕಾ -ಮದಿನಾ ಆದಿಯಾಗಿ ಇಡೀ ಜಗತ್ತು  ಸಂಚರಿಸಿದರು. ಕಟ್ಟಕಡೆಗೆ ಅವರು ಬಂದು ನೆಲೆಸಿದ್ದು ಗರಗದಲ್ಲಿ.

18ನೇ ಶತಮಾನದ ತತ್ವಪದಕಾರ ಕಡಕೋಳ ಮಡಿವಾಳಪ್ಪ ಶಿಶುನಾಳ ಶರೀಫರಿಗಿಂತ ಅರ್ಧ ಶತಮಾನ ಮೊದಲೇ ಬದುಕಿದ‌ವರು. ಕಲಬುರಗಿ ಜಿಲ್ಲೆಯ ಬಿದನೂರು, ಮಡಿವಾಳಪ್ಪನ ಹುಟ್ಟೂರು. ಕಲಬುರಗಿ ಜಿಲ್ಲೆಯ ಇಂದಿನ ಯಡ್ರಾಮಿ ತಾಲ್ಲೂಕಿನ ಕಡಕೋಳ ಮಡಿವಾಳಪ್ಪನ ಕಾಯಕ ಭೂಮಿ. ಅನುಭಾವ ಪರಂಪರೆಗೆ ಸೇರಿದ ಮಡಿವಾಳಪ್ಪನನ್ನು ತತ್ವಪದಗಳ ಅಲ್ಲಮನೆಂದೇ ಭಾವಿಸಲಾಗುತ್ತದೆ. ಇಲ್ಲ್ಯಾದೊ ಮುಕುತಿ, ಅಲ್ಯಾಕೊ ಹುಡುಕುತಿ | ಕೇಳಿ ಜಾತಿ ಶಿವ ಧ್ಯಾನ ಮಾಡಣ್ಣ ಎಂಬ ಹಲವಾರು ಸುಪ್ರಸಿದ್ಧ ತತ್ವ ಪದಗಳನ್ನು ರಚಿಸಿದ್ದಾರೆ.

ಗಂಗಾಧರ ಮಡಿವಾಳೇಶ್ವರ ತುರಮರಿಯವರು 1827ರಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಜನಿಸಿದರು. ಕನ್ನಡ ಭಾಷೆಯ ಪ್ರಚಾರವನ್ನೆ ಮುಖ್ಯ ಉದ್ದೇಶವನ್ನಾಗಿ ಇಟ್ಟುಕೊಂಡು ತುರಮರಿಯವರು, ಬೈಲಹೊಂಗಲದಲ್ಲಿ ‘ಗಾವಠೀ’ ಶಾಲೆಯನ್ನು ತೆರೆದರು. ಪುರಾಣ ಪ್ರವಚನಗಳನ್ನು, ಹಳಗನ್ನಡ ಕಾವ್ಯ ವಾಚನಗಳನ್ನು ಮಾಡುತ್ತಿದ್ದರು.

ಡೆಪ್ಯುಟಿ ಚೆನ್ನಬಸಪ್ಪ‍ನವರು ತುರಮರಿಯವರ ಬೋಧನಾಕ್ರಮ, ಕನ್ನಡ ಪಾಂಡಿತ್ಯಗಳಿಂದ ಪ್ರಭಾವಿತರಾಗಿ ಅವರನ್ನು ಬೆಳಗಾವಿಯಲ್ಲಿರುವ ನಾರ್ಮಲ್ ಸ್ಕೂಲಿಗೆ ಸಹಾಯಕ ಅಧ್ಯಾಪಕರನ್ನಾಗಿ ನಿಯಮಿಸಿದರು. ತುರಮರಿ ಅವರು ಅನೇಕ ಭಾಷಾಂತರ ಕಾರ್ಯಗಳನ್ನು ಕೈಗೊಂಡರು. ಇದಲ್ಲದೆ, ಅವರು ಪಠ್ಯ ಹಾಗು ಪಠ್ಯೇತರ ಪುಸ್ತಕಗಳ ರಚನೆ ಮಾಡಿದರು.

ನಿಜಗುಣ ಶಿವಯೋಗಿಗಳ ಕೈವಲ್ಯ ಪದ್ಧತಿಗೆ, ಷಡಕ್ಷರ ದೇವ‍ನ ರಾಜಶೇಖರ ವಿಲಾಸಕ್ಕೆ ಹಾಗು ಕೇಶಿರಾಜನ ಶಬ್ದಮಣಿ ದರ್ಪಣಕ್ಕೆ ತುರಮರಿಯವರು ವ್ಯಾಖ್ಯಾನ ಬರೆದಿದ್ದಾರೆ. ಈ ರೀತಿಯಾಗಿ ಕನ್ನಡ ಶಿಕ್ಷಣಕ್ಕೆ, ಕನ್ನಡ ಸಾಹಿತ್ಯಕ್ಕೆ ಗಂಗಾಧರ ಮಡಿವಾಳೇಶ್ವರ ತುರಮರಿಯವರು ಅಪಾರ ಸೇವೆ ಸಲ್ಲಿಸಿದ್ದಾರೆ ಎಂದು ಸುನೀಲ ಸಾಣಿಕೊಪ್ಪ ವಿವರಿಸಿದರು.

ಆರoಭದಲ್ಲಿ ಸುರೇಶ ನರಗುoದ ಅವರು ವಚನ ಪ್ರಾಥ೯ನೆ ನಡೆಸಿಕೊಟ್ಟರು. ಬಸವರಾಜ ಬಿಜ್ಜರಗಿ, ವಿ. ಕೆ. ಪಾಟೀಲ, ಅಕ್ಕಮಹಾದೇವಿ ತೆಗ್ಗಿ, ಶಿವಲೀಲಾ ಗೌಡರ, ಶ್ರೀದೇವಿ ನರಗುoದ ಮುಂತಾದ ಶರಣ ಶರಣೆಯರು ವಚನ ವಿಶ್ಲೇಷಣೆ ಮಾಡಿದರು.

ಗುರುಸಿದ್ದಪ್ಪ ರೇವಣ್ಣವರ, ಶಂಕ್ರಪ್ಪ ಮೆಣಸಗಿ, ಲಕ್ಸ್ಮಿ ಜೇವಣಿ, ಸುದೀಪ ಪಾಟೀಲ,  ಲಕ್ಸ್ಮಿಕಾoತ ಗುರವ ಮತ್ತಿತರರು ಭಾಗವಹಿಸಿದ್ದರು. ಸಂಗಮೇಶ ಅರಳಿ ನಿರೂಪಿಸಿದರು. ನಂದಾ ಬಗಲಿ ದಾಸೋಹ ಸೇವೆ ಗೈದರು. ಸುರೇಶ ನರಗುಂದ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *