ಕಲಬುರ್ಗಿ
ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪನವರು ಲಿಂಗೈಕ್ಯರಾದ ಸುದ್ದಿ ಬರುತ್ತಿದ್ದಂತೆಯೇ ಹಲವಾರು ಪೂಜ್ಯರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಅದಮ್ಯ ಸಾಧಕ
ಧರ್ಮ ಜಾಗೃತಿ, ಸಮಾಜ ಸೇವೆ, ಶೈಕ್ಷಣಿಕ ಕ್ಷೇತ್ರದಲ್ಲಿ ಅದಮ್ಯ ಸಾಧನೆ ಮಾಡಿದ ಪರಮಪೂಜ್ಯ ಡಾ. ಶರಣಬಸಪ್ಪ ಅಪ್ಪನವರ ನಿಧನದಿಂದ ಒಬ್ಬ ಶ್ರೇಷ್ಠ ಕಾಯಕಯೋಗಿ ಗುರುಗಳನ್ನು ನಾಡು ಕಳೆದುಕೊಂಡಿದೆ. ಅವರ ಆಶೀರ್ವಾದ ಭಕ್ತರ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸುತ್ತಾ, ಅವರ ಅಪಾರ ಭಕ್ತರಿಗೆ, ಶಿಷ್ಯರಿಗೆ, ಕುಟುಂಬವರ್ಗದವರಿಗೆ ಗುರುಗಳ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇವೆ.
-ತುಮಕೂರು ಸಿದ್ಧಗಂಗಾ ಮಹಾಸ್ವಾಮಿಗಳು
ಕಾಯಕಯೋಗಿ ಗುರು
ಕಲಬುರ್ಗಿಯ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿಗಳಾದ ಪರಮಪೂಜ್ಯ ಡಾ. ಶರಣಬಸವಪ್ಪ ಅಪ್ಪನವರು ಲಿಂಗೈಕ್ಯರಾದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. ಧರ್ಮ ಜಾಗೃತಿ, ಸಮಾಜ ಸೇವೆ, ಶೈಕ್ಷಣಿಕ ಕ್ಷೇತ್ರದಲ್ಲಿ ಅದಮ್ಯ ಸಾಧನೆ ಮಾಡಿದ ಅವರ ನಿಧನದಿಂದ ಒಬ್ಬ ಶ್ರೇಷ್ಠ ಕಾಯಕಯೋಗಿ ಗುರುಗಳನ್ನು ನಾವು ಕಳೆದುಕೊಂಡಿದ್ದೇವೆ. ಅವರ ಆಶೀರ್ವಾದ ಭಕ್ತರ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸುತ್ತಾ, ಅವರ ಅಪಾರ ಭಕ್ತರಿಗೆ, ಶಿಷ್ಯರಿಗೆ, ಗುರುಗಳ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
- ಬಿ ಎಸ್ ಯಡಿಯೂರಪ್ಪ
ಮಹಾದಾಸೋಹಿ
ಶರಣರ ನಾಡು ಕಲಬುರಗಿಯ ಮಹಾದಾಸೋಹಿ, ಶರಣ ಬಸವೇಶ್ವರ ಮಹಾಸಂಸ್ಥಾನದ ಮಠಾಧೀಶರಾದ ಡಾ. ಶರಣಬಸಪ್ಪ ಅಪ್ಪನವರು ಲಿಂಗೈಕ್ಯರಾದ ಸುದ್ದಿ ನೋವುಂಟು ಮಾಡಿದೆ.
ಬಸವಾದಿ ಶರಣರು ತೋರಿದ ಕಾಯಕ ಮತ್ತು ದಾಸೋಹದ ಹಾದಿಯಲ್ಲಿ ನಡೆಯುತ್ತಾ, ಸಮಾಜದ ಏಳಿಗೆಗಾಗಿ ಸದಾ ತುಡಿಯುತ್ತಿದ್ದ ನಿಜ ಬಸವಾನುಯಾಯಿ ಶರಣಬಸಪ್ಪ ಅಪ್ಪನವರ ಅಗಲಿಕೆಯಿಂದ ನಾಡು ಬಡವಾಗಿದೆ.
ಅವರ ಆತ್ಮಕ್ಕೆ ಶಾಂತಿ ಸಿಗಲಿ, ಗುರುಗಳ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಅವರ ಭಕ್ತವೃಂದಕ್ಕೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
-ಸಿದ್ಧರಾಮಯ್ಯ,
ತಾತ್ವಿಕ ಮಾರ್ಗದರ್ಶಕ
ಶರಣರ ನಾಡಾದ ಕಲಬುರಗಿಯಲ್ಲಿ ಶರಣ ಪರಂಪರೆಯ ಪ್ರಮುಖ ಕೇಂದ್ರವಾಗಿರುವ ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಡಾ.ಶರಣಬಸವಪ್ಪ ಅಪ್ಪಾ ಅವರು ಲಿಂಗೈಕ್ಯರಾಗಿರುವುದು ಅತೀವ ನೋವಿನ ವಿಷಯವಾಗಿದೆ.
ಕಾಯಕ ಜೀವಿಯಾಗಿ, ಮಹಾ ದಾಸೋಹಿಯಾಗಿ, ಶರಣಪರಂಪರೆಯ ಉದಾತ್ತ ಚಿಂತನೆಗಳ ವಕ್ತಾರರಾಗಿ, ಕಲಬುರಗಿ ಜನತೆಗೆ ತಾತ್ವಿಕ ಮಾರ್ಗದರ್ಶಕರಾಗಿದ್ದ ಶ್ರೀಗಳು ಸಮಸ್ತ ಜನರ ಏಳಿಗೆ ಬಯಸುತ್ತಾ, ಜಿಲ್ಲೆಯ ಸೌಹಾರ್ದ ಪರಂಪರೆಗೆ ಶಕ್ತಿ ತುಂಬುತ್ತಾ “ಕಲಬುರಗಿಯ ಕಣ್ಣು” ಎಂಬಂತಿದ್ದರು.
ನಾನು ಅವರಿಂದ ರಾಜಕೀಯ ಮೌಲ್ಯಗಳ, ಬದುಕಿನ ಮೌಲ್ಯಗಳ ಅರಿವನ್ನು ಪಡೆದಿದ್ದೇನೆ. ನನಗೆ ಅವರು ಬಹುದೊಡ್ಡ ಪ್ರೇರಕ ಶಕ್ತಿಯಾಗಿ, ಮಾರ್ಗದರ್ಶಕರಾಗಿ ಮುನ್ನಡೆಸಿದವರಾಗಿದ್ದರು. ಇಂದು ಅವರಿಲ್ಲ ಎಂದು ಕಲ್ಪಿಸಿಕೊಳ್ಳುವುದು ನನಗೆ ಅತ್ಯಂತ ಕಷ್ಟದ ಸನ್ನಿವೇಶ.
ಬಂದೆನವಾಜ್ ದರ್ಗಾದ ಡಾ. ಸಯ್ಯದ್ ಶಾ ಖುಸ್ರೋ ಹುಸೇನಿಯವರು ಮತ್ತು ಶರಣಬಸವೇಶ್ವರ ಮಠದ ಪೂಜ್ಯ ಶರಣಬಸವಪ್ಪ ಅಪ್ಪಾ ಈ ಇಬ್ಬರೂ ಕಲಬುರಗಿಯ ಭಾವೈಕ್ಯತೆಗೆ ಎರಡು ಕಣ್ಣುಗಳಂತಿದ್ದವರು. ಒಂದು ವರ್ಷದ ಅವಧಿಯಲ್ಲಿ ಈ ಇಬ್ಬರೂ ಮಹನೀಯರನ್ನು ಕಳೆದುಕೊಳ್ಳುವ ಮೂಲಕ ಎರಡು ಕಣ್ಣುಗಳನ್ನು ಕಳೆದುಕೊಂಡು ಕತ್ತಲಲ್ಲಿ ನಿಂತಂತೆ ಭಾಸವಾಗುತ್ತಿದೆ.
ಸದಾ ಸಮಾಜದ ಔನತ್ಯವನ್ನು ಬಯಸುತ್ತಿದ್ದ ಶ್ರೀ ಡಾ. ಶರಣಬಸಪ್ಪಾ ಅಪ್ಪ ಅವರು ಶಿಕ್ಷಣ ಕ್ಷೇತ್ರಕ್ಕೆ ಕೊಟ್ಟಿರುವ ಕೊಡುಗೆ ಅಪಾರವಾದುದು, ವಿದ್ಯೆ ಎಂಬುದು ಅಭ್ಯಾಸಿಗನ ಕೈವಶ. ಅದು ಕೇವಲ ಉಳ್ಳವರ ಸೊತ್ತಲ್ಲ ಎಂಬ ಆಶಯದೊಂದಿಗೆ ತಮ್ಮ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಲ್ಲಿ ಸರ್ವರಿಗೂ ಜ್ಞಾನದಾಸೋಹ ನೀಡಿದ್ದಾರೆ. 91 ವರ್ಷಗಳ ತುಂಬು ಜೀವನದಲ್ಲಿ ಅವರು ಸಮಾಜಕ್ಕೆ ನೀಡಿದ್ದು ಅಪಾರ.
ಕಲಬುರಗಿ ಜಿಲ್ಲೆಯ ಜನತೆಯ ಏಳಿಗೆಯಲ್ಲಿ ಅವರ ಈ ಜ್ಞಾನದಾಸೋಹವು ಪ್ರಮುಖ ಮೆಟ್ಟಿಲಾಗಿದೆ ಎಂದರೆ ಅತಿಶಯೋಕ್ತಿಯಲ್ಲ.
-ಪ್ರಿಯಾಂಕ ಖರ್ಗೆ, ಸಚಿವ