ಬಸವಕಲ್ಯಾಣ
ಸಮಸಮಾಜ ನಿರ್ಮಾಣ ಮಾಡಲು ಸಹೋದರತ್ವ, ಸಹಬಾಳ್ವೆಯಿಂದ ಬಾಳಲು ಬಸವತತ್ವದ ಅವಶ್ತಕತೆಯಿದೆ ಎಂದು ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಹೇಳಿದರು.
ಅವರು ಅಂತರ‍್ರಾಷ್ಟೀಯ ಲಿಂಗಾಯತ ಧರ್ಮಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠ ಬಸವಕಲ್ಯಾಣ ವತಿಯಿಂದ ಇಲ್ಲಿನ ಹರಳಯ್ಯನವರ ೧೧ ದಿವಸಗಳ ಕಾಲ ನಡೆಯಲಿರುವ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿ, ಸಮ ಸಮಾಜ ನಿರ್ಮಾಣಕ್ಕಾಗಿ ಶರಣರು ತ್ಯಾಗ ಬಲಿದಾನ ಮಾಡಿದ್ದಾರೆ. ಅವರ ಬಲಿದಾನ ವ್ಯರ್ಥ ಹೋಗುವುದಿಲ್ಲ. ಅವರು ಮಾಡಿದಂಥ ಕಾರ್ಯಗಳು ಇಂದಿಗೂ ಪ್ರಸ್ತುತ. ಎಷ್ಟೇ ಕಷ್ಟ ಬಂದರೂ ಶರಣರು ತತ್ವ ಸಿದ್ದಾಂತ ಬಿಡದೆ ಮರಣವೇ ಮಹಾನವಮಿ ಎಂದು ಹೇಳಿ ಕೊಟ್ಟಿದ್ದಾರೆ. ಶರಣರು ಹೇಳಿ ಕೊಟ್ಟಿರುವ ತತ್ವಸಿದ್ಧಾಂತದಲ್ಲಿ ನಡೆಯೋಣ ಎಂದರು.
ನೇತೃತ್ವ ವಹಿಸಿಕೊಂಡಿದ್ದ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಇಡೀ ವಿಶ್ವದಲ್ಲಿ ಜ್ಞಾನಕ್ಕಾಗಿ ಕ್ರಾಂತಿ ನಡೆದಿದ್ದು ಈ ನೆಲದಲ್ಲಿ. ಮಾನವೀಯ ಮೌಲ್ಯಗಳನ್ನು ಬಿತ್ತಿದ್ದ ನಾಡು ಬಸವಕಲ್ಯಾಣ. ಶರಣರ ಆಶಯಗಳು ಸಂವಿಧಾನದ ಮೂಲಕ ಜಾರಿಗೆ ಬಂದಿವೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆಯುಳ್ಳವರೆಲ್ಲರೂ ಬಸವಕಲ್ಯಾಣಕ್ಕೆ ಬರುವ ದಿನಗಳು ದೂರವಿಲ್ಲ. ಅಸಂಖ್ಯಾತ ಶರಣರು ಮಾನವೀಯ ತತ್ವಕ್ಕಾಗಿ ಹುತಾತ್ಮರಾಗಿದ್ದಾರೆ. ಅವರ ಬಲಿದಾನ ಹುಸಿಹೋಗಬಾರದೆಂದು ಶರಣ ತತ್ವಗಳನ್ನು ಶರಣ ಜನಾಂಗದಲ್ಲಿ ಬಿತ್ತುವುದೇ ಈ ಕಾರ್ಯಕ್ರಮದ ಉದ್ದೇಶ ಎಂದರು.

ಮಹಾರಾಷ್ಟ್ರ ಅಲ್ಲಮಗಿರಿಯ ಪೂಜ್ಯ ಬಸವಕುಮಾರ ಮಹಾಸ್ವಾಮಿಗಳು ಅನುಭಾವ ನೀಡಿದರು. ಸಾನಿಧ್ಯವನ್ನು ವಹಿಸಿಕೊಂಡಿದ್ದ ಅಥಣಿ ಜನವಾಡದ ಅಲ್ಲಮಪ್ರಭು ಮಠದ ಪೂಜ್ಯರಾದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಆಶಿರ್ವಚನ ನೀಡಿದರು.
ಹೈದ್ರಬಾದ ಅನಿಮಿಷಾನಂದ ಸ್ವಾಮಿಗಳು, ಬಸವಕಲ್ಯಾಣ ಮಹಾಮನೆ ಮಹಾಮಠ ಗುಣತೀರ್ಥವಾಡಿಯ ಪೂಜ್ಯ ಬಸವಪ್ರಭು ಸ್ವಾಮಿಗಳು, ಅನುಭವ ಮಂಟಪದ ಪೂಜ್ಯ ಶಿವಾನಂದ ಸ್ವಾಮಿಗಳು ಉಪಸ್ಥಿತರಿದ್ದರು.
ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ. ನಾರಾಯಣರಾವ, ರಿಯೆಲ್ ಎಸ್ಟೆಟ್ ಅಧಿಕಾರಿ ಸಾವಿತ್ರಿ ಸಲಗರ, ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಬಿಡಿಪಿಸಿ ನಿರ್ದೇಶಕರಾದ ಅನಿಲಕುಮಾರ ರಗಟೆ, ಅಶೋಕ ನಾಗರಾಳೆ, ವಿಜಯಲಕ್ಷ್ಮಿ ಗಡ್ಡೆ, ಮುಖಂಡ ಶಿವರಾಜ ನರಶೆಟ್ಟಿ, ಬೀದರ ಬಸವ ಸೇವಾ ಪ್ರತಿಷ್ಠಾನದ ಗುಂಡಪ್ಪ ಬಳತೆ, ಅಶೋಕ ವಡಗಾಂವೆ, ಶಿವರಾಜ ಮದಕಟ್ಟಿ, ಶರಣಬಸವ ಪಾರಾ, ಮಲ್ಲಿಕಾರ್ಜುನ ಸಂಗಮಕರ, ಮಲ್ಲಿಕಾರ್ಜುನ ರಟಕಲೆ, ವೀರಶೆಟ್ಟಿ ಇಮ್ಮಡಾಪೂರ, ರಂಜನಾ ದುರ್ಗೆ ಇತರರಿದ್ದರು.
ಹರಳಯ್ಯ ಸಮಾಜದ ಅಧ್ಯಕ್ಷ ಶಿವಾಜಿ ಕಾಂಬಳೆ ಧ್ವಜಾರೋಹಣಗೈದರು.
ಶಿವಕುಮಾರ ಪಂಚಾಳ ಮತ್ತು ಸಂಗಡಿಗರಿಂದ ನಡೆದ ವಚನ ಗಾಯನ ಮನಸೂರೆಗೊಳಿಸಿದವು.
ಜ್ಞಾನಭಾರತಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಂದ ನಡೆದ ವಚನ ನೃತ್ಯಗಳು ಗಮನ ಸೆಳೆದವು. ನಗರಸಭೆ ಸದಸ್ಯೆ ನಿರ್ಮಲಾ ಶಿವಣಕರ್ ಸ್ವಾಗತಿಸಿದರೆ. ಡಾ. ಸಂಗೀತಾ ಮಂಠಾಳೆ ನಿರೂಪಿಸಿದರು.