ಅನುಭವ ಮಂಟಪ ಮಾನವ ಅಭಿವೃದ್ಧಿ ಕೇಂದ್ರ
ಕಲಬುರ್ಗಿ:
ಮಾನವನ ಸರ್ವತೋಮುಖ ಅಭಿವೃದ್ಧಿ ಬಸವಣ್ಣನವರ ಗುರಿಯಾಗಿತ್ತು. ಬಸವಾದಿ ಶರಣರ ಮಹಾಮನೆ ಮತ್ತು ಅನುಭವ ಮಂಟಪ ಮಾನವ ಅಭಿವೃದ್ಧಿಯ ಕೇಂದ್ರವಾಗಿತ್ತು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಗಣಪತಿ ಸಿನ್ನೂರ ಹೇಳಿದರು.
ಬಸವ ಸಮಿತಿಯ ಅನುಭವ ಮಂಟಪದಲ್ಲಿ ಮಲ್ಲಿಕಾರ್ಜುನ ಕಾಮಶೆಟ್ಟಿ ಮತ್ತು ಅನಸೂಯಾ ತುಪ್ಪದ ಸ್ಮರಣಾರ್ಥ ಜರುಗಿದ ಅರಿವಿನ ಮನೆ 885 ನೆಯ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಮಾನ್ಯ ವ್ಯಕ್ತಿಯನ್ನು ಅಸಾಮಾನ್ಯನನ್ನಾಗಿ ಮಾಡುವುದು, ಭವಿಯನ್ನು ಭಕ್ತನನ್ನಾಗಿ ಮಾಡುವುದೇ ಶರಣ ಸಿದ್ದಾಂತವಾಗಿತ್ತು. ಶ್ರೀಮಂತಿಕೆಯಿಂದ ನೆಮ್ಮದಿ ಸಿಗಲಾರದು, ಡೆನ್ಮಾರ್ಕ್ ವಿಶ್ವದ ಸಂತೋಷಭರಿತ ರಾಷ್ಟ್ರವಾಗಿದೆ. ಹಣ ಸಂಪತ್ತಿನಿಂದಲ್ಲ ನೆಮ್ಮದಿಯ ಬದುಕಿನಿಂದಾಗಿದೆ.

ಮನುಷ್ಯನ ಭವಿಗುಣಗಳೇ ಕೌಟುಂಬಿಕ ಮತ್ತು ಸಾಮಾಜಿಕ ಅಸಂತೋಷಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿದ್ದ ಸಮಾಜವನ್ನು ಬಸವಣ್ಣನವರು ದೈವಿ ಸಮಾಜವನ್ನಾಗಿ ಪರಿವರ್ತಿಸಿದರು.
ಕಲಿಯುವವರ ನಡವಳಿಕೆಯಲ್ಲಿ ಧನಾತ್ಮಕ ಬದಲಾವಣೆ ತರುವುದೇ ಮಾನವ ಅಭಿವೃದ್ಧಿಯಾಗಿದೆ. ವ್ಯಕ್ತಿಗೆ ಸಮಾಜ ನಮ್ಮದು ಎಂಬ ಪರಿಕಲ್ಪನೆ ಇರಬೇಕು. ಅಷ್ಟೇ ಅಲ್ಲ ಪ್ರಜಾಪ್ರಭುತ್ವದಲ್ಲಿ ಮಾಲಿಕತ್ವದ ಪರಿಕಲ್ಪನೆ ಇರಬೇಕು, ಆಗ ಮಾತ್ರ ಮಾನವ ಸಾಂಸ್ಥಿಕ ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಸಾಧ್ಯವಿದೆ.
ಅರಿಷಡ್ವರ್ಗಗಳ ಭವಿಗುಣ ಬಿಟ್ಟವನು ಶರಣನಾಗುತ್ತಾನೆ. ವ್ಯಕ್ತಿತ್ವದಿಂದ ಪರಿಪೂರ್ಣನಾದವನು ಸಮಾಜದ ಮಾನ್ಯತೆಗೆ ಕಾರಣನಾಗುತ್ತಾನೆ. ಬಸವಾದಿ ಶರಣರು ಇಂತಹ ಪರಿಪೂರ್ಣ ಮಾನವನನ್ನು ರೂಪಿಸಿದರು. ಶರಣ ಸಿದ್ದಾಂತದಲ್ಲಿ ಮಾನವ ಅಭಿವೃದ್ಧಿಯ ನೆಲೆಗಳಿದ್ದವು ಎಂದು ಸಿನ್ನೂರ ಗುರುತಿಸಿದರು.

ಬೀದರಿನ ಗುರುಬಸವ ಪ್ರಶಸ್ತಿಗೆ ಆಯ್ಕೆಯಾದ ಡಾ. ವಿಲಾಸ್ವತಿ ಖೂಬಾ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿ ಆಯ್ಕೆಯಾದ ಅಕ್ರಂ ಪಾಷಾ ಮೋಮಿನ್ ಅವರನ್ನು ಸನ್ಮಾನಿಸಲಾಯಿತು .
ದತ್ತಿ ದಾಸೋಹಿಗಳಾದ ವಿಶ್ವನಾಥ ಕಾಮಶೆಟ್ಟಿ ಸ್ವಾಗತಿಸಿದರು. ಶೀಲಾ ಸಿದ್ದರಾಮ ಕಾಮಶೆಟ್ಟಿ ಶರಣು ಸಮರ್ಪಣೆ ಗೈದರು. ಕಾರ್ಯಕ್ರಮದಲ್ಲಿ ಕಲ್ಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸ್ವತಿ ಕೂಬಾ, ಉಪಾಧ್ಯಕ್ಷರಾದ ಡಾ. ಜಯಶ್ರೀ ದಂಡೆ, ಕಾರ್ಯದರ್ಶಿ ಡಾ. ಆನಂದ ಸಿದ್ಧಾಮಣಿ, ಡಾ.ಕೆ.ಎಸ್. ವಾಲಿ, ಶರಣಗೌಡ ಪಾಟೀಲ ಪಾಳ, ಬಂಡಪ್ಪ ಕೇಸುರ, ಉದ್ದಂಡಯ್ಯ, ತುಳಜಾಭವಾನಿ, ಸಂಪ್ರೀತ, ನಿಷ್ಕಾ, ಅರ್ಚನ ಭಾಗವಹಿಸಿದ್ದರು.
