ಜಯಂತಿಯ ಸ್ಮರಣೋತ್ಸಕ್ಕೆ ಪ್ರಣಾಮಗಳು
ಹಿಪ್ಪರಿಗೆಯಿಂದ ಕಲ್ಯಾಣಕ್ಕೆ ನಡೆದು ಬರುವಾಗ ಭೀಮರತಿ ಹೊಳೆ ಪ್ರವಾಹದಿಂದ ಕಟ್ಟಿರಲು, ಹರಿಗೋಲ ಹಂಗಿಲ್ಲದೆ ಶಿವನನ್ನು ನೆನೆಯಲು ನದಿ ಇಬ್ಬಾಗವಾಯ್ತು. ಆ ಮಾರ್ಗ ಮಧ್ಯದಿಂದ ಮಾಚಿ ತಂದೆ ನಡಕೊಂಡು ಬರುತ್ತಾರೆ.
ಬಿಜ್ಜಳ ತನ್ನ ಬಟ್ಟೆಯನ್ನು ಮಡಿ ಮಾಡಿಸಿಕೊಡಲು ಬಸವಣ್ಣನಿಗೆ ದುಂಬಾಲು ಬಿದ್ದ. ಮಡಿವಾಳಯ್ಯ ಪರಮ ಭಕ್ತ , ಅವನನ್ನು ಅಗಸನೆಂದು ಭಾವಿಸದಿರಲು ಬಸವಣ್ಣ ತಿಳಿ ಹೇಳಿದ, ಅದನ್ನು ಲೆಕ್ಕಿಸದೆ ಮಾಸಿದ ಬಟ್ಟೆಗಳ ಗಂಟನ್ನು ಮಡಿ ಮಾಡಲು ಕಳಿಸಿದ.
ಭವಿ ಬಿಜ್ಜಳನ ಮೈಲಿಗೆ ಬಟ್ಟೆಯ ಗಂಟನ್ನು ಕಂಡ ಮಡಿವಾಳಯ್ಯ ಕೋಪಗೊಂಡು ಸಿಟ್ಟಿನಿಂದ ನೋಡಲು ಆ ಕ್ಷಣದಲ್ಲಿ ಗಂಟು ಉರಿದು ಹೋಯ್ತು.
ಇದು ಮಡಿವಾಳಯ್ಯನ ‘ಅಹಂಕಾರವೆಂದು’ ಭಾವಿಸಿದ ಬಿಜ್ಜಳ ಅವರನ್ನು ಸೆರೆಹಿಡಿದು ತರಲು ಕುಂಟ – ಕುರುಡರ ಪಡೆಯೊಂದನ್ನು ಕಳುಹಿಸಿದ. ಮಡಿವಾಳಯ್ಯ ತನ್ನ ಶಕ್ತಿಯಿಂದ ಕುರುಡರಿಗೆ ಕಣ್ಣು ಕಾಣುವಂತೆ ಮತ್ತು ಕುಂಟರಿಗೆ ಕಾಲು ಬರುವಂತೆ ಮಾಡಿ ಅಂಗ ಸೌಷ್ಟವರನ್ನಾಗಿ ಮಾಡಿ ಕಳುಹಿಸಿದ.
ಇದರಿಂದ ಉರಿದೆದ್ದು ಬಿಜ್ಜಳ ‘ಮದೋನ್ಮತ್ತ’ ಆನೆಯನ್ನ ಮಾಚಯ್ಯನ ಮೇಲೆ ಹರಿ ಹಾಯಲು ಬಿಟ್ಟ. ಸೈನಿಕರ ತುಕಡಿಯೊಂದನ್ನೂ ಕಳುಹಿಸಿದ. ಆನೆ ಹಾಗೂ ಅವರನ್ನೆಲ್ಲ ಸದೆ ಬಡಿದು ಜಯ ಶಾಲಿಯಾದ. (ಬಹುತೇಕ ಮಡಿವಾಳ ಬಂಧುಗಳ ಮನೆಯಲ್ಲಿ ಈ ಸನ್ನಿವೇಶದ ಫೋಟೋ ಇರುವುದು – ಆದ್ರೆ ಬಹು ಜನರಿಗೆ ಅದರ ಹಿನ್ನೆಲೆ ಗೊತ್ತಿಲ್ಲ.)ಕಾಲಾಂತರದಲ್ಲಿ ಬಿಜ್ಜಳನಿಗೆ ಮಾಚಿದೇವರ ಉನ್ನತ ಮಹಿಮೆ ತಿಳಿದು ತನ್ನ ತಪ್ಪಿನ ಅರಿವಾಗಿ ಬಿಜ್ಜಳ ಶರಣಾಗತನಾಗುವನು.
ಮುಂದೆ ‘ಕಲ್ಯಾಣ ಕ್ರಾಂತಿ’ಯ ಸಂದರ್ಭದಲ್ಲಿ ಮಾಚಿದೆವರು ಹೊತ್ತ ‘ಜವಾಬ್ದಾರಿ’ ಗುರುತರವಾದುದು. ಶರಣ ಧರ್ಮ ಸಂರಕ್ಷಣೆ- ವಚನ ಸಾಹಿತ್ಯದ ರಕ್ಷಣೆಯ ದಂಡ ನಾಯಕತ್ವ ಜವಾಬ್ಧಾರಿ ಹೊತ್ತು, ಚನ್ನ ಬಸವಣ್ಣ, ಅಕ್ಕನಾಗಮ್ಮ, ಕಿನ್ನರಿ ಬೊಮ್ಮಣ್ಣ ಮೊದಲಾದವರೊಂದಿಗೆ ಮಾಚಿದೇವ ಶರಣ ಸಮೂಹದ ‘ಭೀಮ ರಕ್ಷೆಯಾಗಿ’ ನಿಂತರು.
ಕಲಚೂರ್ಯ ರಾಯ ಮುರಾರಿಯನ್ನು ಎದುರಿಸಿ ಭೀಮ ನದಿಯನ್ನು ದಾಟಿ ತಲ್ಲೂರು, ಮುರಗೋಡ, ಕಡಕೋಳ,ತಡಕೋಡ, ಮೂಗ ಬಸವ, ಕಾದರವಳ್ಳಿಯಲ್ಲಿ ಅಲ್ಲಲ್ಲಿ ಕಾಳಗ ನಡೆಸಿದರು. ತಮ್ಮ ಧೈರ್ಯ, ಅನುಪಮ ಬಲದಿಂದ ಶರಣರನ್ನು, ವಚನ ಸಾಹಿತ್ಯವನ್ನು ರಕ್ಷಿಸಿ ಉಳಿವಿಗೆ ತಲುಪಿಸಿದ ಸಾಹಸಿ ಮಾಚಯ್ಯ.
ಸಮಸ್ತ ಶರಣರು ಉಳವಿಯಲ್ಲಿ ಲಿಂಗೈಕ್ಯರಾಗಲು ತಮ್ಮ ಮಹಾನ್ ಕರ್ತವ್ಯ ಪೂರೈಸಿ ಸಿಂದಗಿ ತಾಲೂಕಿನ ಕಲಿಪುರ (ಈಗಿನ ಕಲಕೇರಿ)ತನ್ನ ಗುರುವಾದ ವೀರಘಂಟೈರ ಜೊತೆಗೆ ಜೀವಂತ ಸಮಾದಿಯಾಗಿ ಗುರು ಶಿಷ್ಯರು ಐಕ್ಯರಾದರು.
ಇಂದಿಗೂ ಪ್ರತಿ ವರ್ಷ ಹೊಸ್ತಿಲ ಹುಣ್ಣಿಮೆಯ ದಿನ ಮೂಲಾ ನಕ್ಷತ್ರದ ಸಮಯದಲ್ಲಿ ರಥೋತ್ಸವ ನಡೆಯುತ್ತದೆ. ಸುಮಾರು ಒಂದು ತಿಂಗಳ ಕಾಲ ಜಾತ್ರೆ ನಡೆಯುತ್ತದೆ. ವರ್ಷದಲ್ಲಿ ಎರಡು ಸಲ ಅಗ್ನಿ ಉತ್ಸವ ನಡೆಯತ್ತದೆ.ಕಲಕೇರಿಯಲ್ಲಿ ಮಡಿವಾಳ ಮಾಚಿ ದೇವರ ಕೊಂಡಾಡಲು ಅಕ್ಷರಗಳೇ ಸಾಲದು.
ಬಸವಾದಿ ಶರಣರ ಸಾಹಿತ್ಯ ಉಳಿಯಲು ಮಾಚಿದೇವರ ಕೃಪಾಶೀರ್ವಾದ, ಅವರ ವೀರ ಹೋರಾಟವೇ ಮೂಲ ಕಾರಣ.
