ಇಂಗ್ಲಿಷ್​ನಲ್ಲಿ ಶರಣ ಚಿಂತನೆ ಪ್ರಕಟಣೆಗೆ ₹5 ಕೋಟಿ ದಾಸೋಹ: ಎಂ. ಬಿ. ಪಾಟೀಲ

ಬಸವ ಮೀಡಿಯಾ
ಬಸವ ಮೀಡಿಯಾ

‘ಶಿವಾನುಭವ’ ಪತ್ರಿಕೆಯನ್ನು ಸದ್ಯದಲ್ಲೇ ಪುನಾರಂಭ ಮಾಡಲಾಗುವುದು’

ಬೆಂಗಳೂರು

‘ಬಸವಾದಿ ಶರಣರು ಮತ್ತು ಅನುಭವ ಮಂಟಪದಲ್ಲಿನ ಚಿಂತನೆಗಳನ್ನು ಕುರಿತು ಜಾಗತಿಕ ಮಟ್ಟದಲ್ಲಿ ಇಂಗ್ಲಿಷ್‌ನಲ್ಲಿ ಪುಸ್ತಕಗಳನ್ನು ಪ್ರಕಟಿಸಲು ₹ 5 ಕೋಟಿ ದಾಸೋಹ ನೀಡುತ್ತೇನೆ’ ಎಂದು ಬೃಹತ್‌ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನ‌ ಏರ್ಪಡಿಸಿದ್ದ ‘ರಮಣಶ್ರೀ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಉತ್ತರ ಕರ್ನಾಟಕದ ಸಾಧಕರಾದ ಫ.ಗು.ಹಳಕಟ್ಟಿ, ಸರ್ ಸಿದ್ದಪ್ಪ ಕಂಬಳಿ, ಲಿಂಗರಾಜ ದೇಸಾಯಿ, ಬಂತನಾಳದ ಪೂಜ್ಯರು, ಸಿದ್ಧೇಶ್ವರ ಸ್ವಾಮೀಜಿ ಅವರ ಬಗ್ಗೆ ಪುಸ್ತಕಗಳು ಪ್ರಕಟವಾಗಬೇಕು. ಬೆಂಗಳೂರು ಭಾಗದ ಸರ್ ಪುಟ್ಟಣ್ಣ ಚೆಟ್ಟಿ ಅಂಥವರ ಬಗ್ಗೆಯೂ ತಿಳಿಯಬೇಕು. ಈ ಮೂಲಕ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಎನ್ನುವ ಭೇದ ಅಳಿಯಬೇಕು’ ಎಂದು ಅವರು ಸಲಹೆ ನೀಡಿದರು.

‘ಫ.ಗು.ಹಳಕಟ್ಟಿ ಅವರು ಇಲ್ಲದೆ ಹೋಗಿದ್ದರೆ ಬಸವ ಧರ್ಮವಾಗಲಿ, ವಚನ ಸಾಹಿತ್ಯವಾಗಲಿ, ನೂರಾರು ವಚನಕಾರರಾಗಲಿ ಬೆಳಕಿಗೆ ಬರುತ್ತಿರಲಿಲ್ಲ. ಅವರು ಮತ್ತು ಬಂತನಾಳದ ಪೂಜ್ಯರು ಸರ್ವಸ್ವವನ್ನೂ ತ್ಯಾಗ ಮಾಡಿ ವಚನ ಯುಗದ ಬಗ್ಗೆ ಬೆಳಕು ಚೆಲ್ಲುವ ಮಹಾನ್ ಕೆಲಸ ಮಾಡಿಹೋಗಿದ್ದಾರೆ. ಹಳಕಟ್ಟಿ ಅವರು ಆರಂಭಿಸಿದ್ದ ‘ಶಿವಾನುಭವ’ ಪತ್ರಿಕೆಯನ್ನು ಸದ್ಯದಲ್ಲೇ ಪುನಾರಂಭ ಮಾಡಲಾಗುವುದು’ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಜಗತ್ತಿಗೆ ಜ್ಯೋತಿ ಕೊಡುವ ಶಕ್ತಿ ಬಸವಣ್ಣ ಎಂದರು.

‘ನಾವ್ಯಾರೂ ದೇವರಾಗಲು ಬಂದಿಲ್ಲ. ಬಸವಣ್ಣನ ಹಾಗೇ ಒಳ್ಳೆಯ ಮಾನವ ಆಗಬೇಕು. ಶರಣ ಸಾಹಿತ್ಯ ದೊಡ್ಡ ಪ್ರಮಾಣದಲ್ಲಿ ಬೆಳೆದಿದ್ದರೆ ಅದಕ್ಕೆ ಗೊ.ರು. ಚನ್ನಬಸಪ್ಪ ಅವರು ಕಾರಣ’ ಎಂದು ಹೇಳಿದರು.

ಲೇಖಕ ಎಸ್.ಷಡಕ್ಷರಿ ಅವರ ‘ಕ್ಷಣ ಹೊತ್ತು ಆಣಿಮುತ್ತು- ಭಾಗ 15’ ಪುಸಕ್ತವನ್ನು ಈ ಸಂದರ್ಭದಲ್ಲಿ ಜನಾರ್ಪಣೆ ಮಾಡಲಾಯಿತು.

ರೈಲ್ವೆ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿ. ಸೋಮಶೇಖರ, ಸಾಹಿತಿ ಗೊ.ರು. ಚನ್ನಬಸಪ್ಪ ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JjqqFwfw2jf2WxG5glPZ0O

Share This Article
Leave a comment

Leave a Reply

Your email address will not be published. Required fields are marked *